News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಸಿನೆಮಾ ಕಥೆಗಳು ಸಮಾಜಕ್ಕೆ ದಾರಿ ತೋರಿಸುವಂತಿರಲಿ..

ಸಿನಿಮಾ ಮಾಧ್ಯಮ ಅತಿ ಕಡಿಮೆ ಸಮಯದಲ್ಲಿ ಬಹಳ ವೇಗವಾಗಿ ಬಹು ದೊಡ್ಡ ಸಮೂಹವನ್ನು ತಲುಪುವಂತದ್ದು. ರವಿ ಕಾಣದ್ದನ್ನು ಕವಿ ಕಂಡ ಎಂಬಂತೆ, ಎಷ್ಟೋ ಬಾರಿ ಪುಸ್ತಕದ ಅಕ್ಷರದೊಳಗಿನ ಭಾವ ನಮ್ಮನ್ನು ತಲುಪದು. ಹಲವು ಸೂಕ್ಷ್ಮತೆಗಳನ್ನು ಗ್ರಹಿಸಲಾಗದ, ಕಾಣಲು ಸಾಧ್ಯವಾಗದ ಮನಸಿಗೆ ಒಂದು ನಿಮಿಷದ ದೃಶ್ಯವೂ ಅದನ್ನು ಸಶಕ್ತವಾಗಿ ಹಿಡಿದುಕೊಡಬಲ್ಲದು. ಹೀಗಿರುವಾಗ ಸಿನಿಮಾವನ್ನು ಸಿನಿಮಾವನ್ನಾಗಷ್ಟೇ ನೋಡುವುದು, ಅದೂ ನಮ್ಮ ದೇಶದಲ್ಲಿ ಖಂಡಿತ ಸಾಧ್ಯವಿಲ್ಲ. ಸಿನಿಮಾದೊಳಗಿನ ಸಂದೇಶದಿಂದೆಲ್ಲಾ ಯಾರೂ ಉದ್ಧಾರವಾಗಿದ್ದಿಲ್ಲ, ತಿದ್ದಿಕೊಂಡಿದ್ದಿಲ್ಲ ಎಂದು ಬಹಳ ಜನ ಹೇಳುವುದೂ ಕೇಳಿದ್ದೇನೆ. ಆದರೆ ಉದ್ಧಾರ ಆದವರು ಇದ್ದಾರೋ ಇಲ್ಲವೋ ಗೊತ್ತಿಲ್ಲ, ಸಿನಿಮಾ ಕಥೆಯನ್ನೇ ನಿಜವೆಂದು ಭ್ರಮಿಸಿ ಅದನ್ನು ಹಿಂಬಾಲಿಸಿ ಕೆಟ್ಟವರ ಉದಾಹರಣೆಗಳು ಸಾಕಷ್ಟಿವೆ! ನಾನಂತೂ ಬಹಳ ಹತ್ತಿರದಿಂದಲೇ ಗಮನಿಸಿದ್ದೇನೆ. ಹೀಗಾಗಿ ಚಲನಚಿತ್ರ ಕಥೆಯು ಒಳಿತು/ಕೆಡುಕು ಎರಡರಲ್ಲೂ ಬಹು ದೊಡ್ಡ ಪಾತ್ರವನ್ನು ವಹಿಸುತ್ತದೆ ಎಂಬುದಕ್ಕೆ ಕೆಲವು ಉದಾಹರಣೆಗಳನ್ನು ನೋಡಬಹುದಾಗಿದೆ.

