ಜನರಿಗೆ ಸಮಾಜದಲ್ಲಿ ನಡೆಯುತ್ತಿರುವ ಆಗುಹೋಗುಗಳನ್ನು ಕಾಲಕಾಲಕ್ಕೆ ತಲುಪಿಸುವ ಕೆಲಸವನ್ನು ಮಾಧ್ಯಮಗಳು ಮಾಡುತ್ತಿವೆ. ಯಾವುದೇ ವಿಚಾರಗಳನ್ನು ಸಮಾಜ ಇಂದು ಘಟನೆ ನಡೆದ ಕೂಡಲೇ ತಿಳಿದುಕೊಳ್ಳುತ್ತಿದೆ, ಅಂಗೈಯಲ್ಲೇ ಮನುಷ್ಯ ಸುದ್ದಿಗಳನ್ನು ನೋಡುತ್ತಿದ್ದಾನೆ, ತಿಳಿದುಕೊಳ್ಳುತ್ತಿದ್ದಾನೆ ಎಂದರೆ ನಮ್ಮಲ್ಲಿ ತಾಂತ್ರಿಕ ಅಭಿವೃದ್ಧಿ ಬಹಳಷ್ಟು ಮಟ್ಟಿಗೆ ಆಗಿದೆ ಅಥವಾ ಬದಲಾವಣೆಗೆ ನಾವು ತೆರೆದುಕೊಳ್ಳುತ್ತಿರುವ, ಒಪ್ಪಿಕೊಳ್ಳುತ್ತಿರುವ, ಅದನ್ನು ಬಳಕೆ ಮಾಡಿಕೊಳ್ಳುತ್ತಿರುವ ಹಾದಿಯಲ್ಲಿ ಯಶಸ್ಸು ಕಾಣುತ್ತಿದ್ದೇವೆ ಎಂದರ್ಥ.
ಅದಿರಲಿ, ಮಾಧ್ಯಮ ಎಂದ ಕೂಡಲೇ ಸಾಮಾನ್ಯವಾಗಿ ನಾವಂದುಕೊಳ್ಳುವುದು ಅಥವಾ ನಮ್ಮ ಗಮನಕ್ಕೆ ತಕ್ಷಣಕ್ಕೆ ಹೊಳೆಯುವುದು ಟಿವಿ ಚಾನೆಲ್ಗಳು ಅಥವಾ ನ್ಯೂಸ್ ಚಾನೆಲ್ಗಳು. ಆದರೆ ಮಾಧ್ಯಮದೊಳಗೆ ಗುರುತಿಸಿಕೊಳ್ಳುವ ಪತ್ರಿಕೆಗಳು, ಸಾಮಾಜಿಕ ಜಾಲತಾಣಗಳು, ಅಂತರ್ಜಾಲ ಇತ್ಯಾದಿ, ಇತ್ಯಾದಿ ಅಂಶಗಳನ್ನು ಗಮನದಲ್ಲಿಟ್ಟುಕೊಂಡು, ಇತ್ತೀಚೆಗೆ ಸಮಾಜದ ಮೇಲೆ ಋಣಾತ್ಮಕ ಪರಿಣಾಮ ಬೀರುವ ಅಂಶಗಳ ಮೇಲೆ, ಅವುಗಳು ಬೀರುತ್ತಿರುವ ಸಕಾರಾತ್ಮಕ/ನಕಾರಾತ್ಮಕ ಪರಿಣಾಮಗಳ ಬಗ್ಗೆ ನಾವು ಚಿಂತನೆ ನಡೆಸಬೇಕಾದ ಅಗತ್ಯತೆ ಇದೆ ಎಂಬುದು ಸತ್ಯ.
