“ರಾಮಾಯಣ” ಇದೊಂದು ಮಹಾಕಾವ್ಯ. ರಾಮಾಯಣ ಪೌರಾಣಿಕ ಕಥೆಯಲ್ಲ. ಇದು ನಮ್ಮ ಇತಿಹಾಸ. ಪ್ರತಿಯೊಬ್ಬ ಹಿಂದೂವಿನ ಜೀವನದ ಭಾಗ. ರಾಮಾಯಣ ಶ್ರೇಷ್ಠ ಗ್ರಂಥ. ಯಾಕೆಂದರೆ ಇಲ್ಲಿ ನಡೆದ ಪ್ರತಿಯೊಂದು ಘಟನೆಯೂ ಪ್ರತಿಯೊಂದು ಪಾಠವೂ ಸರ್ವಕಾಲಕ್ಕೂ ಸಲ್ಲುವುದರಲ್ಲಿ ಯಾವುದೇ ಸಂದೇಹವಿಲ್ಲ. ಪ್ರಭು ಶ್ರೀರಾಮ ಚಂದ್ರನದು ಆದರ್ಶ ವ್ಯಕ್ತಿತ್ವ. ನಮ್ಮ ಜೀವನದ ಯಾವ ಪಾತ್ರಗಳನ್ನೂ ಯಾವ ರೀತಿಯಲ್ಲಿ ನಿಭಾಯಿಸಬೇಕು ಮತ್ತು ಯಾವ ರೀತಿಯಲ್ಲಿ ನಿಭಾಯಿಸಬಾರದು ಎಂಬುದಕ್ಕೆ ಸರಳ ಉದಾಹರಣೆಗಳು ನಮಗೆ ರಾಮಾಯಣದಲ್ಲೇ ಕಾಣಸಿಗುತ್ತವೆ. ಭ್ರಾತೃ ಪ್ರೇಮಕ್ಕೆ ಭರತ ಮತ್ತು ಲಕ್ಷ್ಮಣರು ಉದಾಹರಣೆಯಾದರೆ, ಸ್ವಾಮೀ ಭಕ್ತಿಗೆ ಹನುಮಂತ ಉದಾಹರಣೆಯಾಗುತ್ತಾನೆ. ರಾಮಾಯಣದಲ್ಲಿ ನಡೆದ ಪ್ರಮುಖ ಘಟನೆಯೊಂದು ನಮ್ಮೆಲ್ಲರಿಗೂ ತಿಳಿದಿದೆ. ಸೀತೆಯನ್ನು ಅಪಹರಿಸಲು ಪ್ರಯತ್ನಿಸುತ್ತಿದ್ದ ರಾವಣ ಮತ್ತು ಸೀತೆಯ ಅಪಹರಣಕ್ಕೆ ಕಾರಣವಾದ ಸುವರ್ಣ ಜಿಂಕೆ ಎರಡೂ ಕೂಡಾ ಮಾರುವೇಷಗಳು. ಶತ್ರುಗಳು ನೇರವಾಗಿ ಮುಂದೆ ಬರದೇ ಮಾರುವೇಷವನ್ನು ಧರಿಸಿ ಮೋಸಗೊಳಿಸಿದ ಕಥೆಯು ಇಂದಿಗೂ ಪ್ರಸ್ತುತವೆಂದು ನಿಮಗನಿಸುವುದಿಲ್ಲವೇ???
