ಇಂದು ವಿಶ್ವ ಕ್ಷಯರೋಗ ದಿನ. ಕ್ಷಯ ಅಥವಾ ಟಿಬಿಯ ವಿನಾಶಕಾರಿ ಆರೋಗ್ಯ, ಸಾಮಾಜಿಕ ಮತ್ತು ಆರ್ಥಿಕ ಪರಿಣಾಮಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಮತ್ತು ಜಾಗತಿಕ ಸಾಂಕ್ರಾಮಿಕ ರೋಗವನ್ನು ಕೊನೆಗೊಳಿಸುವ ಪ್ರಯತ್ನಗಳನ್ನು ಹೆಚ್ಚಿಸಲು ಪ್ರತಿವರ್ಷ ಮಾರ್ಚ್ 24 ರಂದು ಈ ದಿನವನ್ನು ಆಚರಿಸಲಾಗುತ್ತದೆ. 1882 ರಲ್ಲಿ ಡಾ. ರಾಬರ್ಟ್ ಕೋಚ್ ಟಿಬಿ ಬ್ಯಾಕ್ಟೀರಿಯಾವನ್ನು ಕಂಡುಹಿಡಿದ ವಾರ್ಷಿಕೋತ್ಸವದ ನೆನಪಿಗಾಗಿ ಈ ದಿನವನ್ನು ಆಚರಿಸಲಾಗುತ್ತದೆ.
ಟಿಬಿ ವಿಶ್ವದ ಮಾರಕ ಸಾಂಕ್ರಾಮಿಕ ರೋಗಗಳಲ್ಲಿ ಒಂದಾಗಿ ಉಳಿದಿದೆ. ಪ್ರತಿದಿನ, ಸುಮಾರು 4000 ಜನರು ಟಿಬಿಗೆ ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಾರೆ ಎಂದು ವರದಿಗಳು ಹೇಳುತ್ತವೆ. ಸುಮಾರು 28,000 ಜನರು ಅನಾರೋಗ್ಯಕ್ಕೆ ಒಳಗಾಗುತ್ತಾರೆ. ಇದೊಂದು ತಡೆಗಟ್ಟಬಹುದಾದ ಮತ್ತು ಗುಣಪಡಿಸಬಹುದಾದ ಕಾಯಿಲೆಯಾದರೂ ಇದು ಬೀರುವ ಪರಿಣಾಮ ಮಾರಣಾಂತಿಕವೇ ಆಗಿದೆ. ಟಿಬಿಯನ್ನು ಎದುರಿಸಲು ಜಾಗತಿಕ ಪ್ರಯತ್ನಗಳು ಸಕ್ರಿಯವಾಗಿ ನಡೆಯುತ್ತಿದ್ದು, ಇದರ ಫಲವಾಗಿ 2000 ರಿಂದ ಅಂದಾಜು 63 ಮಿಲಿಯನ್ ಜೀವಗಳನ್ನು ಉಳಿಸಲಾಗಿದೆ.
ವಿಶ್ವ ಕ್ಷಯರೋಗ ದಿನ 2021 ಅನ್ನು ‘ದಿ ಕ್ಲಾಕ್ ಈಸ್ ಟಿಕಿಂಗ್’ ಎಂಬ ವಿಷಯದೊಂದಿಗೆ ಆಚರಿಸಲಾಗುತ್ತಿದೆ. ಅಂದರೆ ಕಾಲ ಘಟಿಸುತ್ತಿದೆ ಎಂದರ್ಥ. ಕ್ಷಯವನ್ನು ಅಂತ್ಯಗೊಳಿಸುವ ಬದ್ಧತೆಗಳ ಮೇಲೆ ಕಾರ್ಯನಿರ್ವಹಿಸಲು ಜಗತ್ತಿಗೆ ಸಮಯ ಮೀರುತ್ತಿದೆ ಎಂಬ ಸಂದೇಶವನ್ನು ಇದು ತಿಳಿಸುತ್ತದೆ. ಜಗತ್ತು ಕೋವಿಡ್-19 ಸಾಂಕ್ರಾಮಿಕಕ್ಕೆ ಸಿಲುಕಿ ನಲುಗುತ್ತಿರುವ ಈ ಸಂದರ್ಭದಲ್ಲಿ ನಾವು ಕ್ಷಯರೋಗದ ನಿವಾರಣೆಯತ್ತವೂ ಹೆಚ್ಚಿನ ಗಮನ ನೀಡುವುದು ಅನಿವಾರ್ಯವಾಗಿದೆ. ಇದು ವಿಶೇಷವಾಗಿ ನಿರ್ಣಾಯಕವೂ ಆಗಿದೆ. ಕೋವಿಡ್ ಅಲೆಯಲ್ಲಿ ನಾವು ಕ್ಷಯವನ್ನು ಮರೆತರೆ ಭವಿಷ್ಯ ಮತ್ತೆ ಅಪಾಯಕ್ಕೆ ಸಿಲುಕುತ್ತದೆ ಎಂಬುದರಲ್ಲಿ ಅನುಮಾನವಿಲ್ಲ.
ಯುಎನ್ ಸುಸ್ಥಿರ ಅಭಿವೃದ್ಧಿ ಗುರಿಗಳ ಪ್ರಕಾರ ಯುನಿವರ್ಸಲ್ ಹೆಲ್ತ್ ಕವರೇಜ್ ಗುರಿಯನ್ನು ಸಾಧಿಸಲು ಭಾರತ ಸರ್ಕಾರ ಬದ್ಧವಾಗಿದೆ ಎಂದು ಅಧ್ಯಕ್ಷ ರಾಷ್ಟ್ರಪತಿ ರಾಮನಾಥ್ ಕೋವಿಂದ್ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ. ವಿಶ್ವದ ಅತಿದೊಡ್ಡ ರಾಷ್ಟ್ರೀಯ ಆರೋಗ್ಯ ವಿಮಾ ಯೋಜನೆಯಾದ ಆಯುಷ್ಮಾನ್ ಭಾರತ್ ಪ್ರಧಾನ್ ಮಂತ್ರಿ ಜನ ಆರೋಗ್ಯ ಯೋಜನೆ ಆಶ್ರಯದಲ್ಲಿ ಇದನ್ನು ಜಾರಿಗೊಳಿಸಲಾಗುತ್ತಿದೆ ಎಂದಿದ್ದಾರೆ.
ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಇಡೀ ರಾಷ್ಟ್ರೀಯ ಟಿಬಿ ಎಲಿಮಿನೇಷನ್ ಕಾರ್ಯಕ್ರಮ ಮುಂಚೂಣಿಯಲ್ಲಿದೆ ಮತ್ತು ಟಿಬಿ ನಿರ್ಮೂಲನೆ ಪ್ರಯತ್ನಗಳನ್ನು ಮುಂದುವರೆಸುವಾಗ ಕೋವಿಡ್ ಸಾಂಕ್ರಾಮಿಕ ರೋಗವನ್ನು ನಿಭಾಯಿಸುವ ಅದರ ಬದ್ಧತೆ ಶ್ಲಾಘನೀಯ ಎಂದು ರಾಷ್ಟ್ರಪತಿ ಹೇಳಿದ್ದಾರೆ. ಈ ಸಂದರ್ಭದಲ್ಲಿ, ‘ಎಲ್ಲರಿಗೂ ಆರೋಗ್ಯ’ ಸಾಧಿಸುವ ನಮ್ಮ ಪ್ರಯತ್ನಗಳನ್ನು ನಾವು ಪುನರುಜ್ಜೀವನಗೊಳಿಸಬೇಕು ಮತ್ತು ಮುಂದಿನ ಪೀಳಿಗೆಗೆ ಉಜ್ವಲ ಮತ್ತು ಆರೋಗ್ಯಕರ ಭವಿಷ್ಯವನ್ನು ಸೃಷ್ಟಿಸಬೇಕು ಎಂದು ಕೋವಿಂದ್ ಹೇಳಿದ್ದಾರೆ.
ಕ್ಷಯ ರೋಗ ನಿರ್ಮೂಲನೆಯ ಅರಿವು ಮೂಡಿಸಿ, ಕ್ಷಯ ರೋಗವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಪಣವನ್ನು ಪ್ರತಿಯೊಬ್ಬರು ತೊಡಬೇಕಾಗಿದೆ. ಆಗ ಮಾತ್ರ ಮಹಾ ಕಾಯಿಲೆಯೊಂದನ್ನು ದೇಶದಿಂದ ಹೊಡೆದೋಡಿಸಬಹುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.