ಇನ್ನೇನೂ ಕೆಲವೇ ವಾರ್ಡ್ಗಳ ಮತ ಎಣಿಕೆ ಬಾಕಿಯಿದೆ. ಈ ಬಾರಿ ಖಂಡಿತವಾಗಿಯೂ ಮಂಜೇಶ್ವರದಲ್ಲಿ ಬಿಜೆಪಿ ಖಾತೆ ತೆರೆಯಲಿದೆ ಎಂದು ಕಾತರದಿಂದ ಕೂತಿದ್ದ ಸಹಸ್ರ ಸಹಸ್ರ ಕಾರ್ಯಕರ್ತರಿಗೆ 2016 ಮೇ 16 ರಂದು ಸಿಡಿಲು ಬಡಿದಂತಾಗಿತ್ತು. ನಾಯಕರ ಸತತ ಪ್ರಯತ್ನದ ಹೊರತಾಗಿ, ಕರ್ನಾಟಕದಿಂದ ಆಗಮಿಸಿ ಮಂಜೇಶ್ವರ, ಕಾಸರಗೋಡುವಿನಲ್ಲಿ ಭಾಜಪ ಗೆಲುವಿಗೆ ಅವಿರತ ಪ್ರಯತ್ನ ಪಟ್ಟ ಪ್ರಭಾರಿ ನಳಿನ್ ಕುಮಾರ್ ಕಟೀಲು, ಗಣೇಶ್ ಕಾರ್ಣಿಕ್ ಅವರು ಕೂಡಾ ದುಃಖ ತಪ್ತರಾಗಿದ್ದರು. ಸುರೇಂದ್ರನ್ ಅಂದು ಕೇವಲ 89 ಮತಗಳಿಂದ ಶಾಸಕ ಸ್ಥಾನ ವಂಚಿತರಾಗಿದ್ದರು. ಕಳ್ಳ ಮತದಾನದ ಆರೋಪವನ್ನು ಲೀಗ್ ಪಕ್ಷ ಎದುರಿಸಬೇಕಾಯಿತು. ಆದರೆ ದಕ್ಷಿಣ ಕೇರಳದ ನೇಮಂನಲ್ಲಿ ಮೊದಲ ಬಾರಿಗೆ ಪಕ್ಷ ಖಾತೆ ತೆರೆಯುವ ಮೂಲಕ ಹಿರಿಯ ನಾಯಕ ಒ. ರಾಜಗೋಪಾಲ್ ವಿಧಾನಸಭೆ ಪ್ರವೇಶಿಸಿದ್ದರು.
ʼಮಂಜೇಶ್ವರʼ ಕೇರಳ ರಾಜ್ಯದ ಹೆಬ್ಬಾಗಿಲು. ಹಲವು ವಿಶೇಷತೆಗಳನ್ನು ಹೊಂದಿರುವ ಕಾಸರಗೋಡಿನ ಈ ಪುಟ್ಟ ಕ್ಷೇತ್ರ ಕಳೆದ ಬಾರಿಯ ಚುನಾವಣೆಯಲ್ಲಿ ದೊಡ್ಡ ಸದ್ದು ಮಾಡಿತ್ತು. ಕೇವಲ 89 ಮತಗಳ ಅಂತರದಿಂದ ಪರಾಭವಗೊಂಡಿದ್ದ ಕೆ. ಸುರೇಂದ್ರನ್ ಶಾಸಕರಾಗುವ ಅವಕಾಶದಿಂದ ವಂಚಿತರಾದರು. ಆದರೆ ಈ ಬಾರಿಯ ಚುನಾವಣಾ ಕಣದಲ್ಲಿ ಹೆಚ್ಚಿನ ಬದಲಾವಣೆ ಬಂದಿದ್ದು, ಭಾ.ಜ.ಪ. ಕ್ಕೆ ಹೆಚ್ಚಿನ ಒಲವು ತೋರಿಸುತ್ತಿರುವ ಜನಸಾಮಾನ್ಯರು ಕೆ. ಸುರೇಂದ್ರನ್ ಅವರಿಗೆ ಮತ ಚಲಾಯಿಸಿ ವಿಧಾನಸಭೆಗೆ ಕಳುಹಿಸಲು ಮತ್ತೊಮ್ಮೆ ಸಜ್ಜಾಗಿದ್ದು, ಉತ್ಸುಕತೆ ತೋರಿದ್ದಾರೆ.
