ದೇಶ ಯಾವುದೇ ಆಪತ್ತಿಗೆ ಸಿಲುಕಲಿ ಅಂತಹ ಸಂದರ್ಭಗಳಲ್ಲೆಲ್ಲಾ ಹಿಂದೆ ಮುಂದೆ ನೋಡದೆ, ತಮ್ಮ ಜೀವವನ್ನೂ ಲೆಕ್ಕಿಸದೆ ಸಂತ್ರಸ್ಥರ ರಕ್ಷಣೆಗೆ ಧಾವಿಸಿ ಬರುವವರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ ರಾಷ್ಟ್ರೀಯ ಸ್ವಯಂಸೇವಕ ಸಂಘ. ಸಮಸ್ಯೆ ಯಾವುದೇ ರೀತಿಯದ್ದಿರಲಿ, ಅದರ ಪರಿಹಾರ ಕಾರ್ಯ ಅದೆಷ್ಟೇ ಕಷ್ಟದ್ದಾಗಿದ್ದರೂ ಅದನ್ನು ಸವಾಲಾಗಿ ಸ್ವೀಕರಿಸಿ, ಪರಿಹಾರಕ್ಕೆ ಮುಂದಾಗುವ ದೃಷ್ಟಿಯಿಂದಲೂ RSS ಸದಾ ಸನ್ನದ್ಧ. ಒಂದರ್ಥದಲ್ಲಿ ದೇಶದ ಯೋಧರ ಬಳಿಕ ದೇಶ ರಕ್ಷಣೆಯ ವಿಚಾರದಲ್ಲಿ RSS ಸ್ವಯಂಸೇವಕರು ಸರ್ವ ಸನ್ನದ್ಧರು ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ ಎಂಬುದಕ್ಕೆ ಹಲವು ಸಾಕ್ಷಿಗಳಿರುವುದನ್ನು ಕೊರೋನಾ ಸಂದರ್ಭದಲ್ಲಿರಬಹುದು, ಪ್ರಾಕೃತಿಕ ವಿಕೋಪಗಳು ಸಂಭವಿಸಿದ ಸಂದರ್ಭಗಳಲ್ಲಿರಬಹುದು ನಾವು ಗಮನಿಸಿದ್ದೇವೆ.
ಉತ್ತರಾಖಂಡದ ಚಮೋಲಿಯಲ್ಲಿ ನಡೆದ ಹಿಮಕುಸಿತದ ಸಂದರ್ಭವನ್ನು ಗಮನಿಸಿದರೆ, ಇದರಲ್ಲಿ ಸಂತ್ರಸ್ಥರಾದ ಅದೆಷ್ಟೋ ಜನರನ್ನು ರಕ್ಷಿಸುವ ಕಾರ್ಯವನ್ನು ನಮ್ಮ ದೇಶದ ಯೋಧರು ಮಾಡಿದರೆ, ಆ ಬಳಿಕ ಸಂತ್ರಸ್ಥರ ಅವಶ್ಯಕತೆಗಳನ್ನು, ಆಹಾರ ಭದ್ರತೆಯನ್ನು ಒದಗಿಸುವ ಕೆಲಸವನ್ನು ಯಾವ ಸ್ವಾರ್ಥವೂ ಇರದೆ ಸಂಘದ ಸ್ವಯಂಸೇವಕರು ಮಾಡಿದ್ದಾರೆ. ಆ ಮೂಲಕ ಮತ್ತೊಮ್ಮೆ ದೇಶಕ್ಕೆ, ದೇಶದ ಜನರಿಗೆ ಯಾವುದೇ ರೀತಿಯ ಸಮಸ್ಯೆ ಬಂದೊದಗಿದ ಸಂದರ್ಭದಲ್ಲಿಯೂ ರಕ್ಷಣೆಗೆ ಕಟಿಬದ್ಧ ಎಂಬ ಸಂದೇಶವನ್ನು ಸಾರುವ ಮೂಲಕ ʼನಾವು ದೇಶದೊಂದಿಗಿದ್ದೇವೆʼ ಎಂದು ತೋರಿಸಿಕೊಟ್ಟಿದ್ದಾರೆ.
