ದೇಶದ ಸಾಂಸ್ಕೃತಿಕ ತಳಹದಿ, ವಿಶ್ವದ ಹಲವು ರಾಷ್ಟ್ರಗಳ ಸಹಭಾಗಿತ್ವ, ಮೈತ್ರಿಯ ಮೂಲಕ ರಾಷ್ಟ್ರದ ಆರ್ಥಿಕ, ವೈಜ್ಞಾನಿಕ, ಸಾಮಾಜಿಕ ಪ್ರಗತಿ. ಇದರ ಜೊತೆ ಜೊತೆಯಲ್ಲಿ ಜಾಗತಿಕ ನಕ್ಷೆಯಲ್ಲಿ ಆರೋಗ್ಯ, ವೈದ್ಯಕೀಯ ಸಹಿತ ಹಲವು ಕ್ಷೇತ್ರಗಳಲ್ಲಿ ದಾಪುಗಾಲು ಇಡುತ್ತಿರುವ ಭಾರತ ದೇಶದ ಮಹತ್ತರ ಪಾತ್ರವನ್ನು ಅರ್ಥೈಸುವ ದಿನಗಳು ಹತ್ತಿರವಾಗಿವೆ.
ಇಂದು ಭಾರತ ದೇಶ ವಿಶ್ವಕ್ಕೆ ಮಾದರಿಯಾಗುತ್ತಿದೆ. ಹಲವು ಪ್ರಭಾವಿ ರಾಷ್ಟ್ರಗಳು ಬೃಹತ್ ಉದ್ಯಮ, ಹೂಡಿಕೆಗಳ ಮೂಲಕ ಸಣ್ಣ ಪುಟ್ಟ ರಾಷ್ಟ್ರಗಳಲ್ಲಿ ತಮ್ಮ ಪ್ರಾಬಲ್ಯ, ಪಾರಮ್ಯ ಮೆರೆದು, ಪುಟ್ಟ ರಾಷ್ಟ್ರಗಳನ್ನು ತಮ್ಮ ಕೈ ಮುಷ್ಠಿಯೊಳಗೆ ಇಡಲು ಹಪಹಪಿಸುತ್ತಿದ್ದರೆ, ಭಾರತದ ಹೆಜ್ಜೆ ಗೌರವಪ್ರದವಾಗಿದೆ. ನೇಪಾಳ, ಬಾಂಗ್ಲಾದೇಶ, ಮಾರಿಶಿಯಸ್ ರಾಷ್ಟ್ರಗಳಿಗೆ ಉಚಿತವಾಗಿ ಕೋವಿಡ್ ಔಷಧವನ್ನು ನೀಡಿದ್ದು ಮಾತ್ರವಲ್ಲದೆ ಶ್ರೀಲಂಕಾ, ಅಪ್ಘಾನಿಸ್ಥಾನಗಳು ಕೋ ವ್ಯಾಕ್ಸಿನ್ ಎಂಬ ದಿವ್ಯೌಷಧವನ್ನು ಭಾರತದಿಂದಲೇ ಪಡೆಯಲು ಮುಂದಾಗಿವೆ. ಉತ್ತಮ ಗುಣಮಟ್ಟ ಹೊಂದಿರುವ, ದೇಶದ ಔಷಧ ತಂತ್ರಜ್ಞಾನದ ವೈಜ್ಞಾನಿಕ ದಾಪುಗಾಲು, ಕಡಿಮೆ ದರದಲ್ಲಿ ಗುಣಮಟ್ಟ ಕಾಪಾಡಿ ತಯಾರಿಸಲ್ಪಟ್ಟ ದೇಶದ ಕೋವಿಡ್-19 ರೋಗ ನಿಯಂತ್ರಕ ಔಷಧವು ಅಮೇರಿಕಾ, ಬ್ರಿಟನ್ ಸಹಿತ ರಷ್ಯಾದ ಸ್ಪುಟ್ನಿಕ್ ಔಷಧಕ್ಕಿಂತ ಕಡಿಮೆ ದರದಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಾಗಬಹುದಾದ ಉತ್ಕೃಷ್ಟ ಗುಣಮಟ್ಟದ ಔಷಧ ಎಂಬ ಖ್ಯಾತಿಗೆ ಒಳಗಾಗಿದೆ. ಪ್ರಪಂಚದಲ್ಲಿ ಕೊರೊನಾ ರೋಗ ಉಲ್ಬಣಗೊಂಡು ವಿಶ್ವದ ಹಲವು ರಾಷ್ಟ್ರಗಳಲ್ಲಿ ದೊಡ್ಡ ಸಾಂಕ್ರಾಮಿಕವಾಗಿ ಹಬ್ಬಿದ ಸಂದರ್ಭ ಅತಿ ಹೆಚ್ಚು ಜನಸಂಖ್ಯೆಯಿರುವ ಭಾರತದಲ್ಲಿ ರೋಗ ಹರಡಿದರೆ ಹೇಗೆ ತಡೆಯಲಾದೀತು ಎಂದು ಪ್ರಶ್ನಿಸಿದ್ದ ವಿಶ್ವದ ಮಾಧ್ಯಮಗಳಿಗೆ ಭಾರತ ಉತ್ತರ ನೀಡುತ್ತಿದೆ. ವ್ಯಾಕ್ಸಿನ್ ಮೈತ್ರಿಯು ಇಂದು ಭಾರತ ಉಪಖಂಡದ ಹಲವು ದೇಶಗಳನ್ನು ಒಂದಾಗಿಸಿದೆ. ಇತ್ತೀಚಿಗಷ್ಟೇ ಭಾರತದಲ್ಲಿ ನಿರ್ಮಾಣ ಹೊಂದಿದ ಕೋ- ವ್ಯಾಕ್ಸಿನ್ ಔಷಧ ಸರಕು ಬ್ರೆಜಿಲ್ ರಾಜಧಾನಿ ರಿಯೊ ಡಿ ಜನೆರೋ ತಲುಪಿದ ಹಿನ್ನೆಲೆಯಲ್ಲಿ ಪ್ರಧಾನಿ ಬೊಲ್ಸನ್ವರೊ ಭಾರತಕ್ಕೆ ಧನ್ಯವಾದ ತಿಳಿಸಿದ್ದು ಮಾತ್ರವಲ್ಲ, ತಮ್ಮ ವೈಯಕ್ತಿಕ ಟ್ವಿಟ್ಟರ್ ಖಾತೆ ಮುಖಾಂತರ ಹನುಮಂತ ಕೋವಿಶೀಲ್ಡ್ ಎಂಬ ಸಂಜೀವಿನಿ ಔಷಧವನ್ನು ಬ್ರೆಜಿಲ್ ದೇಶಕ್ಕೆ ಹಾರಿ ತಲುಪಿಸುತ್ತಿದ್ದಾನೆ ಎಂಬ ಚಿತ್ರವನ್ನು ಪೋಸ್ಟ್ ಮಾಡಿದ್ದರು. ದೇವನಾಗರಿಯಲ್ಲಿ ಧನ್ಯವಾದ್ ಎಂದೂ ಸೂಚಿಸಲಾಗಿತ್ತು. ದೇಶದ ಅಸ್ಮಿತೆ, ಧಾರ್ಮಿಕತೆ ಸಹಿತ ಅದರ ಪರಿಚ್ಛಾಯೆಯನ್ನು ವಿಶ್ವವೇ ಅರಿಯುತ್ತಿದೆ ಎಂಬುದು ಈ ಮೂಲಕ ಎಲ್ಲರೂ ಅರಿಯುವಂತಾಗಿದೆ.