1. ʼಪ್ರೀತಿಯಿದ್ದಲ್ಲೇ ಹಕ್ಕಿರುತ್ತದೆ. ಆ ಹಕ್ಕಿನಿಂದ ಹೊಡೆದದ್ದುʼ ಎಂದು ನಾಯಕಿಯ ಗಾಯಕ್ಕೆ ಪಟ್ಟಿಹಾಕಿದ ಹೀರೋನ ಮಾತನ್ನು ಕೇಳಿ ಪ್ರಭಾವಿತಳಾಗಿದ್ದ ಕಾಲೇಜಿನ ನನ್ನ ಸ್ನೇಹಿತೆಯೋರ್ವಳು ತನ್ನ ಪತಿಯಿಂದ ವರ್ಷಗಳ ಕಾಲ ಹೊಡೆತ ತಿಂದು ಹೈರಾಣಾದರೂ ಬಿಡಲು ಒಪ್ಪಿರಲಿಲ್ಲ. ಅದಕ್ಕೆ ಅವಳು ಕೊಟ್ಟಿದ್ದ ಕಾರಣವೇನೆಂದರೆ. ಅದೆಷ್ಟೋ ಚಲನಚಿತ್ರಗಳ ಹೀರೋಯಿನ್‌ಗಳು ಕೆಟ್ಟ ದಾರಿ ಹಿಡಿದ ನಾಯಕನನ್ನು ಸರಿದಾರಿಗೆ ತಂದಂತೇ ತಾನೂ ಪ್ರೀತಿಸುತ್ತಾ ಸಹನೆಯಿಂದಿದ್ದು ಸರಿ ಮಾಡಬಲ್ಲೆ ಎಂದಾಗಿತ್ತು! (ನಾನು ಬೇರೆ ಆಪ್ಷನ್ಸ್ ಸೂಚಿಸಿದಾಗೆಲ್ಲಾ ಅಂತಹ ಅನೇಕ ಚಲನಚಿತ್ರಗಳ ಉದಾಹರಣೆಯನ್ನೂ ಕೊಟ್ಟಿದ್ದಳು.) ಕೊನೆಗೆ ಆತನ ಪ್ರಹಾರದಿಂದ ಇನ್ನೂ ಕಣ್ಬಿಡದ ಶಿಶು ತನ್ನ ಒಡಲೊಳಗೇ ಶಾಶ್ವತವಾಗಿ ಕಣ್ಮುಚ್ಚಿದಾಗಲೇ ಆಕೆ ಎಚ್ಚೆತ್ತುಕೊಂಡಿದ್ದು, ವಾಸ್ತವಿಕತೆ ಅರ್ಥವಾಗಿ ಹೂರಬಂದಿದ್ದು!

2. ‘ಏ ಕ್ಯಾ ಬೋಲ್ತೀ ತೂ’ ಹಾಡಿನಲ್ಲಿ ಆಮೀರ್ ಖಾನ್ ಮಾಡುವ  ಒಂದು ಅಪಾಯಕಾರಿ ಸ್ಟಂಟಿನಂತೆಯೇ ಬೆಂಕಿಕಡ್ಡಿಯನ್ನು ಗೀರಿ ನಾಲಿಗೆ ಸುಟ್ಟುಕೊಂಡು ಆಸ್ಪತ್ರೆ ಸೇರಿದ ಹದಿವಯಸ್ಸಿನ ಮಕ್ಕಳ ಸುದ್ದಿಯನ್ನು ಪೇಪರಿನಲ್ಲಿ ಓದಿದ್ದು ಇನ್ನೂ ನೆನಪಿದೆ! ಆಗ ಸೋಶಿಯಲ್ ಮೀಡಿಯಾ ಇರಲಿಲ್ಲವಾದ್ದರಿಂದ ಈ ಘಟನೆ ವೈರಲ್ ಆಗಲಿಲ್ಲ! ಅಲ್ಲದೇ, ಸಿನೆಮಾ ನಟರ ಬದುಕಿಗೂ ನಟನೆಗೂ ವ್ಯತ್ಯಾಸ ಅರಿಯದ ಅದೆಷ್ಟು ಮುಗ್ಧ/ಮುಗ್ಧೆಯರು ಹಳ್ಳಿಯಿಂದ ಓಡಿ ಶಹರಕ್ಕೆ ಬಂದು ಪಡಬಾರದ ಬವಣೆ ಪಟ್ಟಿರುವರೋ/ಪಡುತ್ತಿರುವರೋ ಲೆಕ್ಕವಿಡಲಾಗದು.