ದಶಕಗಳಿಂದಲೂ ಹಿಂದುಳಿದ ಕ್ಷೇತ್ರವಾಗಿರುವ ಮಂಜೇಶ್ವರದಲ್ಲಿ ಯಾವುದೇ ಹೆಸರಿಸಬಹುದಾದ ಬದಲಾವಣೆಯಾಗಲಿ, ಅಭಿವೃದ್ಧಿಯಾಗಲಿ ನಡೆದಿಲ್ಲ. ನಾಲ್ಕು ದಶಕಗಳ ಹಿಂದೆ ನಿರ್ಮಾಣಗೊಂಡ ಗೋವಿಂದ ಪೈ ಸರಕಾರಿ ಸ್ಮಾರಕ ಕಾಲೇಜು ಬಿಟ್ಟರೆ ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿಯಲ್ಲೂ ಯಾವುದೇ ಪ್ರಗತಿ ಆಗಿಲ್ಲ. ಗಡಿಭಾಗದ ಬಹಳಷ್ಟು ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ, ಪ್ಲಸ್ ಟು ವಿದ್ಯಾಭ್ಯಾಸದ ನಂತರ ಮಂಗಳೂರು ಕಾಲೇಜುಗಳಲ್ಲಿ ಉನ್ನತ ವಿದ್ಯಾಭ್ಯಾಸಕ್ಕೆ ಸೇರ್ಪಡೆಗೊಳ್ಳುವುದು ಸರ್ವೇ ಸಾಮಾನ್ಯ ಎನ್ನುವಂತಾಗಿದೆ. ದಿನವೊಂದಕ್ಕೆ ಸುಮಾರು 10 ಸಾವಿರ ಮಂದಿ ವಿದ್ಯಾರ್ಥಿಗಳು ಕೇರಳ ಭಾಗದಿಂದ ಮಂಗಳೂರಿಗೆ ಪ್ರಯಾಣಿಸುತ್ತಾರೆ. ಕೇವಲ ಶೈಕ್ಷಣಿಕ ಕ್ಷೇತ್ರ ಮಾತ್ರವಲ್ಲದೆ ಹಲವು ಅವಶ್ಯಕತೆಗಳಿಗೆ ಸಮೀಪದ ಮಂಗಳೂರು ನಗರವನ್ನು ಅವಲಂಬಿಸುವ ದುಸ್ಥಿತಿ ಕಾಸರಗೋಡಿಗರಿಗಿದೆ.
ಜಿಲ್ಲೆಯಲ್ಲಿರದ ಉತ್ತಮ ವೈದ್ಯಕೀಯ ಸೇವೆ, ತಾಲೂಕು ಆಸ್ಪತ್ರೆಗಳಲ್ಲಿ ಇಲ್ಲದ ಭೌತಿಕ ತಂತ್ರಜ್ಞಾನಗಳ ಕಾರಣ ದಕ್ಷಿಣ ಕನ್ನಡ ಜಿಲ್ಲೆಯ ಆಸ್ಪತ್ರೆಗಳನ್ನು ಹಲವಾರು ವರ್ಷಗಳಿಂದ ಆಶ್ರಯಿಸಬೇಕಾಗಿದೆ. ಹೀಗಿದ್ದರೂ ಕ್ಷೇತ್ರದ ಸಮಗ್ರ ಅಭಿವೃದ್ದಿಯ ನಿಟ್ಟಿನಲ್ಲಿ ಐಕ್ಯರಂಗವಾಗಲಿ, ಎಡರಂಗವಾಗಲಿ ಯಾವುದೇ ಮಹತ್ತರ ಯೋಜನೆಗಳನ್ನು ಮಂಜೇಶ್ವರದಲ್ಲಿ ಪೂರೈಸದೆ ಕುಳಿತಿವೆ. ವರ್ಷಗಳಿಂದ ಅಭಿವೃದ್ಧಿ ಮರೀಚಿಕೆ ಎಂಬ ದುಸ್ಥಿತಿಗೆ ನಾಡನ್ನು ದೂಡಿದ್ದಾರೆ. ದಶಕಗಳ ಹಿಂದೆ ಕಟ್ಟಿರುವ ಅಣೆಕಟ್ಟು, ನಿಷ್ಪ್ರಯೋಜಕ ನೀರಾವರಿ ವ್ಯವಸ್ಥೆ, ಸಮೀಪದ ಕಾಲೇಜಿನ ನಿರ್ಮಾಣದ ಬಗ್ಗೆಯೇ ಉಲ್ಲೇಖಿಸುವ ಎಡಪಕ್ಷ ವರ್ತಮಾನ, ಭವಿಷ್ಯದ ಅವಶ್ಯಕತೆಯ ಬಗ್ಗೆ ಚಕಾರವೆತ್ತುವುದಿಲ್ಲ.
