ಹಿಂದೂಸ್ಥಾನಿ ಸಂಗೀತ ಎಂದು ಹೆಸರು ಕೇಳಿದೊಡನೆಯೇ ಆ ಕ್ಷೇತ್ರದಲ್ಲಿ ಹೆಸರು ಮಾಡಿದ, ದೇಶದ ಕೀರ್ತಿಯನ್ನು ವಿಶ್ವದೆಲ್ಲೆಡೆ ಪಸರಿಸಿದ ಅನೇಕ ಮಹಾನ್ ಸಂಗೀತ ದಿಗ್ಗಜರ ಹೆಸರು ನಮ್ಮ ಸ್ಮೃತಿಪಟಲದಲ್ಲಿ ಹಾದು ಹೋಗುತ್ತದೆ. ಅಂತಹ ಸಂಗೀತ ಲೋಕದ ಮೇರು ಪರ್ವತಗಳಲ್ಲೊಬ್ಬರು ಭಾರತ ರತ್ನ, ಪದ್ಮ ವಿಭೂಷಣ, ಪದ್ಮ ಭೂಷಣ, ಪದ್ಮಶ್ರೀ ಪುರಸ್ಕೃತ ಪಂಡಿತ್ ಭೀಮಸೇನ್ ಜೋಶಿ ಅವರು.
1922 ರ ಫೆಬ್ರವರಿ 4 ರಂದು ಗದಗದ ರೋಣದಲ್ಲಿ ಜೋಶಿ ಅವರ ಜನನ. ಎಳವೆಯಿಂದಲೇ ಸಂಗೀತದ ಮೇಲೆ ಅದೇನೋ ಮೋಹ. ಸಂಗೀತ ಕಲಿಯಲೇ ಬೇಕು ಎಂಬ ಹಠದಿಂದ 1933 ಮನೆ ಬಿಟ್ಟು ಹೋಗುತ್ತಾರೆ. ಗ್ವಾಲಿಯರ್ನಲ್ಲಿ ಉಸ್ತಾದ್ ಹಫೀಜ್ ಖಾನ್ ಅವರ ಶಿಷ್ಯರಾಗುತ್ತಾರೆ. ಸಂಗೀತ ಕಲಿಕೆ ಆರಂಭ ಮಾಡುತ್ತಾರೆ. ಈ ನಡುವೆ ಮಗ ಗ್ವಾಲಿಯರ್ನಲ್ಲಿರುವ ವಿಚಾರ ತಿಳಿದು ಅವರ ಹೆತ್ತವರು ಅವರನ್ನು ಮತ್ತೆ ಮನೆಗೆ ಕರೆದುಕೊಂಡು ಬರುತ್ತಾರೆ.
ಮನೆಗೆ ಬಂದರೂ ಸಂಗೀತ ಕಲಿಯಬೇಕೆಂಬ ಹಠ ಮಾತ್ರ ಬದಲಾಗುವುದಿಲ್ಲ. ಏನೇ ಆದರೂ ಸಂಗೀತ ಕಲಿಯಲೇ ಬೇಕು ಎಂಬ ತಮ್ಮ ನಿಲುವಿಗೆ ಜೋಶಿ ಅವರು ಬದ್ಧರಾಗಿದ್ದವರು. ಹೀಗಾಗಿ 1936 ರಲ್ಲಿ ಇವರನ್ನು ಸವಾಯಿ ಗಂಧರ್ವ ಎಂದೇ ಖ್ಯಾತನಾಮರಾದ ರಾಮಭಾವು ಕುಂದಗೋಳಕರ ಅವರಲ್ಲಿ ಸಂಗೀತ ಕಲಿಕೆಗೆ ಸೇರಿಸಲಾಗುತ್ತದೆ. ಅವರಲ್ಲಿ ತರಬೇತಿಗೊಂಡ ಜೋಶಿ ಅವರು ತಮ್ಮ 19 ನೇ ವಯಸ್ಸಿನಲ್ಲಿಯೇ ತಮ್ಮ ಮೊದಲ ಸಂಗೀತ ಕಚೇರಿ ನಡೆಸುತ್ತಾರೆ. ಅವರಿಗೆ 20 ವರ್ಷವಾದಾಗ ಅವರು ಹಾಡಿರುವ ಹಿಂದಿ ಮತ್ತು ಕನ್ನಡ ಗೀತೆಗಳು ಸಹ ಬಿಡುಗಡೆಯಾದವು.
