ದೇವರ ಸ್ವಂತ ನಾಡೆಂದು ಗುರುತಿಸಲ್ಪಡುವ ಕೇರಳವು ಸಮುದ್ರ ತಟದಲ್ಲಿರುವ 14 ಜಿಲ್ಲೆಗಳನ್ನು ಹೊಂದಿರುವ ಸಣ್ಣ ರಾಜ್ಯ. ಪ್ರಪಂಚದ ಯಾವುದೇ ಮೂಲೆಗೆ ಹೋದರೂ ಮಲಯಾಳಿಯೊಬ್ಬ ಕಾಣಸಿಗುತ್ತಾನೆ ಎಂಬುದು ಸುಪ್ರಸಿದ್ದ ಹಾಸ್ಯ. ಈ ಮಾತನ್ನು ಕೇವಲ ಹಾಸ್ಯವಾಗಿ ನೋಡಿ ನಕ್ಕು ಬಿಡಬೇಡಿ. ಒಂದು ಬಾರಿ ಈ ವಿಚಾರದ ಕುರಿತು ಗಂಭೀರವಾಗಿ ಚಿಂತಿಸಿ. ಉದ್ಯೋಗಕ್ಕಾಗಿ ರಾಜ್ಯವೊಂದರ ಬಹುತೇಕ ಪ್ರಜೆಯು ಇತರ ದೇಶಗಳಿಗೆ ಮತ್ತು ಇತರ ರಾಜ್ಯಗಳಿಗೆ ವಲಸೆ ಹೋಗಲು ಕಾರಣವೇನು? ಹೇಗೆ ಕೇರಳವು ಭೌಗೋಳಿಕವಾಗಿ ಇತರ ರಾಜ್ಯಗಳಿಗಿಂತ ಭಿನ್ನವಾಗಿದೆಯೋ, ಅದೇ ರೀತಿ ಕೇರಳದ ರಾಜಕೀಯವೂ ಭಿನ್ನವಾಗಿದೆ.
ಒಂದು ರೀತಿಯಲ್ಲಿ ಹೇಳುವುದಾದರೆ ಕೇರಳದ ರಾಜಕೀಯವು ಕೇವಲ ಭಿನ್ನವಾಗಿಲ್ಲ, ಬದಲಾಗಿ ಭಯಾನಕವೂ ರಕ್ತಸಿಕ್ತವೂ ಆಗಿರುವುದು ವಿಪರ್ಯಾಸ. ಕೇರಳ ರಾಜ್ಯದ ರಚನೆಯಾದ ದಿನದಿಂದಲೂ ಕೇರಳವನ್ನು ಆಳುತ್ತಿರುವುದು ಎರಡು ರಾಜಕೀಯ ಪಕ್ಷಗಳು ಮಾತ್ರ. ಕೇರಳದಲ್ಲಿ ಪ್ರಮುಖವಾಗಿ ಅಸ್ತಿತ್ವದಲ್ಲಿರುವ ಅಂದರೆ ಅಧಿಕಾರವನ್ನು ಕಾಣುವ ರಾಜಕೀಯ ಪಕ್ಷಗಳು ಎರಡು. ಒಂದು ಕಮ್ಯುನಿಸ್ಟ್ ಮತ್ತೊಂದು ಕಾಂಗ್ರೆಸ್. ಅಥವಾ ಎಲ್ ಡಿ ಎಫ್ ಮತ್ತು ಯು ಡಿ ಎಫ್. ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ ಎಂದರೆ ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳು, ಲೆಫ್ಟ್ ಡೆಮಾಕ್ರೆಟಿಕ್ ಫ್ರಂಟ್ ಎಂದರೆ ಕಮ್ಯುನಿಸ್ಟ್ ಮತ್ತು ಮಿತ್ರ ಪಕ್ಷಗಳು. ಕಾಂಗ್ರೆಸ್ನೊಂದಿಗೆ ಬಲವಾಗಿ ನಿಂತಿರುವುದು ಮುಸ್ಲಿಂ ಲೀಗ್, ಒಂದು ರೀತಿಯಲ್ಲಿ ಹೇಳಬಹುದಾದರೆ ಮುಸ್ಲಿಂ ಲೀಗ್ನ ಹೊರತಾಗಿ ಕಾಂಗ್ರೆಸ್ಗೆ ಕೇರಳದಲ್ಲಿ ಅಸ್ತಿತ್ವ ಬಹು ಕಷ್ಟ. 1962 ರ ಭಾರತ ಚೀನಾ ಯುದ್ಧದ ಬಳಿಕ ವಿಭಜನೆಗೊಂಡ ಕಮ್ಯುನಿಷ್ಟ್ ಪಕ್ಷಗಳದ್ದು ಇನ್ನೊಂದು ಗುಂಪು.
