ಹೈದರಾಬಾದ್: ವಿಶ್ವದೆಲ್ಲೆಡೆ ಇರುವ ರಾಮ ಭಕ್ತರ ಕನಸು ಇನ್ನೇನು ನನಸಾಗುವ ಕಾಲ ಸನ್ನಿಹಿತವಾಗಿದೆ. ಅಯೋಧ್ಯೆಯ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯ ಇದೇ ತಿಂಗಳಿನಲ್ಲಿ ಆರಂಭವಾಗಲಿದೆ. ಈ ನಿರ್ಮಾಣ ಕಾರ್ಯ ಮುಂದಿನ ಮೂರೂವರೆ ವರ್ಷದಲ್ಲಿ ಸಂಪೂರ್ಣವಾಗುವ ನಿರೀಕ್ಷೆ ಇದೆ ಎಂದು ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ನ ಖಜಾಂಜಿ ಶ್ರೀ ಸ್ವಾಮಿ ಗೋವಿಂದ ದೇವ ಗಿರಿ ಜಿ ಮಹಾರಾಜ್ ಅವರು ಮಾಹಿತಿ ನೀಡಿದ್ದಾರೆ.
ಪ್ರಭು ಶ್ರೀರಾಮನ ಭವ್ಯ ಮಂದಿರವನ್ನು ನಿರ್ಮಿಸಲು ತಗುಲುವ ವೆಚ್ಚದ ಬಗ್ಗೆ ಈಗಾಗಲೇ ಯೋಜನೆಯನ್ನು ಹಾಕಿಕೊಳ್ಳಲಾಗಿದೆ. ಅದರನ್ವಯ ಸುಮಾರು 1,100 ಕೋಟಿ ರೂ. ಗಳು ಈ ಮಂದಿರ ನಿರ್ಮಾಣ ಕಾರ್ಯಕ್ಕೆ ಅಗತ್ವಿದ್ದು, ಇದಕ್ಕಾಗಿ ದೇಶದಾದ್ಯಂತ ರಾಮ ಭಕ್ತರಿಂದ ನಿಧಿ ಸಮರ್ಪಣಾ ಅಭಿಯಾನವನ್ನೂ ಆಯೋಜನೆ ಮಾಡಲಾಗಿದೆ. ಜ. 15 ರಿಂದ ಈ ಅಭಿಯಾನ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ. ಅಯೋದ್ಯೆಯಲ್ಲಿನ ಬಹುನಿರೀಕ್ಷಿತ ಮಂದಿರದ ಮುಖ್ಯ ದೇಗುಲ ನಿರ್ಮಾಣಕ್ಕಾಗಿ ಸುಮಾರು 300 ಕೋಟಿಗಳಿಂದ 400 ಕೋಟಿ ರೂ. ಗಳಷ್ಟು ತಗುಲುವ ಸಾಧ್ಯತೆ ಇರುವುದಾಗಿಯೂ ಸ್ವಾಮೀಜಿ ಮಾಹಿತಿ ನೀಡಿದ್ದಾರೆ.
ನಾವು ಕೇವಲ ಕಲ್ಲು, ಶಿಲೆಗಳನ್ನು ಬಳಸಿ ರಾಮ ಮಂದಿರ ನಿರ್ಮಾಣ ಮಾಡುತ್ತಿಲ್ಲ. ಬದಲಾಗಿ ದೇಶದ ಕೋಟ್ಯಾನುಕೋಟಿ ರಾಮಭಕ್ತರ ನಂಬಿಕೆಯ ರಾಷ್ಟ್ರ ಮಂದಿರವನ್ನು ನಿರ್ಮಾಣ ಮಾಡುತ್ತಿದ್ದೇವೆ. ರಾಷ್ಟ್ರೀಯ ಚೈತನ್ಯವನ್ನು ರಾಮ ಮಂದಿರದ ಮೂಲಕ ನಿರ್ಮಾಣ ಮಾಡುತ್ತಿದ್ದೇವೆ. ಪ್ರೀತಿ, ಸಮಾಜಕ್ಕೆ ಪೂರಕವಾದ, ಸಾರ್ವತ್ರಿಕ ಭ್ರಾತೃತ್ವವನ್ನು ಬಿಂಬಿಸುವ ಮಂದಿರ ನಿರ್ಮಾಣವೇ ನಮ್ಮೆಲ್ಲರ ಉದ್ದೇಶ. ಇಡೀ ದೇಶದ ಜನರಿಂದಾಗಿ, ಇಡೀ ರಾಷ್ಟ್ರದ ನಿಧಿಯನ್ನು ಬಳಸಿ ನಿರ್ಮಾಣವಾಗುತ್ತಿರುವ ಈ ಮಂದಿರ ಸಂಪೂರ್ಣ ದೇಶಕ್ಕೇ ಸೇರಿರುವ ವಿಚಾರವೆಂದು ಅವರು ಇದೇ ಸಂದರ್ಭದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.