3. ಪಿಯುಸಿಯಲ್ಲಿದ್ದಾಗ ಒಮ್ಮೆ ನನ್ನ ಬೆಂಚ್ಮೇಟ್ ಆಗಿದ್ದವಳು ಅಳುಮುಖದಲ್ಲಿ ನನ್ನ ಬಳಿ ಬಂದು ದುಃಖ ತೋಡಿಕೊಂಡಿದ್ದಳು. ಒಬ್ಬ ಹುಡುಗ ಪ್ರತಿ ದಿವಸ ಅವಳಿಗೆ ತನ್ನ ಬೈಕಲ್ಲಿ ಕೂತು ಒಂದು ರೌಂಡಿಗೆ ಬಾ ಎಂದು ಒತ್ತಾಯಿಸುತ್ತಿದ್ದನಂತೆ. ಈಗಿನಷ್ಟು ಆಗ ಪರಿಸ್ಥಿತಿ ಹೆಣ್ಮಕ್ಕಳ ಪ್ರತಿ ಫೇವರ್ ಆಗಿರಲಿಲ್ಲ (ಈಗಲೂ ಪೂರ್ತಿಯಾಗಿದೆ ಎಂದೆನ್ನುತ್ತಿಲ್ಲ. ಆದರೆ ಆ ಕಾಲಘಟ್ಟಕ್ಕಿಂತ ತುಸು ಜಾಗೃತಿಯಾಗಿದೆ ಎನ್ನಬಹುದು). ‘ನನಗಿಷ್ಟವಿಲ್ಲ, ಒತ್ತಾಯ ಮಾಡಬೇಡ’ ಎಂದು ನೇರವಾಗಿ ಹೇಳಿಬಿಡು ಅಂದಿದ್ದೆ. ಅದಕ್ಕೆ ಅವಳು ?ಕಿಲಾಡಿಯಲ್ಲಿ ಅಕ್ಷಯ್ ಕುಮಾರ್ ಆಯೇಷಾಳ ಹಿಂದೆ ಹೀಗೇ ಸುತ್ತಲ್ವಾ? ಅದ್ರಲ್ಲಿ ಆಕೆ ಮೊದ್ಲು ನಖರಾ ಮಾಡಿದ್ರೂ ಆಮೇಲೆ ಅವ್ನನ್ನು ಲವ್ ಮಾಡಿಲ್ವಾ? ಹುಡ್ಗೀರು ಮೊದ್ಲು ನೋ ಅನ್ನೋದು. ಹೀಗಾಗಿ ನೋ ಅಂದ್ರೆ ಯೆಸ್ ಅಂತ ಅರ್ಥ ಬಿಸ್ಲಲ್ಲಿ ಕಪ್ಪಾಗ್ತೀಯಾ ಬೈಕ್ ಹತ್ತು? ಅಂತ ಹೇಳ್ತಾನೆ ಏನ್ಮಾಡ್ಲಿ ಅಂತ ಅಲವತ್ತುಕೊಂಡಿದ್ಳು. ಪುಣ್ಯಕ್ಕೆ ಅವಳ ಅಪ್ಪ ಸಂಕುಚಿತ ಮನೋಭಾವದವರಲ್ಲಾದ್ದರಿಂದ ಮಗಳ ಸಮಸ್ಯೆಗೆ ಸರಿಯಾದ ರೀತಿಯಲ್ಲಿ ಸ್ಪಂದಿಸಿ ಅದನ್ನು ಪರಿಹರಿಸಿಕೊಟ್ಟರು.

ಇದು ಕೇವಲ ಸ್ಯಾಂಪಲ್ ಅಷ್ಟೇ. ತೆರೆಯ ಮೇಲೆ ನೋಡುವಾಗ ಯಾರೆಷ್ಟೇ ಅದನ್ನೊಂದು ಕಥೆ ಎಂದುಕೊಂಡರೂ, ಯುವ ಜನರ ಮೇಲೆ ಒಳಿತು/ಕೆಡುಕನ್ನು ಪರಿಣಾಮಕಾರಿಯಾಗಿ (ಕೆಡುಕು ತುಸು ಹೆಚ್ಚೇ, ವೇಗವಾಗಿ) ಬೀರಿರುತ್ತದೆ. ತಾನು ಪ್ರೀತಿಸಿದ ಹುಡುಗಿ ಸಿಗಲಿಲ್ಲವೆಂದು ಆತ್ಯಹತ್ಯೆ ಮಾಡಿಕೊಳ್ಳುವ ನಾಯಕ/ನಾಯಕಿ ಇದ್ದಿರಲಿ, ಅತ್ಯಾಚಾರವಾಯಿತೆಂದು ಆತ್ಯಹತ್ಯೆ ಮಾಡಿಕೊಳ್ಳುವ ಪಾತ್ರವಿರಲಿ ಇದೆಲ್ಲಾ ಸಮಾಜದಲ್ಲಿ ಹಾಸುಹೊಕ್ಕಾಗಿರುವ ಪಿಡುಗೇ ಆಗಿದ್ದರೂ, ಅದನ್ನು ತೆರೆಯ ಮೇಲೆ ವಿಜೃಂಭಿಸಿ ತೋರಿಸಿ, ಅವುಗಳಿಗೇ ಮಹಾನ್ ಪಟ್ಟಕಟ್ಟಿ, ಮಹತ್ವ ಕೊಡುವಂತೆ ಚಿತ್ರಿಸುವುದರಿಂದ ಆಗುವ ಅಪಾಯಗಳು ಹೆಚ್ಚು ಎನಿಸುತ್ತದೆ.

