ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಬ್ರಿಟಿಷರಿಂದ ಬಂಧನಕ್ಕೊಳಗಾಗಿ, ನ್ಯಾಯಾಲಯಕ್ಕೆ ಹಾಜರು ಪಡಿಸಿದಾಗ ಆ ಯುವಕನಲ್ಲಿ ನಿನ್ನ ಹೆಸರೇನು ಎಂದು ನ್ಯಾಯಾಧೀಶರು ಕೇಳುತ್ತಾರೆ. ಆತ ಹೇಳುತ್ತಾನೆ ‘ಆಜಾದ್’ ಎಂದು. ಮುಂದೆ ಆತನಿಗೆ ಛಡಿಯೇಟುಗಳ ಶಿಕ್ಷೆ ದೊರೆಯುತ್ತದೆ. ಪ್ರತಿ ಛಡಿಯೇಟಿಗೂ ಚಂದ್ರಶೇಖರ ಆಜಾದ್ ಅವರ ಬಾಯಿಂದ ಹೊರಟ ಉದ್ಘಾರ ‘ಭಾರತ್ ಮಾತಾ ಕಿ ಜೈ’.
ಹೌದು, ಚಂದ್ರಶೇಖರ ಆಜಾದ್ ಎಂದೇ ಪ್ರಸಿದ್ಧರಾದ ಚಂದ್ರಶೇಖರ ಸೀತಾರಾಮ್ ತಿವಾರಿ ಅವರ ಹೆಸರು ಕೇಳಿದರೆ ಸಾಕು, ದೇಶಭಕ್ತ ಭಾರತೀಯರ ಮೈಯಲ್ಲಿ ಮಿಂಚಿನ ಸಂಚಾರವಾಗುತ್ತದೆ. ಅಂತಹ ಕ್ರಾಂತಿಯ ಕಿಡಿ ಆಜಾದರು. 1857 ರ ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ನಂತರದಲ್ಲಿ ಬ್ರಿಟಿಷರ ವಿರುದ್ಧ ಹೋರಾಟಕ್ಕೆ ಮೊದಲು ಆಯುಧಗಳನ್ನು ಬಳಕೆ ಮಾಡಿದ ಹೋರಾಟಗಾರರಲ್ಲಿ ಆಜಾದ್ ಅವರು ಒಬ್ಬರು. ‘ಒಬ್ಬ ಯೋಧ ಎಂದಿಗೂ ಶಸ್ತ್ರ ತ್ಯಜಿಸಲಾರನು’ ಎಂಬ ಅಭಿಪ್ರಾಯ ಆಜಾದ್ ಅವರಲ್ಲಿತ್ತು ಎಂಬುದು ಗಮನಾರ್ಹ.
ಆಜಾದ್ ಅವರನ್ನು ಪಂಡಿತ್ಜಿ ಎಂದು ಕರೆಯುತ್ತಿದ್ದರು. ಅವರು 1906 ಜುಲೈ 23 ರಂದು (ಮಿಥ್ಯಾಕಲ್ಪನೆ :ಉನ್ನಾವೋ ಜಿಲ್ಲೆ – ಬಾದರ್ಕಾ ಉತ್ತರಪ್ರದೇಶ) ಮಧ್ಯಪ್ರದೇಶದ ಝಬುವಾ ಜಿಲ್ಲೆಯಲ್ಲಿರುವ ಭವ್ರಾ ಎಂಬ ಹಳ್ಳಿಯಲ್ಲಿ ಪಂ. ಸೀತಾರಾಮ ತಿವಾರಿ – ಜಾಗ್ರಣೀ ದೇವಿ ದಂಪತಿಯ ಪುತ್ರನಾಗಿ ಜನಿಸುತ್ತಾರೆ. ಭವ್ರಾ ಮತ್ತು ವಾರಣಾಸಿಯ ಸಂಸ್ಕೃತ ಪಾಠಶಾಲೆಯಲ್ಲಿ ವಿದ್ಯಾಭ್ಯಾಸ. ವಿದ್ಯಾರ್ಥಿಯಾಗಿದ್ದಾಗಲೇ ಮಹಾತ್ಮಾ ಗಾಂಧಿ ಅವರಿಂದ ಸ್ಫೂರ್ತಿಗೊಳಗಾಗಿ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದವರು ಆಜಾದ್ ಅವರು.