ಇಷ್ಟು ವರ್ಷಗಳಲ್ಲಿ ಈ ಎರಡು ಸರಕಾರಗಳ ಸಾಧನೆ ಏನು ಎಂದರೆ,ಈ ಪಕ್ಷದ ಕಟ್ಟಾ ಅನುಯಾಯಿಗಳ ಬಳಿಯಲ್ಲೂ ಉತ್ತರ ಸಿಗುವುದು ಕಷ್ಟ. ಬಂದ್ ನಡೆಸುವುದನ್ನು ಕೇರಳದಲ್ಲಿ “ಹರತಾಳ” ಎಂದು ಕರೆಯಲಾಗುತ್ತದೆ. ಬಹುಷಃ ಅತೀ ಹೆಚ್ಚು ಹರತಾಳ ನಡೆದ ರಾಜ್ಯದ ಕುರಿತಾಗಿ ಯಾರಾದರೂ ಕೇಳ ಬಯಸಿದಲ್ಲಿ ಕೇರಳ ರಾಜ್ಯವು ಅತೀ ಹೆಚ್ಚಿನ ಬಂದ್ ಗಳನ್ನು ನಡೆಸಿದ ದಾಖಲೆಯನ್ನು ಬಹು ಸಮಯ ಮೊದಲೇ ತನ್ನ ಹೆಸರಲ್ಲಿ ಬರೆದಾಗಿದೆ. ಈ ಪುಟ್ಟ ರಾಜ್ಯವು ಬಹುತೇಕ ತನ್ನ ಆದಾಯಕ್ಕಾಗಿ ಕೊಲ್ಲಿ ರಾಷ್ಟ್ರಗಳನ್ನು ಅವಲಂಬಿಸಿದೆ. ವರ್ಷದ ಬಹಳಷ್ಟು ದಿನಗಳು ಹರತಾಳದ ಹೆಸರಲ್ಲಿ ಮುಚ್ಚಲ್ಪಡುವ ರಾಜ್ಯದಲ್ಲಿ ಯಾವ ಉದ್ಯಮಿ ಹೂಡಿಕೆಯನ್ನು ಮಾಡಲು ಬಯಸಬಹುದು? ಈ ಹರತಾಳಗಳು ಒಂದು ಭಾಗವಾದರೆ ಇಲ್ಲಿನ ರಕ್ತಸಿಕ್ತ ರಾಜಕೀಯ ಇಲ್ಲಿನ ಇನ್ನೊಂದು ಭಾಗ. ಕೇರಳದಲ್ಲಿ ಸಂಘದ ಶಾಖೆಗೆ ಹೋಗುವವರನ್ನು ಗುರಿಯಾಗಿಸಿ ಹಲ್ಲೆ, ಕೊಲೆ, ಕೊಲೆಯತ್ನಗಳು ನಡೆಯುವುದು ಸಾಮಾನ್ಯ. ತನಗಿರುವ ಎರಡೇ ರಾಜ್ಯಗಳಲ್ಲಿ ಒಂದರಲ್ಲಿ ಅಸ್ತಿತ್ವ ಕಳೆದುಕೊಳ್ಳುವ ಭಯದಿಂದ ಈ ಕೃತ್ಯಗಳನ್ನು ನಡೆಸುವುದು ಕಮ್ಯುನಿಸ್ಟರೇ ಎಂಬುವುದು ಮುಚ್ಚಿಡಲಾಗದ ಸತ್ಯ. ಕ್ರೌರ್ಯ ನಡೆಸುವುದರಲ್ಲಿ ಮುಸ್ಲಿಂ ಲೀಗ್ ಕೂಡಾ ಹಿಂದುಳಿದಿಲ್ಲ. ಈ ಹಿಂಸಾತ್ಮಾಕ ರಾಜಕೀಯದ ರಾಜಧಾನಿ ಕಣ್ಣೂರು. ಮೂಲತಃ ಕಮ್ಯುನಿಸ್ಟ್ ಕಾರ್ಯಕರ್ತರಾಗಿದ್ದ ಸದಾನಂದ ಮಾಸ್ಟರ್ ಅವರು ಸಂಘ ಪರಿವಾರಕ್ಕೆ ಸೇರಿಕೊಂಡರು ಎಂಬ ಒಂದೇ ಕಾರಣಕ್ಕೆ ಸಿಪಿಐ ಕಾರ್ಯಕರ್ತರು ಅವರ ಎರಡೂ ಕಾಲುಗಳನ್ನು ಕತ್ತರಿಸಿ ಹಾಕಿದರು, ಆದ್ಯಾಗೂ ಅವರು ಅವರ ಸಿದ್ಧಾಂತಗಳಲ್ಲಿ ಇಂದಿಗೂ ರಾಜಿ ಮಾಡಿಕೊಳ್ಳಲಿಲ್ಲ. ಈ ಘಟನೆ ನಡೆದಾಗ ಅವರಿಗಿನ್ನೂ 30 ವರ್ಷ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಇಂದ ಅವರು ಸ್ಪರ್ಧಿಸಿದ್ದು ಕುಖ್ಯಾತ ಕೂತುಪರಂಬ ಕ್ಷೇತ್ರದಿಂದ.
ಒಂದು ಸಂದರ್ಭದಲ್ಲಿ ಕೇರಳದಲ್ಲಿ ಬಿಜೆಪಿಯಿಂದ ಸ್ಪರ್ಧಿಸಲು ಸ್ಪರ್ಧಿಗಳೇ ಸಿಗುತ್ತಿರಲಿಲ್ಲ. ಯಾಕೆಂದರೆ ಬಿಜೆಪಿ ಪಕ್ಷಕ್ಕೆ ಸಂಬಂಧಿಸಿದ ವ್ಯಕ್ತಿ ಹಾಗೂ ಆ ವ್ಯಕ್ತಿಯ ಕುಟುಂಬಕ್ಕೆ ಹಾನಿಯುಂಟಾಗುವುದು ಖಂಡಿತಾ ಎಂಬ ವಿಚಾರ ರಾಜಕೀಯ ಪಡಸಾಲೆಯಲ್ಲಿ ಪ್ರಚಲಿತವಾಗಿತ್ತು. ಅನೇಕ ಅಡೆತಡೆಗಳು, ಕೊಲೆ ಯತ್ನಗಳು ಇವೆಲ್ಲದರ ನಡುವೆಯೂ ಕೇರಳದ ಬಿಜೆಪಿ ನಾಯಕರ ಜನಪರ ಹೋರಾಟಗಳು ನಿಲ್ಲಲೇ ಇಲ್ಲ. ಕೇರಳದ ಬಿಜೆಪಿ ನಾಯಕರು ಕಾರ್ಯಕರ್ತರೊಂದಿಗೆ ಕಾರ್ಯಕರ್ತರಾಗಿ ಬೆರೆಯುವ ಸರಳ ವ್ಯಕ್ತಿಗಳಾದ್ದರಿಂದ ನಿಧಾನವಾಗಿ ಅನೇಕ ಯುವಕ ಯುವತಿಯರು ಬಿಜೆಪಿಯತ್ತ ಮುಖ ಮಾಡುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಅಂತಹಾ ಒಬ್ಬ ಕಾರ್ಯಕರ್ತರ ನಾಯಕ ಮತ್ತು ಪ್ರಬಲ ಹೋರಾಟಗಾರ ಕೇರಳ ರಾಜ್ಯ ಬಿಜೆಪಿ ಅಧ್ಯಕ್ಷರಾದ ಕೆ. ಸುರೇಂದ್ರನ್. ಕೆಲವೇ ವರ್ಷಗಳ ಹಿಂದೆ ನಡೆದ ಚುನಾವಣೆಯಲ್ಲಿ ಮಂಜೇಶ್ವರ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಸುರೇಂದ್ರನ್ ಕೇವಲ 88 ಮತದ ಅಂತರದಲ್ಲಿ ಮುಸ್ಲಿಂ ಲೀಗ್ನ ಅಭ್ಯರ್ಥಿಯಿಂದ ಪರಾಭವಗೊಂಡಿದ್ದರು.
