ಓರ್ವ ಪರಾಕ್ರಮಿ ಸೈನಿಕನ ಹೆಸರು ದೇಶದ ಗ್ರಾಮೀಣ ಭಾಗದ ರಸ್ತೆ, ಬಸ್ಸು ತಂದುದಾಣ, ಅಂಗಡಿ ಮುಂಗಟ್ಟು, ಸ್ಥಳೀಯ ಕ್ರೀಡಾ ಸಂಘದ ಹೆಸರಾಗಿ ಮಾರ್ಪಡುತ್ತದೆ ಎಂದರೆ ಅಂತಹ ಮೇರು ಸೈನಿಕನ ಪರಾಕ್ರಮ, ದೇಶಕ್ಕಾಗಿ ಸಲ್ಲಿಸಿದ ಸೇವೆಯನ್ನು ಅರಿಯುವುದು, ಸ್ಮರಿಸುವುದರ ಜೊತೆಯಲ್ಲಿ ತಿಳಿಸುವುದು ಅತಿ ಮುಖ್ಯವಾಗಿಬಿಡುತ್ತದೆ.
ದೇಶದ ಮೂಲೆ ಮೂಲೆಯಲ್ಲಿರುವ ಕುಗ್ರಾಮಗಳಲ್ಲಿ ದೇಶಕ್ಕಾಗಿ ತ್ಯಾಗ ಮಾಡಿದ ಸಂದೀಪ್ ಉನ್ನಿಕೃಷ್ಣನ್ ಬಲಿದಾನವನ್ನು ಪ್ರತಿ ವರ್ಷ ಸ್ಮರಿಸಲ್ಪಡುತ್ತದೆ. ಅತಿ ಹೆಚ್ಚು ಮಂದಿ ಯುವಕರು ಆ ಮೂಲಕ ರಾಷ್ಟ್ರಸೇವೆಗೆ ಅಣಿಯಾಗುತ್ತಿದ್ದಾರೆ ಎಂದರೆ ಆ ಸೈನಿಕನ ತ್ಯಾಗದ ಶಕ್ತಿ ಎಂತಹದ್ದು ಎಂಬುದನ್ನು ನೆನಪಿಸಿಕೊಳ್ಳಲೇಬೇಕಿದೆ.
ಸಂದೀಪ್ ಉನ್ನಿಕೃಷ್ಣನ್ ಹಿರಿಯರು ಮೂಲತಃ ಕೇರಳ ರಾಜ್ಯದ ಕಲ್ಲಿಕೋಟೆ ಜಿಲ್ಲೆಯ ಚೆರುವನ್ನೂರಿನವರು. ಇಸ್ರೋ ಸಂಸ್ಥೆಯಲ್ಲಿ ಸೇವೆಯಲ್ಲಿದ್ದ ಅಧಿಕಾರಿ ಕೆ. ಉನ್ನಿಕೃಷ್ಣನ್ – ಧನಲಕ್ಷ್ಮೀ ಉನ್ನಿಕೃಷ್ಣನ್ ಅವರ ವೀರ ಪುತ್ರ ಸಂದೀಪ್. ಇಸ್ರೋ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದ ಉನ್ನಿಕೃಷ್ಣನ್ 80 ರ ದಶಕದಲ್ಲೇ ಬೆಂಗಳೂರಿನಲ್ಲಿ ಬಂದು ನೆಲೆಸಿದ್ದರು. 15 ಮಾರ್ಚ್ 1977 ರಲ್ಲಿ ಜನಿಸಿದ ಸಂದೀಪ್ ಉನ್ನಿಕೃಷ್ಣನ್ ಅವರ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಬೆಂಗಳೂರಿನಲ್ಲಿ ನಡೆದಿತ್ತು. ಚಿಕ್ಕಂದಿನಿಂದಲೇ ಸೈನಿಕ ಶಕ್ತಿಯ ಅಗಾಧತೆ, ಅದರ ಶಕ್ತಿಯ ಬಗ್ಗೆ ಬಹಳ ಆಸಕ್ತಿ ಹೊಂದಿದ್ದ ಪುಟ್ಟ ಪೋರ, ದೇಶದ ರಕ್ಷಣಾ ಪಡೆಯಲ್ಲಿ ಸೇವೆ ಸಲ್ಲಿಸುವ ಹಂಬಲವನ್ನು ಪೋಷಕರಲ್ಲಿ ಹೇಳಿಕೊಂಡಾಗ ಸಂತೋಷದಿಂದ ಒಪ್ಪಿ ಹಾರೈಸುತ್ತಾರೆ. 