ಚಿಕ್ಕಬಳ್ಳಾಪುರ: ಅಕ್ರಮ ಗಣಿಗಾರಿಕೆ ನಡೆಸುತ್ತಿರುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ರಾಜ್ಯ ಸರ್ಕಾರ ಈ ಹಿಂದೆಯೇ ಸೂಚನೆ ನೀಡಿದೆ ಎಂದು ಎಡಿಜಿಪಿ ಪ್ರತಾಪ ರೆಡ್ಡಿ ತಿಳಿಸಿದ್ದಾರೆ.
ಅವರು ಚಿಕ್ಕಬಳ್ಳಾಪುರದಲ್ಲಿ ಜಿಲೆಟಿನ್ ಸ್ಫೋಟ ನಡೆದ ಪ್ರದೇಶಕ್ಕೆ ತೆರಳಿ ಪರಿಶೀಲನೆ ನಡೆಸಿ ಮಾತನಾಡಿದರು. ಈ ಸ್ಫೋಟದಲ್ಲಿ ಈಗಾಗಲೇ ಐವರು ಮೃತಪಟ್ಟಿದ್ದು, ಮತ್ತೋರ್ವನೂ ಮೃತಪಟ್ಟಿರುವ ಬಗ್ಗೆ ಶಂಕೆಗಳು ವ್ಯಕ್ತವಾಗಿದೆ. ಈ ದುರಂತದಲ್ಲಿ ಗಾಯಗೊಂಡಿರುವ ಚಾಲಕನನ್ನು ವಶಕ್ಕೆ ಪಡೆಯಲಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆತನನ್ನು ವಿಚಾರಣೆ ನಡೆಸುವುದಾಗಿಯೂ ಪ್ರತಾಪ ರೆಡ್ಡಿ ತಿಳಿಸಿದ್ದಾರೆ.
ಶಿವಮೊಗ್ಗದ ಕ್ವಾರಿಯಲ್ಲಿ ಕೆಲ ಸಮಯದ ಹಿಂದೆ ಜಿಲೆಟಿನ್ ಸ್ಫೋಟ ನಡೆದಿತ್ತು. ಅದಾದ ಬಳಿಕ ಅನಧಿಕೃತ ಕೋರೆಗಳ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮತ್ತು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು ಸೂಚನೆ ನೀಡಿದ್ದರು. ಅದಕ್ಕೆ ಅನುಗುಣವಾಗಿ ಜಿಲ್ಲೆಯಲ್ಲಿಯೂ ಕ್ವಾರಿಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಗಿದೆ ಎಂದು ಹೇಳಿದ್ದಾರೆ.
ಸದ್ಯ ಜಿಲೆಟಿನ್ ಸ್ಫೋಟ ನಡೆದಿರುವ ಕ್ವಾರಿ ಅಧಿಕೃತವಾಗಿದ್ದರೂ, ಸ್ಫೋಟಕ ವಸ್ತುಗಳ ನಿಯಮವನ್ನು ಕ್ವಾರಿಯ ಮಾಲಕರು ಉಲ್ಲಂಘನೆ ಮಾಡಿದ್ದಾರೆ. ಈ ಹಿನ್ನಲೆಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ರೆಡ್ಡಿ ಹೇಳಿದ್ದಾರೆ. ಸತತವಾಗಿ ನಡೆಯುತ್ತಿರುವ ಪೊಲೀಸ್ ದಾಳಿಯ ಭೀತಿಯಿಂದ ಅಕ್ರಮವಾಗಿ ಶೇಖರಿಸಿದ ಸ್ಫೋಟಕಗಳ ಸಾಗಾಟ ಸಂದರ್ಭದಲ್ಲಿ ಈ ಸ್ಫೋಟ ನಡೆದಿದೆ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.