ಆ 88 ಮತಗಳಿಂದ ಏನಾಯಿತು ಎಂಬುದು ನಮಗೆಲ್ಲರಿಗೂ ತಿಳಿದಿದೆ. ಗಡಿಭಾಗದ ಜಿಲ್ಲೆಯ ಅನೇಕ ಸಮಸ್ಯೆಗಳ ಪರಿಹಾರವು ಅಂದು 88 ಮತಗಳಲ್ಲಿ ಕಳೆದು ಹೋಯಿತು. ಇಂದು ಕಾಸರಗೋಡು ಜಿಲ್ಲೆಯು ಭಯೋತ್ಪಾದಕರ ತವರು ಎಂದು ಕುಖ್ಯಾತಿಗೆ ಪಾತ್ರವಾಗಿದೆ. ಮನೆಯ ಹೆಣ್ಣುಮಕ್ಕಳು ಕತ್ತಲೆಯ ಮೊದಲು ಮನೆ ಸೇರದಿದ್ದಲ್ಲಿ ಹಿರಿಯರು ಭಯಪಡುವ ವಾತಾವರಣವು ನಿರ್ಮಾಣವಾಗಿದೆ. ಮನೆಯ ಹಟ್ಟಿಯಲ್ಲಿ ಕಟ್ಟಿದ್ದ ಹಸು ಕರುಗಳು ಬೆಳಗ್ಗೆ ನೋಡುವಾಗ ಕಾಣೆಯಾಗುವ ಪರಿಸ್ಥಿತಿಯಿದೆ. ಇಷ್ಟು ಮಾತ್ರವಲ್ಲ, ಕೋವಿಡ್-19 ಪ್ರಾರಂಭವಾಗಿದ್ದ ಸಂದರ್ಭದಲ್ಲಿ ಕಾಸರಗೋಡಿನ ಅಭಿವೃದ್ಧಿಯ ನೈಜ ಪರಿಚಯವಾಗಿದೆ. ಕಾಸರಗೋಡು ಜಿಲ್ಲೆಯ ಜನತೆಯು ಅಕ್ಷರಶಃ ತಮ್ಮ ಪ್ರತಿಯೊಂದು ಜೀವನಾವಶ್ಯಕತೆಗೂ ನೆರೆಯ ಕರ್ನಾಟಕದ ಮೇಲೆಯೇ ಅವಲಂಬಿತರಾಗಿದ್ದದ್ದು ಈ ಸಂದರ್ಭದಲ್ಲಿ ಎಲ್ಲರಿಗೂ ಅರಿವಾಗಿತ್ತು. ಅನೇಕ ಬಾರಿ ರಾಜ್ಯವನ್ನಾಳಿದ್ದ ಎರಡೂ ರಾಜಕೀಯ ಪಕ್ಷಗಳು ಕಾಸರಗೋಡು ಜಿಲ್ಲೆಯ ಮೇಲೆ ಮಲತಾಯಿ ಧೋರಣೆಯನ್ನು ತಳೆದು ಅದೆಷ್ಟು ಅವಗಣಿಸಿದ್ದರೆಂದರೆ ಜಿಲ್ಲೆಯಲ್ಲಿ ಒಂದು ಸುಸಜ್ಜಿತ ಆಸ್ಪತ್ರೆಯೂ ಇರಲಿಲ್ಲ. ಅನೇಕ ಪ್ರತಿಭಟನೆಗಳ ಬಳಿಕ ಉಕ್ಕಿನಡ್ಕದ ಸರಕಾರಿ ವೈದ್ಯಕೀಯ ಕಾಲೇಜನ್ನು ತುರಾತುರಿಯಲ್ಲಿ ಉದ್ಘಾಟಿಸಲಾಯಿತಾದರೂ, ಅಲ್ಲಿ ವೈದ್ಯರು ದಾದಿಯರು ಯಾರಿಗೂ ಕನ್ನಡ ಭಾಷೆಯ ಜ್ಞಾನವಿರಲಿಲ್ಲ. ಅಲ್ಲಿನ ಜನರ ಸಂಕಷ್ಟವನ್ನು ನೋಡಲಾರದೆ ಟಾಟಾ ಸಂಸ್ಥೆ, ಸರಕಾರಕ್ಕಿಂತಲೂ ವೇಗವಾಗಿ ಕೋವಿಡ್ ಆಸ್ಪತ್ರೆ ಮತ್ತು ಶುಶ್ರೂಷೆಗೆ ವ್ಯವಸ್ಥೆಯನ್ನು ಮಾಡಿತು.