1995 ರಲ್ಲಿ ತಮ್ಮ ಪದವಿ ಶಿಕ್ಷಣ ಪೂರೈಸಿದ ಸಂದೀಪ್ ಉನ್ನಿಕೃಷ್ಣನ್ ನಂತರ ಎನ್.ಡಿ.ಎ. ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯಲ್ಲಿ ಸೇರ್ಪಡೆಗೊಳ್ಳುತ್ತಾರೆ. 1999 ರಲ್ಲಿ ಪಾಕಿಸ್ಥಾನದ ವಿರುದ್ಧ ನಡೆದ ʼಅಪರೇಶನ್ ವಿಜಯʼ ಸೈನಿಕ ಚಟುವಟಿಕೆಯಲ್ಲಿ ಪಾಲ್ಗೊಳ್ಳುತ್ತಾರೆ. ಈ ಸಂದರ್ಭ 6 ಮಂದಿ ಸೈನಿಕರನ್ನು ಮುನ್ನಡೆಸಿದ್ದು ಮಾತ್ರವಲ್ಲದೆ ಪಾಕಿಸ್ಥಾನಿ ಆಕ್ರಮಣವನ್ನು ಲೆಕ್ಕಿಸದೆ, ಮುಂದಾಳತ್ವ ವಹಿಸಿದ ಕೀರ್ತಿ ಇವರ ತಂಡಕ್ಕೆ ಸಲ್ಲುತ್ತದೆ. ಇದರಿಂದ 2003 ರಲ್ಲಿ ಕ್ಯಾಪ್ಟನ್ ಆಗಿ ಬಡ್ತಿ ಹೊಂದಿದ ಸಂದೀಪ್ ಉನ್ನಿಕೃಷ್ಣನ್ ನಂತರ 2005 ರಲ್ಲಿ ಮೇಜರ್ ಆಗಿ ಸೇವೆ ಮುಂಬಡ್ತಿ ಪಡೆಯುತ್ತಾರೆ.
ರಕ್ಷಣಾ ಪಡೆಯಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿ, ಜಮ್ಮು ಕಾಶ್ಮೀರ, ರಾಜಸ್ಥಾನ ಮೊದಲಾದೆಡೆ ಸೇವೆ ಸಲ್ಲಿಸಿದ ಮೇಜರ್ ಉನ್ನಿಕೃಷ್ಣನ್ ನಂತರ ರಾಷ್ಟ್ರೀಯ ರಕ್ಷಣಾ ದಳ (ಎನ್.ಎಸ್.ಜಿ.)ಕ್ಕೆ ಆಯ್ಕೆಯಾಗಿ ವಿಶೇಷ ತರಬೇತಿ ಪಡೆಯುತ್ತಾರೆ. ಬೆಳಗಾವಿಯಲ್ಲಿರುವ ಸೈನಿಕ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆದ ಉನ್ನಿಕೃಷ್ಣನ್ ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ತೇರ್ಗಡೆ ಹೊಂದುತ್ತಾರೆ. 1995 ರಲ್ಲಿ ಪುಣೆಯಲ್ಲಿರುವ ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಸೇರಿದ್ದ ಸಂದೀಪ್ 2007 ರ ವಿಶೇಷ ಕಮಾಂಡೋ ತರಬೇತಿ ನಂತರದಲ್ಲಿ ದೇಶದ ಸೇವೆಗೆ ಮತ್ತೆ ಅಣಿಯಾಗುತ್ತಾರೆ.