1919 ರಲ್ಲಿ ಅಮೃತಸರದಲ್ಲಿ ಜಲಿಯನ್ ವಾಲಾಬಾಗ್ ಘಟನೆ ನಡೆಯುತ್ತದೆ. ಇದು ಆಜಾದರ ಮನಸ್ಸಿನಲ್ಲಿ ಆಳವಾಗಿ ಇಳಿದು, ಮನಸ್ಸು ಅಲ್ಲೋಲಕಲ್ಲೋಲವಾಗುತ್ತದೆ. 1921 ರಲ್ಲಿ ಗಾಂಧೀಜಿ ಅಸಹಕಾರ ಚಳುವಳಿ ಆರಂಭ ಮಾಡುತ್ತಾರೆ. ಈ ಚಳುವಳಿಯಲ್ಲಿ ಆಜಾದರು ಸಕ್ರಿಯರಾಗಿ ತೊಡಗಿಸಿಕೊಳ್ಳುತ್ತಾರೆ. ಇದರಿಂದ ಅವರನ್ನು ಬ್ರಿಟಿಷ್ ಸರ್ಕಾರ ಬಂಧಿಸುತ್ತದೆ. 15 ನೇ ವರ್ಷದಲ್ಲೇ ಶಿಕ್ಷೆಗೆ ಗುರಿಯಾಗುತ್ತಾರೆ. ಅವರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗುತ್ತದೆ. ಅಲ್ಲಿ ಅವರ ಹೆಸರೇನು? ಎಂದು ಪ್ರಶ್ನಿಸಲಾಗಿ, ಅವರು ತಮ್ಮ ಹೆಸರನ್ನು ಚಂದ್ರಶೇಖರ್ ಸೀತಾರಾಮ ತಿವಾರಿ ಎಂದು ಹೇಳದೆ, ‘ಆಜಾದ್’ ಎನ್ನುತ್ತಾರೆ. ಆಜಾದ್ ಎಂದರೆ ಸ್ವತಂತ್ರ ವ್ಯಕ್ತಿ ಎಂದು ಅರ್ಥ. ಇದನ್ನು ಉದ್ಧಟತನ ಎಂದು ಪರಿಗಣಿಸಿದ ಕೋರ್ಟ್ ಆಜಾದ್ ಅವರಿಗೆ 15 ಛಡಿಯೇಟು ನೀಡುವಂತೆ ಸೂಚಿಸುತ್ತದೆ. ಪ್ರತಿ ಛಡಿಯೇಟಿಗೂ ಆಜಾದರ ಬಾಯಿಂದ ಹೊರಟ ಘೋಷಣೆ ‘ಭಾರತ್ ಮಾತಾ ಕಿ ಜೈ’ ಎಂದು. ಆ ಮಟ್ಟಿನ ಭಾರತದ ಸ್ವಾತಂತ್ರ್ಯದ ಕಲ್ಪನೆ, ದೇಶವನ್ನು ಸ್ವತಂತ್ರಗೊಳಿಸಲೇ ಬೇಕು ಎಂಬ ತುಡಿತ ಆಜಾದರಲ್ಲಿತ್ತು.