ಉತ್ತರಾಖಂಡದಲ್ಲಿ ಹಿಮಸ್ಪೋಟದಿಂದ ಉಂಟಾದ ಆಪತ್ತಿನ ಸಂದರ್ಭದಲ್ಲಿ ಹಿಮ ಬಾಧಿತ ಪ್ರದೇಶಗಳಲ್ಲಿ ಸಿಲುಕಿಕೊಂಡಿದ್ದ ಜನರನ್ನು ರಕ್ಷಿಸುವ ಕೆಲಸದಲ್ಲಿ ಭಾರತೀಯ ಸೇನೆ, ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ, ರಾಜ್ಯ ವಿಪತ್ತು ನಿರ್ವಹಣಾ ಪಡೆಗಳು ಸಾಗರೋಪಾದಿಯಲ್ಲಿ ಕಾರ್ಯಾಚರಿಸಿದ್ದವು. ಅವುಗಳ ಜೊತೆಗೆ ರಾಷ್ಟ್ರೀಯ ಸ್ವಯಂಸೇವಕ ಸಂಘವು ಈ ದುರಂತದಲ್ಲಿ ಸಂತ್ರಸ್ಥರಾದ ಜನರಿಗೆ ಆಹಾರ, ನೀರು ಸೇರಿದಂತೆ ಇನ್ನಿತರ ಮೂಲಭೂತ ಅವಶ್ಯಕತೆಗಳನ್ನು ಒದಗಿಸಿಕೊಟ್ಟು ಅವರಿಗೆ ರಕ್ಷಣೆ ನೀಡಿದೆ. ಆ ಮೂಲಕ ʼಸ್ವಂತಕ್ಕಲ್ಲ, ಸಮಾಜಕ್ಕೆʼ ಎಂಬ ಉಕ್ತಿಯ ನೈಜಾರ್ಥವನ್ನು ಸಮಾಜಕ್ಕೆ ತಿಳಿಸುವ ಕಾರ್ಯವನ್ನು ತಮ್ಮ ಕೆಲಸದ ಮೂಲಕವೇ ಮಾಡಿದೆ ಎಂಬುದು ಶ್ಲಾಘನೀಯ.
ಈ ಹಿಂದೆ ಕೇರಳದಲ್ಲಿ ಪ್ರಾಕೃತಿಕ ವಿಕೋಪಗಳು ಸಂಭವಿಸಿದ್ದಂತಹ ಸಂದರ್ಭದಲ್ಲಿಯೂ ಸ್ವಯಂಸೇವಕರು ಅಪಾಯಕ್ಕೆ ತುತ್ತಾದ ಜನರನ್ನು ಪ್ರತಿಫಲಾಪೇಕ್ಷೆ ಇಲ್ಲದೆಯೇ ರಕ್ಷಿಸುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು. ತಮ್ಮ ಜೀವವನ್ನೇ ಪಣಕ್ಕಿಟ್ಟು ಜನರನ್ನು ಸಂರಕ್ಷಿಸುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದ ಘಟನೆಗಳನ್ನೂ ನಾವು ಮರೆಯುವಂತಿಲ್ಲ. ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೂ ಯಾವುದೇ ಪ್ರತಿಕೂಲ ಪರಿಸ್ಥಿತಿಯೇ ಇರಲಿ, ರಾತ್ರಿ ಹಗಲೆನ್ನದೆ ಸೇವೆಗೆ ಸಜ್ಜಾಗಿರುವ RSS ಸ್ವಯಂಸೇವಕರು ಈ ದೇಶದ ನಿಜವಾದ ಸಂಪತ್ತು ಎಂದರೂ ಅತಿಶಯವಾಗಲಾರದು. ಅತಿವೃಷ್ಟಿ-ಅನಾವೃಷ್ಟಿ ಯಾವುದೇ ಇರಲಿ, ಸ್ವಾಭಾವಿಕ ಅಥವಾ ಅಸ್ವಾಭಾವಿಕ ಸಮಸ್ಯೆಗಳು ಏನೇ ಇರಲಿ ರಕ್ಷಣೆಗೆ ಸದಾ ಮುಂದಾಗುವ RSS ಎಲ್ಲರಿಗೂ ಮಾದರಿ ಎಂದು ನಿಸ್ಸಂಶಯವಾಗಿ ಹೇಳಬಹುದು.