ಈ ಎಲ್ಲಾ ʼಮಾದ್ಯಮʼ ವಿಭಾಗಗಳಲ್ಲಿಯೂ ಧನಾತ್ಮಕ ಸಂಗತಿಗಳು, ಇನ್ನೊಬ್ಬರಿಗೆ ಮಾದರಿಯಾಗಬಹುದಾದ ಸಂಗತಿಗಳನ್ನು ಎಷ್ಟು ಪ್ರಮಾಣದಲ್ಲಿ ಪ್ರಚಾರ ಅಥವಾ ಪ್ರಸ್ತುತ ಪಡಿಸಲಾಗುತ್ತದೆ? ಮತ್ತು ಸಮಾಜದ ಮೇಲೆ ದುಷ್ಪರಿಣಾಮ ಬೀರಬಹುದಾದ ಋಣಾತ್ಮಕ ಅಂಶಗಳನ್ನು ಮಾಧ್ಯಮಗಳು ಎಷ್ಟು ಪ್ರಮಾಣದಲ್ಲಿ ಪ್ರಸ್ತುತ ಪಡಿಸುತ್ತಿವೆ? ಎಂಬುದರ ಬಗ್ಗೆ ನಾವು ಚಿಂತನೆ ನಡೆಸಬೇಕಾದ ಅನಿವಾರ್ಯ ಪರಿಸ್ಥಿತಿ ತಲುಪಿದ್ದೇವೆ. ಇದಕ್ಕೆ ಕಾರಣ ಟಿಆರ್ಪಿ ಎಂಬ ಗುರಿ ಸಾಧನೆಗೆ ಹೊರಟ ಸುದ್ದಿ ಮಾದ್ಯಮಗಳು, ಪತ್ರಿಕೆಗಳು ನಮ್ಮಲ್ಲೇ ಮೊದಲು ಎಂಬಂತೆ ಸಮಾಜದ ನಕಾರಾತ್ಮಕ ವಿಚಾರಗಳ ಮೇಲೆ ನೀಡುವ ಗಮನವನ್ನು ಸಕಾರಾತ್ಮಕ ವಿಚಾರಗಳತ್ತ ನೀಡುವಲ್ಲಿ ಎಷ್ಟರ ಮಟ್ಟಿಗೆ ಸಫಲತೆ ಕಾಣುತ್ತಿವೆ ಎಂಬುದು ಸದ್ಯದ ಪ್ರಶ್ನೆ.
ಇದಕ್ಕೆ ಉದಾಹರಣೆ ಎಂಬಂತೆ ಕಳೆದೊಂದು ತಿಂಗಳಿನಿಂದ ʼಸಿಡಿʼ ವಿಚಾರಕ್ಕೆ ನೀಡುತ್ತಿರುವ ಪ್ರಾಶಸ್ತ್ಯವನ್ನು, ಇತರ ಯಾವುದೇ ಸುದ್ದಿಗಳಿಗೆ ನೀಡದೇ ಇರುವುದಕ್ಕಿಂತ ಸ್ಪಷ್ಟ ನಿದರ್ಶನ ಬೇರೆ ನೀಡಬೇಕಿಲ್ಲವೇನೋ. ಈ ನಡುವೆಯೇ ಭಾರತೀಯ ಸೇನೆಗೆ ಆಯ್ಕೆಯಾದ ಸಾಲು ಸಾಲು ಯುವಕರ ಪಡೆಯೇ ನಮ್ಮ ನಡುವೆ ಇದ್ದರೂ ಇಂತಹ ಧನಾತ್ಮಕ ಅಥವಾ ಇನ್ನಿತರ ಯುವ ಮನಸ್ಸುಗಳಿಗೆ ಪ್ರೇರಣೆ ನೀಡಬಲ್ಲ ವಿಚಾರಗಳಿಗೆ ಮನ್ನಣೆ ದೊರೆಯದೇ ಇರುವುದನ್ನು ದುರಂತವೆನ್ನುವುದೋ ಅಥವಾ ಅದಕ್ಕೆ ಬೇರೇನು ಹೆಸರಿಡುವುದು ಎಂಬುದು ಸದ್ಯದ ಜಿಜ್ಞಾಸೆ.