ಇನ್ನು ಭೀಮಸೇನ ಜೋಶಿ ಅವರ ಸಾಧನೆ ಎಲ್ಲರಿಗೂ ತಿಳಿದಿದೆ. ಅಂತಹ ಮೇರು ವ್ಯಕ್ತಿತ್ವ ಅವರದ್ದು. ಅವರು ತಮ್ಮ ಗುರುಗಳಾದ ಸವಾಯಿ ಗಂಧರ್ವರನ್ನು ನೆನಪಿಸಿಕೊಳ್ಳುತ್ತಿದ್ದ ಶೈಲಿ ಎಲ್ಲರಿಗೂ ಮಾದರಿ ಎನ್ನಬಹುದು. ವರ್ಷಂಪ್ರತಿ ಡಿಸೆಂಬರ್ ತಿಂಗಳಿನಲ್ಲಿ ಜೋಶಿ ಅವರು ಪುಣೆಯಲ್ಲಿ ‘ಸವಾಯಿ ಗಂಧರ್ವ ಸಂಗೀತ ಉತ್ಸವ’ ವನ್ನು ನಡೆಸಿಕೊಂಡು ಬರುವ ಮೂಲಕ ತಮ್ಮ ಗುರುಗಳಿಗೆ ವಿಶೇಷವಾದ ರೀತಿಯಲ್ಲಿ, ಅರ್ಥಪೂರ್ಣ ಗೌರವವನ್ನು ಸಲ್ಲಿಸಿಕೊಂಡು ಬಂದಿದ್ದವರು. ತಮ್ಮ ಅಮೋಘ ಸಾಧನೆಯ ಮೂಲಕ ತಮ್ಮ ಗುರುಗಳ ಹೆಸರನ್ನು ಮತ್ತಷ್ಟು ಔನ್ನತ್ಯಕ್ಕೇರಿಸಿದ ಕೀರ್ತಿಯೂ ಜೋಶಿ ಅವರಿಗೆ ಸಲ್ಲುತ್ತದೆ ಎಂದರೆ ಅತಿಶಯವಾಗಲಾರದೇನೋ.
ಇನ್ನು ಜೋಶಿ ಅವರ ಗಾಯನದ ಬಗ್ಗೆ ಹೇಳುವುದಾದರೆ ಹಲವು ಮನೆಗಳಲ್ಲಿ ಇಂದಿಗೂ ಅವರ ‘ಭಾಗ್ಯದ ಲಕ್ಷ್ಮೀ ಬಾರಮ್ಮ’ ಹಾಡು ಮುಂಜಾನೆ-ಮುಸ್ಸಂಜೆ ವೇಳೆಯಲ್ಲಿ ಅನುರಣಿಸುವುದನ್ನು ನಾವು ಕೇಳಬಹುದು. ಪಂಡಿತ್ ಭೀಮಸೇನ್ ಜೋಶಿ ಎಂದರೆ ಹಿಂದೂಸ್ಥಾನಿ ಸಂಗೀತ ಕ್ಷೇತ್ರದ ಭೀಮ ಎನ್ನುವಷ್ಟರ ಮಟ್ಟಿಗೆ ಅವರು ಆ ಕ್ಷೇತ್ರದಲ್ಲಿ ಸಾಧನೆ ಮಾಡಿದವರು. ಅವರು ಹಾಡಿರುವ ‘ಮೀಲೆ ಸುರ್ ಮೇರಾ ತುಮ್ಹಾರಾ’ ಹಾಡಿಗೆ ಮನಸೋಲದವರೇ ಇಲ್ಲ. ಈ ಗೀತೆ ಸುಮಾರು 14 ಭಾಷೆಗಳಲ್ಲಿ ಜನಪ್ರಿಯತೆ ಪಡೆದಿದೆ ಎಂಬುದನ್ನು ನಾವು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಲೇ ಬೇಕು.
ಇಂದು ಪಂಡಿತ್ ಭೀಮಸೇನ್ ಜೋಶಿ ಅವರ ಜನ್ಮದಿನ. ಅವರು ಲೋಕ ತ್ಯಜಿಸಿರಬಹುದು. ಆದರೆ ಅವರ ಭಾವತನ್ಮಯ ಹಾಡುಗಳ ಮೂಲಕ ನಮ್ಮ ನಡುವೆ ಇಂದಿಗೂ ಅವರು ಜೀವಂತ. ಅವರ ಕಾಯ ಭೂಲೋಕದ ಕಾರ್ಯ ಮುಗಿಸಿ ಹೊರಟು ಹೋಗಿರಬಹುದು. ಆದರೆ ಅವರು ಹಿಂದೂಸ್ಥಾನಿ ಸಂಗೀತ ಕ್ಷೇತ್ರದಲ್ಲಿ ಮಾಡಿರುವ ಸಾಧನೆ ಮಾತ್ರ ಸದಾ ಉಸಿರಾಡುತ್ತಿದೆ. ಉಸಿರಾಡುತ್ತಲೇ ಇರುತ್ತದೆ. ಅವರ ಜನ್ಮ ದಿನದಂದು ಶತ ಶತ ನಮನಗಳು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.