ದೇಶದಲ್ಲಿ ಕೇಂದ್ರ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ತಂದ ಕೃಷಿ ಸುಧಾರಣಾ ಕಾಯ್ದೆಗಳನ್ನು ವಿರೋಧಿಸಿ ನಡೆಸುತ್ತಿರುವ ಪ್ರತಿಭಟನೆ ದಿನೇ ದಿನೇ ತನ್ನ ಸ್ವರೂಪವನ್ನು ಬದಲಾಯಿಸಿಕೊಳ್ಳುತ್ತಿದೆ. ಪ್ರತಿಭಟನಾ ನಿರತರು ನಿಜವಾದ ರೈತರೋ ಅಥವಾ ರೈತರ ಹೆಸರಿನಲ್ಲಿ ಯಾವುದೋ ಕಾಣದ ಕೈಗಳ ಕೈಚಳಕ ನಡೆಯುತ್ತಿದೆಯೋ ಎಂಬ ಸಂದೇಹಗಳು ಜನಸಾಮಾನ್ಯರ ಮನಸ್ಸಿನಲ್ಲಿ ಮೂಡಿರುವ ಸದ್ಯದ ಪ್ರಶ್ನೆಯಾಗಿದೆ.
ಈ ಕಾಯ್ದೆಯನ್ನು ಜಾರಿಗೆ ತರಲು ಉದ್ದೇಶಿಸಿರುವುದಾಗಿ ಮೋದಿ ಅವರು ತಿಳಿಸಿದ ಸಂದರ್ಭದಲ್ಲಿ ಈ ಕಾಯ್ದೆಯನ್ನು ಬೆಂಬಲಿಸಿ, ಸ್ವಾಗತಿಸಿದ ಕೆಲವರೂ ಇಂದು ಈ ಕಾಯ್ದೆಗಳನ್ನು ವಿರೋಧಿಸಿ ಬೀದಿಗಿಳಿದಿರುವುದು ಶೋಚನೀಯ ಎನಿಸುತ್ತಿದೆ. ಈಗಾಗಲೇ ಈ ಕಾಯ್ದೆಯಿಂದ ರೈತರಿಗಾಗುವ ಸಮಸ್ಯೆಗಳೇನು, ಅವುಗಳನ್ನು ತಿಳಿಸಿದರೆ ಕಾಯ್ದೆಯನ್ನು ಮತ್ತೆ ತಿದ್ದುಪಡಿ ಮಾಡಲಾಗುವುದು ಎಂದರೂ ಪ್ರತಿಭಟನಾ ನಿರತ ‘ರೈತರು’ ಮಾತ್ರ ಬಗ್ಗದಿರುವುದು ಇದೀಗ ಸಂದೇಹಗಳಿಗೆ ಎಡೆ ಮಾಡಿಕೊಟ್ಟಿದೆ. ಈಗಾಗಲೇ ಹಲವು ರೈತ ಸಂಘಟನೆಗಳ ಜೊತೆಗೆ ಕೇಂದ್ರ ಸರ್ಕಾರ ಒಂದೆರಡಲ್ಲ, ಹನ್ನೊಂದು ಸುತ್ತಿನ ಮಾತುಕತೆ ನಡೆಸಿದೆ. ಈ ಕಾಯ್ದೆಯಿಂದ ರೈತರ ಬೆಳೆ ಮಾರಾಟ ಸ್ವಾತಂತ್ರ್ಯ ಹೆಚ್ಚುತ್ತದೆಯೇ ಹೊರತು ಯಾವುದೇ ರೀತಿಯ ಸಮಸ್ಯೆಯಾಗುವುದಿಲ್ಲ ಎಂದು ಅರ್ಥ ಮಾಡಿಸಿದರೂ ರೈತರು ಯಾವುದಕ್ಕೂ ಜಗ್ಗದಿರುವುದು, ಸಂಪೂರ್ಣ ಕಾಯ್ದೆಯನ್ನೇ ರದ್ದು ಮಾಡಲು ಪಟ್ಟು ಹಿಡಿದು ತಿಂಗಳುಗಟ್ಟಲೆ ಪ್ರತಿಭಟನೆ ನಡೆಸುತ್ತಿರುವುದು ಕಂಡುಬರುತ್ತಿದೆ.
