ಪ್ರಕೃತಿಯ ಪ್ರಶಾಂತವಾದ ವಾತಾವರಣ ಹೇಗೆ ಸಂತರನ್ನು ಆಧ್ಯಾತ್ಮಿಕ ಸಾಧನಾ ಪಥದತ್ತ ಪ್ರೇರೇಪಿಸುತ್ತದೋ ಹಾಗೆಯೇ ಇದು ಗಾಯಕರನ್ನು ಸಂಗೀತದತ್ತ ಆಕರ್ಷಿಸುತ್ತದೆ. ನಿಷ್ಕಲ್ಮಶವಾದ ಇಂತಹ ಪವಿತ್ರ ಭಜನೆಗಳತ್ತ ಆಕರ್ಷಿಸಿ ಹಾಡುಗಳನ್ನು ಹಾಡುವಂತೆ ಮಾಡಿದ್ದು, ಹಾಡುಗಾರರನ್ನು ಎತ್ತರಕ್ಕೆ ಕೊಂಡೊಯ್ದ ಪರಂಪರೆ ಭಾರತದಲ್ಲಿದೆ. ತಾನ್ಸೇನರ ಗಾಯನಕ್ಕೆ ಪುಷ್ಪವೃಷ್ಠಿ ಆಯಿತು ಎನ್ನುವುದು ಒಂದಡೆಯಾದರೆ ಸಂಗೀತ ಹೇಗೆ ಓರ್ವನನ್ನು ಮಾನಸಿಕ ಉಲ್ಲಸಿತನಕ್ಕೆ ಕಾರಣವಾಯಿತು ಎಂಬುದು ಇನ್ನೊಂದು ಮುಖ್ಯವಾದ ಅಂಶ.
ದೇಶದ ಹಿಂದೂಸ್ಥಾನಿ ಸಂಗೀತ ಕ್ಷೇತ್ರದಲ್ಲಿ ಉನ್ನತ ಸಾಧನೆಗೈದ ಹಲವು ಮಂದಿಯ ಪೈಕಿ ಗಾಯಕ ಪಂಡಿತ ಕುಮಾರ ಗಂಧರ್ವರು ಓರ್ವರು. ಬೆಳಗಾವಿ ಜಿಲ್ಲೆಯ ಸೂಳಿಬಾವಿಯಲ್ಲಿ ಎಪ್ರಿಲ್ 8, 1924 ರಲ್ಲಿ ಜನಿಸಿದ ಇವರು ಚಿಕ್ಕ ವಯಸ್ಸಿನಲ್ಲಿಯೇ ಸಂಗೀತ ಕ್ಷೇತ್ರದತ್ತ ಬಹಳ ಆಕರ್ಷಿತರಾಗಿದ್ದರು. ತಮ್ಮ 8 ನೇ ವಯಸ್ಸಿನಲ್ಲಿ ಯಾವುದೇ ತಪ್ಪಿಲ್ಲದೆ ರಾಮಕೃಷ್ಣ ವಾಝೆ, ಅಬ್ದುಲ್ ಕರೀಂ ಖಾನ್, ಫಯಾಝ್ಖಾನ್, ಕೇಸರಿ ಬಾಯಿ ಕೇಸ್ಕರ್ ಅವರ ರಚನೆಯ ಖಯಾಲ್ಗಳನ್ನು ಹಾಡುತ್ತಿದ್ದರು. 