ದೇಶದ ಸೀರಮ್ ಸಂಸ್ಥೆಯಿಂದ ನಿರ್ಮಾಣ ಹೊಂದಿದ ಕೋವಾಕ್ಸಿನ್ ಲಸಿಕೆಗೆ ಆಫ್ರಿಕಾ, ಶ್ರೀಲಂಕಾ, ಅರೇಬಿಯಾ ದೇಶಗಳಿಂದಲೂ ಬೇಡಿಕೆ ಬಂದಿದೆ. ಮೂರು ಲಾಕ್ ಡೌನ್ ಗಳ ಮೂಲಕ ರೋಗ ಹರಡುವಿಕೆಯನ್ನು ತಡೆದು, ಸಾಂಕ್ರಾಮಿಕವನ್ನು ಮೆಟ್ಟಿ ನಿಲ್ಲಲು ಸಹಕಾರಿಯಾಗುವಂತೆ ಪ್ಲಾಸ್ಮಾ ಚಿಕಿತ್ಸೆಗಾಗಿ ತಜ್ಞರ ತಂಡವನ್ನು ದೇಶದೆಲ್ಲೆಡೆ ಅಳವಡಿಸಿ, ಮೆಚ್ಚುಗೆಯ ಪಾತ್ರವಹಿಸಿದ ಕೇಂದ್ರ ಸರಕಾರ ಈ ಹಿಂದೆ ಇತರ ದೇಶಗಳಿಗೆ ಹೈಡ್ರೊಕ್ಲೊರೊಕ್ವಿನ್, ರೆಮ್ಡಿಸಿವಿರ್, ಪ್ಯಾರಾಸೆಟಮೊಲ್ ಔಷಧ ಗುಳಿಗೆಗಳನ್ನು ರವಾನಿಸಿತ್ತು. ದಾದಿಯರು ಸಹಿತ ವೈದ್ಯರಿಗೆ ನೆರವಾಗಲು ಗ್ಲೌವ್ಸ್, ಮಾಸ್ಕ್ ಗಳು, ಆಕ್ಸಿಜನ್ ವೆಂಟಿಲೇಟರ್ ಗಳು, ಕೋವಿಡ್ ಕಿಟ್ ಗಳನ್ನೂ ಪೂರೈಸಿತ್ತು. ಪ್ರಸ್ತುತ ಕಾಲಘಟ್ಟದಲ್ಲಿ ಕಡುವೈರಿ ಎಂಬಂತೆ ಬಿಂಬಿಸಲ್ಪಟ್ಟ ಡ್ರ್ಯಾಗನ್ ರಾಷ್ಟ್ರ ಚೀನಾಕ್ಕೂ ವೆಂಟಿಲೇಟರ್ ಗಳು ತಲುಪಿದ್ದವು. ನೆರವು ಕೋರಿ ಭಾರತದತ್ತ ಮುಖ ಮಾಡುತ್ತಿರುವ ಹಲವು ರಾಷ್ಟ್ರಗಳಿಗೆ ಸಂಜೀವಿನಿಯಾಗಿರುವ ಭಾರತ ದೇಶವು ಅಗತ್ಯ ಔಷಧೋಪಚಾರವನ್ನು ನೀಡುತ್ತಿದೆ. ಬ್ರೆಜಿಲ್ ದೇಶಕ್ಕೆ 20 ಲಕ್ಷ ಕೋ-ವ್ಯಾಕ್ಸಿನ್ ಔಷಧ ಸರಕನ್ನು ಕಳುಹಿಸಲಾಗಿದೆ. ನೇಪಾಳ, ಬಾಂಗ್ಲಾದೇಶಗಳಿಗೆ ಒಟ್ಟು ಮೂವತ್ತು ಲಕ್ಷ ವ್ಯಾಕ್ಸಿನ್ ಮೈತ್ರಿ ಯೋಜನೆಯ ಲಸಿಕೆ ರವಾನಿಸಲಾಗಿದೆ. ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಮತ್ತು ನೇಪಾಳ ಪ್ರಧಾನಿ ಓಲಿ ಧನ್ಯವಾದ ತಿಳಿಸಿದ್ದಾರೆ. ಈ ಸಂದರ್ಭ ಸಮೀಪ ರಾಷ್ಟ್ರ ಮಯನ್ಮಾರಿಗೂ 1.5 ಮಿಲಿಯನ್ ಲಸಿಕೆ ರವಾನಿಸಲಾಗಿದೆ. ಶ್ರೀಲಂಕಾ ಮೊದಲ್ಗೊಂಡು ಇತರೆ ಎಲ್ಲಾ ಸಮೀಪವರ್ತಿ ರಾಷ್ಟ್ರಗಳಿಗೆ ಅಪತ್ಭಾಂಧವ ಎಣಿಸಿರುವ ಭಾರತದ ಈ ಸನಿಹತೆ ಆರೋಗ್ಯ ವೈದ್ಯಕೀಯ ಕ್ಷೇತ್ರ ಮಾತ್ರವಲ್ಲದೆ ಆಂತರಿಕ ಸಹಕಾರ, ಆರ್ಥಿಕತೆ ಸಹಿತ ಹೂಡಿಕೆ ಕ್ಷೇತ್ರಗಳಲ್ಲೂ ಮುಂದಡಿಯಿಟ್ಟಿದೆ.