ಆ ಬಳಿಕ ಆಜಾದರಲ್ಲಿ ಬ್ರಿಟಿಷರ ವಿರುದ್ಧ ಕ್ರಾಂತಿಯ ಕಿಚ್ಚು ಮತ್ತಷ್ಟು ಹೆಚ್ಚುತ್ತದೆ. ಯಾವ ದಾರಿಯಲ್ಲಾದರೂ ಸರಿ, ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲೇ ಬೇಕು ಎಂಬ ಹಠವೂ ಹೆಚ್ಚುತ್ತದೆ. ಇದಕ್ಕೆ ಮೊದಲ ಹೆಜ್ಜೆ ಎಂಬಂತೆ ‘ಹಿಂದೂಸ್ಥಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಅಸೋಸಿಯೇಷನ್’ ಎಂಬ ಸಂಘವನ್ನು ಆರಂಭಿಸುತ್ತಾರೆ. ಆಜಾದ್ ಅವರು ‘ಭಗತ್ ಸಿಂಗ್’, ‘ಸುಖದೇವ್’, ‘ಬಟುಕೇಶ್ವರ ದತ್ತ’, ‘ರಾಜಗುರು’ ಅವರಂತಹ ಸ್ವಾತಂತ್ರ್ಯ ಹೋರಾಟದ ಮಹಾನ್ ನಾಯಕರಿಗೂ ಮಾರ್ಗದರ್ಶನ ನೀಡುತ್ತಾರೆ. ಆಜಾದ್ ಅವರ ಎಚ್ಎಸ್ಆರ್ಎ ಸಂಘಟನೆ ಬ್ರಿಟಿಷರ ವಿರುದ್ಧ ಹಿಂಸಾತ್ಮಕ ಕಾರ್ಯಯೋಜನೆಗಳನ್ನು ರೂಪಿಸಿ, ಅವುಗಳನ್ನು ಕಾರ್ಯಗತಗೊಳಿಸುವ ನಿಟ್ಟಿನಲ್ಲಿಯೂ ಮಹತ್ವ ಪಡೆದಿತ್ತು.
ಹಿಂಸಾತ್ಮಕ ಹೋರಾಟಕ್ಕೆ ಆಜಾದ್ ಅವರು ಹೆಚ್ಚಿನ ಪ್ರಾಶಸ್ತ್ಯ ನೀಡುವುದಕ್ಕೂ ಅರ್ಥವಿತ್ತು. ಅವರ ಕಣ್ಣೆದುರೇ ನಡೆದ ಜಲಿಯನ್ ವಾಲಾಬಾಗ್ ಹತ್ಯಾಕಾಂಡ ಅವರಲ್ಲಿ ಅಂತಹ ಒಂದು ಮನಸ್ಥಿತಿಯನ್ನು ಸೃಷ್ಟಿಸಿತ್ತು ಎಂಬುದನ್ನು ನಾವು ಗಮನಿಸಲೇ ಬೇಕು. ತಮ್ಮ ಹೆಸರು ಆಜಾದ್ ಆಗಿರುವುದರಿಂದ ತಮ್ಮನ್ನು ಪೊಲೀಸರು ಜೀವಂತವಾಗಿ ಹಿಡಿಯುವುದು ಸಾಧ್ಯವಿಲ್ಲ ಎಂಬುದಾಗಿಯೂ ಆಜಾದ್ ಅವರು ಒಂದೊಮ್ಮೆ ಘೋಷಿಸಿಕೊಂಡಿದ್ದರು ಎಂಬುದಾಗಿ ಉಲ್ಲೇಖಗಳು ಹೇಳುತ್ತವೆ. ಅಲ್ಲದೆ ಅಲಹಾಬಾದ್ ಜನರು ಹೇಳುವಂತೆ, ಆಜಾದರ ಬಗ್ಗೆ ಓರ್ವ ಪತ್ರಕರ್ತ, ಲೇಖಕ ಪೊಲೀಸರಿಗೆ ಮಾಹಿತಿ ನೀಡುತ್ತಾನೆ. ಪೊಲೀಸರ ಜೊತೆಗೆ ನಡೆದ ಮದ್ದುಗುಂಡುಗಳ ಜೊತೆಗಿನ ಹೋರಾಟದ ಸಂದರ್ಭದಲ್ಲಿ ‘ಆಜಾದ್’ ಅವರನ್ನು ಸ್ವತಃ ಅವರೇ ಕೊಂದುಕೊಂಡರು ಎಂಬ ಕಥೆಗಳೂ ತಿಳಿದು ಬರುತ್ತವೆ.