1936 ರಲ್ಲಿ ತಮ್ಮ 12 ನೇ ವರ್ಷ ವಯಸ್ಸಿನಲ್ಲಿ ಬಾಂಬೆಯಲ್ಲಿ ನೀಡಿದ ಪ್ರದರ್ಶನವು ಎಲ್ಲರ ಮನಸೂರೆಗೊಳಿಸಿತ್ತು. ಗಂಧರ್ವರ ಅರ್ಧ ಗಂಟೆಯ ಯಮುನಾ ಕಲ್ಯಾಣ ಮತ್ತು ಭೈರವಿ ರಾಗದ ಗಾಯನದಿಂದ ಪ್ರಭಾವಿತರಾದ ಪ್ರಮುಖ ಸಂಗೀತ ಗುರುಗಳಾದ ಬಿ.ಆರ್. ದಿಯೊದರ್ ಗಂಧರ್ವರಿಗೆ ತಮ್ಮ ಶಿಕ್ಷಣ ಕೇಂದ್ರದಲ್ಲಿ ಹೆಚ್ಚಿನ ಸಂಗೀತ ಅಭ್ಯಾಸವನ್ನು ನೀಡಿದರು. ಸುಮಾರು 14 ವರ್ಷಗಳ ಕಾಲ ದಿಯೊದರ್ಜೊತೆಗಿನ ಕಲಿಕೆ ಜೀವನದಲ್ಲಿ ಹೊಸ ಅನುಭವದ ಜೊತೆ ಹೆಚ್ಚಿನ ಸಂಗೀತ ಶಾಸ್ತ್ರದ ಕಲಿಕೆಗೂ ಕಾರಣವಾಯಿತು. ಘರಾನಾ ಸಂಪ್ರದಾಯದ ಅದೀನದಲ್ಲಿ ಹಾಕಲಾಗಿದ್ದ ಎಲ್ಲಾ ಸಾಂಪ್ರದಾಯಿಕ ಕಟ್ಟುಪಾಡುಗಳನ್ನು ಮೆಟ್ಟಿನಿಂತ ಕುಮಾರ ಗಂಧರ್ವರು ಗ್ವಾಲಿಯರಿನ ಸಂಗೀತ ತಾಲೀಮಿನಲ್ಲಿ ಸಂಪೂರ್ಣವಾಗಿ ತಮ್ಮನ್ನು ಅರ್ಪಿಸಿಕೊಂಡರು.
ಸುಮಾರು ಸುದೀರ್ಘ ಐದು ದಶಕಗಳ ಕಾಲ ಸಂಗೀತ ಸೇವೆ ಸಲ್ಲಿಸಿದ ಇವರು ಜೀವನದ ಕೊನೆಯಲ್ಲಿ ಅನಾರೋಗ್ಯದಿಂದ ಬಳಲಿದರು. ತಮ್ಮ ಕಲಾ ಸೇವೆಯುದ್ದಕ್ಕೂ ಮೀರಾ, ಸುರ, ಕಬೀರ, ಮತ್ತಿತರ ದಾಸಶ್ರೇಷ್ಠರ ಹಾಡುಗಳನ್ನು ಹಾಡುವುದು ಮಾತ್ರವಲ್ಲದೆ 300 ಜನಪದ ಹಾಡುಗಳಿಗೆ ಧ್ವನಿಯಾದರು. ಗಾಂಧಿ ಮಲ್ಹಾರ್ಎಂಬ ಪುರಾತನ ರಾಗವನ್ನು ಪುನರ್ ಶೋಧಿಸಿದ ಕೀರ್ತಿಯೂ ಇವರಿಗೆ ಸಲ್ಲುತ್ತದೆ.
