ಇತಿಹಾಸವು ತನ್ನೊಳಗೆ ಅನೇಕ ವಿಚಾರಗಳನ್ನು ಹುದುಗಿಸಿ ಇರಿಸುತ್ತದೆ. ವರ್ಷಗಳಲ್ಲಿ ಅನೇಕ ವ್ಯಕ್ತಿಗಳು ಮತ್ತು ವಿಚಾರಗಳು ವಿಜೃಂಭಿಸಲ್ಪಟ್ಟರೆ, ಅನೇಕ ಮಹತ್ವಪೂರ್ಣ ವಿಚಾರಗಳು ವ್ಯಕ್ತಿಗಳು ಎಲೆಮರೆಯ ಕಾಯಿಯಂತೆಯೇ ಗುರುತಿಸಲ್ಪಡದೆ ಉಳಿದುಹೋಗುತ್ತಾರೆ. ನಮ್ಮ ದೇಶವನ್ನು ಹತ್ತಾರು ವರ್ಷಗಳ ಕಾಲ ಆಡಳಿತ ನಡೆಸಿದ ವ್ಯಕ್ತಿಗಳು ಮತ್ತು ಇತಿಹಾಸ ಪುಸ್ತಕಗಳನ್ನು, ಪಠ್ಯ ಪುಸ್ತಕಗಳನ್ನು ರಚಿಸಿದ ವ್ಯಕ್ತಿಗಳು ಕೂಡಾ ಕೆಲವೇ ಕೆಲವು ವ್ಯಕ್ತಿಗಳನ್ನು ವಿಜೃಂಭಿಸಿ ಉಳಿದವರನ್ನು ಬಹುತೇಕ ಕಡೆಗಣಿಸಿದರು. ಸ್ವಾತಂತ್ರ್ಯ ಹೋರಾಟವೆಂಬ ಯಜ್ಞದಲ್ಲಿ ಹಲವಾರು ಅಮೂಲ್ಯ ರತ್ನಗಳು ಸಮಿಧೆಯಂತೆ ಉರಿದಿದ್ದಾರೆ. ಆದರೆ ನೂರರಲ್ಲಿ ತೊಂಭತ್ತೊಂಭತ್ತು ಜನರಿಗೆ 10 ಕ್ಕಿಂತ ಹೆಚ್ಚಿನ ಸ್ವಾತಂತ್ರ್ಯ ಹೋರಾಟಗಾರರ ಹೆಸರು ತಿಳಿದಿಲ್ಲ. ಇದಕ್ಕೆ ಕಾರಣ ಯಾರು? ನಾವೇಕೆ ಇತರ ಸ್ವಾತಂತ್ರ್ಯ ಹೋರಾಟಗಾರರ ಕುರಿತು ಅರಿಯುವತ್ತ ಪ್ರಯತ್ನವನ್ನೇ ಮಾಡುವುದಿಲ್ಲ. ಇತಿಹಾಸದ ಪುಟಗಳಿಂದ ಮರೆಯಾದ ಅಪ್ರತಿಮ ಕ್ರಾಂತಿಕಾರಿ ವೀರಪುತ್ರಿ ಬಂಗಾಳದ ದಿಟ್ಟ ಹೆಣ್ಣು “ಬಿನಾ ದಾಸ್” ಎಂಬ ಸ್ವಾತಂತ್ರ್ಯ ಸೇನಾನಿ ನಮಗೆ ಇಂದಿಗೂ ಅಪರಿಚಿತೆ.