ಹಿಂದೂಗಳು ಅಥವಾ ಸನಾತನ ಧರ್ಮದ ಅನುಯಾಯಿಗಳು ಅತ್ಯಂತ ಪರಧರ್ಮ ಸಹಿಷ್ಣುಗಳು. ಮಾತ್ರವಲ್ಲ ಜಾತ್ಯತೀತತೆಯೂ ಹಿಂದೂಗಳಲ್ಲೇ ಹೆಚ್ಚಾಗಿ ಕಂಡು ಬರುತ್ತದೆ. ಹೊಸತನವನ್ನು ಒಪ್ಪಿಕೊಳ್ಳುವ ಮತ್ತು ಅಪ್ಪಿಕೊಳ್ಳುವ ಮತ್ತು ಹೊಸತನಕ್ಕೆ ತೆರೆದುಕೊಳ್ಳುವ ಗುಣವು ಹಿಂದೂಗಳ ಸಂಸ್ಕೃತಿಯ ಒಂದು ಭಾಗವೇ ಆಗಿದೆ. ಹಿಂದೂ ಧರ್ಮದಲ್ಲಿ ಪ್ರಶ್ನಿಸುವ ಮತ್ತು ಉತ್ತರವನ್ನು ಕಂಡುಕೊಳ್ಳುವ ಪ್ರಕ್ರಿಯೆಗೆ ಯಾವುದೇ ತಡೆಯಿಲ್ಲ, ಅದಕ್ಕಾಗಿಯೇ ಹಿಂದೂ ಧರ್ಮದಲ್ಲಿ ಅನೇಕ ಪಂಥಗಳು ಕವಲೊಡೆದವು. ಆದರೆ ನಮ್ಮ ಅದೇ ಸಹಿಷ್ಣುತೆ ಮತ್ತು ಅಪ್ಪಿಕೊಳ್ಳುವ ಸ್ವಭಾವವನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎನ್ನುವ ವಿಚಾರವೂ ಸತ್ಯವಲ್ಲವೇ? ಬಹಳಷ್ಟು ಹಿಂದೆ ಭಾರತೀಯರು ಹಲ್ಲುಜ್ಜಲು ಬೇವಿನ ಕಡ್ಡಿಯನ್ನೂ, ಉಪ್ಪನ್ನೂ ಬಳಸುತ್ತಿದ್ದರು. ಇದು ಅನೇಕ ವರ್ಷಗಳ ಹಿಂದಿನ ಕಥೆಯಲ್ಲ, ಮನೆಯಲ್ಲಿರುವ ನಮ್ಮ ಅಜ್ಜ ಅಜ್ಜಿ ಕೂಡಾ ಇದೆ ವಿಧಾನವನ್ನು ಬಳಸುವುದನ್ನೂ ನಾವು ನೋಡಿದ್ದೇವೆ. ಆದರೆ ಅಂತಾರಾಷ್ಟ್ರೀಯ ಟೂತ್ ಪೇಸ್ಟ್ ಉತ್ಪಾದನಾ ಸಂಸ್ಥೆಗಳು ನಮ್ಮ ವಿಧಾನವನ್ನು ಅವೈಜ್ಞಾನಿಕವೆಂದು ಕರೆದು ಹಲ್ಲನ್ನು ಬಲಶಾಲಿಯಾಗಿಸುವುದು ಮತ್ತು ಶುಚಿಗೊಳಿಸುವುದು ಅವರ ಸಂಸ್ಥೆಗಳಿಂದ ತಯಾರಿಸಲ್ಪಟ್ಟ ಟೂತ್ ಪಾಸ್ಟ್ಗಳು ಮಾತ್ರ ಎಂಬ ವಿಚಾರವನ್ನು ನಮ್ಮ ಮನದಲ್ಲಿ ಬೇರೂರುವಂತೆ ಮಾಡಿದರು. ಆದರೆ ಇಂದು??? ಅದೇ ಸಂಸ್ಥೆಗಳು ನಮ್ಮ ಟೂತ್ ಪೇಸ್ಟ್ಗಳು ಉಪ್ಪಿನ ಅಂಶವನ್ನು ಹೊಂದಿದೆ, ಬೇವಿನ ಅಂಶವನ್ನು ಹೊಂದಿದೆ ಎಂಬ ಜಾಹೀರಾತುಗಳನ್ನು ನೀಡುತ್ತಿವೆ. ನಮ್ಮ ಉತ್ಕೃಷ್ಟ ಜೀವನ ಶೈಲಿಯ ಬಗ್ಗೆ ನಮ್ಮಲ್ಲೇ ಕೀಳರಿಮೆಯನ್ನು ಹುಟ್ಟಿಸಿ, ಬಳಿಕ ಅದನ್ನು ತಾವು ಅಳವಡಿಸಿಕೊಂಡು ವರುಷಗಳ ಬಳಿಕ ಅದು ಅವರ ಕೊಡುಗೆ ಎಂಬಂತೆ ನಮಗೆ ಹಿಂತಿರುಗಿಸುವುದು. ಈ ವಿಧಾನ ಕೇವಲ ವ್ಯಾಪಾರೀ ದೃಷ್ಟಿಯ ಅಂತಾರಾಷ್ಟ್ರೀಯ ಸಂಸ್ಥೆಗಳು ಬಳಸುವುದು ಎಂದು ಅಂದುಕೊಂಡಿದ್ದರೆ ಅದು ನಮ್ಮ ತಪ್ಪು ಕಲ್ಪನೆ ಅಷ್ಟೇ.