ಸುಮಾರು ಐದು ವರ್ಷದ ಬಾಲಕನಿದ್ದಾಗ ದಾವಣಗೆರೆಯಲ್ಲಿ ಪ್ರಥಮ ಸಂಗೀತ ಕಚೇರಿ ನೀಡಿದ್ದರು. ಅಂದಿನ ಕಾಲದಲ್ಲಿ ಅದೊಂದು ದಾಖಲೆಯೂ ಆಗಿತ್ತು. ಆರು ವರ್ಷದವನಿದ್ದಾಗ ಪುಟ್ಟ ಬಾಲಕನ ಗಾಯನ ಕೇಳಿ ಗುಲ್ಬರ್ಗಾ ಜಿಲ್ಲೆಯ ಗುರು ಕಲ್ಮಠದ ಶಾಂತವೀರ ಸ್ವಾಮಿಗಳು ಓಹೊ, ಇವನು ಕುಮಾರ ಗಂದರ್ವ ಎಂದು ಉದ್ಗರಿಸಿದರು. ನಂತರ ಆ ಹೆಸರೇ ಸ್ಥಿರವಾಯಿತು, ಅದೇ ಕಾಯಂ ಹೆಸರಾಯಿತು. ನಂತರ ತಂದೆ ಮತ್ತು ಮಗ ರಾಜ್ಯ ಮಾತ್ರವಲ್ಲದೆ ದೇಶದುದ್ದಕ್ಕೂ ಸಂಚರಿಸಿ ಸಂಗೀತ ಕಾರ್ಯಕ್ರಮಗಳನ್ನು ನೀಡುತ್ತಾರೆ. ದೇವಧರದಲ್ಲಿ 1933 ರಿಂದ 1943 ರ ತನಕ ಸಂಗೀತ ಕಲಿತ ನಂತರದಲ್ಲಿ ಅಂಜನಿಬಾಯಿ ಮಾಲ್ಪೆಕರರು ಕುಮಾರ ಗಂಧರ್ವ ರಿಗೆ ಸಂಗೀತ ದೃಷ್ಠಿ ನೀಡುತ್ತಾರೆ. ನಂತರ ದಿಯೊದರದಲ್ಲಿ ಸಹಪಾಠಿಯಾಗಿದ್ದ ಮಂಗಳೂರಿನ ಭಾನುಮತಿ ಕಂಸರನ್ನು ಗಂಧರ್ವರು ವಿವಾಹವಾಗುತ್ತಾರೆ. ʼಸುನತಾ ಹೈ ಗುರು ಗ್ಯಾನಿʼ ಇವರಿಗೆ ಯಶಸ್ಸನ್ನು ನೀಡಿದ ಹಾಡಾಗಿತ್ತು. ಒಂದೊಮ್ಮೆ ಅನಾರೋಗ್ಯ ಬಂದು ಬಹುವಾಗಿ ಜೀವನವನ್ನು ಕಾಡಿದ್ದರು ಅದರ ಬಗ್ಗೆ ಲೆಕ್ಕಿಸದೆ ಮುನ್ನಡೆದಿದ್ದರು. ಅನಾರೋಗ್ಯ ತನಗೆ ವರವೇ ಆಗಿದೆ. ತನ್ನ ಸಂಗೀತವನ್ನು ಪುನರುಕ್ತಿಸಲು, ಪುನರ್ಪಠಿಸಲು ಸಮಯ ಸಿಕ್ಕಿದೆ ಎಂದಿದ್ದ ಗಂಧರ್ವರು ಜೀವನದುದ್ದಕ್ಕೂ ಸಂಗೀತವನ್ನೇ ಉಸಿರಾಗಿಸಿ ಚಿಂತಿಸಿದ ಅಪರೂಪದ ವ್ಯಕ್ತಿತ್ವ. ಉಜ್ಜೈನಿಯ ವಿಕ್ರಮ ವಿ.ವಿ ಯಿಂದ ಗೌರವ ಡಾಕ್ಟರೇಟ್ ಪ್ರಶಸ್ತಿ ಪುರಸ್ಕೃತರಾದ ಇವರಿಗೆ 1990 ರಲ್ಲಿ ಭಾರತ ಸರಕಾರ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ. ಇವರ ನೆನಪಿನಲ್ಲಿ ಬೆಳಗಾವಿ ಜಿಲ್ಲಾಡಳಿತ ಕುಮಾರ ಗಂಧರ್ವ ರಂಗ ಮಂದಿರವನ್ನೂ ನಿರ್ಮಾಣ ಮಾಡಿದೆ.
✍️ ವಿವೇಕಾದಿತ್ಯ ಕೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.