
ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಾಬ್ದಿ ವರ್ಷದ ನಿಮಿತ್ತ ದೇಶದ ನಾಲ್ಕು ಪ್ರಮುಖ ನಗರಗಳಲ್ಲಿ ನಡೆಯಲಿರುವ ಆರೆಸ್ಸೆಸ್ ಸರಸಂಘಚಾಲಕ ಡಾ. ಮೋಹನ್ ಭಾಗವತ್ ಅವರ ಉಪನ್ಯಾಸ ಮಾಲೆಯ ಎರಡನೇ ಕಾರ್ಯಕ್ರಮ ಬೆಂಗಳೂರಿನ ಬನಶಂಕರಿಯ ಹೊಸಕೆರೆಹಳ್ಳಿಯ ಪಿಇಎಸ್ ವಿಶ್ವವಿದ್ಯಾನಿಲಯದಲ್ಲಿ ನವೆಂಬರ್ 8 ಮತ್ತು 9, 2025ರಂದು ನಡೆಯಲಿದೆ.
ಈ ಕುರಿತು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕ್ಷೇತ್ರೀಯ ಕಾರ್ಯವಾಹ ನಾ. ತಿಪ್ಪೇಸ್ವಾಮಿ ಪತ್ರಿಕಾ ಪ್ರಕಟಣೆ ನೀಡಿದ್ದಾರೆ.
ಪತ್ರಿಕಾ ಪ್ರಕಟಣೆ
ರಾಷ್ಟೀಯ ಸ್ವಯಂಸೇವಕ ಸಂಘವು ಕಳೆದ ವಿಜಯದಶಮಿಯಂದು (ಅಕ್ಟೋಬರ್ 2, 2025) ತನ್ನ ನೂರು ವರ್ಷವನ್ನು ಪೂರ್ಣಗೊಳಿಸಿ ರಾಷ್ಟ್ರದ ಸರ್ವಾಂಗೀಣ ಉನ್ನತಿಯ ಧ್ಯೇಯದೊಂದಿಗೆ ಮುನ್ನಡೆದಿದೆ. ಶತಾಬ್ದಿ ವರ್ಷದಲ್ಲಿ ವಿಜಯದಶಮಿ ಉತ್ಸವಗಳು, ಯುವ ಸಮಾವೇಶ, ಮನೆಮನೆ ಸಂಪರ್ಕ, ಹಿಂದು ಸಮ್ಮೇಳನ, ಸಾಮಾಜಿಕ ಸದ್ಭಾವನಾ ಸಮಾವೇಶ, ಪ್ರಮುಖ ನಾಗರಿಕರ ವಿಚಾರಗೋಷ್ಠಿ ಮುಂತಾದ ವಿವಿಧ ಚಟುವಟಿಕೆಗಳನ್ನು ದೇಶಾದ್ಯಂತ ಆಯೋಜಿಸಲಾಗಿದೆ. ಸಮಾಜದ ಗಣ್ಯಮಾನ್ಯರು, ನೀತಿ ನಿರೂಪಕರು ಹಾಗೂ ಸಮಾಜಸೇವಕರೊಂದಿಗಿನ ಸಂವಾದವನ್ನು ಸಂಘವು ನೂರನೇ ವರ್ಷದಲ್ಲೂ ಮುಂದುವರಿಸಿದ್ದು, ಬೆಂಗಳೂರಿನಲ್ಲಿ ಇದೇ ನವೆಂಬರ್ 8 ಹಾಗೂ 9 ರಂದು ಸರಸಂಘಚಾಲಕರಾದ ಡಾ|| ಮೋಹನ್ ಭಾಗವತ್ ಅವರು ವಿಶೇಷ ಉಪನ್ಯಾಸಮಾಲೆಯಲ್ಲಿ ಮಾತನಾಡಲಿದ್ದಾರೆ.
ಶತಾಬ್ದಿ ವರ್ಷದಲ್ಲಿ ದೇಶದ 4 ಕಡೆಗಳಲ್ಲಿ (ನವದೆಹಲಿ, ಬೆಂಗಳೂರು, ಮುಂಬಯಿ ಮತ್ತು ಕೊಲ್ಕತ್ತಾ) ‘ಸಂಘದ 100 ವರ್ಷದ ಪಯಣ: ನವ ಕ್ಷಿತಿಜ’ (100 Years of Sangh Journey: New Horizons) ಎಂಬ ಶೀರ್ಷಿಕೆಯಲ್ಲಿ ಸರಸಂಘಚಾಲಕ ಡಾ|| ಮೋಹನ್ ಭಾಗವತ್ ಅವರು ಈ ಉಪನ್ಯಾಸಮಾಲೆಗಳನ್ನು ನಡೆಸಿಕೊಡಲಿದ್ದಾರೆ. ನವದೆಹಲಿಯಲ್ಲಿ ಕಳೆದ ಆಗಸ್ಟ್ 26, 27, 28ರಂದು ನವದೆಹಲಿಯಲ್ಲಿ ಮೊದಲ ಕಾರ್ಯಕ್ರಮ ಸುಸಂಪನ್ನಗೊಂಡಿದೆ.