ವಸಾಹತುಶಾಹೀ ಆಡಳಿತಗಾರರು ನಮ್ಮ ದೇಶಕ್ಕೆ ಬಂದಾಗ ಅವರೊಂದಿಗೆ ಹೊಸತೊಂದು ಮತವೂ ನಮ್ಮ ದೇಶಕ್ಕೆ ಪರಿಚಯಿಸಲ್ಪಟ್ಟಿತು. ಡಚ್ಚರು, ಫ್ರೆಂಚರು ಮತ್ತು ಬ್ರಿಟೀಷರು ತಮ್ಮೊಂದಿಗೆ ತಮ್ಮ ಮತವನ್ನೂ, ಮತ ಗ್ರಂಥವನ್ನೂ ಹೊತ್ತು ತಂದಿದ್ದರು ಜೊತೆಯಲ್ಲಿ ಮತಾಂತರವನ್ನೂ ಕೂಡ. ನೂರಾರು ವರ್ಷಗಳ ಕಾಲ ಮೊಘಲರು ನಡೆಸಿದಂತೆಯೇ ವಸಾಹತು ಶಾಹೀ ಆಡಳಿತಗಾರರೂ ಹೆದರಿಸಿ, ಬೆದರಿಸಿ ದಬ್ಬಾಳಿಕೆಯನ್ನು ನಡೆಸಿ ಮತಾಂತರವನ್ನು ಅವ್ಯಾಹಿತವಾಗಿ ನಡೆಸಿದರೆಂಬುದು ನಮಗೆ ತಿಳಿದೇ ಇದೆ ಮತ್ತು ಗೋವಾದಲ್ಲಿ ನಡೆದ ನರಮೇಧಗಳ ಕುರಿತೂ ನಾವು ಅರಿತಿದ್ದೇವೆ. ಅಂದು ಕೇವಲ ದೈಹಿಕ ಬೆದರಿಕೆಗಳು ಮಾತ್ರ ನಡೆಯಲಿಲ್ಲ ಬದಲಾಗಿ ಈ ಪ್ರಕ್ರಿಯೆಯು ಬೌದ್ಧಿಕವಾಗಿಯೂ ವೈಚಾರಿಕವಾಗಿಯೂ ನಡೆಯಿತು. ನಮ್ಮ ನಂಬಿಕೆಗಳು ಅವೈಜ್ಞಾನಿಕವೆಂದೂ ಮೂಢನಂಬಿಕೆಗಳೆಂದೂ ನಾವೇ ಒಪ್ಪಿಕೊಳ್ಳುವಂತೆ ಮಾಡಲಾಯಿತು. ನಮ್ಮ ಶಿಕ್ಷಣ ವ್ಯವಸ್ಥೆಯನ್ನೇ ಬುಡಮೇಲುಗೊಳಿಸಿ ಅವರ ಶಿಕ್ಷಣ ಪದ್ದತಿಯೇ ಶ್ರೇಷ್ಠವೆಂದು ನಿರೂಪಿಸುವುದರಿಂದ ಪ್ರಾರಂಭವಾದ ಪ್ರಕ್ರಿಯೆಯು ಇಂದಿಗೂ ಅದೇ ಹಾದಿಯಲ್ಲಿ ನಡೆಯುತ್ತಿದೆ.