ಅಂದು ಅರ್ಥ ಸರಿಯಾಗಿ ಗೊತ್ತಿಲ್ಲದೇ ರಾಗಕ್ಕೆ ಮರುಳಾಗಿ ಮೆಚ್ಚಿಕೊಂಡು ನಾನೂ ಗುನುಗಿದ್ದ ‘ತೂ ಚೀಝ್ ಬಡೀ ಹೈ ಮಸ್ತ್?’ ನಂತಹ ಹಾಡುಗಳು ಇಂದು ಕರ್ಕಶವೆನಿಸುತ್ತವೆ. ಅದೂ ಒಂದು ಕಲೆ ಎಂಬ ಸೋಗಿನಲ್ಲಿ ಪ್ರತಿ ಚಿತ್ರದಲ್ಲೂ ಅಂಗಾಂಗವನ್ನೇ ಎತ್ತಿ ತೋರಿಸುವಂತಹ ಅರೆಬೆತ್ತಲಿನ ಐಟಂ ಸಾಂಗುಗಳನ್ನು ತುರುಕಿಬಿಟ್ಟಾಗ ಅವು ಸಂಯಮ, ಸಂಸ್ಕಾರ ಗಟ್ಟಿಯಾಗಿಲ್ಲದ ಮನವನ್ನು ಯಾವೆಲ್ಲಾ ವಿಕಾರಗಳಿಗೆ ಕಿಡಿಯಾಗಿಸುವುದೋ ಅರಿಯಲಾಗದು.

ಆದರೆ, ಚಿಕ್ಕವಳಿದ್ದಾಗ ನೋಡಿ ವ್ಹಾ ಅಂದುಕೊಂಡಿದ್ದ ‘ಗೃಹಪ್ರವೇಶ, ‘ಹೊಸಜೀವನ’ ದಂತಹ ಚಲನಚಿತ್ರಗಳು ಇಂದು ಬರುತ್ತಿಲ್ಲ ಎನ್ನುವುದೇ ನಮ್ಮ ಪುಣ್ಯ! ಇಂದು ಅತ್ಯಾಚಾರಕ್ಕೊಳಗಾದವಳು ಸೇಡು ತೀರಿಸಿಕೊಳ್ಳುವಂತಹ, ಅದನ್ನು ಧಿಕ್ಕರಿಸುವಂತಹ, ಅದೇ ನಾಯಕನ ಬಾಯಲ್ಲಿ ‘ಲಡ್ಕಿ ಜಬ್ ನೋ ಕಹೆ ತೋ ವೋ ಯೆಸ್ ನಹಿ ಹೋತಾ’ ಎಂಬ ಎಚ್ಚರಿಕೆಯನ್ನೀವ, ತನ್ನ ಮೇಲೆ ಆದ ದೌರ್ಜನ್ಯಕ್ಕೆ ನ್ಯಾಯ ಸಲ್ಲಿಸಲು ಪಣ ತೊಡುವಂತಹ (ಆತ್ಮಹತ್ಯೆಗೆ ಯತ್ನಿಸದೇ) ಚಿತ್ರಗಳು ಬರುತ್ತಿವೆ ಎಂಬುದು ನಿಜಕ್ಕೂ ಸ್ವಾಗತಾರ್ಹವೇ.