ಇದೆಲ್ಲಾ ಪ್ರತಿಭಟನೆಯ ಮೇಲ್ನೋಟ, ಹಿನ್ನೋಟವಾಗಿದ್ದರೆ, ಜ. 26 ರ ಗಣರಾಜ್ಯೋತ್ಸವದಂದು ನಡೆದ ಪ್ರತಿಭಟನೆಯ ಸ್ವರೂಪ ಇದರ ಒಳನೋಟದತ್ತ ಚಿತ್ತ ಹರಿಸುವವರಿಗೆ ‘ದಾರಿತಪ್ಪಿದ’ ಸುಳಿವುಗಳನ್ನು ನೀಡಲಾರಂಭಿಸಿದೆ ಎಂದು ನಿಸ್ಸಂಶಯವಾಗಿ ಹೇಳಬಹುದು. ಇನ್ನು ಕೆಲ ದಿನಗಳ ಹಿಂದೆ ರೈತರ ಪ್ರತಿಭಟನೆಯ ಪರ ವಿದೇಶೀ ಸೆಲೆಬ್ರಿಟಿಗಳು ಮಾಡಿರುವ ಟ್ವೀಟ್ಗಳು ಈ ಸಂದೇಹಕ್ಕೆ ಮತ್ತಷ್ಟು ಪುಷ್ಟಿ ನೀಡಿವೆ ಎಂಬುದು ಸ್ಪಷ್ಟ. ಜೊತೆಗೆ ‘ದಿ ಪ್ರಿಂಟ್’ ನೀಡಿರುವ ವರದಿಯೊಂದರಲ್ಲಿ ರೈತ ಪರ ಟ್ವೀಟ್ ಮಾಡುವ ಸಲುವಾಗಿ ರಿಹಾನ್ನಾ 18 ಕೋಟಿಗೂ ಹೆಚ್ಚು ಹಣ ಪಡೆದುಕೊಂಡಿದ್ದಾರೆ ಎಂಬ ವಿಚಾರವೂ, ಈ ಪ್ರತಿಭಟನೆಯ ಬಗ್ಗೆ ಜನಮಾನಸದಲ್ಲಿ ಸಂದೇಹಗಳನ್ನು ಸೃಷ್ಟಿಸಿದೆ. ಮೊನ್ನೆಯಷ್ಟೇ ಗ್ರೆಟಾ ಥನ್ಬರ್ಗ್ ಎಂಬಾಕೆ ಈ ಪ್ರತಿಭಟನೆಗೆ ಸಂಬಂಧಿಸಿದಂತೆ ಇರುವ ಟೂಲ್ ಕಿಟ್ ಒಂದನ್ನು ಬಿಡುಗಡೆ ಮಾಡಿದ್ದರು.
ಈ ಎಲ್ಲ ಬೆಳವಣಿಗೆಗಳನ್ನು ಗಮನಿಸುವಾಗ ಇದನ್ನು ಯಾರ ಪರವೂ ಇರದೆ ವಿರೋಧವೂ ಮಾಡದೆ ತಟಸ್ಥ ನೆಲೆಯಲ್ಲಿ ಚಿಂತನೆ ನಡೆಸುವವರಿಗೆ ಈ ಪ್ರತಿಭಟನೆ ರೈತರ ಹೆಸರಿಗೆ ಮಸಿ ಬಳಿಯುವ ಪ್ರಯತ್ನವೇ? ಎಂಬ ಭಾವನೆ ಮೂಡಿಸುವ ಹಾಗಿದೆ ಎಂಬುದು ಸ್ಪಷ್ಟ. ಗ್ರೆಟಾ ಬಿಡುಗಡೆ ಮಾಡಿದ್ದ ಟೂಲ್ ಕಿಟ್ ತಯಾರಾಗಿದ್ದು ಭಾರತದಲ್ಲಿ ಅಲ್ಲ, ಬದಲಾಗಿ ಕೆನಡಾ ಮೂಲದ ಪಿಜೆಎಫ್ ಎಂಬ ಫೌಂಡೇಷನ್ನಿಂದ ಎಂಬುದು ಇಲ್ಲಿ ನಾವು ಗಮನಿಸಬೇಕಾದ ಅಂಶ.