ಐಕ್ಯರಂಗವು ಈ ಕ್ಷೇತ್ರವನ್ನು ಗುತ್ತಿಗೆ ಪಡೆದಂತೆ ವರ್ತಿಸುತ್ತಿದೆ, ಚುನಾವಣೆ ಸಮೀಪಿಸಿದಾಗ ಎಚ್ಚರಗೊಳ್ಳುವ ಕಾಂಗ್ರೆಸ್, ಮುಸ್ಲಿಂ ಲೀಗ್ ರಾಜಕಾರಣಿಗಳು ವೋಟ್ ಬ್ಯಾಂಕ್ ಸಹಿತ ಸ್ವಾರ್ಥ ರಾಜಕಾರಣದಲ್ಲಿ ಮುಳುಗಿ ಕ್ಷೇತ್ರದ ಅಭಿವೃದ್ಧಿಯನ್ನು ಮರೆಮಾಚಿಸಿದ್ದಾರೆ.
ಹಲವು ಗುರುತರ ಕಾರಣಗಳಿಗೆ 2016 ರ 89 ಮತಗಳನ್ನು ಮರೆಯಬಾರದು!!
ಅಂದು ಮಾಡಿದ ಪ್ರಮಾದ ಇಂದಿಗೂ ಕ್ಷೇತ್ರದ ಜನತೆಯನ್ನು ಕಾಡುತ್ತಿದೆ. ಮಂಜೇಶ್ವರದ ಜನಸಾಮಾನ್ಯರ ಹಲವು ವರ್ಷಗಳ ಹಂಬಲ ಬಿಜೆಪಿ ಪಕ್ಷದ ಮೂಲಕ ಕ್ಷೇತ್ರದ ಅಭಿವೃದ್ಧಿಯಾಗಬೇಕು ಎಂಬುದಾಗಿದೆ. ಕಾಸರಗೋಡು ಜಿಲ್ಲೆಯ ದುರ್ದೈವ ಎಂದರೆ ಈ ತನಕ ದೇಶದ ಸಂಸತ್ತಿನಲ್ಲಿ ಗುಡಗಬಲ್ಲ, ಜನಸಾಮಾನ್ಯನ ಧ್ವನಿಯಾಗಬಲ್ಲ, ಕಾಸರಗೋಡಿಗರ ಬೇಕುಗಳನ್ನು ಅರ್ಥೈಸಿ ವಿಧಾನಸಭೆಯಲ್ಲಿ ಗರ್ಜಿಸಿ, ಕ್ಷೇತ್ರದ ಮಹೋನ್ನತ ಬದಲಾವಣೆಗೆ ಕಾರಣವಾಗಬಲ್ಲ ನಾಯಕರು ಜಿಲ್ಲೆಗೆ ಬೇಕಿದೆ.