ಅಲ್ಲದೇ, ಇತ್ತೀಚಿಗೆ ಫ್ಯಾರ್ ಆಂಡ್ ಲವ್ಲಿ ಜಾಹೀರಾತನ್ನು ನಿರಾಕರಿಸಿದ, ತನ್ನ ಚಲನಚಿತ್ರಗಳಲ್ಲಿ ಮೇಕಪ್ ನಿರಾಕರಿಸಿ/ತೀರಾ ಕಡಿಮೆ ಉಪಯೋಗಿಸಿ ನಟಿಸುವ ಸಾಯಿ ಪಲ್ಲವಿ, ಉಯ್ಯಾರೆ ಎನ್ನುವ ಚಲನಚಿತ್ರದಲ್ಲಿ ಕಾಡಿಸುವ ಪ್ರೇಮಿಯ ವಿರುದ್ಧ ಹೋರಾಡಿ ಗೆಲ್ಲುವ ಗಮನಾರ್ಹ ಪಾತ್ರ ಮಾಡಿದ ಪಾರ್ವತಿ ಮೇನನ್ ಬಹಳ ಇಷ್ಟವಾಗುತ್ತಾರೆ. ಆದರೆ ವಿಷಾದವೆಂದರೆ ‘ಕಬೀರ್ ಸಿಂಗ್’ ಅಂತಹ ಒಂದು ಚಲನಚಿತ್ರ ಸಾಕು ಇಂತಹ ಹತ್ತು ಚಿತ್ರಗಳ ಉತ್ತಮ ಸಂದೇಶಗಳನ್ನ ಅಡಗಿಸಿಬಿಡಲು. ಕಬೀರ್ ಸಿಂಗನಂತಹ ವಿಕಾರ ಮನಸಿನವರ ವಿರುದ್ಧವೇ ಹೋರಾಡಿ ಗೆದ್ದ ಚಿತ್ರಗಳನ್ನು ಮೂಲೆಗುಂಪಾಗಿಸಲು, ಪಕ್ಕಕ್ಕೆ ಸರಿಸಿಬಿಡಲು! ಋಣಾತ್ಮಕತೆ ಬಹುಬೇಗ ಆಕರ್ಷಿಸಿ ಹರಡುತ್ತದೆ ಎನ್ನುವುದು ಸತ್ಯ ಅನ್ನಿಸಿಬಿಡುತ್ತದೆ.

ಇನ್ನು, ಮಾಸ್ ಜನರು ಕೇಳ್ತಾರೆ ಅದ್ಕೇ ಕೊಡ್ತೀವಿ ಅನ್ನೋ ಸವಕಲು ಡಯಲಾಗ್ ಅನ್ನು ಪದೇಪದೇ ಕೇಳುತ್ತಿರುತ್ತೇವೆ. ಆದರೆ ನನಗೆ ಪ್ರತಿ ಸಲ ಅನ್ನಿಸುವುದು ಯಾರು ಈ ಮಾಸ್? ನಾನಂತೂ ಇದರಲ್ಲಿಲ್ಲ. ನನ್ನಂತವರೂ ಅನೇಕರಿದ್ದಾರೆ ಎನ್ನುವುದೂ ನಿಜವೇ. ಒಂದು ಕಾಲದಲ್ಲಿ ಇಂಪಾದ ರಾಗ, ಅರ್ಥವತ್ತಾದ ಸಾಹಿತ್ಯವುಳ್ಳ ಹಾಡುಗಳನ್ನೂ ಇದೇ ಮಾಸ್ ಮೆಚ್ಚಿತ್ತಲ್ಲ! ಅದ್ಯಾವ ಕಾಲಘಟ್ಟದಲ್ಲಿ ಹೇಗೆ ಮತ್ತು ಯಾಕೆ ವಿಕಾರ/ವಿಕೃತಿಗಳೇ ಮೆಚ್ಚುಗೆಯಾದವು? ತಮ್ಮೊಳಗಿನ ವಿಕಾರವನ್ನು ಹೊರಹಾಕಲು ಮಾಸ್ ಬೇಡಿಕೆ ಎಂಬ ನೆಪ ಹುಟ್ಟುಹಾಕಿದರೆ? ಅಥವಾ ಮೊದಮೊದಲು ಟ್ರಯಲ್ ಆಂಡ್ ಅರರ್ ಎಂದು ಐಟಂ ಸಾಂಗುಗಳನ್ನು ಹುಟ್ಟು ಹಾಕಲು ಅವುಗಳನ್ನೇ ಬಹಳ ಜನ ಮೆಚ್ಚಿದ್ದು ಕಂಡು ಕಡೆಗೆ ನಾಯಕಿಗೇ ಆ ಪಾತ್ರಹಾಕಿಸಲಾಯಿತೇ? ‘ಪಡ್ಡೆ ಹುಡುಗರೆಲ್ಲಾ ಫಿದಾ ಆಗಿ ಸ್ಟೆಪ್ ಹಾಕಿದರು ಎಂದು ನ್ಯೂಸ್ ನಿರೂಪಕಿಯೂ ಹಲ್ಲುಬಿಡುವುದನ್ನು ನೋಡುವಾಗ ಅನ್ನಿಸುವುದು ಈಕೆಗೆ ಯಾಕೆ ಅರ್ಥವಾಗುತ್ತಿಲ್ಲ. ಇದೇ ಪಡ್ಡೆ ಹುಡುಗರು ತೆರೆಯ ಮೇಲೆ ನೋಡಿ ಬಿಸಿಯೇರಿಸಿಕೊಂಡು ಕೈಗೆಟುಗದ ಹೀರೋಯಿನ್ ಕನಸಲ್ಲೇ ಕೈಗೆಟಕುವ ಬೀದಿ ಬದಿಯ ಪಾಪದ ಭಿಕ್ಷಕ ಮಕ್ಕಳನ್ನೋ, ಎಳೆಯ ಹೆಣ್ಮಕ್ಕಳನ್ನೋ ಬಳಸಿಕೊಳ್ಳುವ ಅಪಾಯವಿದೆ ಎಂದು!