ಚಂದ್ರಶೇಖರ್ ಆಜಾದ್ ಅವರು ಆಲ್ಫ್ರೆಡ್ ಉದ್ಯಾನವನದಲ್ಲಿದ್ದಾಗ ಪೊಲೀಸರು ದಾಳಿ ನಡೆಸುತ್ತಾರೆ. ಆ ಸಂದರ್ಭದಲ್ಲಿ ಅವರಿಗೆ ಅವರೇ ಗುಂಡು ಹೊಡೆದುಕೊಂಡು ತಮ್ಮನ್ನು ತಾವೇ ಹತ್ಯೆ ಮಾಡಿಕೊಳ್ಳುತ್ತಾರೆ. ಅವರ ನೆನಪಿಗಾಗಿ ಅವರು ಹುತಾತ್ಮರಾದ ಉದ್ಯಾನಕ್ಕೆ ‘ಚಂದ್ರಶೇಖರ್ ಆಜಾದ್’ ಎಂದು ಮರುನಾಮಕರಣ ಮಾಡಲಾಗುತ್ತದೆ. ಪ್ರಸ್ತುತ ಅವರ ಹೆಸರಿನಲ್ಲಿ ದೇಶದಾದ್ಯಂತ ಹಲವು ಶಿಕ್ಷಣ ಸಂಸ್ಥೆಗಳು, ರಸ್ತೆಗಳು ಸೇರಿದಂತೆ ಇತರ ಸಾರ್ವಜನಿಕ ಪ್ರದೇಶಗಳಿರುವುದನ್ನು ನಾವು ಕಾಣಬಹುದು. ಆಜಾದ್ ಅವರ ಬಗೆಗಿನ ರಹಸ್ಯ ಕಡತವೊಂದನ್ನು ಉತ್ತರ ಪ್ರದೇಶದ ಲಕ್ನೋದ ಗೋಖಲೆ ಮಾರ್ಗ್ ರಸ್ತೆಯಲ್ಲಿರುವ CID ಪ್ರಧಾನ ಕಚೇರಿಯಲ್ಲಿ ಸಂರಕ್ಷಿಸಿಡಲಾಗಿದೆ. ಅವರು ಬಳಕೆ ಮಾಡುತ್ತಿದ್ದ COL T ಕಂಪನಿಯ ಪಿಸ್ತೂಲ್ ಅನ್ನು ಅಲಹಾಬಾದ್ ವಸ್ತು ಸಂಗ್ರಹಾಲಯದಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ಈ ಮ್ಯೂಸಿಯಂನಲ್ಲಿ ಅವರ ಅಪರೂಪದ ಛಾಯಾಚಿತ್ರಗಳನ್ನೂ ನಾವು ಕಾಣಬಹುದಾಗಿದೆ.
ಭಾರತೀಯರಿಗೆ ಸ್ವಾತಂತ್ರ್ಯ ಪಡೆಯುವ ಕ್ರಾಂತಿಕಾರಿ ಹಾದಿಯನ್ನು ತೋರಿಸಿಕೊಟ್ಟ ಮಹನೀಯರಲ್ಲಿ ಚಂದ್ರಶೇಖರ್ ಆಜಾದ್ ಅವರೂ ಪ್ರಮುಖರು. ತಮ್ಮ ಹೋರಾಟದ ಮೂಲಕವೇ ಜನರಲ್ಲಿ ಸ್ವಾತಂತ್ರ್ಯದ ಜಾಗೃತಿ ಮೂಡಿಸಿದ ಮಹಾನ್ ದೇಶಭಕ್ತ ಆಜಾದ್. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಕೋಟ್ಯಂತರ ಭಾರತೀಯರಿಗೆ ತಮ್ಮ ಕಾರ್ಯಗಳ ಮೂಲಕವೇ ಮಾರ್ಗದರ್ಶಕರಾದ ಅವರು, ಇಂದಿಗೂ ಯುವ ಮನಗಳಲ್ಲಿ ವಿರಾಜಮಾನರಾಗಿದ್ದಾರೆ. ಅವರ ಕಾಯವಳಿದಿದೆ. ಆದರೆ ಕಾಯಕಗಳು, ತತ್ವಗಳು ಇಂದಿಗೂ ಸದ್ದು ಮಾಡುತ್ತಿವೆ. ತಾಯಿ ಭಾರತಾಂಬೆಯ ಸ್ವಾತಂತ್ರ್ಯಕ್ಕಾಗಿ ಪ್ರಾಣಾರ್ಪಣೆಗೈದ ವೀರ ಪುತ್ರನಿಗೆ ಕೋಟಿ ನಮನ.
✍️ಭುವನ ಬಾಬು
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.