ಕೊರೋನಾ ಕಾರಣದಿಂದ ಈ ಬಾರಿ ಬೆಂಗಳೂರು ಯಲಹಂಕದ ವಾಯುನೆಲೆಯಲ್ಲಿ ದ್ವೈವಾರ್ಷಿಕ ವೈಮಾನಿಕ ಪ್ರದರ್ಶನ ಏರೋ ಇಂಡಿಯಾ-2021 ಸರಳವಾಗಿ ನಡೆಯುತ್ತಿದೆ. ಹೆಚ್ಚು ಜನರಿಗೆ ಈ ಕಾರ್ಯಕ್ರಮದಲ್ಲಿ ಭಾಗಿಯಾಗುವ ಅವಕಾಶವನ್ನೂ ನೀಡಲಾಗಿಲ್ಲ. ಆದರೆ, ಆಸಕ್ತರಿಗೆ ವೀಕ್ಷಣೆ ಮಾಡಲು ವೆಬ್ಸೈಟ್, ಸಾಮಾಜಿಕ ಜಾಲತಾಣಗಳಲ್ಲಿಯೂ ಆಯೋಜಕರು ವ್ಯವಸ್ಥೆ ಮಾಡಿದ್ದಾರೆ. ಅಂದ ಹಾಗೆ ಈ ಬಾರಿಯದ್ದು ದೇಶದಲ್ಲಿ ನಡೆಯುತ್ತಿರುವುದು 13 ನೇ ಏರ್ ಶೋ.
ಹದಿಮೂರು ವರ್ಷಗಳ ಇತಿಹಾಸವುಳ್ಳ ಏರ್ ಶೋ ಈ ಬಾರಿ ಹಲವು ಪ್ರಥಮಗಳಿಗೆ ಸಾಕ್ಷಿಯಾಗುತ್ತಿದೆ. ಸೂರ್ಯ ಕಿರಣ್, ಸಾರಂಗ್ ಯುದ್ಧ ವಿಮಾನಗಳ ಜಂಟಿ ಪ್ರದರ್ಶನ, ಚಿನೂಕ್ ಯುದ್ಧ ವಿಮಾನಗಳ ಸಾಮರ್ಥ್ಯ ಪ್ರದರ್ಶನ, ಅಮೆರಿಕಾದ ಬಾಂಬರ್ ವಿಮಾನಗಳ ಶಕ್ತಿ ಪ್ರದರ್ಶನ ಸೇರಿದಂತೆ ಇನ್ನೂ ಹಲವಾರು ರಾಷ್ಟ್ರೀಯ, ಅಂತರರಾಷ್ಟ್ರೀಯ ಯುದ್ಧ ವಿಮಾನಗಳ ಬಲ ಪ್ರದರ್ಶನಕ್ಕೆ ಏರ್ ಶೋ ಹಿಂದಿನಿಂದಲೂ ಸಾಕ್ಷಿಯಾಗಿಕೊಂಡೇ ಬಂದಿದೆ. ಈಗಲೂ ಸಾಕ್ಷಿಯಾಗುತ್ತಿದೆ ಎಂಬುದು ಹೆಮ್ಮೆಯ ವಿಚಾರ.
ಹಿಂದೆಲ್ಲಾ 5 ದಿನಗಳ ಕಾಲ ನಡೆಯುತ್ತಿದ್ದ ಈ ವೈಮಾನಿಕ ಪ್ರದರ್ಶನ ಈ ಬಾರಿ ಮೂರು ದಿನಕ್ಕಷ್ಟೇ ಸೀಮಿತವಾಗಿದೆ. ಕಾರಣ ಮೊದಲೇ ಹೇಳಿದಂತೆ ಕೊರೋನಾ. ಹೆಚ್ಚು ಅಬ್ಬರವಿಲ್ಲದೇ ಹೋದರೂ, ಈ ಬಾರಿ ಸ್ವದೇಶಿ, ವಿದೇಶೀ ಲೋಹದ ಹಕ್ಕಿಗಳ ಕಲರವವಂತೂ ಮೂರು ದಿನಗಳ ಕಾಲ ಆಗಸದಲ್ಲಿ ಚಿತ್ತಾರ ಬರೆಯಲಿದೆ ಎಂಬುದು ಸಂತಸದ ವಿಚಾರ. ಈಗಾಗಲೇ ಆತ್ಮನಿರ್ಭರದ ಕಲ್ಪನೆಯ ಜೊತೆಗೆ ಭಾರತ ವಿಶ್ವಗುರುವಾಗುವತ್ತ ಹೆಜ್ಜೆ ಇಡುತ್ತಿದೆ. ಈ ಹಿನ್ನೆಲೆಯಲ್ಲಿಯೂ ಈ ಏರ್ ಶೋ ಮಹತ್ವ ಪಡೆದಿದೆ. ಇದರಲ್ಲಿ ಸ್ವದೇಶೀ ನಿರ್ಮಿತ ಯುದ್ಧ ವಿಮಾನಗಳ ಸಾಮರ್ಥ್ಯ ಪ್ರದರ್ಶನ ದೇಶದ ರಕ್ಷಣಾ ವ್ಯವಸ್ಥೆಯ ಬಗ್ಗೆ ಶತ್ರು ರಾಷ್ಟ್ರಗಳಿಗೆ ಸ್ಪಷ್ಟ ಎಚ್ಚರಿಕೆ ನೀಡುವಲ್ಲಿಯೂ ಕೆಲಸ ಮಾಡಲಿದೆ. ಜೊತೆಗೆ ಭಾರತ ರಕ್ಷಣಾ ಕ್ಷೇತ್ರದಲ್ಲಿ ಮುಂದುವರೆಯುತ್ತಿರುವ ವೇಗವನ್ನು ಜಗತ್ತಿಗೆ ಸಾದರ ಪಡಿಸುವಲ್ಲಿಯೂ ಇಂತಹ ಏರ್ ಶೋ ಗಳು ಮುಖ್ಯವಾಗುತ್ತವೆ.