ಅದೇರೀತಿ, ಕಥೆಗೆ ಪೂರಕವಾಗಿ ದೃಶ್ಯವಿದೆ ಎಂಬುದು ಮತ್ತೊಂದು ನೆಪ! ಅದು ಎಂತಹ ಕಥೆಯಪ್ಪ. ಮೊದಲು ಆಕೆಯನ್ನು ಫಾಲೋ ಮಾಡು, ಅವಳು ಒಪ್ಪಿಲ್ಲಾ ಅಂದ್ರೆ ಎಳೆದಾಡಿ, ಬೇಕಾಬಿಟ್ಟಿ ಬಳಸಿಕೊಂಡು ಆಮೇಲೆ ಅವಳು ಹೋಗ್ಲಿ ಪಾಪ ಇಷ್ಟೆಲ್ಲಾ ಕಷ್ಟಪಟ್ಟಿದ್ದಾನೆ ಎಂದುಕೊಂಡು ಒಪ್ಪಿಕೊಳ್ಳುವುದರ ಮೂಲಕ ಅವನು ಸರಿಯಾಗುವುದು. ಚಿತ್ರದುದ್ದಕ್ಕೂ ನಾಯಕಿಯನ್ನು ಪ್ರೀತಿಯ ನೆಪದಲ್ಲಿ ಕಟ್ಟಿಹಾಕುವ, ದೈಹಿಕ ಹಿಂಸೆ ನೀಡುವ, ಲೈಂಗಿಕತೆಯ ವಿಕಾರವನ್ನೆಲ್ಲಾ ಎತ್ತಿ ತೋರುವ ಲಫಂಗ ನಾಯಕ ಕೊನೆಯಲ್ಲಿ ನಾಯಕಿ ಬೇರೆ ಮದುವೆಯಾದರೂ ಆತನಿಗೆ ದೇಹ ಒಪ್ಪಿಸದೇ ತನ್ನ ಮಗುವಿಗೆ ತಾಯಾಗುತ್ತಿರುವವಳು ಎಂದು ಬದಲಾಗುವ ಕೆಟ್ಟ ಚಿತ್ರ ‘ಕಬೀರ್ ಸಿಂಗ್’. ಎರಡೆರಡು ಭಾಷೆಗಳಲ್ಲಿ ನಿರ್ಮಾಣಗೊಂಡಿರುವ ಚಿತ್ರ ಎಂದರೆ….! ಈ ರೀತಿಯ ಕಥೆಯನ್ನು ಬಹುತೇಕ ಎಲ್ಲಾ ಭಾಷೆಯ ಚಿತ್ರಗಳಲ್ಲಿ ನೋಡಿದ್ದೇನೆ! ಇದು ಯಾವ ರೀತಿಯ ಸಂದೇಶವನ್ನು ರವಾನಿಸಿಬಿಡುತ್ತದೆ ಎಂಬುದು ನಿರ್ದೇಶಕರಿಗಾಗಲೀ, ನಟ/ನಟಿಯರಿಗಾಗಲೀ, ಮೆಚ್ಚುವ ಪ್ರೇಕ್ಷಕರಿಗಾಗಲೀ  ಬೇಕಾಗಿಲ್ಲ.  ಅಪರಾಧಿ ನಾವಲ್ಲ. ನಿನ್ನ ಅಪರಾಧದಲ್ಲಿ ನಮ್ಮ ಪಾಲಿಲ್ಲ ಎಂದು ಅಂಗುಲಿಮಾಲನನ್ನು ಕೈಬಿಟ್ಟ ಆತನ ಕುಟುಂಬದ ಕಥೆಯು ನೆನಪಾಗುತ್ತದೆ!