ಬ್ರಿಟೀಷರ ದಬ್ಬಾಳಿಕೆಗೆ ಒಳಗಾಗಿ ನರಳುತ್ತಿದ್ದ ಬಡ ಜನರನ್ನು ಕಂಡು ಮಮ್ಮಲ ಮರುಗುತ್ತಿದ್ದ ಹೃದಯದ ಯುವತಿ ಸ್ವಾತಂತ್ರ್ಯದ ಕನಸನ್ನು ಕಂಡು, ಅದನ್ನು ನನಸಾಗಿಸಲು ಶಸ್ತ್ರ ಹಿಡಿದಾಗ ಆಕೆಯ ವಯಸ್ಸು ಕೇವಲ 21. ಹೆಸರಾಂತ ಬ್ರಹ್ಮ ಶಿಕ್ಷಕ ಬೇನಿ ಮಾಧಬ್ ದಾಸ್ ಮತ್ತು ಸಮಾಜ ಸೇವಕಿ ಸರಳಾ ದೇವಿ ದಾಸ್ರ ಮಗಳಾದ ಬಿನಾ ದಾಸ್ 1911 ರ ಆಗಸ್ಟ್ 24 ರಂದು ಬಂಗಾಳದ ಕೃಷ್ಣಾ ನಗರದಲ್ಲಿ ಜನಿಸಿದರು. ಬಿನಾ ದಾಸ್ರ ಅಕ್ಕ ಕಲ್ಯಾಣಿ ದಾಸ್ ಕೂಡಾ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಬಿನಾ ದಾಸ್ ಸಂತ ಜಾನ್ಸ್ ಡಯೋಸೀಸಸ್ ಬಾಲಕಿಯರ ಶಾಲೆಯಲ್ಲಿ ತನ್ನ ಪ್ರಾಥಮಿಕ ಶಿಕ್ಷಣವನ್ನು ಪೂರ್ಣಗೊಳಿಸಿದ ಬಳಿಕ 1928 ರಲ್ಲಿ ಮಹಿಳಾ ವಿದ್ಯಾರ್ಥಿ ಸಂಘವನ್ನು ಸೇರಿಕೊಂಡರು. ಇದು ಕಲ್ಕತ್ತಾದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬ್ರಹ್ಮೋ ಬಾಲಕಿಯರ ಶಾಲೆಯಾಗಿದ್ದು ಹಲವು ಶಾಲಾ ಕಾಲೇಜುಗಳ 100 ಸದಸ್ಯರ ಒಂದು ಗುಂಪು. ಇದು ಭವಿಷ್ಯದ ಕ್ರಾಂತಿಕಾರಿಗಳ ತಯಾರು ಶಾಲೆಯಾಗಿದ್ದು ಇಲ್ಲಿ ವಿದ್ಯಾರ್ಥಿಗಳಿಗೆ ಲಾಠಿ, ಖಡ್ಗ, ಸೈಕಲಿಂಗ್ ಮತ್ತು ಮೋಟಾರು ಚಾಲನೆಗಳನ್ನು ಕಲಿಸಲಾಗುತ್ತಿತ್ತು. ಈ ಗುಂಪಿನಲ್ಲಿ ಹಲವರು ಸ್ವಾತಂತ್ರ ಹೋರಾಟಗಾರರು ತಮ್ಮ ಮನೆಯನ್ನು ತೊರೆದು ಬಿನಾ ಮತ್ತು ಕಲ್ಯಾಣಿ ಅವರ ತಾಯಿ ಸರಳಾದೇವಿಯವರು ಸ್ಥಾಪಿಸಿದ್ದ ಪುಣ್ಯಾ ಆಶ್ರಮ ಎಂಬ ವಸತಿ ನಿಲಯದಲ್ಲಿ ನೆಲೆಸಿದ್ದರು. ಪೊಲೀಸರ ತಪಾಸಣೆಯಿಂದ ರಕ್ಷಣೆಯನ್ನು ಪಡೆಯುವ ಉದ್ದೇಶದಿಂದ ಮದ್ದುಗುಂಡುಗಳು ಮತ್ತು ಸ್ಫೋಟಕಗಳನ್ನೂ ಈ ಆಶ್ರಮದಲ್ಲಿ ಮರೆಮಾಚಿ ಇರಿಸಲಾಗಿತ್ತು.