ಈ ಉಪನ್ಯಾಸ ಮಾಲೆಯ ಎರಡನೇ ಕಾರ್ಯಕ್ರಮವು ಬೆಂಗಳೂರಿನ ಬನಶಂಕರಿಯ ಹೊಸಕೆರೆಹಳ್ಳಿ ರಿಂಗ್ ರಸ್ತೆಯಲ್ಲಿರುವ ಪಿಇಎಸ್ ವಿಶ್ವವಿದ್ಯಾಲಯದಲ್ಲಿ ಮುಂದಿನ ನವೆಂಬರ್ 8 ಹಾಗೂ 9ರ ಶನಿವಾರ ಹಾಗೂ ಭಾನುವಾರಗಳಂದು ನಡೆಯಲಿದೆ. ಆಹ್ವಾನಿತರಿಗಷ್ಟೇ ಪ್ರವೇಶವಿರುವ ಈ ಕಾರ್ಯಕ್ರಮಕ್ಕೆ ಮುಖ್ಯವಾಗಿ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಹಾಗೂ ಕೇರಳ ರಾಜ್ಯದಿಂದ ಸುಮಾರು 1,200 ಗಣ್ಯರನ್ನು ಆಹ್ವಾನಿಸಲಾಗಿದೆ. ಶಿಕ್ಷಣ, ಸಾಹಿತ್ಯ, ಸಂಸ್ಕೃತಿ, ಕಲೆ, ವಿಜ್ಞಾನ, ಆಡಳಿತ, ಪತ್ರಿಕೋದ್ಯಮ, ಕ್ರೀಡೆ, ಉದ್ಯಮ, ಸಾಮಾಜಿಕ ಸೇವೆ, ಅಧ್ಯಾತ್ಮ ಸೇರಿದಂತೆ ಸಮಾಜದ ಬಹುತೇಕ ಎಲ್ಲ ಕ್ಷೇತ್ರಗಳಿಂದಲೂ ಸಾಧಕರನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ.
ನವೆಂಬರ್ 8ರ ಶನಿವಾರ ಅಪರಾಹ್ನ 4:00 ರಿಂದ 7:30ರವರೆಗಿನ ಎರಡು ಅವಧಿಗಳಲ್ಲಿ ಸರಸಂಘಚಾಲಕ ಡಾ|| ಮೋಹನ್ ಭಾಗವತ್ ಉಪನ್ಯಾಸ ನೀಡಲಿದ್ದಾರೆ. ನವೆಂಬರ್ 9ರ ಭಾನುವಾರ ಬೆಳಗ್ಗೆ 10.30 ರಿಂದ 1:30ರವರೆಗೆ ಎರಡು ಅವಧಿಗಳಲ್ಲಿ ಸಭಿಕರ ಪ್ರಶ್ನೆಗಳಿಗೆ ಡಾ|| ಮೋಹನ್ ಭಾಗವತ್ ಉತ್ತರಿಸಲಿದ್ದಾರೆ.
ಕಾರ್ಯಕ್ರಮವು ಆರೆಸ್ಸೆಸ್ನ ಅಧಿಕೃತ ಸಾಮಾಜಿಕ ಜಾಲತಾಣಗಳಾದ ಯುಟ್ಯೂಬ್ ವಾಹಿನಿ www.youtube.com/RSSorg ಹಾಗೂ www.facebook.com/RSSorg ಫೇಸ್ಬುಕ್ ಪುಟಗಳಲ್ಲಿ ನೇರಪ್ರಸಾರವಿರುತ್ತದೆ.
ಕಾರ್ಯಕ್ರಮವು ಆಂತರಿಕವಾಗಿ ನಡೆಯುವುದರಿಂದ ಸಭಾಂಗಣದೊಳಗೆ ಮಾಧ್ಯಮಗಳಿಗೆ ಆಹ್ವಾನವಿರುವುದಿಲ್ಲ. ಎಲೆಕ್ಟ್ರಾನಿಕ್ ಮಾಧ್ಯಮಗಳಿಗೆ ಕಾರ್ಯಕ್ರಮದ ಸ್ಥಳದಲ್ಲಿ ಹೊರಗಡೆ ನೇರಪ್ರಸಾರದ ಲೈವ್ ಔಟ್ಪುಟ್ ಲಭ್ಯವಿರುತ್ತದೆ. ಕಾರ್ಯಕ್ರಮದ ಫೋಟೋ, ವರದಿಗಳನ್ನು, live Streaming Link ಗಳನ್ನು ಕಳುಹಿಸಿಕೊಡಲಾಗುವುದು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕ್ಷೇತ್ರೀಯ ಕಾರ್ಯವಾಹ ನಾ. ತಿಪ್ಪೇಸ್ವಾಮಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.