ಕಾಂಗ್ರೆಸ್ ಸರಕಾರವಿದ್ದಾಗ ಎಡರಂಗದ ಸಂಸದ, ಬಿಜೆಪಿ ಸರಕಾರ ಬಂದಾಗ ಕಾಂಗ್ರೆಸ್ಸಂಸದರೇ ಆಯ್ಕೆಯಾದ ಕಾರಣ ಕಾಸರಗೋಡಿಗರಿಗೆ ಯಾವುದೇ ಸ್ಥಾನಮಾನಗಳಾಗಲಿ, ಮಂತ್ರಿಗಿರಿಯಾಗಲಿ ಆಯ್ಕೆಯಾಗುವ ಸಂಸದರಿಗೆ ಲಭಿಸಿಲ್ಲ. ಪ್ರಸ್ತುತ ಜಿಲ್ಲೆ ಮತ್ತು ರಾಜ್ಯದಲ್ಲಿ ರಾಷ್ಟ್ರೀಯತೆಯ ಭಾವವುಳ್ಳ ಸಮರ್ಥ ನಾಯಕರನ್ನು ಬೆಳೆಸಬೇಕಿದೆ. ಜನರ ಧ್ವನಿಯಾಗಿ, ಬದಲಾವಣೆ ತಂದು ಕ್ಷೇತ್ರ ಮತ್ತು ಜಿಲ್ಲೆಯ ಮುಖಚ್ಛಾಯೆನ್ನು ಬದಲಿಸಬಹುದಾದ ನಾಯಕರು ನಮಗೆ ಬೇಕಿದ್ದಾರೆ. ಕೇವಲ ಶಾಸಕ ಎಂಬ ಹೆಸರಿಗಷ್ಟೇ ಸೀಮಿತವಾಗುವ ಮಂದಿ ನಮಗೆ ಬೇಕಿಲ್ಲ. ಜನರ ಧ್ವನಿಯಾಗುವ ನಾಯಕರೇ ಕ್ಷೇತ್ರದಿಂದ ಶಾಸಕರಾಗಬೇಕು. ಕೆ. ಸುರೇಂದ್ರನ್ ಬಹುಮತದಿಂದ ಗೆದ್ದು ಶಾಸಕರಾದಲ್ಲಿ ದಶಕಗಳ ಬಿಜೆಪಿ ಹೋರಾಟ ಮತ್ತು ಪ್ರಯತ್ನಕ್ಕೆ ಸಲ್ಲಬಹುದಾದ ಬಹುಡೊಡ್ಡ ಕೊಡುಗೆಯಾಗಲಿದೆ. ಕಳೆದ ಬಾರಿ 89 ಮತಗಳ ಅಂತರದಲ್ಲಿ ಸೋಲಲ್ಪಟ್ಟ ಬಿಜೆಪಿಯಿಂದ ಲೀಗಿನ ಅಕ್ರಮ ರಾಜಕಾರಣವೇ ಪುನಃ ಮೆರೆಯುವಂತಾಯಿತು. ಆ ಹಿಂದೆ ಮಂಜೂರಾದ ಒಂದು ರಸ್ತೆ ಬಿಟ್ಟರೆ ಯಾವುದೇ ಹೊಸ ಯೋಜನೆಗಳು ಜಾರಿಗೆ ಬರಲಿಲ್ಲ. ಅಂದು ಕೆ. ಸುರೇಂದ್ರನ್ ಗೆದ್ದಿದ್ದರೆ ಮಂಜೇಶ್ವರ ಮಾತ್ರವಲ್ಲ ಕೇರಳ ವಿಧಾನಸಭೆಯಲ್ಲೇ ದೊಡ್ಡ ದನಿಯಾಗಬಹುದಿತ್ತು. ಮಲಯಾಳ ಕಡ್ಡಾಯದಂತಹ ನಿಯಮಗಳು ಜಾರಿಗೆ ಬರುತ್ತಿರಲಿಲ್ಲ. ಭಾಷಾ ಅಲ್ಪಸಂಖ್ಯಾತರ ಹಕ್ಕು ರಕ್ಷಣೆಯಾಗುತ್ತಿತ್ತು. ಗಡಿನಾಡಿನ ಕನ್ನಡ ಶಾಲೆಗಳಲ್ಲಿ ಮಲಯಾಳಿ ಅಧ್ಯಾಪಕರ ನೇಮಕಾತಿ ಆಗುತ್ತಿರಲಿಲ್ಲ. ಭಾಷೆಯ ಮೂಲಕ ಜನರನ್ನು ವಿಭಜಿಸುವ ಸರಕಾರದ ನೀತಿಗೆ ತಕ್ಕ ಉತ್ತರವನ್ನು ಅಂದೇ ನೀಡಬಹುದಾಗಿತ್ತು. ದೇವಸ್ಥಾನದ ಮುಂಭಾಗದಲ್ಲಿರುವ ಮೈದಾನವನ್ನು ಅಕ್ರಮಿಸಿ ಆ ಸ್ಥಳದಲ್ಲೇ ತಾಲೂಕು ಕಚೇರಿಯಾಗಬೇಕು ಎಂಬ ಬೇಡಿಕೆಯಿರುತ್ತಿರಲಿಲ್ಲ.