ಗವರ್ನರ್ರ ಮೇಲೆ ಗುಂಡು ಹಾರಿಸಲು ಬಿನಾ ಬಳಸಿದ ರಿವಾಲ್ವರ್ ಮತ್ತು ಬಾಂಬುಗಳನ್ನು ಕ್ರಾಂತಿಕಾರಿ ಕಮಲಾ ದಾಸ್ ಗುಪ್ತಾ ಅವರು ಇದೆ ಆಶ್ರಮಕ್ಕೆ ಸರಬರಾಜು ಮಾಡಿದ್ದರು. ಬಿನಾ ದಾಸ್ ಫೆಬ್ರವರಿ 6, 1932 ರಂದು ವಿಶ್ವ ವಿದ್ಯಾಲಯಕ್ಕೆ ಕಾಲಿರಿಸಿದ್ದರು. ಅಂದು ಅಲ್ಲಿ ಸಮಾವೇಶವೊಂದರಲ್ಲಿ ಅಂದಿನ ಬಂಗಾಳದ ರಾಜ್ಯಪಾಲರಾದ ಸ್ಟಾನ್ಲಿ ಜಾಕ್ಸನ್ ಅವರು ಭಾಷಣ ಮಾಡುತ್ತಿದ್ದರು. ರಾಜ್ಯಪಾಲರು ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದಂತೆಯೇ ತನ್ನ ಆಸನದಿಂದೆದ್ದ ಬೀನಾ ರಿವಾಲ್ವರ್ ಅನ್ನು ಹೊರತೆಗೆದು ರಾಜ್ಯಪಾಲರ ಮೇಲೆ ಗುಂಡು ಹಾರಿಸಿದಳು. ಸಾಮಾನ್ಯ ಅಂಜುಬುರುಕ ಹೆಣ್ಣುಮಗಳಂತೆ ಕಾಣಿಸುವ ಬಿನಾ ದಾಸ್ ರಿವಾಲ್ವರ್ ತಂದಿರಬಹುದೆಂದು ಯಾರೂ ಊಹಿಸಿರಲು ಸಾಧ್ಯವಿರಲಿಲ್ಲ. ಮೊದಲ ಎರಡು ಗುಂಡುಗಳಿಂದ ರಾಜ್ಯಪಾಲರನ್ನು ಉಪಕುಲಪತಿಯಾಗಿದ್ದ ಹಾಸನ್ ಸುಹ್ರಾವಾದಿ ರಕ್ಷಿಸಿದರು ಮಾತ್ರವಲ್ಲದೆ ಅವರು ಬೀನಾಳನ್ನು ಹಿಂದೂಡಲು ಪ್ರಯತ್ನಿಸುತ್ತಿದ್ದರೂ ಸಹಾ ಬಿನಾ ಗುಂಡು ಹಾರಿಸುವುದನ್ನು ನಿಲ್ಲಿಸಲಿಲ್ಲ. ಅವಳು ರಿವಾಲ್ವರ್ನಲ್ಲಿ ಗುಂಡುಗಳು ಖಾಲಿಯಾಗುವವರೆಗೂ ಉಳಿದ ಮೂರೂ ಗುಂಡುಗಳನ್ನು ಹೊಡೆದಳು. ಅವುಗಳಲ್ಲಿ ಒಂದು ಗುಂಡು ರಾಜ್ಯಪಾಲರ ಕಿವಿಯನ್ನು ಸೋಕಿತ್ತು ಮತ್ತು ಹಿರಿಯ ಪ್ರಾಧ್ಯಾಪಕರಾದ ಡಾ. ದಿನೇಶ್ ಚಂದ್ರ ಸೇನ್ ಈ ಸಂದರ್ಭದಲ್ಲಿ ಗಾಯಗೊಂಡರು. ಘಟನೆಯ ತರುವಾಯೂ ಬಿನಾ ದಾಸ್ ಅನ್ನು ಬಂಧಿಸಿ ಆಕೆಗೆ 9 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಲಾಯಿತು. ವಿಚಾರಣೆಯ ಸಂದರ್ಭದಲ್ಲಿ ತನ್ನ ಸಹಚರರ ಹೆಸರನ್ನು ಹೇಳುವಂತೆ ಎಷ್ಟೇ ಒತ್ತಡ ಹೇರಿದ್ದರೂ ಆಕೆ ಯಾರ ಹೆಸರನ್ನೂ ಹೇಳಲಿಲ್ಲ.
ಆದರೆ ದೌರ್ಜನ್ಯ ಮತ್ತು ಅವಮಾನಗಳ ಹೊರತಾಗಿಯೂ ಬಿನಾ ಸ್ವಾತಂತ್ರಕ್ಕಾಗಿ ಹೋರಾಡುವುದನ್ನು ನಿಲ್ಲಿಸಲಿಲ್ಲ. ಜೈಲಿನಿಂದ ಬಿಡುಗಡೆ ಹೊಂದಿದ ಬಳಿಕ ಅವರು ಮಹಾತ್ಮಾ ಗಾಂಧಿ ನೇತೃತ್ವದ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿದರು, ಕ್ರಾಂತಿಕಾರಿಗಳ ಗುಂಪಾದ ಜುಗಂತರ್ಗೆ ಸೇರಿಕೊಂಡರು. ಅವರು ಕಲ್ಕತ್ತಾ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿಯಾಗಿದ್ದಾಗ ಮೂರು ವರ್ಷಗಳ ಜೈಲುಶಿಕ್ಷೆಯನ್ನೂ ಅನುಭವಿಸಿದ್ದರು. 1947 ರಲ್ಲಿ ತನ್ನ ಸಹ ಸ್ವಾತಂತ್ರ ಹೋರಾಟಗಾರ ಜ್ಯೋತಿಷ್ ಭೌಮಿಕ್ ಅವರನ್ನು ವಿವಾಹವಾದ ಬಳಿಕವೂ ಸ್ವಾತಂತ್ರ ದೊರಕುವವರೆಗೂ ಹೋರಾಡುತ್ತಿದ್ದರು.
ಮಕರಂದ ಪರಾಂಜಪೆಯವರ ಕೃತಿಯಲ್ಲಿ ಅವರು ಹೀಗೆ ಬರೆಯುತ್ತಾರೆ “ತನ್ನ ಸಹಚರರೊಂದಿಗೆ ಬಿನಾ ಉಪವಾಸ ಸತ್ಯಾಗ್ರಹ ಮಾಡುವ ಮೂಲಕ ಅವರ ನೋವು ಸಹಿಸುವ ಶಕ್ತಿಯನ್ನು ಪರೀಕ್ಷಿಸುತ್ತಿದ್ದಳು. ತನ್ನ ಪಾದಗಳನ್ನು ವಿಷಕಾರಿ ಇರುವೆಗಳ ಗೂಡಿನಲ್ಲಿ ಇರಿಸುತ್ತಿದ್ದಳು ಅಥವಾ ಬೆಂಕಿಯ ಜ್ವಾಲೆಯೊಳಗೆ ಬೆರಳುಗಳನ್ನು ಇಡುತ್ತಿದ್ದಳು… ಹೀಗೆ ಅಕ್ಷರಸಹ ತನ್ನ ಸಹನಾ ಶಕ್ತಿಯನ್ನೂ ಪರೀಕ್ಷಿಸಿಕೊಳ್ಳುತ್ತಿದ್ದಳು”
