
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಇಂದು ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆಯ ಅನುಷ್ಠಾನದ ಪರವಾಗಿ ಮಾತನಾಡಿದ್ದು, ಈ ಮಸೂದೆಯನ್ನು ಸುಮಾರು 30 ವರ್ಷಗಳಷ್ಟು ಹಿಂದೆಯೇ ತರಬೇಕಿತ್ತು ಎಂದು ಹೇಳಿದ್ದಾರೆ.
“ಸಮಾಜದ ಮನಸ್ಥಿತಿ ಮತ್ತು ನಾಯಕತ್ವವನ್ನು ರಾಷ್ಟ್ರದ ಅತ್ಯಮೂಲ್ಯ ಸಂಪತ್ತಾಗಿ ಪರಿವರ್ತಿಸುವ ಕೆಲವು ನಿರ್ಣಾಕಯ ಕ್ಷಣಗಳು ರಾಷ್ಟ್ರ ಜೀವನದಲ್ಲಿ ಬರುತ್ತದೆ. ಭಾರತದ ಸಂಸದೀಯ ಇತಿಹಾಸದಲ್ಲಿ ಇದು ಅಂತಹ ಒಂದು ಮಹತ್ವದ ಕ್ಷಣವಾಗಿದೆ. 25-30 ವರ್ಷಗಳ ಹಿಂದೆಯೇ ರಾಜಕೀಯದಲ್ಲಿ ಮಹಿಳಾ ಮೀಸಲಾತಿ ಕಾರ್ಯಗತಗೊಳ್ಳುವುದು ಅಗತ್ಯವಾಗಿತ್ತು. ಆದರೆ ಇಂದು, ನಾವು ಅದನ್ನು ಒಂದು ಹಂತಕ್ಕೆ ತಂದಿದ್ದೇವೆ. ಕಾಲಕಾಲಕ್ಕೆ ಅವಶ್ಯಕತೆಗಳಿಗೆ ಅನುಗುಣವಾಗಿ ಸುಧಾರಣೆಗಳನ್ನು ಮಾಡಲಾಗುತ್ತಿದೆ ಮತ್ತು ಇದುವೇ ಪ್ರಜಾಪ್ರಭುತ್ವದ ಸೌಂದರ್ಯವಾಗಿದೆ” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ನಾವೆಲ್ಲ ಸಂಸದರು ಇಂತಹ ಮಹತ್ವದ ಅವಕಾಶವನ್ನು ಕಳೆದುಕೊಳ್ಳಲು ಬಿಡಬಾರದು. ನಾವು ಭಾರತೀಯರೆಲ್ಲರೂ ಒಗ್ಗೂಡಿ ದೇಶಕ್ಕೆ ಹೊಸ ದಿಕ್ಕನ್ನು ನೀಡಲಿದ್ದೇವೆ. ನಮ್ಮ ಆಡಳಿತ ವ್ಯವಸ್ಥೆಯಲ್ಲಿ ಸೂಕ್ಷ್ಮತೆಯನ್ನು ತುಂಬಲು ನಾವು ಅರ್ಥಪೂರ್ಣ ಪ್ರಯತ್ನ ಮಾಡಲಿದ್ದೇವೆ. ಈ ಮಂಥನದಿಂದ ಹೊರಹೊಮ್ಮುವ ಅಮೃತವು ರಾಷ್ಟ್ರದ ರಾಜಕೀಯವನ್ನು ರೂಪಿಸುವುದಲ್ಲದೆ ಅದರ ದಿಕ್ಕು ಮತ್ತು ಸ್ಥಿತಿಯನ್ನು ನಿರ್ಧರಿಸುತ್ತದೆ ಎಂಬ ವಿಶ್ವಾಸ ನನಗಿದೆ ಎಂದಿದ್ದಾರೆ.
“ಅಭಿವೃದ್ಧಿ ಹೊಂದಿದ ಭಾರತ ಎಂದರೆ ಕೇವಲ ಉತ್ತಮ ಗುಣಮಟ್ಟದ ರೈಲ್ವೆಗಳು, ಮೂಲಸೌಕರ್ಯಗಳು, ರಸ್ತೆಗಳು ಅಥವಾ ಆರ್ಥಿಕ ಪ್ರಗತಿ ಅಂಕಿಅಂಶಗಳನ್ನು ಹೊಂದಿರುವುದು ಎಂದರ್ಥವಲ್ಲ ಎಂಬುದು ನನಗೆ ಗೊತ್ತಿದೆ, ಕೇವಲ ಇದರ ಆಧಾರದ ಮೇಲೆ ಅಭಿವೃದ್ಧಿ ಹೊಂದಿದ ಭಾರತದ ಸೀಮಿತ ದೃಷ್ಟಿಕೋನವನ್ನು ನಾವು ಹೊಂದಿಲ್ಲ. ಅಭಿವೃದ್ಧಿ ಹೊಂದಿದ ಭಾರತದ ನೀತಿ ನಿರೂಪಣೆಯಲ್ಲಿ “ಎಲ್ಲರೊಂದಿಗೆ ಒಟ್ಟಾಗಿ, ಎಲ್ಲರಿಗೂ ಅಭಿವೃದ್ಧಿ” ಎಂಬ ಧ್ಯೇಯವನ್ನು ಸೇರಿಸಬೇಕೆಂದು ನಾವು ಬಯಸುತ್ತೇವೆ ಎಂದಿದ್ದಾರೆ.
ದೇಶದ ಜನಸಂಖ್ಯೆಯ ಶೇಕಡಾ 50 ರಷ್ಟು ಜನರು ದೇಶದ ನೀತಿ ನಿರೂಪಣೆಯ ಭಾಗವಾಗುವುದು ಇಂದಿನ ಅಗತ್ಯವಾಗಿದೆ. ಕಾರಣ ಏನೇ ಇರಲಿ, ಯಾರೇ ಆಗಿರಲಿ, ನಾವು ಈ ವಿಷಯದಲ್ಲಿ ಈಗಾಗಲೇ ವಿಳಂಬ ಮಾಡಿದ್ದೇವೆ. ನಾವು ಇದನ್ನು ಒಪ್ಪಿಕೊಳ್ಳಬೇಕು ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