ಇನ್ನು ಕೊರೋನಾ ಸಂದರ್ಭದಲ್ಲಂತೂ ಇಡೀ ವಿಶ್ವವೇ ಕಂಗೆಟ್ಟಿರುವಂತಹ ಸಂದರ್ಭದಲ್ಲಿ ಎಲ್ಲರೂ ಮನೆಯಲ್ಲಿಯೇ ಕುಳಿತು ಕೊರೋನಾದಿಂದ ರಕ್ಷಿಸಿಕೊಳ್ಳುವ ಬಗೆ ಹೇಗೆ ಎಂದು ಚಿಂತಿಸುತ್ತಿದ್ದರೆ, ಭಾರತದ ಉದ್ದಗಲಕ್ಕೂ ಹಬ್ಬಿರುವ ಆರ್ಎಸ್ಎಸ್ ಸ್ವಯಂಸೇವಕರು ಕೊರೋನಾ ವಾರಿಯರ್ಗಳಂತೆ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದನ್ನು ನಾವು ಈ ಸಂದರ್ಭದಲ್ಲಿ ಸ್ಮರಿಸಲೇ ಬೇಕು. ಅನಾರೋಗ್ಯ ಪೀಡಿತರಿಗೆ ಔಷಧ ತಲುಪಿಸುವ ಕೆಲಸ, ಆಹಾರದ ಸಮಸ್ಯೆ ಎದುರಿಸುತ್ತಿರುವವರಿಗೆ ಆಹಾರ ವಸ್ತುಗಳನ್ನು ತಲುಪಿಸುವ ಕೆಲಸ, ಕೊರೋನಾ ಮಾಸ್ಕ್ಗಳನ್ನು, ಸ್ಯಾನಿಟೈಜರ್ಗಳನ್ನು ವಿತರಿಸುವ ಕಾರ್ಯ ಹೀಗೆ ಹತ್ತು ಹಲವು ಕೆಲಸಗಳಲ್ಲಿ ತೊಡಗಿಕೊಳ್ಳುವ ಮೂಲಕ ಕೊರೋನಾ ವಿರುದ್ಧ ಹೋರಾಟ ನಡೆಸಿದ ಆರ್ಎಸ್ಎಸ್ ಎಲ್ಲರಿಗೂ ಮಾದರಿಯಾಗಿತ್ತು.
ಇದೀಗ ಉತ್ತರಾಖಂಡದ ಚಮೋಲಿಯಲ್ಲಿ ನಡೆದ ಹಿಮ ಸ್ಪೋಟದ ಸಂದರ್ಭದಲ್ಲಿಯೂ ರಾಷ್ಟ್ರೀಯ ಸ್ವಯಂಸೇವಕ ಸಂಘ ತನ್ನ ಸಮಾಜಮುಖಿ ಕಾರ್ಯಗಳ ಮೂಲಕ ಮತ್ತೊಮ್ಮೆ ಮಾದರಿಯಾಗಿದೆ. ಆ ಮೂಲಕ Ready for Selfless Service ಎಂಬುದನ್ನು ಮತ್ತೆ ತನ್ನ ಕಾಯಕದ ಮೂಲಕವೇ ಜಗತ್ತಿಗೆ ತೋರಿಸಿಕೊಟ್ಟಿದೆ. ಯಾವುದೇ ಪ್ರಚಾರವನ್ನು ಬಯಸದೆಯೇ RSS ತನ್ನ ಕೆಲಸವನ್ನು ನಿಷ್ಟೆಯಿಂದ ಮಾಡಿಕೊಂಡು ಬರುತ್ತಿದೆ. ಸೇವೆಯಲ್ಲೇ ಪರಮಾತ್ಮನನ್ನು ಕಾಣುತ್ತಿದೆ. ʼಸೇವೆಯೆಂಬ ಯಜ್ಞದಲ್ಲಿ ಸಮಿಧೆಯಂತೆ ಉರಿಯುವʼ ಎಂಬಂತೆ ಕಾಯಕವೇ ಕೈಲಾಸ ಎಂದುಕೊಂಡು ಶ್ರಮಿಸುತ್ತಿದೆ. ಪರಿಸ್ಥಿತಿ ಎಷ್ಟೇ ಕಠಿಣವಿರಲಿ, ಸ್ವಯಂಸೇವಕರು ಖ್ಯಾತಿಗೆ, ಪ್ರಚಾರಕ್ಕೆ, ಪ್ರಶಂಸೆಗೆ ವಿಮುಖರಾಗಿ ಸಹಜ ಭಾವದಿಂದಲೇ ಕಾರ್ಯಕ್ಷೇತ್ರಕ್ಕೆ ತೆರಳುತ್ತಾರೆ. ಉದ್ದೇಶಿತ ಕಾರ್ಯ ಮುಗಿಸಿ ಧನ್ಯತಾ ಭಾವದೊಂದಿಗೆ ಹೊರಡುತ್ತಾರೆ. ಇದೇ ಅಲ್ಲವೇ ನಿಜವಾದ ದೇಶ ಭಕ್ತಿ.
✍️ಭುವನ ಬಾಬು
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.