
ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಎಂದಿಗೂ ಮರೆಯಬಾರದ ಹೆಸರು – ತಾತ್ಯಾ ಟೋಪೆ! 1857ರ ಮೊದಲ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಸಿಡಿದೆದ್ದ ಧೀರ ಯೋಧ, ನಾನಾ ಗೋವಿಂದ್ ದಂಡೋಪಂಥ್ (ನಾನಾ ಸಾಹೇಬ್) ಅವರ ತಂತ್ರಜ್ಞ, ಸೈನ್ಯದ ಸೇನಾಧಿಪತಿಯಾಗಿದ್ದವರು. ಅವರ ಹೆಸರು ಕೇಳಿದರೆ ಎದೆ ಹೆಮ್ಮೆಯಿಂದ ತುಂಬಿ ಬರುತ್ತದೆ, ಅವರು ತಾಯ್ನಾಡಿಗಾಗಿ ಮಾಡಿದ ತ್ಯಾಗ ನಮ್ಮ ಕಣ್ಣುಗಳನ್ನು ತೇವಗೊಳಿಸುತ್ತದೆ. ಅಧಿಕೃತ ಇತಿಹಾಸವು ಹೇಳುವಂತೆ, 1859ರ ಏಪ್ರಿಲ್ 18ರಂದು ಶಿವಪುರಿಯಲ್ಲಿ ಅವರನ್ನು ಗಲ್ಲಿಗೇರಿಸಲಾಯಿತು. ಆದರೆ ಇದು ಬ್ರಿಟಿಷರು ಹೆಣೆದ ಕಟ್ಟುಕಥೆಯಾಗಿತ್ತು. ದಂಗೆಕಾರರ ಮನೋಬಲವನ್ನು ಚೂರುಚೂರಾಗಿಸಲು, ಸಂಘಟಿತ ಪ್ರತಿರೋಧವನ್ನು ಸಂಪೂರ್ಣವಾಗಿ ಮುಗಿಸಿ ಬಿಡಲು ಬ್ರಿಟಿಷರು ಒಂದು ದೊಡ್ಡ ನಾಟಕವನ್ನೇ ಆಡಿದ್ದರು. ಏಪ್ರಿಲ್ನಲ್ಲಿ ರಾಜಾ ಮಾನ್ ಸಿಂಗ್ ಎಂಬ ವ್ಯಕ್ತಿಯನ್ನು ತಾತ್ಯಾ ಟೋಪೆ ಎಂದು ಬಿಂಬಿಸಿ ಗಲ್ಲಿಗೇರಿಸಿದರು. ಇದು ಬ್ರಿಟಿಷ್ ದ್ರೋಹದ ಒಂದು ಕರಾಳ ಅಧ್ಯಾಯವೇ ಆಗಿದೆ. ವಾಸ್ತವದಲ್ಲಿ ತಾತ್ಯಾ ಟೋಪಿ ನಿಧನ ರಾಗಿದ್ದು ಚಿಪ್ಪಾ ಬರೋಡ್ ಯುದ್ಧದಲ್ಲಿ.
ಏನಿದು ಚಿಪ್ಪಾ ಬರೋಡ್ ಯುದ್ಧ?
ಚಿಪ್ಪಾ ಬರೋಡ್ ಎಂಬುದು ರಾಜಸ್ಥಾನ ಮತ್ತು ಮಧ್ಯಪ್ರದೇಶದ ಗಡಿಯಲ್ಲಿರುವ ಗುಣಾ ಜಿಲ್ಲೆಯ ಸಮೀಪದ ಒಂದು ಸಣ್ಣ ಊರು. ಚಿಪ್ಪಾ ಬರೋಡ್ ಯುದ್ಧ ದೊಡ್ಡ ಮಟ್ಟದ ಯುದ್ಧವಲ್ಲ. ಇದು ಬ್ರಿಟಿಷರ ವಿರುದ್ಧ ಸ್ಥಳಿಯರು ನಡೆಸಿದ ಸಣ್ಣ ಮಟ್ಟಿನ ಸಂಘರ್ಷ. ತಾತ್ಯ ಟೋಪಿ ಅವರು 1858-59ರಲ್ಲಿ ರಾಜಸ್ಥಾನದ ಸಲುಂಬರ್, ಸಿಕರ್, ರನೋದ್ ಮುಂತಾದ ಸ್ಥಳಗಳಲ್ಲಿ ಬ್ರಿಟಿಷ್ ಸೈನಿಕರ ವಿರುದ್ಧ ಹೋರಾಟ ನಡೆಸಿದ್ದರು. ಅಂತೆಯೇ ಚಿಪ್ಪಾ ಬರೋಡ್ನಲ್ಲೂ ಸಂಘರ್ಷ ನಡೆದಿತ್ತು. ಈ ಸ್ಥಳವು ರಾಜಸ್ಥಾನ-ಮಧ್ಯಪ್ರದೇಶ ಗಡಿಯಲ್ಲಿದ್ದು, ತಾತ್ಯರ ಗೆರಿಲ್ಲಾ ಕಾರ್ಯಾಚರಣೆಗಳಿಗೆ ಸೂಕ್ತವಾಗಿತ್ತು. 1859ರ ಜನವರಿ 1ರಂದು ತಾತ್ಯಾರು ಬ್ರಿಟಿಷರೊಂದಿಗೆ ಹೋರಾಡುತ್ತಿದ್ದಾಗ ದಾಳಿಗೆ ಸಿಕ್ಕು ಹುತಾತ್ಮರಾದರು ಎಂದು ‘ತಾತ್ಯಾ ಟೋಪೆಸ್ ಆಪರೇಷನ್ ರೆಡ್ ಲೋಟಸ್’ ಪುಸ್ತಕದಲ್ಲಿ ದಾಖಲೆ ಸಮೇತ ಉಲ್ಲೇಖ ಮಾಡಲಾಗಿದೆ. ಆದರೆ ಆ ಸಮಯದಲ್ಲಿ ಅವರ ಸಾವು ಸುದ್ದಿಯಾಗಲಿಲ್ಲ. ಬ್ರಿಟಿಷರು ಅವರ ಸಾವನ್ನು ಬಹಿರಂಗಪಡಿಸಲಿಲ್ಲ. ಆದರೆ ಕೆಲವು ತಿಂಗಳುಗಳ ಬಳಿಕ ತಾತ್ಯಾ ಟೋಪೆಯ ಸಾವನ್ನು ತನ್ನ ಅನುಕೂಲಕ್ಕೆ ತಕ್ಕಂತೆ ಬ್ರಿಟಿಷ್ ಆಡಳಿತ ಬಳಸಿಕೊಂಡಿತು. ಅವರನ್ನು ಗಲ್ಲಿಗೇರಿಸಿದ್ದೇವೆ ಎನ್ನುತ್ತಾ ಜನರನ್ನು ಭಯಭೀತ ಗೊಳಿಸಲಾರಂಭಿಸಿತು.
‘ತಾತ್ಯಾ ಟೋಪೆಸ್ ಆಪರೇಷನ್ ರೆಡ್ ಲೋಟಸ್’ ಪುಸ್ತಕದ ವಾದವೇನು?
‘ತಾತ್ಯಾ ಟೋಪೆಸ್ ಆಪರೇಷನ್ ರೆಡ್ ಲೋಟಸ್’ ಎಂಬ ಪುಸ್ತಕವು ಅವರ ಸಾವಿನ ಸತ್ಯವನ್ನು ಬೆಳಕಿಗೆ ತಂದಿದೆ. ತಾತ್ಯಾ ಟೋಪೆಯವರ ನಾಲ್ಕನೇ ತಲೆಮಾರಿನ ವಂಶಸ್ಥರಾದ ಪರಾಗ್ ಟೋಪೆ ಅವರು ಕುಟುಂಬದ ಹಳೆಯ ಪತ್ರಗಳು, ಸಾಕ್ಷ್ಯಗಳು, ಬ್ರಿಟಿಷ್ ದಾಖಲೆಗಳು ಮತ್ತು ಮರಾಠಿ-ಉರ್ದು ಭಾಷೆಯ ಸಾಕ್ಷಿಗಳ ಆಧಾರದಲ್ಲಿ ಈ ಪುಸ್ತಕವನ್ನು ರಚಿಸಿದ್ದು, ಈ ಪುಸ್ತಕ ಓದುವಾಗ ಮನಸ್ಸು ತುಂಬಿ ಬರುತ್ತದೆ. ತಾತ್ಯಾ ಟೋಪೆಯವರು 1859ರ ಏಪ್ರಿಲ್ 18ರಂದು ಗಲ್ಲಿಗೇರಿಸಲ್ಪಟ್ಟಿಲ್ಲ! ಬದಲಿಗೆ ಅವರು ಜನವರಿ 1, 1859ರ ಬೆಳಿಗ್ಗೆ 6:30ಕ್ಕೆ ಚಿಪ್ಪಾ ಬರೋಡ್ ಯುದ್ಧರಂಗದಲ್ಲಿ ವೀರಮರಣ ಹೊಂದಿದರು ಎಂದು ಅವರ ಕುಟುಂಬ ಸಾಕ್ಷಿ ಸಮೇತವಾಗಿ ಪುಸ್ತಕದಲ್ಲಿ ನಿರೂಪಿಸಿದೆ. ಈ ಪುಸ್ತಕವನ್ನು ಸಾಕಷ್ಟು ಸಂಶೋಧನೆಗಳ ಬಳಿಕವೇ ಪ್ರಕಟಿಸಲಾಗಿದೆ. ನಮ್ಮ ಪೂರ್ವಜರು ಯಾವ ರೀತಿ ಯೋಜನೆ ಹಾಕಿ, ರಕ್ತ ಸುರಿಸಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದರು ಎಂಬುದನ್ನೂ ಇದು ವಿವರಿಸುತ್ತದೆ. 1857ರ ಸಂಗ್ರಾಮವು ಕೇವಲ ಸಿಪಾಯಿಗಳ ದಂಗೆಯಲ್ಲ, ಅದು ನಾನಾ ಸಾಹೇಬ್, ತಾತ್ಯಾ ಟೋಪೆ ಮುಂತಾದ ನಾಯಕರು ವರ್ಷಗಳ ಕಾಲ ಯೋಜಿಸಿದ್ದ ಆಂಗ್ಲೋ-ಇಂಡಿಯನ್ ಯುದ್ಧ! ತಾತ್ಯಾ ಟೋಪೆಯವರು ಈ ಯುದ್ಧದ ಮುಖ್ಯ ರಣತಂತ್ರಜ್ಞರಾಗಿದ್ದರು.