ಕೆಲವು ತಿಂಗಳುಗಳ ಹಿಂದೆ ಕೇರಳವು ತನ್ನ ಪ್ರಮುಖ ಹಬ್ಬವಾದ ಓಣಂ ಹಬ್ಬವನ್ನು ಸಂಭ್ರಮದಿಂದ ಆಚರಿಸಿತು. ಓಣಂ ಕೇರಳದ ನಾಡಹಬ್ಬ ಎಂಬುದು ನಮ್ಮೆಲ್ಲರಿಗೂ ತಿಳಿದಿದೆ..ಕರ್ನಾಟಕವು ಹೇಗೆ ದಸರಾವನ್ನು ಸಂಭ್ರಮದಿಂದ ಆಚರಿಸುತ್ತದೆಯೋ ಅದೇ ರೀತಿಯಲ್ಲಿ ಕೇರಳವು ಓಣಂ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತದೆ. ಓಣಂ ಕೇರಳದ ನಾಡ ಹಬ್ಬವಿರಬಹುದು ಆದರೆ ಅದು ಹಿಂದೂಗಳ ಹಬ್ಬ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ ಎಂಬುದೂ ಕೂಡ ಅಷ್ಟೇ ಸತ್ಯ. ಆದರೆ ಕೇರಳದ ಹಣಕಾಸು ಸಚಿವರಾದ ಥಾಮಸ್ ಇಸಾಕ್ ” ಓಣಂ ಹಬ್ಬದ ಶುಭಾಶಯಗಳು, ನಾವು ಸರ್ವ ಜಾತಿಯ ಪ್ರಜೆಗಳನ್ನೂ ಸಮಾನವಾಗಿ ಕಂಡ ರಾಜ ಮಹಾಬಲಿಯ ಹಬ್ಬವನ್ನು ಆಚರಿಸುತ್ತೇವೆಯೇ ಹೊರತು, ಅವರನ್ನು ಮೋಸಗೊಳಿಸಿದ ವಾಮನನನ್ನಲ್ಲ” ಎಂಬುದಾಗಿ ಟ್ವೀಟ್ ಮಾಡಿದ್ದರು. ಇದರ ಬೆನ್ನಲ್ಲೇ ಕೇರಳದ ಕ್ರಿಶ್ಚಿಯನ್ ಮಹಿಳೆಯೊಬ್ಬರು ” ಓಣಂ ಹಿಂದೂ ಹಬ್ಬವಲ್ಲ, ಓಣಂ ಹಬ್ಬದಲ್ಲಿ ಹಿಂದೂ ದೇವರ ವೈಭವೀಕರಣ ನಡೆಯುವುದಿಲ್ಲ. ಬದಲಾಗಿ ಓಣಂ ಹಬ್ಬವನ್ನು ವಾಮನನ ಅಸೂಯೆಗೆ ಬಲಿಯಾದ ದ್ರಾವಿಡ, ಅಸುರ ರಾಜನ ನೆನಪಿನಲ್ಲಿ ಆಚರಿಸಲಾಗುತ್ತದೆ ” ಎಂಬುದಾಗಿ ಟ್ವೀಟ್ ಮಾಡುತ್ತಾರೆ. ಇವರ ಜಾತ್ಯಾತೀತತೆಯ ಪ್ರಕಾರ ಓಣಂ ಹಿಂದೂ ಹಬ್ಬವಲ್ಲ, ಬದಲಾಗಿ ಹಿಂದೂ ದೇವರಿಂದ ಮೋಸಕ್ಕೊಳಗಾದ ದ್ರಾವಿಡ ಅಸುರ ರಾಜನನ್ನು ಸ್ಮರಿಸುವ ಹಬ್ಬ. ಇದರ ಮುಂದುವರೆದ ಭಾಗವೂ ಇದೆ. ಓಣಂ ಹಬ್ಬದಲ್ಲಿ ರಚಿಸಲಾಗುವ ಪೂಕ್ಕಳಂನಲ್ಲಿ ಮಧ್ಯದಲ್ಲಿ ದೀಪವನ್ನು ಇರಿಸುವುದು ಸಂಪ್ರದಾಯ. ಆದರೆ ಜಾತ್ಯಾತೀತರ ಓಣಂನಲ್ಲಿ ರಚಿಸಲಾಗುವ ಪೂಕ್ಕಳಂನಲ್ಲಿ ದೀಪದ ಸ್ಥಾನವನ್ನು ಏಸುಕ್ರಿಸ್ತನ ಮೂರ್ತಿಯು ಆಕ್ರಮಿಸಿದೆ. ಚರ್ಚ್ಗಳಲ್ಲಿ ಓಣಂ ಹಬ್ಬದ ಪ್ರಯುಕ್ತ ವಿಶೇಷ ಪ್ರಾರ್ಥನಾ ಸಭೆಗಳನ್ನು ಆಯೋಜಿಸಲಾಗುತ್ತಿದೆ. ಇದರ ಹಿಂದಿರುವ ಉದ್ದೇಶ??? ಇದು ಕೇವಲ ಜಾತ್ಯಾತೀತತೆಯೇ?
ಹಾಗೆ ನೋಡಿದರೆ ಆರ್ಯ ದ್ರಾವಿಡ ಎಂಬ ಒಡೆದು ಆಳುವ ಸಿದ್ಧಾಂತವು ಹೆಚ್ಚು ಪ್ರಚಲಿತದಲ್ಲಿರುವುದು ತಮಿಳುನಾಡಿನಲ್ಲಿ. ದಲಿತ ಕ್ರಿಶ್ಚಿಯನ್ರ ಸಂಖ್ಯೆಯೂ ಅಲ್ಲಿ ಹೆಚ್ಚಿದೆ. ಆರ್ಯ ದ್ರಾವಿಡ ಸಿದ್ದಾಂತದ ಇನ್ನೊಂದು ಮುಖವೇ ದ್ರಾವಿಡರು ಕ್ರಿಶ್ಚಿಯನ್ನರು ಎನ್ನುವ ಸಿದ್ದಾಂತ. ತಮಿಳುನಾಡಿನಲ್ಲಿ ಮತಾಂತರ ಬಹಳ ವೇಗದಲ್ಲಿ ನಡೆಯುತ್ತಿದೆ. ಅದರ ಇನ್ನೊಂದು ಮಜಲೇ ಪೊಂಗಲ್ ತಮಿಳರ ಹಬ್ಬ, ತಮಿಳರ ಹಬ್ಬ ಮಾತ್ರ ಎನ್ನುವ ಹೊಸ ವ್ಯಾಖ್ಯಾನ. ಇದನ್ನು ಜಾತ್ಯತೀತರು ಜಾತ್ಯಾತೀತ ತತ್ವಗಳ ಹೊದಿಕೆಯನ್ನು ಹೊದಿಸಿ ನೋಡುತ್ತಾರಾದರೂ ಇದರ ಹಿನ್ನಲೆಯಲ್ಲಿ ಇತರ ಉದ್ದೇಶಗಳಿರುವುದು ಸ್ಪಷ್ಟವಾಗಿ ಗೋಚರಿಸುವುದು ಸುಳ್ಳಲ್ಲ. ಸೂರ್ಯನನ್ನು ಪೂಜಿಸುವ ಈ ಹಬ್ಬವನ್ನು ಜಾತ್ಯತೀತವನ್ನಾಗಿಸುವುದು ಮಾತ್ರವಲ್ಲದೆ, ಪೂರ್ವಕ್ಕೆ ಬದಲಾಗಿ ಪಶ್ಚಿಮಕ್ಕೆದುರಾಗಿ ನಿಂತು ಪೂಜಿಸುವ ಹೊಸ ಮಜಲನ್ನು ತೋರುತ್ತಿರುವುದೇ ಇದಕ್ಕೆ ಉದಾಹರಣೆಯಾಗಿದೆ. ಜಾತ್ಯತೀತ ತತ್ವಕ್ಕೆ ನಮ್ಮ ವಿರೋಧವಿಲ್ಲ, ನಮ್ಮ ವಿರೋಧ ವೇಷ ಮರೆಸಿ ಬರುವ ಮಾರೀಚ ಮತ್ತು ರಾವಣನ ಕುತಂತ್ರಗಳಿಗೆ ಮಾತ್ರ..
