ಮಂಜೇಶ್ವರ: ಕನ್ನಡದ ಪ್ರಥಮ ರಾಷ್ಟ್ರಕವಿ ಗೋವಿಂದ ಪೈ ಅವರ ಬದುಕು, ಬರಹ ಕನ್ನಡ ನಾಡಿನ ಎಲ್ಲರಿಗೂ ಮಾದರಿಯಾಗಿದೆ. ಹಲವು ಭಾಷೆಗಳಲ್ಲಿ ಅಗಾಧ ಜ್ಞಾನ ಹೊಂದಿದ್ದ ಗೋವಿಂದ ಪೈ ಸಂಶೋಧಕರಾಗಿಯೂ ವಿಖ್ಯಾತರು. ಇಂತಹ ಮಹಾಮಹಿಮನ ಜೀವನವನ್ನು ಆಧರಿಸಿ ಮೂಡಿಬರಲಿರುವ ಮಹಾಕವಿ ಸಿನಿಮಾ ಎಲ್ಲರಿಗೂ ಸ್ಪೂರ್ತಿಯಾಗಲಿ ಎಂದು ಮಂಗಳೂರು ಪೋಲಿಸ್ ಆಯುಕ್ತ ಶ್ರೀನಿವಾಸ ಹೇಳಿದರು.
ಲಕ್ಷ್ಮೀ ಗಣೇಶ್ ಪ್ರೊಡಕ್ಷನ್ಸ್ ಸುಗುಣ ರಘು ಭಟ್ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಮಹಾಕವಿ ಚಲನಚಿತ್ರದ ಚಿತ್ರಕಥೆ ಸಾಹಿತ್ಯದ ವಿಶೇಷ ಪೂಜೆಯ ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕನ್ನಡದ ಸಾಹಿತ್ಯ ಕ್ಷೇತ್ರ ವಿಶಾಲವಾಗಿದೆ. ಕನ್ನಡದ ಸಾಹಿತಿಕ ಕ್ಷೇತ್ರವನ್ನು ಹಲವು ಮಹಾಮಹಿಮರು ಬಹಳ ಶ್ರೀಮಂತಗೊಳಿಸಿದ್ದಾರೆ. ಇಂತಹ ಮಹನೀಯರಲ್ಲಿ ಮಂಜೇಶ್ವರದ ಗೋವಿಂದ ಪೈ ಕೂಡಾ ಓರ್ವರು. ಐತಿಹಾಸಿಕ ವಿಚಾರ ವಿಷಯಗಳ ಬಗ್ಗೆ ಆಳವಾಗಿ ಅಧ್ಯಯನ ಸಂಶೋಧನೆ ನಡೆಸಿದ ಇವರ ಗಿಳಿವಿಂಡು ಸಮುಚ್ಚಯ ಒಂದು ಮಹೋನ್ನತ ಜ್ಞಾನ ದೇಗುಲದಂತಿದೆ ಎಂದು ಅವರು ಹೇಳಿದರು. ಪ್ರಸ್ತುತ ಕಾಲಘಟ್ಟದಲ್ಲಿ ಯುವ ಸಮೂಹಕ್ಕೆ ಮಾದರಿ ಎನಿಸುವ ಸಿನಿಮಾಗಳು ನಮಗೆ ಬೇಕಿದೆ. ಸಮಾಜ ಘಾತುಕ, ಕುಖ್ಯಾತ ವ್ಯಕ್ತಿಯನ್ನು ವೈಭವೀಕರಿಸಿ ಪ್ರದರ್ಶಿಸಲ್ಪಡುವ ಸಿನಿಮಾಗಳು ನಮಗೆ ಬೇಕಿಲ್ಲ ಎಂದರು. ರಘು ಭಟ್ ನಿರ್ಮಾಪಕರಾಗಿ, ಗಣೇಶ್ ಕಾಸರಗೋಡು ಅವರ ಕಥೆ, ಚಿತ್ರಕಥೆ ಹೊಂದಿರುವ ಮಹಾಕವಿ ಸಿನಿಮಾ ಯುವ ಮನಸುಗಳಿಗೆ ಪ್ರೇರಣೆಯಾಗಲಿ ಎಂದು ಹಾರೈಸಿದರು.
ಆಶೀರ್ವದಿಸಿದ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ಮಾತನಾಡಿ, ಗಡಿನಾಡು ಕನ್ನಡಿಗರ ಸಾಹಿತಿಕ ಶ್ರದ್ಧಾ ಕೇಂದ್ರ ಗಿಳಿವಿಂಡು ಸ್ಮಾರಕ. ಕೇವಲ ಗಡಿನಾಡಿಗೆ ಸೀಮಿತವಾಗಿರದ ಈ ಕೇಂದ್ರದ ಪ್ರಭೆ ಎಲ್ಲಡೆಗೂ ಹರಿಯಬೇಕಿದೆ. ಯುವ ಸಾಹಿತಿಗಳಿಗೆ ಸ್ಪೂರ್ತಿಯಾಗಿರುವ ಕೇಂದ್ರದಲ್ಲಿ ಕವಿ ನಮನದೊಂದಿಗೆ, ಕವಿಗಳ ಜೀವನ ಬದುಕನ್ನು ಸಾರುವ ಮಹಾಕವಿ ಸಿನಿಮಾ ನಿರ್ಮಾಣ ಯಶಸ್ಸನ್ನು ಕಾಣಲಿ ಎಂದು ಹರಿಸಿದರು.
