ಆಧುನಿಕ ಕಾಲಘಟ್ಟದಲ್ಲಿ ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಾಗತೊಡಗಿದೆ. ಸುಸಜ್ಜಿತ ನಗರ ಪ್ರದೇಶಗಳಿಗೂ ವನ್ಯ ಜೀವಿಗಳ ಆಗಮನ, ಆಕ್ರಮಣ ನಡೆಯುತ್ತಿದೆ. ಕಾಡಿನ ಸಮೀಪವಿರುವ ಪ್ರದೇಶಗಳಲ್ಲಿ ಕಾಡು ಪ್ರಾಣಿಗಳ ಹಾವಳಿ ಸ್ವಾಭಾವಿಕವಾಗಿ ಹೆಚ್ಚು ಎಂದು ಹೇಳಬಹುದಿದ್ದರೂ, ಬದುಕೇ ದುಸ್ತರ ಎನ್ನುವ ಮಟ್ಟದಲ್ಲಿರಲಿಲ್ಲ. ಆದರೆ ವರ್ಷ ಕಳೆದಂತೆ ಸಮಸ್ಯೆಗಳು ಇಮ್ಮಡಿಯಾಗಲಾರಂಭಿಸಿವೆ. ಇದಕ್ಕೇನು ಪರಿಹಾರ ಎಂಬುದೇ ಸದ್ಯದ ಪ್ರಶ್ನೆಯಾಗಿದೆ ಎಂದರೂ ತಪ್ಪಾಗಲಾರದು.
ಕೆಲ ವರ್ಷಗಳ ಹಿಂದೆ ಆನೆ ಹಾವಳಿ ಹೆಚ್ಚಾದ ಸಂದರ್ಭ ಮೈಸೂರಿನ ಪ್ರಸಿದ್ಧ ವನ್ಯಜೀವಿ ಫೋಟೊಗ್ರಾಫರ್ ಓರ್ವರನ್ನು ಖಾಸಗಿ ಟಿ.ವಿ. ವಾಹಿನಿಯೊಂದು ಸಂದರ್ಶನ ಮಾಡಿತು. ಸಂದರ್ಶನದಲ್ಲಿ ತಮ್ಮ ಹವ್ಯಾಸ, ಕಾಡು ಪ್ರಾಣಿಗಳ ಸ್ವಭಾವದ ಬಗ್ಗೆ ಸವಿವರವಾಗಿ ಮಾತನಾಡಿದ ಅವರಲ್ಲಿ ಕೊನೆಯದಾಗಿ ಆನೆ ಹಾವಳಿ ತಡೆಯುವ ಬಗ್ಗೆಯೂ ಪ್ರಸ್ತಾಪಿಸಲಾಯಿತು. ಅದಕ್ಕೆ ಉತ್ತರಿಸಿದ ಅವರು, ʼಸೆಲೆಕ್ಟಿವ್ ಕಿಲ್ಲಿಂಗ್ʼ ಬಗ್ಗೆ ಹೇಳುತ್ತಾರೆ. ಅದು ಸುಲಭದ ಮಾತಲ್ಲ, ಆದರೆ ಆ ರೀತಿ ಮಾಡಿದರೆ ಒಳಿತು. ಒಂದಿಷ್ಟು ಕಠಿಣ ಎಂದು ಎನಿಸಿದರೂ? ʼಸೆಲೆಕ್ಟಿವ್ ಕಿಲ್ಲಿಂಗ್ʼ ಅಮೂಲಾಗ್ರವಾಗಿ ಯೋಚನೆಗೆ ಒಡ್ಡುವಂತಿತ್ತು. ಆನೆ ಹಾವಳಿಯು ಆನೆ ಸಂಖ್ಯೆ ಮತ್ತು ಅವುಗಳ ಸಾಂದ್ರತೆಯಿಂದ ಹೆಚ್ಚಾಗುತ್ತಿದೆ. ಹಾವಳಿಯನ್ನು ಕಡಿಮೆ ಮಾಡಲು ಕೆಲ ವೈಜ್ಞಾನಿಕ ವಿಧಾನಗಳಿವೆ. ಆದರೆ ಇಂತಹ ವೈಜ್ಞಾನಿಕ ನಿಯಮಗಳು ಕೇವಲ ಏಕಪಕ್ಷೀಯ ನಿರ್ಧಾರವಾಗುವ ಬದಲು ಸಂಬಂಧಪಟ್ಟ ಇಲಾಖೆ ಅಧಿಕೃತರು ಸೇರಿದಂತೆ ಪರಿಸರ ವಿಜ್ಞಾನಿಗಳು, ಕಾಡು ಪ್ರಾಣಿ ಸಮಸ್ಯೆಗೆ ಒಳಗಾದವರು ಜೊತೆಯಲ್ಲಿ ಕುಳಿತುಕೊಂಡು ಚರ್ಚಿಸಬೇಕಿದೆ. ಇಂತಹ ಮಾತುಕತೆ ಸಹಿತ ಸಮಸ್ಯೆಗಳನ್ನು ಬಗೆಹರಿಸುವ ಬಗ್ಗೆಗಿನ ಮಾತುಕತೆಗೆ ವೇದಿಕೆ ಸೃಷ್ಠಿಯಾಗುತ್ತಿಲ್ಲ. ಸಮಸ್ಯೆ ಬಗೆಹರಿಸಲು ನೋಡದಿದ್ದರೆ ಈ ಸಮಸ್ಯೆ ಇನ್ನಷ್ಟು ದೊಡ್ಡದಾಗಿ ಪರಿಣಮಿಸಲಿದೆ ಎಂದಿದ್ದರು.
