ಕರ್ನಾಟಕ ಎಂದಾಕ್ಷಣ ನಮ್ಮ ಕಣ್ಣಮುಂದೆ ಬಂದು ಹೋಗುವ ಹಲವು ಮಹಾಪುರುಷರಲ್ಲಿ ಅಗ್ರಮಾನ್ಯ ಸ್ಥಾನದಲ್ಲಿರುವವರು ʼಕನ್ನಡದ ಕುಲಪುರೋಹಿತʼ ಎಂದೇ ಖ್ಯಾತನಾಮರಾದ ಆಲೂರು ವೆಂಕಟರಾಯರು. ಶ್ರೀಯುತರು ವೃತ್ತಿಯಲ್ಲಿ ವಕೀಲರು. ಪ್ರವೃತ್ತಿಯದು ಕನ್ನಡವನ್ನು, ಕರ್ನಾಟಕವನ್ನು ಕಟ್ಟುವುದು. ಕನ್ನಡ, ಕರ್ನಾಟಕದ ಬಗ್ಗೆ ಆಲೂರರ ಮಾತಿನಲ್ಲಿಯೇ ಹೇಳುವುದಾದರೆ, ʼನಾನು ಕನ್ನಡಿಗನು, ಕರ್ನಾಟಕವು ನನ್ನದು ಎಂಬ ಸದ್ವಿಚಾರ ತರಂಗಗಳಿಂದ ಯಾರ ಹೃದಯ ಆತ್ಮಾನಂದದಿಂದ ಪುಳಕಿತವಾಗುವುದಿಲ್ಲವೋ, ಕನ್ನಡ ತಾಯಿಗೆ ಈಗ ಒದಗಿ ಬಂದಿರುವ ವಿಷಮ ಸ್ಥಿತಿಯಿಂದ ಯಾರ ಹೃದಯ ತಲ್ಲಣಿಸುವುದಿಲ್ಲವೋ, ಅದು ಹೃದಯವಲ್ಲ, ಕಲ್ಲುಬಂಡೆ. ದೇಹವಲ್ಲ, ಮೋಟು ಮರʼ. ಈ ಮಾತುಗಳಲ್ಲಿಯೇ ಆಲೂರು ರಾಯರಿಗಿದ್ದ ಕನ್ನಡ ಮತ್ತು ಕರ್ನಾಟಕದ ಮೇಲಿನ ಅಭಿಮಾನ, ಪ್ರೀತಿಯ ಆಳವನ್ನು ನಾವು ಗ್ರಹಿಸುವುದು ಸಾಧ್ಯ.
ಆಲೂರು ವೆಂಕಟರಾಯರು 12 ಜುಲೈ 1880 ರಲ್ಲಿ ಬಿಜಾಪುರದಲ್ಲಿ ಜನಿಸಿದರು. ಇವರ ಪೂರ್ವಜರು ಗದಗ ಜಿಲ್ಲೆಯ ರೋಣದ ಆಲೂರಿಗೆ ಬಂದು ನೆಲೆಸಿದ ಕಾರಣ ಅವರ ಮನೆತನಕ್ಕೆ ಆಲೂರು ಎಂಬ ಹೆಸರು ಬಂದಿತು. ಇವರ ಪ್ರಾರಂಭಿಕ ಶಿಕ್ಷಣ ಧಾರವಾಡದಲ್ಲಿ, 1903 ರಲ್ಲಿ ಬಿ.ಎ. ಪದವಿಯನ್ನು ಪುಣೆಯ ಫರ್ಗೂಸನ್ ಕಾಲೇಜಿನಲ್ಲಿ, ಮುಂಬಯಿಯಲ್ಲೇ ಕಾನೂನು ಪದವಿಯನ್ನು ಪಡೆದು 1905 ರಲ್ಲಿ ವಕೀಲಿ ವೃತ್ತಿಯನ್ನು ಆರಂಭ ಮಾಡುತ್ತಾರೆ. ಆ ಬಳಿಕ ಒಂದು ಬಾರಿ ವೃಂದಾವನ, ಆನೆಗೊಂದಿಗಳನ್ನು ಸುತ್ತಿ ಹಂಪಿಗೆ ಬರುತ್ತಾರೆ. ಒಂದು ಕಾಲದಲ್ಲಿ ವೈಭವದ ನೆಲೆವೀಡಾಗಿದ್ದ ಹಂಪಿಯ ಪಾಳು ಬಿದ್ದ ಸ್ಥಿತಿ ವೆಂಕಟರಾಯರ ಮನಸ್ಸನ್ನು ಮತ್ತಷ್ಟು ಕಾಡುತ್ತದೆ. ಕನ್ನಡ ಕಟ್ಟುವ ಕಾಯಕದಲ್ಲಿ, ಕರ್ನಾಟಕದ ಗತ ವೈಭವವನ್ನು