ತಾತ್ಯ ಟೋಪೆ ಕುಟುಂಬದ ವಾದಕ್ಕೆ ಬಲವಾದ ಆಧಾರ – ಬ್ರಿಟಿಷ್ ಅಧಿಕಾರಿ ಮೇಜರ್ ಪೇಜೆಟ್ (ಆರ್ಟಿಲರಿ ಮುಖ್ಯಸ್ಥ) ಅವರ ನೇರ ಸಾಕ್ಷ್ಯ! ಅವರು ಚಿಪ್ಪಾ ಬರೋಡ ಯುದ್ಧದಲ್ಲಿ ತಾತ್ಯಾ ಟೋಪೆಯವರನ್ನು ನೋಡಿದ್ದರು ಮತ್ತು ಅವರು ಸತ್ತು ಬೀಳುವುದನ್ನು ಕೂಡ ಕಣ್ಣಾರೆ ಕಂಡಿದ್ದರು. ಇದು ತಾತ್ಯಾ ಟೋಪೆಯ ಕೊನೆಯ ಯುದ್ಧ ಎಂದು ಪೇಜೆಟ್ ದಾಖಲಿಸಿದ್ದಾರೆ ಎಂಬುದುನ್ನು ಪರಾಗ್ ಟೋಪೆ ತಮ್ಮ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.
ಇತಿಹಾಸದ ಮರುಪರಿಶೀಲನೆ – ತಾತ್ಯ ಟೋಪೆಯ ಹೆಮ್ಮೆಯ ಕಥೆ
ತಾತ್ಯಾ ಟೋಪೆ ಅವರು 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಅತ್ಯಂತ ಧೈರ್ಯಶಾಲಿ ಮತ್ತು ಯುದ್ಧತಂತ್ರದಲ್ಲಿ ನಿಪುಣರಾದ ಸೇನಾನಿಗಳಲ್ಲಿ ಒಬ್ಬರು. ಔಪಚಾರಿಕ ಸೇನಾ ತರಬೇತಿ ಇಲ್ಲದಿದ್ದರೂ, ಅವರು ಬ್ರಿಟಿಷ್ ಸೈನ್ಯಕ್ಕೆ ಭಯವನ್ನುಂಟುಮಾಡುವಷ್ಟು ಪರಿಣಾಮಕಾರಿ ಗೆರಿಲ್ಲಾ ಯುದ್ಧಗಳನ್ನು ನಡೆಸಿದರು – ಕಾನ್ಪುರ್ನಲ್ಲಿ ನಾನಾ ಸಾಹೇಬರೊಂದಿಗೆ ಸಹಯೋಧರಾಗಿ ಸೇಣಸಾಡಿ, ರಾಣಿ ಲಕ್ಷ್ಮೀಬಾಯಿಯವರೊಂದಿಗೆ ಗ್ವಾಲಿಯರ್ನ್ನು ವಶಪಡಿಸಿಕೊಂಡು, ಕೇಂದ್ರ ಭಾರತದಾದ್ಯಂತ ಸಾವಿರಾರು ಮೈಲಿಗಳವರೆಗೆ ಬ್ರಿಟಿಷರನ್ನು ತಬ್ಬಿಬ್ಬುಗೊಳಿಸಿದರು. ಸೋಲುಗಳ ನಂತರವೂ ಅವರು ಶರಣಾಗತರಾಗದೆ ಜಂಗಲ್ಗಳಲ್ಲಿ ಗೆರಿಲ್ಲಾ ಆಕ್ರಮಣಗಳನ್ನು ಮುಂದುವರಿಸಿ, ಬ್ರಿಟಿಷ್ ಸೇನೆಯನ್ನು ದಿನಗಳು-ತಿಂಗಳುಗಳ ಕಾಲ ಆಯಾಸಗೊಳಿಸಿದರು., ಅವರ ಅಚಲ ದೇಶಭಕ್ತಿ, ಧೈರ್ಯ ಮತ್ತು ಯುದ್ಧಕೌಶಲ್ಯವು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಅಮರವಾಗಿ ಉಳಿದಿದೆ. ಅವರು ಅಗಲಿದ 150 ವರ್ಷಗಳ ನಂತರವೂ ಅವರ ಕುಟುಂಬ ಅವರ ಸಾವಿನ ಬಗೆಗಿನ ಸತ್ಯವನ್ನು ಬಹಿರಂಗಪಡಿಸಲು ಹೋರಾಡುತ್ತಿರುವುದು ನಮಗೆ ಹೆಮ್ಮೆಯ ವಿಷಯ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