ಹಾಗೆ ನೋಡಿದರೆ ಬಹಳ ಹಿಂದೆ ನಾನು ಚಿಕ್ಕವಳಿದ್ದಾಗಲೇ ನೋಡಿದ್ದ, ಮೆಚ್ಚಿದ್ದ, ಬಹಳ ಪರಿಣಾಮ ಬೀರಿದ್ದ ಚಲನಚಿತ್ರ ‘ಬಂಧನ’ ಈಗಲೂ ಬಹಳ ಇಷ್ಟವಾಗುವುದು ಅದರ ಸೃಜನಾತ್ಮಕ ಕಥೆಯಿಂದಾಗಿ. ಗಂಡು, ಹೆಣ್ಣಿನ ನಡುವಿನ ಭಾವಗಳಲ್ಲಿರಬೇಕಾದ ಘನತೆಯನ್ನು ಎತ್ತಿಹಿಡಿದ, ನಿಜವಾದ ಪ್ರೀತಿ ಎಂದರೆ ಯಾವ ರೀತಿ ಇರಬೇಕು, ಅದು ಹೇಗೆ ಪ್ರೀತಿಸಿದವರ ಒಳಿತನ್ನೇ ಬಯಸುತ್ತದೆ, ಹಿಂಸೆಯನ್ನಲ್ಲ ಎನ್ನುವುದನ್ನು ಬಹಳ ಚೆನ್ನಾಗಿ ತೋರಿಸಿದ ವಿಷ್ಣುವರ್ಧನ್, ಸುಹಾಸಿನಿ ಅಭಿನಯದ ಈ ಸುಪ್ರಸಿದ್ಧ ಚಲನಚಿತ್ರ ಹಲವು ಮೌಲ್ಯಗಳನ್ನು, ಬದಲಾವಣೆಯನ್ನೂ ತೋರುತ್ತದೆ.

ತಾನು ಅಪಾರವಾಗಿ ಗೌರವಿಸುವ ತನ್ನ ಸೀನಿಯರ್ ಖುದ್ದಾಗಿ ಪ್ರೇಮನಿವೇದನೆ ಮಾಡಿಕೊಂಡರೂ, ತನಗೆ ಮೊದಲೇ ಮದುವೆ ನಿಶ್ಚಯವಾದ ಬದ್ಧತೆಯ ಜೊತೆಗೇ ಆತನ ಮೇಲೆ ತನಗಂತಹ ಯಾವುದೇ ಭಾವನೆಯೇ ಇಲ್ಲ ಎನ್ನುವುದನ್ನು ಸ್ಪಷ್ಟವಾಗಿ ಹೇಳುವ ನಾಯಕಿ, ಆಮೇಲೆ ಸಂಸಾರದಲ್ಲಿ ಪತಿ ತೋರುವ ಅಹಂಕಾರ, ದರ್ಪ, ದೌರ್ಜನ್ಯವನ್ನೆಲ್ಲಾ ಒಂದು ಮಿತಿಯವರೆಗೂ ಸಹನೆಯಿಂದಿದ್ದು ಸಹಿಸಿಕೊಂಡರೂ, ಅವನಿಗೂ ತಿದ್ದಿಕೊಳ್ಳಲು ಸಾಕಷ್ಟು ಅವಕಾಶಗಳನ್ನಿತ್ತು, ಕೊನೆಗೆ ಆತ ಮತ್ತೊಂದು ಅಸಾಹಯಕ ಹೆಣ್ಣನ್ನು ಅತ್ಯಾಚರಕ್ಕೆಳೆದಾಗ ಸಿಡಿದೆದ್ದು ಮಗುವಿನೊಂದಿಗೆ ದೂರ ಸಾಗಿಬಿಡುತ್ತಾಳೆ. ಆ ಮೂಲಕ ತನ್ನ ಸ್ವಾಭಿಮಾನವನ್ನು, ಅಸ್ತಿತ್ವವನ್ನು ಎತ್ತಿಹಿಡಿಯುವ ನಾಯಕಿ ಬಹಳ ಇಷ್ಟವಾಗಿಬಿಡುತ್ತಾಳೆ. ಇತ್ತ ತನ್ನ ಪ್ರೀತಿಯು ಏಖಮುಖ ಎಂಬುದು ಅರ್ಥವಾದ ತಕ್ಷಣ ಅವಳನ್ನು ಖುಶಿಯಿಂದ ಅವಳ ದಾರಿಗೆ ಬಿಟ್ಟುಕೊಟ್ಟು, ಮುಂದೆ ವೃತ್ತಿಯಲ್ಲೂ ಸಂಸಾರದ ಬಿಕ್ಕಟ್ಟಿನಲ್ಲೂ ಬೆಂಬಲ ನೀಡುವ ನಾಯಕ ವಿಷ್ಣುವರ್ಧನ್ ಸಚ್ಚಾರಿತ್ರ್ಯ ಸದಾ ಕಾಲ ನೆನಪಲ್ಲುಳಿಯುತ್ತದೆ.