ಆಧುನಿಕತೆ ಮತ್ತು ಜಾತ್ಯಾತೀತತೆಯ ಹೆಸರಿನಲ್ಲಿ ನಾವು ಮಕ್ಕಳ ಮನಸ್ಸಿನಲ್ಲಿ ಅನೇಕ ಗೊಂದಲಗಳನ್ನು ಹುಟ್ಟುಹಾಕುತ್ತೇವೆ. ಸರ್ವಧರ್ಮ ಸಹಿಷ್ಣುತೆಯು ನಮ್ಮ ಸಂಸ್ಕಾರದಲ್ಲಿಡೇ ಮತ್ತು ನಮ್ಮ ಸಂಸ್ಕೃತಿಯ ಭಾಗವಾಗಿದೆ. ನಾವು ನಮ್ಮ ಹಬ್ಬಗಳನ್ನು ಆಚರಿಸುವಾಗ ಯಾವ ಕಾರಣಕ್ಕಾಗಿ ಆಚರಿಸುತ್ತೇವೆ ಮತ್ತು ಅದರ ಇತಿಹಾಸವೇನು ಎಂಬುದನ್ನು ಅವಶ್ಯವಾಗಿ ತಿಳಿದಿರಬೇಕು ಮತ್ತು ಮಕ್ಕಳಿಗೂ ತಿಳಿಸಬೇಕು ಎಂಬುದು ಆದ್ಯ ಕರ್ತವ್ಯವಾಗಬೇಕು. ನಾವು ಆಚರಿಸುವ ಪ್ರತಿಯೊಂದು ಹಬ್ಬಕ್ಕೂ ಇರುವ ವೈಜ್ಞಾನಿಕ ಹಿನ್ನಲೆಗಳನ್ನೂ ಅರಿತುಕೊಳ್ಳುವುದು ನಮ್ಮ ಆದ್ಯತೆಯಾಗಬೇಕು. ನಮ್ಮದನ್ನು ನಮ್ಮದಲ್ಲ ಎಂದು ಯಾರಾದರೂ ಹೇಳಿದಲ್ಲಿ ಅದನ್ನು ಖಂಡಿಸಲು ನಮ್ಮಲ್ಲಿ ಜ್ಞಾನ ಮತ್ತು ಆತ್ಮವಿಶ್ವಾಸ ಇರಬೇಕಾದದ್ದು ಅವಶ್ಯವಲ್ಲವೇ? ಈ ಜ್ಞಾನ ಮತ್ತು ಆತ್ಮವಿಶ್ವಾಸವನ್ನು ಗಳಿಸಲು ನಾವೇನು ಮಾಡಬೇಕು ಎಂಬುದನ್ನು ಆಲೋಚಿಸಬೇಕಾದದ್ದು ಯಾರು ಎಂಬ ಪ್ರಶ್ನೆಯನ್ನು ನಮಗೆ ನಾವೇ ಕೇಳಿಕೊಳ್ಳಬೇಕಾದ ಸಂದರ್ಭವಿದು. ಈ ಕುರಿತಾಗಿ ನಾವೂ ಒಮ್ಮೆ ಆಲೋಚಿಸೋಣ ಅಲ್ಲವೇ????
✍️ ದೀಪಾ ಜಿ. ಭಟ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.