ಮರಳಿ ನೆಲೆಗೊಳಿಸುವ ನಿಟ್ಟಿನಲ್ಲಿ ಅವರ ಕಾಯಕಗಳು ಆರಂಭವಾಗುತ್ತವೆ. ಜೀವನದಲ್ಲಿ ಕ್ರಾಂತಿಯ ಮಿಂಚುಗಳು ಸಂಚರಿಸಲು ಆರಂಭವಾದವು. ಪರಿಣಾಮ ಕರ್ನಾಟಕದ ಇತಿಹಾಸ, ಸಾಹಿತ್ಯಗಳ ಅಧ್ಯಯನದಲ್ಲಿ ಆಸಕ್ತಿ ವಹಿಸಿದರು. ಕರ್ನಾಟಕ ವಿದ್ಯಾವರ್ಧಕ ಸಂಘಕ್ಕೂ ಸೇರಿಕೊಂಡರು. ಅದರ ಅಸಮರ್ಪಕ ಸ್ಥಿತಿಗತಿಗಳನ್ನು ಸಮರ್ಪಕ ಹಾದಿಗೆ ತರಲು ಅದರ ಸಂಪೂರ್ಣ ಜವಾಬ್ದಾರಿಯನ್ನು ತಮ್ಮ ಹೆಗಲಿಗೇರಿಸಿಕೊಂಡರು. ಹೀಗೆ ಆರಂಭವಾದ ಅವರ ಕನ್ನಡ ಕಟ್ಟುವ ಕೈಂಕರ್ಯ ಅವರನ್ನು ʼಕನ್ನಡದ ಕುಲಪುರೋಹಿತʼರೆಂಬ ಖ್ಯಾತಿಗೆ ತಂದಿದೆ. ಇಂದಿಗೂ ಆಲೂರು ವೆಂಕಟರಾಯರನ್ನು ನೆನಪಿಸಿಕೊಂಡರೆ ನೆನಪಾಗುವುದು ಕರ್ನಾಟಕ, ಕನ್ನಡ ಮತ್ತು ಈ ಎರಡಕ್ಕಾಗಿ ರಾಯರು ಮಾಡಿರುವ ಸತ್ಕರ್ಮಗಳು.
ಕನ್ನಡದಲ್ಲಿನ ಸಾಹಿತ್ಯಗಳ ಕೊರತೆಯನ್ನು ನೀಗಿಸುವ ದೃಷ್ಟಿಯಿಂದ ಆಲೂರರು ಕೈಗೊಂಡ ಮಹತ್ವಪೂರ್ಣ ಕಾರ್ಯಗಳನ್ನು ಮರೆಯುವಂತಿಲ್ಲ. ಕರ್ನಾಟಕದ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ಎರಡು ಬಾರಿ ಗ್ರಂಥಕರ್ತರ ಸಮಾವೇಶ ನಡೆಸುತ್ತಾರೆ. ಮುಂದೆ ಇದು ಕನ್ನಡ ಸಾಹಿತ್ಯ ಪರಿಷತ್ಗೂ ನಾಂದಿಯಾಯಿತು ಎಂಬುದು ಗಮನಾರ್ಹ. ಸಾಹಿತ್ಯ ಕೃಷಿಯಲ್ಲಿಯೂ ಅವಿರತವಾಗಿ ದುಡಿದ ಆಲೂರು ರಾಯರು ಶಿಕ್ಷಣ ಮೀಮಾಂಸೆ, ಶ್ರೀ ವಿದ್ಯಾರಣ್ಯರ ಚರಿತ್ರೆ, ಕರ್ನಾಟಕ ಗತವೈಭವ, ಕರ್ನಾಟಕದ ವೀರ ರತ್ನಗಳು, ಸಂಸಾರ ಸುಖ, ರಾಷ್ಟ್ರೀಯತ್ವದ ಮೀಮಾಂಸೆ ಹೀಗೆ ಹತ್ತು ಹಲವು ಪುಸ್ತಕಗಳನ್ನು ಪ್ರಕಟಸಿದ್ದಾರೆ. ವಾಗ್ಭೂಷಣ ಪತ್ರಿಕೆಯ ಸಂಪಾದಕರಾಗಿಯೂ ಕಾರ್ಯ ನಿರ್ವಹಿಸಿದ ಶ್ರೀಯುತರು, ಆ ಪತ್ರಿಕೆಗೆ ಹೊಸತೊಂದು ರೂಪವನ್ನೇ ನೀಡಿದ್ದರು ಎಂಬುದು ಅವರ ಕೆಲಸದ ಮೇಲಿನ ಪ್ರೀತಿಗೆ ಉದಾಹರಣೆ ಎನ್ನಬಹುದು.