ಅದೇ ರೀತಿ ಹಿಂದಿಯಲ್ಲಿ ಬಹಳ ಹಿಂದೆ ಬಂದ ತಬುವಿನ ಅಮೋಘ ನಟನೆಯ ‘ಅಸ್ತಿತ್ವ’, ಸ್ಮಿತಾ ಪಾಟೀಲ್ ಅಭಿನಯದ ‘ಮಿರ್ಚ್ ಮಸಾಲಾ’ ‘ಮಂಥನ್’, ‘ಅರ್ಥ್’  ಇಂತಹ ಅನೇಕ ಆಗಿನ ಚಲನಚಿತ್ರಗಳು ಈಗಲೂ ಮನದಲ್ಲಿ ಹಸಿರಾಗಿರುವುದು ಅವುಗಳ ಧನಾತ್ಮಕತೆಯಿಂದ, ಆರೋಗ್ಯಕರ ಕಥೆಯಿಂದಾಗಿ.

ಸಮಾಜಕ್ಕೆ ಮಾರಕವಾಗಿರುವ ಕೆಡುಕನ್ನೇ ಅತಿಯಾಗಿ ವಿಜೃಂಭಿಸಿ ತೋರಿಸುತ್ತಾ, ದುರ್ವತನೆಗಳನ್ನೆಲ್ಲಾ ಸಹಜವೆಂಬಂತೆ ಬಿಂಬಿಸುತ್ತಾ, ಡಾನ್‌ಗಳನ್ನೇ ಹೀರೋಮಾಡಿ, ವಿಕೃತ ಪ್ರೇಮಿಗಳನ್ನೇ ನಿಜವಾಗಿ ಮಜ್ನೂ ಎಂಬಂತೇ ತೋರಿ, ಅಶ್ಲೀಲತೆಗೆ, ಹೆಣ್ಣಿನ ಅಂಗಾಗಳನ್ನೇ ಆಡಿಕೊಂಡು ಮಾಡುವ ಕೆಟ್ಟ ಹಾಸ್ಯವನ್ನೇ ಬಡಿಸುವುದರ ಮೂಲಕ ಯುವ ಮನಸುಗಳನ್ನು ಹಾದಿತಪ್ಪಿಸುವ ಅಪಾಯ ಹೆಚ್ಚಿದೆ ಎಂಬುದು ನನ್ನ ಅಭಿಪ್ರಾಯ.

ಅದೇನೇ ಇದ್ದರೂ ಆದಷ್ಟು ಉತ್ತಮ ಕಥಾವಸ್ತುಗಳುಳ್ಳ, ಸಮಾಜಮುಖಿ ಚಿತ್ರಗಳನ್ನು. ಆರೋಗ್ಯಕರ ಹಾಸ್ಯವನ್ನೋ, ಸೃಜನಾತ್ಮಕ ಕಥೆಯುಳ್ಳ ಚಿತ್ರಗಳನ್ನು ಹುಡುಹುಡುಕಿ ನೋಡಿ ಇತರರಿಗೂ ಹಂಚಿದರೆ ಎಂದಾದರೊಂದು ದಿನ ಮಾಸ್ ಬಯಸ್ತಿದೆ ಎಂಬ ಸೋಗಿನಡಿಯಲ್ಲಿ ಕೆಟ್ಟ ಅಭಿರುಚಿಯ, ಮಚ್ಚು, ಲಾಂಗು, ಕೊಚ್ಚು, ಕೊಲ್ಲಿ ಕಥೆಗಳೇ ಉದ್ದಕ್ಕೂ ಹಬ್ಬಿರುವ, ದ್ವಂದ್ವ ಸಂಭಾಷಣೆಗಳು, ಕ್ರೌರ್ಯವನ್ನೇ ವೈಭವೀಕರಿಸುವ ಪಾತ್ರಗಳನ್ನು ನಿರ್ದೇಶಕರು ತುಂಬುವುದನ್ನು, ನಟ/ನಟಿಯರು ಅಂತಹ ಚಿತ್ರಗಳಲ್ಲಿ ನಟಿಸುವುದನ್ನೂ ಬಿಡಬಹುದು.

✍️ ತೇಜಸ್ವಿನಿ ಹೆಗಡೆ

Tags:

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top