ಭಾರತದ ಬೆನ್ನೆಲುಬು ರೈತ. ಆ ಬೆನ್ನೆಲುಬನ್ನು ದುರ್ಬಲಗೊಳಿಸುವ ಕಾರ್ಯ ಯಾರಿಂದ ನಡೆದರೂ ಅದು ತಪ್ಪೇ. ಆದರೆ ರೈತರ ಹೆಸರು ಹೇಳಿಕೊಂಡು ದೇಶಕ್ಕೆ, ದೇಶದ ತ್ರಿವರ್ಣ ಧ್ವಜಕ್ಕೆ ಅಗೌರವ ತೋರುವುದು, ಸಾರ್ವಜನಿಕರಿಗೆ ತೊಂದರೆ ಮಾಡುವ ಕೃತ್ಯಕ್ಕೆ ಇಳಿದಿರುವುದು ಮಾತ್ರ ದುರಂತ. ಇದು ಖಂಡನಾರ್ಹ. ಓರ್ವ ನಿಜವಾದ ರೈತ ಇಂತಹ ದುಷ್ಕೃತ್ಯಕ್ಕೆ ಇಳಿಯುವುದು ಸಾಧ್ಯವೇ ಇಲ್ಲ. ದೇಶದ ಸಂವಿಧಾನಕ್ಕೆ ಅಪಮಾನ ಎಸಗುವ ಕೃತ್ಯವನ್ನು ಅಸಲಿ ರೈತ ಮಾಡಿರಲಾರ. ಬದಲಾಗಿ ಕೇಂದ್ರ ಸರ್ಕಾರವನ್ನು ಅಸ್ಥಿರಗೊಳಿಸಬೇಕು ಎಂದು ಯಾವುದೋ ಒಂದು ಅಜೆಂಡಾ ಇರಿಸಿಕೊಂಡಿರುವ ನಕಲಿ ಪ್ರತಿಭಟನಾ ನಿರತರೇ ರೈತರ ಹೆಸರಿಗೆ ಕೆಸರು ರಾಚಿಸಿದ್ದಾರೆ ಎಂಬುದು ಸಾಮಾನ್ಯರಿಗೂ ಅರಿವಾಗುವ ಸತ್ಯ.
ಇಂದು ದೇಶಾದ್ಯಂತ ರೈತರು ರಸ್ತೆ ತಡೆದು ಪ್ರತಿಭಟನೆ ನಡೆಸುತ್ತಿದ್ದಾರೆ. ರೈತರಿಗೆ ನಿಜವಾದ ನ್ಯಾಯ ಸಿಗಲಿ ಎಂಬ ಆಶಯ ನಮ್ಮದೂ ಹೌದು. ಆದರೆ, ರೈತರ ಹೆಸರಿನಲ್ಲಿ ಎಡಬಿಡಂಗಿಗಳ ಪ್ರತಿಭಟನೆ ನಡೆದಲ್ಲಿ ನಿಜವಾದ ರೈತರಿಗೆ ನ್ಯಾಯ ದೊರೆಯಲಾರದು. ಬದಲಾಗಿ ರೈತರ ಮೇಲೆಯೂ ಕೆಟ್ಟ ಪರಿಣಾಮ ಬೀರುವ ಎಲ್ಲಾ ಸಾಧ್ಯತೆಗಳೂ ಇವೆ. ಆದ್ದರಿಂದ ನೈಜ ರೈತರು ಮತ್ತು ದೇಶದ ಜನಸಾಮಾನ್ಯರು ಈ ನಿಟ್ಟಿನಲ್ಲಿ ಎಚ್ಚರ ವಹಿಸಬೇಕು. ಆ ಮೂಲಕ ಪೂರ್ವಯೋಜಿತ ಸಂಚಿನ ಪ್ರತಿಭಟನೆ ನಡೆಸುವ ದುರುಳರಿಗೆ ತಕ್ಕ ಪಾಠ ಕಲಿಸುವಂತಾಗಬೇಕು ಎಂಬುದು ನಮ್ಮ ಸದಾಶಯ.
✍️ ಭುವನ ಬಾಬು
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.