ಇನ್ನು ಸಾಮಾಜಿಕ ಜಾಲತಾಣಗಳಲ್ಲಂತೂ ಇತ್ತೀಚಿನ ದಿನಗಳ ಸಾಲು ಸಾಲು ಲೇಖಕರು ಹುಟ್ಟಿಕೊಳ್ಳುತ್ತಿದ್ದಾರೆ. ಇದೇನೋ ಉತ್ತಮ ವಿಚಾರವೇ. ಆದರೆ ನಕಾರಾತ್ಮಕ ಸಂಗತಿಗಳನ್ನು ವೈಭವೀಕರಿಸುವ ವಿಚಾರದಲ್ಲಿ ಹೆಚ್ಚು ಆಸ್ಥೆ ವಹಿಸುವ, ಇನ್ನೊಬ್ಬರ ಭಾವನೆಗಳು, ಜೀವನಕ್ಕೆ ಕುತ್ತಾಗುವಂತೆ ಬರಹಗಳನ್ನು ಪ್ರಕಟಿಸುವುದರಿಂದಾಗಿ ಅದೆಷ್ಟೋ ಜನರು ನೋವನುಭವಿಸುವ ಪರಿಸ್ಥಿತಿ ಬಂದೊದಗಿದೆ ಎಂಬುದನ್ನೂ ನಾವು ಅಲ್ಲಗಳೆಯುವ ಹಾಗಿಲ್ಲ. ಮುಖ್ಯವಾಗಿ ಹೇಳುವುದಾದರೆ ವ್ಯಕ್ತಿ ಸಾಮಾನ್ಯನೇ ಇರಲಿ ಅಥವಾ ಪ್ರಭಾವಿ ವಲಯದಲ್ಲಿ ಗುರುತಿಸಿಕೊಂಡವರೇ ಇರಲಿ ಅವರಿಗೂ ಒಂದು ಖಾಸಗಿ ಜೀವನವಿದೆ ಎಂಬುದನ್ನು ಅರಿತುಕೊಂಡು ನಮ್ಮ ಬರಹಗಳನ್ನು ಅಥವಾ ಇನ್ಯಾವುದೋ ಸುದ್ದಿಗಳನ್ನು ಪ್ರಚಾರ ಮಾಡುವತ್ತ, ಜಗತ್ತಿಗೆ ತಿಳಿಸುವತ್ತ ಚಿತ್ತ ಹರಿಸಿದಲ್ಲಿ ಸಮಾಜದಲ್ಲಿ ಕೊಂಚ ಮಟ್ಟಿನ ಶಾಂತಿ, ಸುವ್ಯವಸ್ಥೆ ಕಾಪಾಡಬಹುದೇನೋ. ಇನ್ನೂ ಹೇಳುವುದಾದರೆ ನಮ್ಮಲ್ಲಿನ ಕಾನೂನು ವ್ಯವಸ್ಥೆಯ ಚೌಕಟ್ಟಿನೊಳಗೆ ನಡೆಯುತ್ತಿರುವ ಸಂಗತಿಗಳನ್ನು ಹೆಚ್ಚೆಚ್ಚು ಸಮಾಜದೆದುರಿಡುವುದರಿಂದಾಗಿ ಕಾನೂನಿನ ಹಾದಿ ತಪ್ಪುವ ಅಥವಾ ತಪ್ಪಿಸುವ ಸಾಧ್ಯತೆಗಳೂ ಇರುತ್ತವೆ. ಅಥವಾ ನಮ್ಮ ಚಿಂತನೆಗಳ ಪ್ರಭಾವ ಆ ಸಂಗತಿಯನ್ನು ಆವರಿಸುವ ಇದರಿಂದಾಗಿ ಕೆಲವು ಸಂದರ್ಭಗಳಲ್ಲಿ ʼಸತ್ಯʼ ಸತ್ತು ಹೋಗುವ ಮತ್ತು ಸುಳ್ಳು ಮೇಳೈಸುವ ಅವಕಾಶಗಳನ್ನೂ ನಾವು ತಳ್ಳಿಹಾಕುವಂತಿಲ್ಲ ಎಂಬುದು ವಾಸ್ತವ.