ಇದೆಲ್ಲಕ್ಕೂ ಪರಿಹಾರ ಕೆಲವು ವರ್ಷಕ್ಕೂ ಮುನ್ನವೇ ದೊರಕುತ್ತಿತ್ತು, ಆದರೆ ಕೇವಲ 88 ಮತಗಳಿಂದ ಕಳೆದು ಹೋಯಿತು. ಹುಟ್ಟಾ ಹೋರಾಟಗಾರ ಕೆ. ಸುರೇಂದ್ರನ್ ಕೇರಳ ರಾಜ್ಯ ಬಿಜೆಪಿ ಅಧ್ಯಕ್ಷರಾದರೂ ಮತ್ತೆ ಮಂಜೇಶ್ವರಕ್ಕೆ ಮರಳಿದ್ದಾರೆ. ಕಳೆದ ಬಾರಿ ಸೋತಿರಬಹುದು, ಆದರೆ ಇಂದು ಅವರು ಮತ್ತೊಮ್ಮೆ ಅದೇ ಮಣ್ಣಿನಲ್ಲಿ ಸ್ಪರ್ಧೆಗಿಳಿದಿದ್ದಾರೆ. ಕೇರಳದ ನಾಸ್ತಿಕ ಕಮ್ಯುನಿಸ್ಟ್ ಸರಕಾರವು ಕೋಟ್ಯಂತರ ಭಕ್ತರ ಭಾವನೆಗಳಿಗೆ ಯಾವುದೇ ಬೆಲೆಯನ್ನು ನೀಡದೆ, ಮಹಿಳೆಯರನ್ನು ಶಬರಿ ಮಲೆಗೆ ಕರೆದೊಯ್ಯದಿತ್ತು. ಲಕ್ಷಾಂತರ ಮಹಿಳೆಯರೇ ಘಟನೆಯನ್ನು ವಿರೋಧಿಸಿದ್ದರಾದರೂ ಕಮ್ಯುನಿಸ್ಟ್ ಸರಕಾರ ಎಲ್ಲರ ಧಾರ್ಮಿಕ ಭಾವನೆಯ ಮೇಲೆ ಅಳಿಸಲಾಗದ ಬರೆಯನ್ನು ಎಳೆದಿತ್ತು. ಅಂದು ಕೋಟ್ಯಂತರ ಭಕ್ತರ ಭಾವನೆಯ ಪರವಾಗಿ ಹೋರಾಟವನ್ನು ನಡೆಸಿದ್ದು ಇದೇ ಸುರೇಂದ್ರನ್ ಎಂಬುದನ್ನು ನೆನಪಿಡಿ.ಈ ಹೋರಾಟಕ್ಕಾಗಿ ಕೇರಳ ರಾಜ್ಯ ಸರಕಾರವು ಅವರ ಮೇಲೆ ಬರೋಬ್ಬರಿ 242 ಪ್ರಕರಣಗಳನ್ನು ದಾಖಲಿಸಿತು. ಅವರ ಶಿರದಲ್ಲಿದ್ದ ಪವಿತ್ರ ಇರುಮುಡಿಯನ್ನು ಕಿತ್ತು “ಇರುಮುಡಿಗೇ” ಅವಮಾನಿಸಲಾಯಿತು. ಅವರನ್ನು 21 ದಿನಗಳ ಕಾಲ ಜೈಲಿನಲ್ಲಿ ಇರಿಸಲಾಗಿತ್ತು.