ವೈಜ್ಞಾನಿಕ ರೀತಿಗಳಲ್ಲಿ ಕಾಡು ಪ್ರಾಣಿಗಳ ಸಂಖ್ಯೆಯನ್ನು ಹತೋಟಿಯಲ್ಲಿಡಲು ಅನುಸರಿಸಬಹುದಾದ ಕ್ರಮಗಳೆಂದರೆ ಒಂದು ಸಂತಾನ ಹರಣ, ಮತ್ತೊಂದು ಅಷ್ಟೊಂದು ಪ್ರಬಲವಲ್ಲದಿರುವ ಮುದಿಯಾದ ಕಾಡುಪ್ರಾಣಿಗಳನ್ನು ಇಲ್ಲವಾಗಿಸುವ ತಂತ್ರವಾಗಿದೆ, ಇದರಿಂದ ಒಂದು ನಿರ್ದಿಷ್ಟ ಅರಣ್ಯ ಪ್ರದೇಶದಲ್ಲಿ ಲೆಕ್ಕಕ್ಕಿಂತ ಹೆಚ್ಚು ಆನೆಗಳು ಇರದೆ ಸಮತೋಲನ ಏರ್ಪಡುತ್ತದೆ ಮಾತ್ರವಲ್ಲ, ಪ್ರಾಣಿಗಳಿಗೆ ಆಹಾರ ಕ್ಷಾಮವೂ ಉಂಟಾಗುದಿಲ್ಲ ಎಂಬುದು. ಸಸ್ಯಗಳನ್ನೇ ಅವಲಂಬಿಸಿರುವ ಪ್ರಾಣಿಗಳಿಗೆ ಸಾಕಷ್ಟು ಹಸಿರು ಆಹಾರ ಲಭ್ಯವಾಗುತ್ತದೆ, ಮಾತ್ರವಲ್ಲ ಬಿರುಬೇಸಗೆಯಲ್ಲಿ ನೀರಿನ ಅಭಾವ ಉಂಟಾಗದು. ಆದರೆ ಪರಿಸರವಾದಿಗಳು, ಪ್ರಾಣಿ ದಯಾ ಸಂಘಗಳು ಇಂತಹ ಕಠೋರ ನಿಯಮಗಳನ್ನು ಅಳವಡಿಕೆಗೆ ಅಡ್ಡ ಬಂದಾರೋ ಎಂಬ ಅಂಶವೂ ಸ್ವಾಭಾವಿಕವಾಗಿದೆ.
ವರ್ಷಗಳ ಹಿಂದೆ ರಾಷ್ಟ್ರೀಯ ಪ್ರಾಣಿಯಾಗಿರುವ ಹುಲಿಗಳ ಸಂಖ್ಯೆ ಕಡಿಮೆಯಾಗತೊಡಗಿದೆ ಎಂಬ ಕೂಗು ಕೇಳಿ ಬರುತ್ತಿತ್ತು. ಕಾಡಿನೊಳರುವ ದೊಡ್ಡ ಬೆಕ್ಕುಗಳ ಸಂಖ್ಯೆ ಸಾವಿರಕ್ಕೂ ಕಡಿಮೆಯಿದೆ. ಅವುಗಳ ರಕ್ಷಣೆ ಆಗದಿದ್ದರೆ ಹುಲಿಗಳೇ ಇಲ್ಲದಾಗಿಬಿಡುತ್ತವೆ. ಇದರಿಂದ ಕಾರ್ಯತತ್ಪರವಾದ ಕೇಂದ್ರ ಸರಕಾರ ಹುಲಿ ಸಂಖ್ಯೆ ವೃದ್ಧಿಗೆ ಅಭಿಯಾನವನ್ನು ಕೈಗೊಂಡು ಯಶಸ್ವಿಯಾಗಿದೆ. ಪ್ರಸ್ತುತ ಕಾಡಿನ ಅಮೂಲ್ಯ ಪ್ರಾಣಿ ಸಂಕುಲವನ್ನು ಹಣದ ಆಸೆಗೆ ನಾಶ ಮಾಡುವ ಪ್ರಕ್ರಿಯೆಗೆ ಬ್ರೇಕ್ಬಿದ್ದಿದೆ. ಹುಲಿಯ ಚರ್ಮ, ಉಗುರು, ಮೂಳೆ ಹೀಗೆ ವಿವಿಧ ಅವಯವಗಳ ಮೇಲೆ ಆಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಡಿಕೆ ಬಂದಿದ್ದಾಗ ದೇಶದ ಕಾಡಿನೊಳಗಿದ್ದ ಹುಲಿರಾಯನ ಸಂಖ್ಯೆಯೂ ಹಂತಕರಿಂದಾಗಿ ಕಡಿಮೆಯಾಗತೊಡಗಿತ್ತು. ಪ್ರಸ್ತುತ ಮಾನವ ವನ್ಯಜೀವಿ ಸಂಘರ್ಷಗಳು ಮಗದೊಂದು ಮಜಲನ್ನು ತಲುಪಿದೆ. ಹಗಲಲ್ಲೇ ಕಾಡು ಪ್ರಾಣಿಗಳು ನಗರ ಭಾಗಗಳಲ್ಲಿ, ಜನವಸತಿ ಕೇಂದ್ರಗಳಲ್ಲಿ ಕಾಣಿಸಿಕೊಳ್ಳುತ್ತಿವೆ.