ಮಹಾಕವಿ ಸಿನಿಮಾದ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನು ಬರೆದ ಹಿರಿಯ ಸಿನಿಮಾ ವಿಮರ್ಶಕ ಗಣೇಶ್ಕಾಸರಗೋಡು ಮಾತನಾಡಿ, ಮಂಜೇಶ್ವರದ ಗೋವಿಂದ ಪೈ ಸ್ಮಾರಕದಲ್ಲಿ ಮಹಾಕವಿ ಸಿನಿಮಾ ಆರಂಭವಾಗಿರುವುದು ಖುಷಿ ತಂದಿದೆ. ತನ್ನ ನಲ್ವತ್ತು ವರ್ಷಗಳ ಸಿನಿಮಾ ಪತ್ರಿಕೋದ್ಯಮದಲ್ಲಿ ಯಾರು ತನ್ನಲ್ಲಿ ಒಂದು ಚಿತ್ರಕಥೆ, ಸಂಭಾಷಣೆಯನ್ನು ಬರೆಯಿರಿ ಎಂದಿರಲಿಲ್ಲ, ಆದರೆ ನಿವೃತ್ತಿಯ ಬಳಿಕ ಅಂತಹ ಒಂದು ದೊಡ್ಡ ಅವಕಾಶ ತನಗೆ ಪ್ರಾಪ್ತವಾಗಿದೆ. ರಘು ಭಟ್ ತನಗೆ ಪ್ರೀತಿಯಿಂದ ನೀಡಿರುವ ಜವಾಬ್ದಾರಿಯನ್ನು ಉತ್ತಮವಾಗಿ ನಿರ್ವಹಿಸಿದ್ದೇನೆ ಎನ್ನುವ ನಂಬಿಕೆ ತನಗಿದೆ ಎಂದು ಹೇಳಿದರು. ನಿರ್ಮಾಪಕರಾದ ರಘು ಭಟ್ ಅವರು ಕೂಡಾ ಸಿನಿಮಾದಲ್ಲಿ ಒಂದು ಪತ್ರಕರ್ತನ ಪಾತ್ರವನ್ನು ನಿರ್ವಹಿಸಬೇಕೆಂದು ಕೇಳಿಕೊಂಡರು. ಗೋವಿಂದ ಪೈ ಅವರು ಪತ್ರಕರ್ತರನ್ನು ಸಮೀಪಕ್ಕೆ ಬಿಡುತ್ತಿರಲಿಲ್ಲ, ಆದರೆ ಅವರಿಗೆ ನೇರಳೆ ಶಾಯಿ ಪೆನ್ನಿನ ಬಗ್ಗೆ ವಿಶೇಷ ಒಲವಿತ್ತು, ಆ ನೇರಳೆ ಶಾಯಿ ಪೆನ್ನಿನ ಮೂಲಕ ಓರ್ವ ಪತ್ರಿಕಾ ವರದಿಗಾರ ಮಹಾಕವಿಯನ್ನು ಹೇಗೆ ಸಮೀಪಿಸುತ್ತಾನೆ ಎಂಬ ಸನ್ನಿವೇಶವೂ ಸಿನಿಮಾದಲ್ಲಿರಲಿದೆ ಎಂದರು.
ಮಂಜೇಶ್ವರ ಲೇಡಿ ಆಫ್ಮರ್ಸಿ ಚರ್ಚ್ ಧರ್ಮಗುರು ವಿನೋದ್ ವಿನ್ಸೆಂಟ್ ಸಲ್ದಾನ, ಸಿನಿಮಾರಂಗದ ಯುವ ಸ್ಪೂರ್ತಿ ನಮಿತಾ ರಾವ್, ವಿಕ್ರಮ್ ಸೂರಿ, ಧರ್ಮದರ್ಶಿ ಮಂಜು ಭಟ್ ಉಪಸ್ಥಿತರಿದ್ದರು.
ಕಾರ್ಯಕ್ರಮ ಆರಂಭಕ್ಕೂ ಮುನ್ನ ಗೋವಿಂದ ಪೈ ಅವರ ಪುತ್ಥಳಿಗೆ ಹಾರ ಹಾಕಿ ಗೌರವ ಸೂಚಿಸಲಾಯಿತು. ಮುನ್ನ ಕು. ಮೇಘಶ್ರೀ ಭರತನಾಟ್ಯ ಪ್ರದರ್ಶನ ನೀಡಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.