ಭಾಷೆ, ಸಂಸ್ಕೃತಿ, ಹಿಂದುಳಿದ ವರ್ಗದ ಅದರಲ್ಲೂ ಕೊರಗ, ಮೊಗೇರ, ಮರಾಟಿ ನಾಯಿಕ ಸಮುದಾಯದ ಹಕ್ಕುಗಳ ರಕ್ಷಣೆ ಮಾತ್ರವಲ್ಲ ಅವರ ಜನಪದ ಸಂಸ್ಕೃತಿಯ ಉಳಿಕೆ ಇಂದಿಗೆ ಸವಾಲು. ಗಡಿನಾಡಿನ ಬಹುಭಾಷಾ ಸಂಸ್ಕೃತಿಯ ಒಳಸುಳಿಯನ್ನು ಅರ್ಥಮಾಡಿಕೊಂಡ ನಾಯಕನು ಮಂಜೇಶ್ವರದ ಆಯ್ಕೆ, ಇಂತಹ ಸಾಂಸ್ಕೃತಿಕ ವಲಯದ ದನಿಯಾಗಬಲ್ಲ ನಾಯಕ ಕೆ. ಸುರೇಂದ್ರನ್. ಕಾಸರಗೋಡು ಅಭಿವೃದ್ಧಿ ವರದಿಯಲ್ಲಿ ಬಾಕಿಯಿರುವ ಹತ್ತು ಹಲವು ಯೋಜನೆಗಳನ್ನು ಸಾಕಾರಗೊಳಿಸಲು ಸಮರ್ಥ ನಾಯಕನ ಅವಶ್ಯಕತೆ ಜಿಲ್ಲೆಗಿದೆ.
ಭಾಷೆಯನ್ನು ವೋಟ್ ಬ್ಯಾಂಕ್ ರಾಜಕೀಯ ಅಸ್ತ್ರವಾಗಿಸುವ ಹಲವು ಮಂದಿ ಮುಸ್ಲಿಂ ಲೀಗ್ ಪಕ್ಷದೊಳಗಿದ್ದು, ಚುನಾವಣೆ ಸಮೀಪಿಸಿದಾಗ ಭಾಷಾ ರಾಜಕಾರಣವನ್ನು ಮಾಡುವುದನ್ನೇ ಕಾಣುವಂತಾಗಿದೆ. ಅಪ್ಪಟ ಕನ್ನಡಿಗ ಚೆರ್ಕಳಂ ಅಬ್ದುಲ್ಲಾರರಿಗಿದ್ದ ಕನ್ನಡದ ಕಾಳಜಿ ಇಂದಿನ ಲೀಗ್ ನಾಯಕರಿಗಿಲ್ಲ. ಶಿಹಾಬ್ ತಂಞಳ ಹೇಳಿದಂತೆ ತಲೆಯಾಡಿಸುವ ಇಲ್ಲಿನ ನಾಯಕರು ಮೂರು ದಶಕಗಳಲ್ಲಿ ಮಂಜೇಶ್ವರ ಅಭಿವೃದ್ಧಿಗೆ ನೀಡಿದ ಕೊಡುಗೆ ಶೂನ್ಯ.
ಏತಕ್ಕಾಗಿ ಬದಲಾವಣೆ?!
ಬದಲಾವಣೆಯೆಂಬ ಅವಶ್ಯಕತೆಯನ್ನು ಮಂಜೇಶ್ವರ ಬಯಸುತ್ತಿರುವುದು ಇಂದು ನಿನ್ನೆಯಲ್ಲ, ಹಲವು ವರ್ಷಗಳಿಂದ ಮಂಜೇಶ್ವರದಲ್ಲಿ ಬದಲಾವಣೆಯ ಕೂಗು ಕೇಳಿ ಬರುತ್ತಿದೆ. ಆರಂಭದಲ್ಲಿ ಸಿಪಿಐ ಕಾರ್ಯಕ್ಷೇತ್ರವಾಗಿದ್ದ ಈ ಕ್ಷೇತ್ರ ನಂತರ ಸಿಪಿಎಂ, ಅನಂತರ ಲೀಗ್ ಶಕ್ತಿ ಕೇಂದ್ರವಾಗಿ ಬೆಳೆದು ಬಂದಿದೆ. ಬದಲಾದ ಕಾಲಮಾನದಲ್ಲಿ ಎಡ ಪಕ್ಷವು ತನ್ನ ಅಸ್ತಿತ್ವ ಕಾಪಾಡಲು ಪ್ರಯತ್ನಿಸಿದರೆ, ಲೀಗ್ ಎಂಬ ಪಕ್ಷ ಬಿಜೆಪಿ ಪ್ರಭಾವದ ಮುಂದೆ ನಡುಗಲಾರಂಭಿಸಿದೆ.