ಕರ್ನಾಟಕ ರಾಜ್ಯದಲ್ಲಿ ಇತ್ತೀಚೆಗೆ ನಡೆದ ಕೆಲ ಘಟನೆಗಳು ಮಾನವ ವನ್ಯಜೀವಿ ಸಂಘರ್ಷ ವಿಚಾರದತ್ತ ಚರ್ಚೆ ನಡೆಸಲು ವೇದಿಕೆ ರೂಪಿಸಿವ ಎಂಬಂತಾಗಿದೆ. ಮಡಿಕೇರಿಯಲ್ಲಿ ಕೂಲಿ ಕಾರ್ಮಿಕನ ಮೇಲೆ ಎರಗಿದ ಹುಲಿಯೊಂದು ಆತನನ್ನು ಗಾಯಗೊಳಿಸಿದ ಘಟನೆ, ಓರ್ವನನ್ನು ಕೊಂದ ಬಗ್ಗೆ ವರದಿ ಇತ್ತೀಚೆಗೆ ಪ್ರಕಟವಾಗಿತ್ತು. ಸುಬ್ರಹ್ಮಣ್ಯ ಸಮೀಪ ಜನ ವಸತಿ ಪ್ರದೇಶಕ್ಕೆ ಚಿರತೆ ಆಗಮಿಸಿದ ಸಂದರ್ಭದಲ್ಲಿ ಎಚ್ಚೆತ್ತ ಇಲಾಖೆ ಅಧಿಕೃತರು ಚಿರತೆ ಬಂಧಿಸುವ ಯತ್ನದಲ್ಲಿ ವಿಫಲರಾದರು. ರಾಜ್ಯದಲ್ಲಿ ಆನೆ ಹಾವಳಿ ನಿರಂತರವಾಗಿ ನಡೆಯುವ ಪ್ರದೇಶಗಳು ಹಲವಿವೆ. ಅರಣ್ಯ ಪ್ರದೇಶಕ್ಕೆ ತಾಗಿ ಕೊಂಡಿರುವ ಕಬ್ಬು ರೈತರಿಗೆ ರಾತ್ರಿ ಪಾಳಿಯಲ್ಲೂ ಕೆಲಸ ಮಾಡುವ ದುರ್ದೈವ. ಇನ್ನು ಕಾಟಿ, ಕಡವೆ, ಕಾಡು ಹಂದಿ ಉಪಟಳವಂತೂ ಸರ್ವೇಸಾಮಾನ್ಯ ಎನ್ನುವಂತಾಗಿದೆ.
ಮಾನವ- ಪ್ರಾಣಿ ಸಂಘರ್ಷದ ಉತ್ತಮ ಉದಾಹರಣೆಯಾಗಿ ಜುನಾಘಡದಲ್ಲಿ ಅಪಾರ್ಟಮೆಂಟ್ನಿಂದ ಹೊರಗೆ ತೆರಳುತ್ತಿರುವ ಸಿಂಹ ಹಾಗೂ ಅಲ್ಲಿನ ಗೇಟನ್ನು ಜಿಗಿಯುತ್ತಿರುವ ದೃಶ್ಯ ವೈರಲ್ ಆಗಿದ್ದು, ಪ್ರಸ್ತುತ ಹೆಚ್ಚಾಗುವ ಹಂತದಲ್ಲಿನ ಮಾನವ ವನ್ಯಜೀವಿ ಸಂಘರ್ಷಕ್ಕೆ ಉತ್ತಮ ಉದಾಹರಣೆಯಾಗಿದೆ. ಇಂತಹ ಸಮಸ್ಯೆಗಳಿಗೆ ಸಮರ್ಪಕ ಪರಿಹಾರವನ್ನು ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳುವತ್ತ ಹೆಜ್ಜೆ ಇರಿಸಬೇಕಾದ ಅಗತ್ಯತೆ, ಅನಿವಾರ್ಯತೆ ಸದ್ಯದ ಆದ್ಯತೆಯಾಗಿದೆ.
✍️ವಿವೇಕಾದಿತ್ಯ ಕೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.