ಈ ವೈಮಾನಿಕ ಪ್ರದರ್ಶನದ ಇತಿಹಾಸವನ್ನು ಗಮನಿಸುವುದಾದರೆ 1996 ರಲ್ಲಿ ನಲ್ಲಿ ಮೊದಲ ಏರ್ ಶೋ ನಡೆಯುತ್ತದೆ. 1998 ರಲ್ಲಿ ಎರಡನೇ ವೈಮಾನಿಕ ಪ್ರದರ್ಶನ, ಮೂರನೇಯದ್ದು 2001, 2003 ರಲ್ಲಿ ನಾಲ್ಕನೇ ಶೋ, 2005 ರಲ್ಲಿ ಐದನೇ ಶೋ, 2007, 2009, 2011, 2013, 2015, 2017, 2019 ಮತ್ತು ಇದೀಗ 2021 ರಲ್ಲಿ 13 ನೇ ಏರ್ ಶೋ ನಡೆಯುತ್ತಿದೆ. ಭಾರತದ ರಕ್ಷಣಾ ಸಚಿವಾಲಯದ ಸಹಯೋಗದಲ್ಲಿ ಈ ಏರ್ ಶೋ ವನ್ನು ಆಯೋಜಿಸಲಾಗುತ್ತದೆ. ಈ ಬಾರಿ ಈ ಏರ್ ಶೋ ನಲ್ಲಿ 14 ರಾಷ್ಟ್ರಗಳು ಭಾಗವಹಿಸಲಿವೆ. ಕೊರೋನಾ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಪ್ರವೇಶ ನಿರಾಕರಿಸಲಾಗಿದೆ. ಆದರೆ ಅಂತರ್ಜಾಲದ ಮೂಲಕ ಲೋಹದ ಹಕ್ಕಿಗಳ ಹಾರಾಟ, ಅವುಗಳ ಶಕ್ತಿ ಪ್ರದರ್ಶನವನ್ನು ಕಣ್ತುಂಬಿಕೊಳ್ಳುವ ಅವಕಾಶವನ್ನು ಮಾಡಿಕೊಡಲಾಗಿದೆ. ಭಾರತದ ಡಿ ಆರ್ ಡಿ ಒ ಅಭಿವೃದ್ಧಿ ಮಾಡಿರುವ ಯುದ್ಧ ವಿಮಾನ, ಹೆಲಿಕಾಪ್ಟರ್‌ಗಳು ಸಹ ಈ ಶೋ ದಲ್ಲಿ ತಮ್ಮ ಪ್ರದರ್ಶನ ನೀಡಲಿವೆ.
ಈ ಬಾರಿಯ ಏರ್ ಶೋವನ್ನು ದೇಶದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಉದ್ಘಾಟಿಸಿದ್ದಾರೆ. ಇದರಲ್ಲಿ ದೇಶೀಯ ನಿರ್ಮಿತ ವಿಮಾನಗಳ ಪ್ರದರ್ಶನ, ಅವುಗಳ ಸಾಮರ್ಥ್ಯದ ಪ್ರದರ್ಶನ ನಡೆಯಲಿದೆ. ಕೇವಲ 3000 ಮಂದಿಯಷ್ಟೇ ನೇರವಾಗಿ ಈ ಶೋ ದಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿದೆ. ಸೂಕ್ತ ಭದ್ರತೆ ಮತ್ತು ಸುರಕ್ಷತಾ ಕ್ರಮಗಳ ಜೊತೆಗೆ ಜಗತ್ತಿಗೆ ಭಾರತದ ಶಕ್ತಿಯ ದರ್ಶನ ಇಡೀ ಜಗತ್ತಿಗೆ ಆಗಲಿದೆ. ಸೂರ್ಯಕಿರಣ್, ಸಾರಂಗ್, ರಫೇಲ್, ಚಿನೂಕ್, ಡಕೋಟಾ, ಸುಖೋಯ್, ಅಪಾಚೆ ಸೇರಿದಂತೆ 41 ಯುದ್ಧ ವಿಮಾನಗಳು ಈ ಶಕ್ತಿ ಪ್ರದರ್ಶನದ ಭಾಗವಾಗುತ್ತಿದೆ. ಈ ಬಾರಿ ಸ್ವದೇಶೀ ಕಲ್ಪನೆಯನ್ನು ಇದರಲ್ಲಿಯೂ ತುಂಬಿರುವುದು, ಆತ್ಮ ನಿರ್ಭರತೆಯ ಶಕ್ತಿಯ ಪ್ರದರ್ಶನಕ್ಕೆ ವೈಮಾನಿಕ ಪ್ರದರ್ಶನವೂ ಸಾಕ್ಷಿಯಾಗುತ್ತಿರುವುದು ನಮ್ಮೆಲ್ಲರಿಗೂ ಹೆಮ್ಮೆಯೇ ಸರಿ.
✍️ ಭುವನ ಬಾಬು, ಪುತ್ತೂರು
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.