ಮೂಲತಃ ರಸಾಯನ ಶಾಸ್ತ್ರದಲ್ಲಿ ಪದವಿಯನ್ನು ಹೊಂದಿರುವ ಸುರೇಂದ್ರನ್ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ನ ಮೂಲಕ ರಾಜಕೀಯ ಜೀವನವನ್ನು ಪ್ರಾರಂಭಿಸಿದರು. ಭಾರತೀಯ ಜನತಾ ಪಕ್ಷದ ಯುವಮೋರ್ಚಾದ ಅಧ್ಯಕ್ಷರಾಗಿದ್ದ ಸುರೇಂದ್ರನ್ ಕೆಲವು ವರ್ಷಗಳ ಹಿಂದೆ ಕಾಸರಗೋಡಿಗೆ ಬಂದರಾದರೂ ಸಾಮಾನ್ಯ ಜನರೊಂದಿಗೆ ಬೆರೆಯುವ ಉದ್ದೇಶದಿಂದ ಕನ್ನಡ ಮಾತ್ರವಲ್ಲದೆ ತುಳು ಭಾಷೆಯನ್ನೂ ಕಲಿತಿದ್ದಾರೆ. ಕಾರ್ಯಕರ್ತರೊಂದಿಗೆ ಕಾರ್ಯಕರ್ತರಾಗಿ ಬೆರೆಯುವ ಸರಳ ನಾಯಕರಾದ ಸುರೇಂದ್ರನ್ ಕ್ಷೇತ್ರದ ಅಭಿವೃದ್ದಿಗಾಗಿ ಹಗಲಿರುಳು ಶ್ರಮಿಸುವವರೆನ್ನುವ ವಿಚಾರದಲ್ಲಿ ಯಾವುದೇ ಸಂದೇಹವಿಲ್ಲ. ಹಗರಣಗಳ ಸಾಲು, ಆಡಳಿತ ಪಕ್ಷದ ಶಾಸಕರು ಜೈಲು ಪಾಲು. ಸ್ವತಃ ಮುಖ್ಯಮಂತ್ರಿಯ ಮೇಲೆಯೇ ಭ್ರಷ್ಟಾಚಾರದ ಆರೋಪ, ನಿರುದ್ಯೋಗ. ಗಡಿಭಾಗದ ಜಿಲ್ಲೆಯ ಕುರಿತು ಮಲತಾಯಿ ಧೋರಣೆ. ಈ ಎಲ್ಲಾ ಸಮಸ್ಯೆಗೂ ಏಕೈಕ ಪರಿಹಾರ ಕೆ. ಸುರೇಂದ್ರನ್ ಎಂಬ ಹೋರಾಟಗಾರನ ಆಯ್ಕೆ. ಕಳೆದ ಬಾರಿ ನಡೆದ ತಪ್ಪು ಮರುಕಳಿಸದಿರಲಿ. 88 ಎಂಬ ಸಂಖ್ಯೆ ನೆನಪಿರಲಿ.
✍️ ದೀಪಾ ಜಿ. ಭಟ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.