ತೋಮಸ್ ಬಬಿಗ್ಟಂನ್ ಮೆಕಾಲೆ, ಭಾರತ ದೇಶ ಸಹಿತ 19 ನೇ ಶತಮಾನದಲ್ಲಿ ಬ್ರಿಟಿಷ್ ವಸಾಹತುಗಳಾಗಿದ್ದ ಹಲವು ಪ್ರದೇಶಗಳಲ್ಲಿ ಆಂಗ್ಲ ಶಿಕ್ಷಣವನ್ನು ಹೇರಿಕೆ ಮಾಡಿದ ವ್ಯಕ್ತಿ. ಬ್ರಿಟಿಷರು ತಮ್ಮ ವಸಾಹತುಗಳಲ್ಲಿ ತಮ್ಮ ಪ್ರಾಬಲ್ಯ ಕಳೆದುಕೊಂಡು, ಸಮಾಜ್ರ್ಯಶಾಹಿ ಧೋರಣೆ ಸಹಿತ ಆಡಳಿತ ತಪ್ಪಿದರೂ, ಅಲ್ಲಿನ ಜನರನ್ನು ಆಂಗ್ಲ ಶಿಕ್ಷಣದ ಮೂಲಕ ಬೌದ್ಧಿಕ ಗುಲಾಮರನ್ನಾಗಿಸುವುದು ಮೆಕಾಲೆಯ ಗುರಿಯಾಗಿತ್ತು.
1800 ರಲ್ಲಿ ಇಂಗ್ಲೆಂಡಿನಲ್ಲಿ ಜನಿಸಿದ ಮೆಕಾಲೆ ಭಾರತ, ಶ್ರೀಲಂಕಾ, ಮಯನ್ಮಾರ್ ಸಹಿತ ಆಫ್ರಿಕಾ, ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ಇಂಗ್ಲಿಷ್ ಭಾಷಾ ನೀತಿಯನ್ನು ಹೇರುವ ಮೂಲಕ ಹೊಸ ಶಿಕ್ಷಣ ನೀತಿಗೆ ಕಾರಣಕರ್ತೃವಾದ. ಒಂದು ದೇಶದ ಪ್ರಾದೇಶಿಕ ಭಾಷೆ, ಅದರೊಂದಿಗೆ ಹಾಸುಹೊಕ್ಕಾಗಿರುವ ಸಂಸ್ಕೃತಿಯನ್ನು ಇಲ್ಲವಾಗಿಸಿ, ಭಾಷಾ ಶಿಕ್ಷಣ ಹೇರಿಕೆ ಮೂಲಕ ಭಾರತೀಯರನ್ನು ಪಾಶ್ಚಿಮಾತ್ಯ ಸಂಸ್ಕೃತಿಯತ್ತ ಒಲವು ಮೂಡಿಸಿ, ಅಪ್ಪಿ, ಒಪ್ಪಿಕೊಳ್ಳುವಂತೆ ಮಾಡುವುದು ಈ ಶಿಕ್ಷಣ ನೀತಿಯ ತೆರೆಮರೆಯ ಗುರಿಯಾಗಿತ್ತು. ದೇಶದ ಬೌದ್ಧಿಕ, ಸಾಂಸ್ಕೃತಿಕ, ಸಾಹಿತಿಕ ಹಾಗೆಯೇ ಆಧ್ಯಾತ್ಮಿಕ ಅಂತಃಸತ್ವವನ್ನು ದಮನಿಸಿ ಇಲ್ಲವಾಗಿಸುವುದು ಇದರ ಮೂಲ ಉದ್ದೇಶವೂ ಆಗಿತ್ತು. ದೇಶಕ್ಕೆ ಮಾರಕವಾದ ಮೆಕಾಲೆ ಶಿಕ್ಷಣದ ವಿರುದ್ಧ ೧೯ ನೇ ಶತಮಾನದಲ್ಲೇ ದನಿಯಾದವರು ಹಲವು ಮಂದಿ ಇದ್ದರೂ ಅವರ ಕೂಗು ಯಾರಿಗೂ ಕೇಳದಂತಾಯಿತು. ಬೌದ್ಧಿಕ ಗುಲಾಮಿತನವನ್ನೇ ಬೆಳೆಸಿದ ಮೆಕಾಲೆ ಶಿಕ್ಷಣ ನೀತಿಯಿಂದ ಸಾಂಪ್ರದಾಯಿಕತೆ, ಗ್ರಾಮೀಣ ಮತ್ತು ಪ್ರಾದೇಶಿಕ ಭಾಷಾ ಸೊಗಡು, ಆ ಭಾಷೆಯಲ್ಲೇ ಕಲಿಕೆ ಮುಂದುವರೆಸಿ ಉನ್ನತ ಶೈಕ್ಷಣಿಕ ಪಥವನ್ನು ಸೇರಬೇಕೆಂಬ ಸಾಮಾನ್ಯನ ಕನಸಿಗೂ ಮೆಕಾಲೆ ಶಿಕ್ಷಣ ಮರೀಚಿಕೆಯಾಯಿತು. ಈ ನೀತಿಯಿಂದ ಸ್ವಾಭಿಮಾನ ಕಳೆದು ಹೀನಭಾವ ತಮಗರಿವಿಲ್ಲದಂತೆ ಮೈಗೂಡಿಸಿ ಮುನ್ನಡೆವರು ಹಲವು ಮಂದಿ ಇದ್ದರು.
೫ ನೇ ಶತಮಾನದಲ್ಲಿ ತತ್ವಶಾಸ್ತ್ರಜ್ಞ ಭ್ರತೃಹರಿ ಭರತವರ್ಷವನ್ನು ಉಲ್ಲೇಖಿಸಿದ ರೀತಿ ಬಹಳ ಅರ್ಥಪೂರ್ಣವಾಗಿದೆ. ಓರ್ವ ಶಿಕ್ಷು (ಶಿಕ್ಷಣಾಸಕ್ತ) ತನ್ನ ಕಲಿಕೆಯನ್ನು ಕೇವಲ ವೇದಾಧ್ಯಯನಕ್ಕಷ್ಟೇ ಮೀಸಲಿಡುವುದಿಲ್ಲ, ಅದರೊಂದಿಗೆ ಬೌದ್ಧ, ಜೈನ ವಾಙ್ಮಯಗಳನ್ನು ಪಠಿಸಿ, ಅರ್ಥೈಸಿ ಸುಜ್ಞಾನಿ ಎನಿಸಿಕೊಳ್ಳುತ್ತಾನೆ. ಪ್ರಾಚೀನ ಭಾರತವು ಹೃದಯ ವೈಶಾಲ್ಯತೆಯನ್ನು ಹೊಂದಿತ್ತು ಮಾತ್ರವಲ್ಲ ಬೌದ್ಧಿಕವಾಗಿ ಬಹಳ ಎತ್ತರದಲ್ಲಿತ್ತು ಎಂಬುದನ್ನು ಭ್ರತೃಹರಿಯ ಮಾತುಗಳಿಂದ ತಿಳಿಯಬಹುದು. ದೇಶದಿಂದ ಹಲವು ಮಂದಿ ಜ್ಞಾನಿಗಳು ಚೀನಾ, ಯವನ, ಕಾಂಬೋಜಾಗಳಿಗೆ ತೆರಳಿ ಭಾರತೀಯ ಜೀವನ ಮೌಲ್ಯಗಳೊಂದಿಗೆ ಯೋಗ ತತ್ವ ಸಾಂಖ್ಯದ ಬಗ್ಗೆ ತಿಳಿವನ್ನು ಪ್ರಸರಿಸುತ್ತಿದ್ದರು.
