
ಮಂಗಳೂರು: ಭಾರತದ ಸಂವಿಧಾನ ಜೀವಂತಿಕೆ ಹಾಗೂ ಗಟ್ಟಿತನವನ್ನು ಹೊಂದಿರುವ ಸಂವಿಧಾನವಾಗಿದೆ ಎಂದು ಬೆಂಗಳೂರಿನ ಸಾಮಾಜಿಕ ಕಾರ್ಯಕರ್ತ, ಸಾಮರಸ್ಯ ವೇದಿಕೆಯ ವಾದಿರಾಜ್ ಅವರು ಹೇಳಿದರು.
ಮಂಗಳೂರಿನ ಮಣ್ಣಗುಡ್ಡೆ ಪ್ರತಾಪನಗರದ ಸಂಘನಿಕೇತನದಲ್ಲಿ ಗುರುವಾರ ರಾಷ್ಟ್ರೀಯ ಸ್ವಯಂಸೇವಕ ಸಂಘದ ವತಿಯಿಂದ ‘ಯುಗಪುರುಷ ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್’ ಎನ್ನುವ ವಿಚಾರದ ಕುರಿತು ನಡೆದ ವಿಚಾರ ಮಂಥನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿಶ್ವದ ಬೇರೆ ಬೇರೆ ದೇಶಗಳು ತಮ್ಮದೇ ಆದ ಸಂವಿಧಾನವನ್ನು ಹೊಂದಿವೆ. ಆದರೆ ಅವುಗಳ ಆಯುಷ್ಯ ಮಾತ್ರ ಸರಿಸುಮಾರು 19 ವರ್ಷ ಮಾತ್ರ. ಆದರೆ ಭಾರತದ ಸಂವಿಧಾನ ಇದಕ್ಕೆ ಭಿನ್ನವಾದುದು. ಅತ್ಯಂತ ಸತ್ತ್ವಯುತ ಮತ್ತು ಗಟ್ಟಿತನ ಹೊಂದಿರುವ ಈ ಸಂವಿಧಾನವನ್ನು ಕಳೆದ 75 ವರ್ಷಗಳಿಂದ ದೇಶದ ಜನತೆ ಅತ್ಯಂತ ಶ್ರದ್ಧೆಯಿಂದ ಪಾಲಿಸುತ್ತಿದ್ದಾರೆ ಎಂದರು.
ಅಂಬೇಡ್ಕರ್ ಅವರು ಅತ್ಯಂತ ಕಷ್ಟದ ಜೀವನವನ್ನು ಕಂಡವರು. ಆದರೆ ಎಷ್ಟೇ ನೋವಿದ್ದರೂ ತಮ್ಮ ಬದುಕಿನ ವಿಚಾರಗಳು ಸಂವಿಧಾನದಲ್ಲಿ ನುಸುಳದಂತೆ ನೋಡಿಕೊಂಡವರು. ಅವರ ಆಳವಾದ ವಿಚಾರಗಳಿಂದಾಗಿ ಇಂದು ಅವರ ಯೋಚನೆಗಳ ಬೇರುಗಳು ಎಲ್ಲೆಡೆ ಹರಡಿಕೊಂಡಿವೆ ಎಂದು ವಾದಿರಾಜ್ ಹೇಳಿದರು.
ಪ್ರಜಾಸತ್ತಾತ್ಮಕ ಹೋರಾಟದ ಬಗ್ಗೆ ನಂಬಿಕೆ ಹೊಂದಿದ್ದ ಅಂಬೇಡ್ಕರ್ ಅವರು ಚೌದಾರ್ ಕೆರೆಯ ಹೋರಾಟದ ವೇಳೆ ಪುರಸಭೆಯಿಂದ ಕೆರೆಯ ನೀರು ಎಲ್ಲರಿಗೂ ಸಲ್ಲುವಂತದ್ದು ಎನ್ನುವ ನಿರ್ಣಯ ಕೈಗೊಳ್ಳುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದರು, ಕಾಲಾರಾಮ್ ದೇವಸ್ಥಾನದ ಪ್ರವೇಶದ ಹೋರಾಟವೂ ಅವರು ಸಮಾಜದ ದೋಷವನ್ನು ತಿದ್ದಿ ದೇಶವನ್ನು ಗಟ್ಟಿಗೊಳಿಸಬೇಕು ಎನ್ನುವ ಅವರ ಯೋಚನೆಗೆ ನಿದರ್ಶನ ಎಂದು ವಾದಿರಾಜ್ ವಿವರಿಸಿದರು.
ಕುದ್ಮುಲ್ ರಂಗರಾವ್ ಸ್ಮಾರಕ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಬಿ.ಆರ್. ಹೃದಯನಾಥ್ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕ್ಷೇತ್ರೀಯ ಸಂಘ ಚಾಲಕ ಡಾ. ಪಿ. ವಾಮನ್ ಶೆಣೈ, ಮಂಗಳೂರು ಮಹಾನಗರ ಸಂಘ ಚಾಲಕ ಡಾ. ಸತೀಶ್ ರಾವ್ ಉಪಸ್ಥಿತರಿದ್ದರು.
ಶ್ರೀ ಯತೀಶ್ ಸ್ವಾಗತಿಸಿದರು, ಶ್ರೀಮತಿ ಮಮತಾ ನಿರೂಪಣೆ ಮಾಡಿದರು, ಲೋಲಾಕ್ಷ ವಂದನಾರ್ಪಣೆ, ಮಹಾನಗರ ಕಾಲೇಜು ವಿದ್ಯಾರ್ಥಿ ಪ್ರಮುಖ್ ವೈಯಕ್ತಿಕ ಗೀತೆ ಹಾಡಿದರು, ರಕ್ಷಿತ್ ವಂದೇ ಮಾತರಂ ಹಾಡಿದರು, ದೀಕ್ಷಿತ್ ಕಾರ್ಯಕ್ರಮ ನಡೆಸಿಕೊಟ್ಟರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