ಎಡರಂಗ ಮತ್ತು ಐಕ್ಯರಂಗ ಲೀಗ್ ಶಾಸಕರು ಈ ತನಕ ಕಾಸರಗೋಡು, ಮಂಜೇಶ್ವರ ಕ್ಷೇತ್ರಗಳಿಗೆ ನೀಡಿದ ಕೊಡುಗೆ ಏನೇನೂ ಇಲ್ಲ. ಬೇಸಿಗೆ ಕಾಲದಲ್ಲಿ ಕುಡಿ ನೀರಿಗೂ ಜನಸಾಮಾನ್ಯರು ಪರಿತಪಿಸುವ ದುಸ್ಥಿತಿ ಇಲ್ಲಿದೆ. ಗ್ರಾಮೀಣ ಭಾಗದಲ್ಲಿ ಕಚ್ಚಾರಸ್ತೆಗಳ ಮೇಲ್ದರ್ಜೆಯ ಗುರಿಯನ್ನೂ ತಲುಪಿಲ್ಲ. ವಿದ್ಯಾರ್ಥಿಗಳಿಗಾಗಿ ಶಾಲೆ ಕಾಲೇಜುಗಳಲ್ಲಿ ಸೂಕ್ತ ಕ್ರೀಡಾಂಗಣಗಳಿಲ್ಲ, ಆರೋಗ್ಯ ಸಮಸ್ಯೆ ಬಂದಲ್ಲಿ ಉತ್ತಮ ಆಸ್ಪತ್ರೆಗಳಿಲ್ಲ. ಲೀಗ್ ಕೋಟೆಯೆನಿಸಿರುವ ಉಪ್ಪಳದಲ್ಲಿ ಕಾರ್ಯಾಚರಿಸುವ ಆರೋಗ್ಯ ಸಮುದಾಯ ಕೇಂದ್ರ ತಾಲೂಕು ಆಸ್ಪತ್ರೆ ಎಂದು ಬಡ್ತಿ ಹೊಂದಿ ಮೂರು ವರ್ಷ ಕಳೆದರೂ ಹೆಚ್ಚಿನ ವೈದ್ಯ ಸಿಬ್ಬಂದಿಯಾಗಲಿ, ಭೌತಿಕ ತಾಂತ್ರಿಕ ಸೌಕರ್ಯಗಳಾಗಲಿ ಇನ್ನೂ ಬಂದಿಲ್ಲ. ಕಳೆದ 8 ವರ್ಷಗಳಿಂದ ಉಕ್ಕಿನಡ್ಕದಲ್ಲಿನ ಕಾಸರಗೋಡು ವೈದ್ಯಕೀಯ ಆಸ್ಪತ್ರೆ, ಕಾಲೇಜು ಇನ್ನು ಕಾರ್ಯರೂಪಕ್ಕೆ ಬರಲಿಲ್ಲ. ಹೀಗೆ ಹತ್ತು ಹಲವು ನ್ಯೂನ್ಯತೆಗಳನ್ನು ಮೆಟ್ಟಿ ನಿಂತು ಕ್ಷೇತ್ರ ಮತ್ತು ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಕಾರಣನಾಗಬಲ್ಲ ಸಮರ್ಥ ನಾಯಕರ ಅವಶ್ಯಕತೆ ಮಂಜೇಶ್ವರ ಸಹಿತ ಕಾಸರಗೋಡು ಕ್ಷೇತ್ರ/ಜಿಲ್ಲೆಗಿದೆ.
✍️ ವಿವೇಕಾದಿತ್ಯ ಕೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.