ಮುಂಬೈ ಉಗ್ರರ ದಾಳಿ: ಸಂದೀಪ್ ಉನ್ನಿಕೃಷ್ಣನ್ ಪರಾಕ್ರಮ
26 ನವಂಬರ್ 2008 ರಂದು, ಮುಂಬೈ ಮಹಾನಗರಿಯ ಎರಡು ಐತಿಹಾಸಿಕ ಕಟ್ಟಡಗಳ ಮೇಲೆ ಉಗ್ರರ ದಾಳಿಯಾಗಿತ್ತು. ನೂರು ವರ್ಷ ಹಳಮೆಯ ಕಟ್ಟಡ ಮುಂಬೈನ ಗರಿಮೆಯಾದ ತಾಜಮಹಲ್ಹೋಟೆಲಿಗೆ ನುಸುಳಿದ್ದ ಉಗ್ರರು ಹಲವು ಮಂದಿಯನ್ನು ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡಿದ್ದರು. ಈ ಸಂದರ್ಭ ವಿಶೇಷ ಕಾರ್ಯಪಡೆ ತಂಡದಲ್ಲಿ ಭಾಗಿಯಾಗಿ ಒತ್ತೆಯಾಳುಗಳ ರಕ್ಷಣೆಗಿಳಿದಿದ್ದ ಸಂದೀಪ್ ಅವರನ್ನು ಬಂದಮುಕ್ತಗೊಳಿಸಲು ಯತ್ನಿಸುತ್ತಾರೆ. ಮೂರನೇ ಮಹಡಿಯಲ್ಲಿ ಕೆಲ ಮಹಿಳೆಯರನ್ನು ಒತ್ತೆಯಾಳುಗಳಾಗಿ ಕೊಠಡಿಯಲ್ಲಿ ಬಂಧಿಯಾಗಿಸಿದ್ದ ಉಗ್ರರು, ಕೊಠಡಿಯ ಬಾಗಿಲನ್ನು ಹಾಕಿ ಸೈನಿಕರು ಒಳಬಾರದಂತೆ ಮಾಡಿದ್ದರು. ಇದನ್ನರಿತ ಸಂದೀಪ್ತಮ್ಮ ತಂಡ ಸದಸ್ಯರೊಂದಿಗೆ ಆ ಕೊಠಡಿಯ ಬಾಗಿಲು ಮುರಿದು ಹಾಕುತ್ತಾರೆ. ಈ ಸಂದರ್ಭ ಗುಂಡಿನ ದಾಳಿ ನಡೆಸಿದ ಉಗ್ರರು, ನಂತರ ಗುಂಡಿನ ಚಕಮಕಿಯಲ್ಲಿ ತೊಡಗುತ್ತಾರೆ,ಈ ಸಂದರ್ಭ ಕಮಾಂಡರ್ ಸುನಿಲ್ ಕುಮಾರ್ ಯಾದವ್ಅವರ ಕಾಲಿಗೂ ಗಾಯಗಳಾಗಿತ್ತು. ಅವರನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಸಂದೀಪ್ ಸ್ಥಳಾಂತರಿಸುತ್ತಾರೆ.ಉಗ್ರವಾದಿಗಳೊಂದಿಗೆ ಹೋರಾಟಕ್ಕಿಳಿದ ಸಂದೀಪ್ ಕೆಳಗಿನ ಮಹಡಿಗೆ ಇಳಿಯುತ್ತಿದ್ದಂತೆ ಹಿಂದಿನಿಂದ ಗುಂಡಿನ ದಾಳಿಯಾಗುತ್ತದೆ. ಗಂಭೀರ ಗಾಯಗಳೊಂದಿಗೆ ನೆಲಕ್ಕುರಳಿದ ಮೆ. ಸಂದೀಪ್ ಉನ್ನಿಕೃಷ್ಣನ್ ಹೇಳಿದ ಕೊನೆಯ ಮಾತುಗಳು ʼಮೇಲಕ್ಕೆ ಬರಬೇಡಿ, ಇವರನ್ನು ನಾನು ಸಂಭಾಳಿಸುತ್ತೇನೆʼ ಎಂದು. ರಕ್ತದೋಕುಳಿಯಲ್ಲಿ ಬಿದ್ದಿದ್ದರೂ ಛಲಬಿಡದ ವೀರನ ಮಾತುಗಳು ನಮ್ಮ ಭಾವಿ ಯುವ ಪಡೆಗೆ ಸ್ಪೂರ್ತಿ.
ವೀರಾವೇಶದಿಂದ ಹೋರಾಡಿ, ಒತ್ತೆಯಾಳುಗಳನ್ನು ಬಿಡಿಸುವಲ್ಲಿ ಶ್ರಮಿಸಿದ ಸಂದೀಪ್ ಉನ್ನಿಕೃಷ್ಣನ್ ಅವರ ದೇಶಕ್ಕಾಗಿನ ಅಮೂಲ್ಯ ಸೇವೆಗೆ ಮರಣೋತ್ತರ ಅಶೋಕ ಚಕ್ರವನ್ನು ನೀಡಿದ ಭಾರತ ಸರ್ಕಾರ ಗೌರವಿಸಿದೆ. ಸಂದೀಪ್ ಉನ್ನಿಕೃಷ್ಣನ್ ಅವರ ತಾಯಿ 2009 ಜ. 26 ರಂದು ಆಗಿನ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರಿಂದ ಅಶೋಕ ಚಕ್ರವನ್ನು ಸ್ವೀಕರಿಸುತ್ತಾರೆ.
✍️ ವಿವೇಕಾದಿತ್ಯ ಕೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.