1922 ರಲ್ಲಿ ಆಲೂರು ವೆಂಕಟರಾಯರು ಪ್ರಸಿದ್ಧ ಪತ್ರಿಕೆ ಜಯಕರ್ನಾಟಕವನ್ನು ಆರಂಭ ಮಾಡುತ್ತಾರೆ. ಆಲೂರರು ಕರ್ನಾಟಕಕ್ಕಾಗಿ ಯಾವ ಮಟ್ಟದಲ್ಲಿ ಹೋರಾಟ ನಡೆಸಿದ್ದರೋ, ರಾಷ್ಟ್ರೀಯತೆಯ ವಿಚಾರದಲ್ಲಿಯೂ ಅಷ್ಟೇ ಪ್ರಮಾಣದ ಹೋರಾಟ ಮನೋಭಾವ ಅವರಲ್ಲಿತ್ತು ಎಂಬುದನ್ನು ನಾವು ಮರೆಯುವಂತಿಲ್ಲ. ಇದಕ್ಕೆ ಸಾಕ್ಷಿ 1928 ರಲ್ಲಿ ಅವರು ಪ್ರಕಟಿಸಿದ ರಾಷ್ಟ್ರೀಯ ಮೀಮಾಂಸೆ ಎಂಬ ಸಣ್ಣ ಪುಸ್ತಕ. ಇದರಲ್ಲಿನ ಅವರ ಬರಹಗಳು ಅವರೊಳಗಿನ ರಾಷ್ಟ್ರೀಯತೆಯ ನಿಚ್ಚಳತೆಯನ್ನು ತೆರೆದಿಡುತ್ತದೆ ಎಂದರೆ ತಪ್ಪಾಗಲಾರದು.
ಆಲೂರು ವೆಂಕಟರಾಯರು ಸ್ವಾತಂತ್ರ್ಯದ ವೀರರಾದ ʼವೀರ ಸಾವರ್ಕರ್ʼ, ʼಬಾಲ ಗಂಗಾಧರ ತಿಲಕ್ʼ ಮೊದಲಾದವರ ಜೊತೆಗೂ ನಂಟು ಹೊಂದಿದ್ದರು. ಅವರು ಕರ್ನಾಟಕ ಅದಷ್ಟೇ ತಮ್ಮ ಕಾರ್ಯಸ್ಥಾನ ಎಂಬುದನ್ನು ಬಹುಬೇಗ ಅರ್ಥ ಮಾಡಿಕೊಂಡರು. ವೆಂಕಟರಾಯರದು ಆಧ್ಯಾತ್ಮಿಕ ಪ್ರವೃತ್ತಿ. ರಾಜಕೀಯದಿಂದ ದೂರ. ಇದಕ್ಕೆ ಸಾಕ್ಷಿ ನುಡಿಯುವಂತೆ ಅವರ ಬದುಕಿನ ಕೆಲವು ಘಟನೆಗಳೂ ನಮಗೆ ಪುಷ್ಟಿ ನೀಡುತ್ತವೆ. ಆಧ್ಯಾತ್ಮ ಎಂದರೆ ಸಾರ್ವಜನಿಕ ಜೀವನದಿಂದ ಒಂದಷ್ಟು ದೂರ ಎಂಬುದನ್ನೂ ನಾವು ಮರೆಯುವಂತಿಲ್ಲ. ಏಕೆಂದರೆ ಇದು ಎಲ್ಲರಿಗೂ ಒಪ್ಪಿತವಾಗುವ ಕ್ಷೇತ್ರವೂ ಅಲ್ಲ. ಇದನ್ನು ಎಲ್ಲರೂ ಅನುಸರಿಸುವುದಂತೂ ಅಸಾಧ್ಯ ಎಂಬುದು ಸುಳ್ಳಲ್ಲ. ಇಂತಹ ಆಧ್ಯಾತ್ಮಿಕ ಸಾಧನೆಗೆ ಒಂದಷ್ಟು ಏಕಾಂತ ಮುಖ್ಯವಾಗುತ್ತದೆ. ಅದಕ್ಕೆ ಪೂರಕವಾಗಿ 1931 ರಲ್ಲಿ ಬ್ರಿಟಿಷ್ ಸರ್ಕಾರ ಆಲೂರು ಅವರ ವಿರುದ್ಧ ಸರ್ಚ್ ವಾರಂಟ್ ಹೊರಡಿಸುತ್ತದೆ. ಅವರನ್ನು ಬಂಧಿಸುತ್ತದೆ. ಈ ಬಂಧನದ ಅವಧಿಯನ್ನು ಶ್ರೀಯುತರು ಸಂಪೂರ್ಣವಾಗಿ ತಮ್ಮ ಆಧ್ಯಾತ್ಮದ ಸಾಧನೆಗಾಗಿ ಬಳಸಿಕೊಳ್ಳುತ್ತಾರೆ. ಇದರ ಫಲ ಎಂಬಂತೆ ನಾಲ್ಕು ವಿದ್ವತ್ಪೂರ್ಣ ಗ್ರಂಥಗಳನ್ನು ಅವರು ರಚನೆ ಮಾಡಿದರು. ಮಾಧ್ವ ಧರ್ಮಾನುಯಾಯಿ ವೆಂಕಟರಾಯರು ಹಲವು ವಿಭಿನ್ನ ಮನೋಧರ್ಮವನ್ನು ಸಾರುವ ಗ್ರಂಥಗಳನ್ನು ಬರೆದರು.
ಕೊನೆಯದಾಗಿ ಹೇಳುವುದಾದರೆ, ಸಾಹಿತ್ಯದ ಕೃಷಿಯನ್ನು ಅಪಾರ ಪ್ರಮಾಣದಲ್ಲಿ ಮಾಡಿದವರಾದರೂ ಶ್ರೀಯುತರು ಎಂದಿಗೂ ತಮ್ಮನ್ನು ತಾವು ಸಾಹಿತಿ ಎಂದು ಕರೆದುಕೊಳ್ಳಲಿಲ್ಲ. ತಮ್ಮ ನಂತರವೂ ಕರ್ನಾಟಕ ಸಂಪದ್ಭರಿತವಾಗಿ ಉಳಿಯಬೇಕು ಮತ್ತು ಕನ್ನಡ ಬೆಳೆಯಬೇಕು ಎಂಬ ದೃಷ್ಟಿಯಿಂದ ಕನ್ನಡ ಕಟ್ಟುವ ಕಾಯಕವನ್ನು ನಿಸ್ವಾರ್ಥ ಮನೋಭಾವದಿಂದ ಮಾಡಿದವರು. ಆಚಾರ ನಿಷ್ಟೆಗಿಂತ ಮಿಗಿಲು ವಿಚಾರ ನಿಷ್ಟೆ ಎಂಬುದನ್ನು ನಂಬಿದವರು ಮತ್ತು ಅದರಂತೆಯೇ ಬದುಕಿದವರು.
ಇಂತಹ ಸಾರ್ಥಕ ಪುರುಷ ಆಲೂರು ವೆಂಕಟರಾಯರು 1964 ಫೆಬ್ರವರಿ 25 ರಂದು ಇಹಲೋಕ ತ್ಯಜಿಸುತ್ತಾರೆ. ಇಂದು ನಾವು ಕನ್ನಡ, ಕರ್ನಾಟಕವನ್ನು ಕಟ್ಟುವಲ್ಲಿ ಅಂದು ʼಕನ್ನಡದ ಕುಲಪುರೋಹಿತ ಆಲೂರು ವೆಂಕಟರಾಯರುʼ ಮಾಡಿದ ಕಾರ್ಯಗಳ ಫಲವಾಗಿ ಕನ್ನಡ ಇಂದು ಬೆಳೆದಿದೆ. ಕರ್ನಾಟಕ ಹೊರತುಪಡಿಸಿದಂತೆ ದೇಶ – ವಿದೇಶಗಳಲ್ಲಿಯೂ ಕನ್ನಡದ ಡಿಂಡಿಮನಾದ ಮೊಳಗುತ್ತಿದೆ ಎಂದರೆ ಅದು ಅತಿಶಯವಾಗಲಾರದು.
✍️ ಭುವನ ಬಾಬು
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.