ಹಾಗಿದ್ದರೂ ಮಾಧ್ಯಮಗಳಿಂದಾಗಿ ಎಲ್ಲಾ ಕೆಟ್ಟದ್ದಾಗಿದೆಯೇ ಎಂಬುದಾಗಿ ಕೇಳಿದರೆ, ಖಂಡಿತಾ ಇಲ್ಲ. ಹಲವು ಸಂದರ್ಭಗಳಲ್ಲಿ ಅದೆಷ್ಟೋ ಜನರ ಬದುಕನ್ನೇ ಬದಲಾಯಿಸುವ, ಅವರಿಗೆ ಸುಸ್ಥಿರ ಜೀವನವನ್ನು ಕಂಡುಕೊಳ್ಳುವುದಕ್ಕೆ ಪೂರಕವಾದ ಅನುಕೂಲತೆಗಳ ಹಾದಿಯನ್ನು ತೆರೆದುಕೊಡುವುದಕ್ಕೂ ಮಾಧ್ಯಮಗಳು ಸಾಕ್ಷಿಯಾಗಿವೆ. ಸರ್ಕಾರದ ಸವಲತ್ತುಗಳನ್ನು ಅರ್ಹರಿಗೆ ತಲುಪಿಸಿಕೊಡುವ ನಿಟ್ಟಿನಲ್ಲಿ, ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಪೂರಕವಾಗುವಂತೆ ಹೀಗೆ ಹತ್ತು ಹಲವು ಸಾಮಾಜಿಕ ಜವಾಬ್ದಾರಿಗಳನ್ನು ಹೆಚ್ಚು ಅರ್ಥಪೂರ್ಣವಾಗಿ ಪೂರೈಸಿದ ಹೆಗ್ಗಳಿಕೆಯೂ ಮಾಧ್ಯಮಗಳಿಗೆ ದಕ್ಕಿವೆ. ಅದರೊಂದಿಗೆ ಯಾರೋ ಒಬ್ಬ ವ್ಯಕ್ತಿಗೆ ಅನ್ಯಾಯವಾಗುತ್ತಿದೆ ಎಂಬ ಸಂದರ್ಭದಲ್ಲಿ ಅವರಿಗೆ ನ್ಯಾಯ ಪಡೆಯುವ ಅವಕಾಶಗಳನ್ನು ಸಹ ಮಾಧ್ಯಮ ತೋರಿಸಿಕೊಟ್ಟಿದೆ ಎಂಬುದನ್ನು ನಾವು ಅಲ್ಲಗಳೆಯುವಂತಿಲ್ಲ.
ಪ್ರಕರಣಗಳು ಏನೇ ಇರಲಿ. ಸುದ್ದಿಗಳು ಸುದ್ದಿಯಾಗಿಯೇ ತೋರಿಸಲ್ಪಟ್ಟರೆ ಹೆಚ್ಚು ಸ್ವಾದ. ಸುದ್ದಿಗಳು ʼಧಾರಾವಾಹಿʼಗಳಾದರೆ ಆ ಸ್ವಾದ ಕೆಡುತ್ತದೆ. ಸ್ವಾದ ಮಾತ್ರವಲ್ಲ ಸಮಾಜದ ಅಥವಾ ವ್ಯಕ್ತಿಯ ಖಾಸಗಿತನಕ್ಕೂ ಅದರಿಂದ ಹೆಚ್ಚು ಅಭದ್ರತೆ ಉಂಟಾಗುವ ಸಾಧ್ಯತೆ ಇರುತ್ತದೆ. ಇದರ ನಡುವೆಯೂ ಯಾವುದೋ ಒಂದು ನಕಾರಾತ್ಮಕತೆಯನ್ನು ʼಧಾರಾವಾಹಿʼಯಂತೆ ತೋರಿಸುವ ನಿಲುವು ಹಲವು ಸಂದರ್ಭದಲ್ಲಿ ಪ್ರಕರಣದ ಆಯಾಮಗಳನ್ನು ಬುಡಮೇಲು ಮಾಡುವ, ಸ್ವಾಸ್ಥ್ಯ ಕದಡುವ ಮಟ್ಟಕ್ಕೆ ಕೊಂಡೊಯ್ಯಬಾರದಲ್ಲ ಎಂಬ ಕಾಳಜಿಯಷ್ಟೇ.
✍️ ಭುವನ ಬಾಬು
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.