ಸ್ವಾತಂತ್ರ್ಯ ದೊರಕಿದ ಬಳಿಕ ತನ್ನ ಕರ್ತವ್ಯ ಮುಗಿಯಿತೆಂದು ಪತಿಯೊಂದಿಗೆ ನೆಮ್ಮದಿಯ ಸಂಸಾರ ನಡೆಸುವ ಬದಲಾಗಿ ಪತಿ ಪತ್ನಿಯರಿಬ್ಬರೂ ಬೋಧನಾ ವೃತ್ತಿಯನ್ನು ಮಾಡುತ್ತಾ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡರು. ಬ್ರಿಟೀಷರ ವಿರುದ್ದದ ಹೋರಾಟದಲ್ಲಿ ಭಾಗಿಯಾಗಿದ್ದಾರೆ ಎಂಬ ಕಾರಣವನ್ನು ನೀಡಿ ಅವರಿಗೆ ಪದವಿಯನ್ನು ನೀಡಲು ನಿರಾಕರಿಸಲಾಗಿತ್ತು, ಆದರೆ 81 ವರ್ಷಗಳ ಬಳಿಕ 2012 ರಲ್ಲಿ ಆಕೆಗೆ ಆಂಗ್ಲ ಭಾಷೆಯ ಮರಣೋತ್ತರ ಪದವಿಯನ್ನು ನೀಡಿ ಗೌರವವನ್ನು ಸಲ್ಲಿಸಲಾಯಿತು. ಸ್ವಾತಂತ್ರ ದೊರಕಿದ ಬಳಿಕ 1960 ರಲ್ಲಿ ಅವರಿಗೆ ಪದ್ಮಶ್ರೀ ಪ್ರಶಸ್ತಿಯೂ ನೀಡಲಾಗಿತ್ತು. ಆದರೆ ಅಹಿಂಸೆಯಿಂದ ಸ್ವಾತಂತ್ರ್ಯ ದೊರಕಿತು ಎನ್ನುವ ಆಡಳಿತಗಾರರು ಮಹತ್ವಾಕಾಂಕ್ಷಿಗಳು ಬಿನಾ ಅವರ ಅಂತಿಮ ವರ್ಷಗಳಲ್ಲೂ ಸ್ವಾತಂತ್ರ್ಯ ಹೋರಾಟಗಾರರಿಗೆ ನೀಡಲಾಗುತ್ತಿದ್ದ ಪಿಂಚಣಿಯನ್ನು ನೀಡಲು ನಿರಾಕರಿಸಿದರು. ಪತಿಯ ಮರಣದ ಬಳಿಕ ಶಾಂತಿಯನ್ನರಸಿ ಆಕೆ ರಿಷಿಕೇಶದ ಆಶ್ರಮದಲ್ಲಿ ತನ್ನ ಕೊನೆಯ ದಿನಗಳನ್ನು ಕಳೆದಿದ್ದ ವೀರ ಪುತ್ರಿ ಬಿನಾ ದಾಸ್ರ ಮೃತ ದೇಹ 1986 ರ ಡಿಸೆಂಬರ್ 26 ರಂದು ಭಾಗಶಃ ಕೊಳೆತ ಸ್ಥಿತಿಯಲ್ಲಿ ರಿಷಿಕೇಶದ ರಸ್ತೆಯಲ್ಲಿ ದೊರಕಿತ್ತು. ಆಕೆಯ ಗುರುತನ್ನು ನಿರ್ಧರಿಸಲು ಪೊಲೀಸರಿಗೆ ಒಂದು ತಿಂಗಳು ಬೇಕಾಗಿತ್ತು. ಯಾವ ದೇಶದ ಸ್ವಾತಂತ್ರ್ಯಕ್ಕಾಗಿ ಆಕೆ ತನ್ನ ಜೀವನದ ಅಮೂಲ್ಯ 9 ವರುಷಗಳನ್ನು ಜೈಲಿನಲ್ಲಿ ಕಳೆದಿದ್ದಳೋ ಅದೇ ಸ್ವಾತಂತ್ರ್ಯ ದೇಶದ ಚುಕ್ಕಾಣಿ ಹಿಡಿದ ವ್ಯಕ್ತಿಗಳು ಆಕೆಯ ತ್ಯಾಗವನ್ನೇ ಗುರುತಿಸಲಿಲ್ಲ. ಸ್ವಾತಂತ್ರ್ಯಾ ನಂತರವೂ ಯಾವ ಪ್ರಜೆಗಳಿಗಾಗಿ ಆಕೆ ವೈಯಕ್ತಿಕ ಜೀವನವನ್ನೇ ಕಡೆಗಣಿಸಿದ್ದಳೋ ಅದೇ ಪ್ರಜೆಗಳು ಅವಳನ್ನು ಸಂಪೂರ್ಣವಾಗಿ ಮರೆತಿದ್ದರು. ಕ್ರಾಂತಿಕಾರಿಗಳ ತ್ಯಾಗವನ್ನು, ಬಲಿದಾನವನ್ನು ಜನರ ಮನಸ್ಸಿನಿಂದ ನಿಧಾನವಾಗಿ ಮರೆಗೆ ಸರಿಸುವ ಆಡಳಿತಗಾರರ ಸಂಚು ಯಶಸ್ವಿಯಾಗಿತ್ತು.
“ಕರೇಂಗೆ ಯಾ ಮರೇಂಗೆ” ಎಂಬ ಘೋಷಣೆಯೊಂದಿಗೆ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದ್ದ “ಬಿನಾ ದಾಸ್” ಯಾವ ಜನರಿಗಾಗಿ ತಮ್ಮ ಜೀವನದ ಅತ್ಯಮೂಲ್ಯ 9 ವರ್ಷಗಳನ್ನು ಜೈಲಿನಲ್ಲಿ ಕಳೆದರೋ, ಅದೇ ದೇಶವಾಸಿಗಳು ಅವರನ್ನು ಸ್ವಾತಂತ್ರ್ಯ ಪಡೆದ 9 ವರ್ಷಗಳಲ್ಲೇ ಮರೆತುಬಿಟ್ಟರು. ಅವರ ಕೊನೆಯ ದಿನಗಳನ್ನು ಕುರಿತಾಗಿ ಅರಿಯುವಾಗ ನಾವು ನಮಗಾಗಿ ತಮ್ಮ ಸರ್ವಸ್ವವನ್ನೂ ನೀಡಿದ ವೀರರನ್ನು ಯಾವ ರೀತಿ ನಡೆಸಿಕೊಂಡೆವು ಎಂಬ ಹತಾಶೆ ಮತ್ತು ದುಃಖವು ಮೂಡುವುದರಲ್ಲಿ ಸಂದೇಹವಿಲ್ಲ. ಇತಿಹಾಸದ ಪುಟಗಳಿಂದ ಮರೆಯಾದ ಇಂತಹ ಅಮೂಲ್ಯ ರತ್ನಗಳನ್ನು ನಾವು ನಮ್ಮ ಹೃದಯದಲ್ಲಿ ಖಂಡಿತವಾಗಿಯೂ ಪೂಜಿಸಬೇಕಲ್ಲವೇ? ಬಿನಾ ದಾಸ್ ಇಂದಿಗೂ ಮುಂದಿಗೂ ಅನೇಕ ಸಾವಿರ ವರ್ಷಗಳವರೆಗೂ ಭಾರತೀಯ ಮಹಿಳೆಯರಲ್ಲಿ ಸ್ಫೂರ್ತಿಯನ್ನು ತುಂಬಬಲ್ಲರು. ಇತಿಹಾಸವು ಮಾಡಿದ ತಪ್ಪನ್ನು ನಾವು ಮರುಕಳಿಸದಿರೋಣ ಅಲ್ಲವೇ?
#LesserKnownFreedomFighters
✍️ ದೀಪಾ ಜಿ. ಭಟ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.