ಮೆಕಾಲೆ ಶಿಕ್ಷಣ ನೀತಿಯಿಂದ ಉಂಟಾದ ಬೌದ್ಧಿಕ ದಾಸ್ಯವು ಇಂದು 21 ನೇ ಶತಮಾನಕ್ಕೂ ಕಾಲಿರಿಸಿದೆ. ಇಂದಿಗೂ ಕೆಲ ಬುದ್ಧಿಜೀವಿಗಳು ಐರೋಪ್ಯ ರಾಷ್ಟ್ರಗಳೇ ಶ್ರೇಷ್ಠ, ಅಲ್ಲಿನ ಶಿಕ್ಷಣ ಕೇಂದ್ರಗಳಲ್ಲಿ ಕಲಿತ ವ್ಯಕ್ತಿಯಷ್ಟೇ ಅಪಾರ ಜ್ಞಾನವನ್ನು ಹೊಂದಿರುತ್ತಾನೆ ಎಂಬ ಪೂರ್ವಾಗ್ರಹವನ್ನು ಹೊತ್ತಿದ್ದಾರೆ.
ಈ ದಾಸ್ಯದಿಂದ ಹೊರಬರಲು ನೆಲಮೂಲವಾದ ಸಂಸ್ಕೃತಿ, ಅದರ ಸುಗಂಧವನ್ನು ವಿಸ್ತರಿಸಬಹುದಾದ ಭಾಷೆ, ಸಾಹಿತ್ಯ, ಕಲೆಯ ಸ್ನೇಹ ಆಪ್ತತೆಯನ್ನು ಎಲ್ಲರೂ ಹೊಂದಬೇಕಿದೆ. ಎಳೆ ವಯಸ್ಸಿನಲ್ಲೇ ಭಾರತೀಯ ಮೂಲದ ವೇದಾಧ್ಯಯನ, ಉಪನಿಷತ್ತು, ತತ್ವಗಳ ಕಲಿಕೆಗೆ ಒತ್ತು ನೀಡಬೇಕಿದೆ. ವಚನ ಸಾಹಿತ್ಯ, ದಾಸ ಸಾಹಿತ್ಯದ ಬೋಧೆಗಳು ದೇಶದ ಭಕ್ತಿಯೋಗ, ಜ್ಞಾನಯೋಗ, ಕರ್ಮಯೋಗ ಪರಂಪರೆಯ ಬಗ್ಗೆ ಬೆಳಕು ಚೆಲ್ಲುತ್ತದೆ. ದೇಶದಲ್ಲಿ ಹುಟ್ಟಿ ಬೆಳೆದ ಧರ್ಮ ಹಾಗೂ ಆಧ್ಯಾತ್ಮಿಕ ದೃಷ್ಠಿಕೋನವನ್ನು ಅರಿತು ಬೆಳೆದರೆ ದೇಶ ಶತಮಾನದ ಬೌದ್ಧಿಕ ದಾಸ್ಯದಿಂದ ಕಳಚಿ, ಮೆಕಾಲೆಯೆಂಬ ಹೆಸರನ್ನೂ ಇತಿಹಾಸ ಪುಟದಿಂದ ಅಳಿಸಬಹುದಾಗಿದೆ.
ಭಾರತೀಯ ಚಿಂತನೆಗಳು ಕೇವಲ ಮಾತನಾಡಲೋ, ಸಾಹಿತ್ಯಿಕ ಸೌಂದರ್ಯವನ್ನು ಹೆಚ್ಚಿಸಲು ಬಳಸುವ ಸಾಧನಗಳಲ್ಲ. ಬದಲಾಗಿ ಸ್ವಾಭಿಮಾನದಿಂದ ಬದುಕಲು, ಆಂತರ್ಯವನ್ನು ಅರಿಯಲು ಇರುವ ಪ್ರಖರ ಸಾಧನಗಳಾಗಿವೆ.
✍️ ವಿವೇಕಾದಿತ್ಯ ಕೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.