ಮನೆಯೊಳಗೆ ಆಂತರಿಕ ಕಲಹವಿದ್ದರೂ, ಅದನ್ನು ಪರಿಹರಿಸಲು ಮುನ್ನುಡಿ ಇಟ್ಟು, ವಿಶ್ವದ ಹತ್ತು ಹಲವು ರಾಷ್ಟ್ರಗಳಿಂದ ಮೆಚ್ಚುಗೆಗೆ ಪಾತ್ರವಾದ ಭಾರತ ಕರುಣಾ ಮೈತ್ರಿ ಗುಣಗಳ ಮೂಲಕ ವಿಶ್ವಕ್ಕೆ ಮಾದರಿಯಾಗಿದೆ. ಇಡೀ ವಿಶ್ವದ ಔಷಧಾಲಯ ಎಂದು ಬಿಂಬಿಸಲ್ಪಟ್ಟಿರುವ ಭಾರತವು ಜಗತ್ತಿನ 60% ಔಷಧಗಳನ್ನು ತಯಾರಿಸುತ್ತದೆ. ಕೊವಿಡ್-19 ರೋಗ ನಿಯಂತ್ರಕ ಔಷಧವಾದ ಕೋವಿಶೀಲ್ಡ್ ʼಸೀರಂ ಇಸ್ಟಿಟ್ಯೂಟ್ ಆಫ್ ಇಂಡಿಯಾʼ ಮೂಲಕ ತಯಾರಾದರೆ, ಕೋವಾಕ್ಸಿನ್ ಭಾರತದಲ್ಲಿ ಸಂಶೋಧಿಸಲ್ಪಟ್ಟು ತಯಾರಿಸಲ್ಪಟ್ಟ ಲಸಿಕೆಯಾಗಿದೆ. ದಕ್ಷಿಣ ಆಫ್ರಿಕಾ, ಮೊರಾಕ್ಕೊ, ಸೌದಿ ಅರೇಬಿಯಾಗಳಿಂದಲೂ ಔಷಧಕ್ಕೆ ಬೇಡಿಕೆ ಬಂದಿದ್ದು ಪೂರೈಸಲಾಗಿದೆ. ಭೂತಾನ್, ಮಾಲ್ಡೀವ್ಸ್, ಸಿಶೆಲ್ಸ್, ಮಾರಿಶಿಯಸ್ ನಂತಹ ಪುಟ್ಟ ರಾಷ್ಟ್ರಗಳಿಗೆ ಉಚಿತವಾಗಿ ಕೋವಿಡ್ ಔಷಧಗಳನ್ನು ನೀಡಲಾಗಿದೆ.
ಈ ಸಂದರ್ಭ ಭಾರತವನ್ನು ಗುಣಗಾನ ಮಾಡಿರುವ ಅಮೇರಿಕಾ- ಭಾರತವು ತನ್ನ ಆಪ್ತ ಮಿತ್ರ, ಅಲ್ಲಿನ ಔಷಧಾಲಯಗಳಿಂದ ತಯಾರಾಗುವ ಕೋವಿಡ್ ಲಸಿಕೆಯನ್ನು ಅಗತ್ಯವಿರುವ ವಿಶ್ವ ಸಮೂಹಕ್ಕೆ ನೀಡಿ ಸಹಕರಿಸುತ್ತಿದೆ ಎಂದಿದೆ.
ವಿಶ್ವ ಆರೋಗ್ಯ ಸಂಸ್ಥೆಯ ನಿರ್ದೇಶಕರು ಭಾರತದ ಈ ನಡೆಯ ಬಗ್ಗೆ ಪ್ರಶಂಸನೀಯ ಮಾತುಗಳನ್ನಾಡಿದ್ದಾರೆ. ವಸುದೈವ ಕುಟುಂಬಕಂ, ಲೋಕಾ ಸಮಸ್ತಾ ಸುಖಿನೋ ಭವಂತು ಎಂಬುದು ಕೇವಲ ವೇದೋಕ್ತಿಯಲ್ಲ ಬದಲಾಗಿ ಕರ್ತೃ ಮತ್ತು ಕರ್ಮದ ಅನನ್ಯ ಬಂಧ. ದೇಶ ಹಿತದ ಜೊತೆಯಲ್ಲಿ ವಿಶ್ವದ ಹಿತವನ್ನು ಮನಗಂಡು ಸ್ಪಂದಿಸುತ್ತಿರುವ ಭಾರತ ದೇಶದ ಹಿರಿಮೆ ಗರಿಮೆ ಎಂದಿಗೂ ಉಜ್ವಲ.
✍️ವಿಕ್ರಮಾದಿತ್ಯ.ಕೆ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.