ಪುತ್ತೂರು: ಜೀವನದಲ್ಲಿ ಪ್ರಯತ್ನಪಟ್ಟರೆ ಅಸಾಧ್ಯವಾದುದನ್ನು ಸಾಧ್ಯವಾಗಿಸಬಹುದು ಎಂಬುದಕ್ಕೆ ನ್ಯಾ. ರಾಮಾ ಜೋಯಿಸ್ ಅವರ ಜೀವನವೇ ಉದಾಹರಣೆ. ರಾಮಾ ಜೋಯಿಸ್ ಅವರ ಇಚ್ಛಾಶಕ್ತಿ ನಮಗೆಲ್ಲ ಪ್ರೇರಣೆ ಎಂದು ಹೊಸದಿಗಂತ ದಿನಪತ್ರಿಕೆಯ ಹಿರಿಯ ಪತ್ರಕರ್ತ ದು. ಗು. ಲಕ್ಷ್ಮಣ ಅವರು ಹೇಳಿದರು.
ವಿವೇಕಾನಂದ ವಿದ್ಯಾವರ್ಧಕ ಸಂಘ ಮತ್ತು ವಿವೇಕಾನಂದ ಕಾನೂನು ಕಾಲೇಜಿನ ಸಹಯೋಗದಲ್ಲಿ ಕಾಲೇಜಿನ ಸಭಾಂಗಣದಲ್ಲಿ ನಡೆದ ದಿವಂಗತ ನ್ಯಾ. ರಾಮಾ ಜೋಯಿಸ್ ಅವರ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿ, ನ್ಯಾಯವಾದಿಯಾಗಿ, ನ್ಯಾಯಮೂರ್ತಿಯಾಗಿ, ಲೇಖಕರಾಗಿ, ರಾಜ್ಯಸಭಾ ಸದಸ್ಯರಾಗಿ, ಹೀಗೆ ಹಲವು ಕ್ಷೇತ್ರಗಳಲ್ಲಿ ಅವರು ಮಾಡಿರುವ ಸಾಧನೆ ನಮಗೆಲ್ಲ ಪ್ರೇರಣೆ ಎಂದು ಹೇಳಿದರು.
ನನ್ನ ಹಾಗೂ ನ್ಯಾ. ರಾಮಾ ಜೋಯಿಸ್ ಅವರ ನಂಟು ಆರಂಭವಾಗಿದ್ದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೂಲಕ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರಾಗಿದ್ದ ರಾಮಾ ಜೋಯಿಸ್ ಅವರನ್ನು ಯಾದವ್ರಾವ್ ಜೋಷಿಯವರು ಕಾನೂನು ಶಿಕ್ಷಣ ಕಲಿಯಲು ಬೆಂಗಳೂರಿಗೆ ಕರೆದುಕೊಂಡು ಬಂದರು. ಅದುವೇ ರಾಮಾ ಜೋಯಿಸ್ ಅವರ ಜೀವನಕ್ಕೆ ತಿರುವು ನೀಡಿತು. ವಿಕ್ರಮ ವಾರಪತ್ರಿಕೆಯಲ್ಲಿ ಕೆಲಸ ಮಾಡಿಕೊಂಡು ತನ್ನ ಕಾನೂನು ವಿದ್ಯಾಭ್ಯಾಸವನ್ನು ಪೂರೈಸಿದರು. ನಂತರ ನ್ಯಾಯವಾದಿಯಾಗಿ ವೃತ್ತಿ ಅರಂಭಿಸಿದಾಗ ಕೈಗೆ ತೆಗೆದುಕೊಂಡ ಮೊಕದ್ದಮೆಗಳಲ್ಲಿ ಗೆಲುವು ಸಿಗಲು ಆರಂಭಿಸಿದಾಗ ವೃತ್ತಿ ಬದುಕಿನಲ್ಲಿ ಉತ್ತುಂಗಕ್ಕೆ ಏರಲಾರಂಭಿಸಿದರು. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಬಂಧಿತರಾಗಿದ್ದ ವಾಜಪೇಯಿ, ಅಡ್ವಾಣಿಯವರ ಪರವಾಗಿ ವಾದಿಸಿದ್ದರು. ಆ ಹಂತದಲ್ಲಿ 21 ದಿನಗಳ ಕಾಲ ಜೈಲುವಾಸವನ್ನು ಅನುಭವಿಸಿದ್ದರು. ನಂತರ ಜನತಾ ಪಕ್ಷದ ಸರ್ಕಾರದಲ್ಲಿ ಕರ್ನಾಟಕ ಹೈಕೋರ್ಟ್ನ ನ್ಯಾಯಾಧೀಶರಾಗಿ ನೇಮಕಗೊಂಡು ಹಲವು ನಿಷ್ಪಕ್ಷಪಾತ ತೀರ್ಪುಗಳನ್ನು ಕೊಡುವಲ್ಲಿ ಯಶಸ್ವಿಯಾದವರು ರಾಮಾ ಜೋಯಿಸರು ಎಂದು ಅವರು ನುಡಿದರು.
ಜೀವನದ ನಂತರದ ಕಾಲಘಟ್ಟದಲ್ಲಿ ಕಾನೂನು ಕ್ಷೇತ್ರಕ್ಕೆ ಉಪಯೋಗವಾಗುವಂತಹ ಹಲವಾರು ಪುಸ್ತಕಗಳನ್ನು ಬರೆದರು. ವೃತ್ತಿಯಿಂದ ನಿವೃತ್ತರಾದ ಬಳಿಕ ರಾಜ್ಯಸಭಾ ಸದಸ್ಯರಾಗಿಯೂ ಕಾರ್ಯ ನಿರ್ವಹಿಸಿ ಹಲವರಿಗೆ ಆದರ್ಶಪ್ರಾಯರಾದರು. ಹೀಗೆ ಹಲವು ವಿಚಾರಗಳಲ್ಲಿ ದಿ. ರಾಮಾ ಜೋಯಿಸ್ ಅವರು ನಮಗೆಲ್ಲರಿಗೂ ಆದರ್ಶಪ್ರಾಯ ಎಂದು ಹೇಳಿದರು.
ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಕೆ. ಎಂ. ಕೃಷ್ಣ ಭಟ್, ಕಾನೂನು ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ವಿಶ್ವೇಶ್ವರ ಭಟ್ ಬಂಗಾರಡ್ಕ, ಕಾನೂನು ಅಧ್ಯಯನ ವಿಭಾಗದ ನಿರ್ದೇಶಕ ಡಾ. ಬಿ. ಕೆ. ರವೀಂದ್ರ ಅವರು ಉಪಸ್ಥಿತರಿದ್ದರು.
ಉಪನ್ಯಾಸಕ ಕುಮಾರ್ ಶೇಣಿ ಕಾರ್ಯಕ್ರಮ ನಿರ್ವಹಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.