ಪ್ಲಾಸ್ಟಿಕ್ ಬಳಕೆಯಿಂದ ಪರಿಸರದ ಜೊತೆಗೆ ಮಾನವ ಅನುಭವಿಸುತ್ತಿರುವ ಹಲವಾರು ಸಂಕಷ್ಟಗಳ ಬಗ್ಗೆ ಹಲವು ವರ್ಷಗಳಿಂದ ಕೇಳಿಕೊಂಡು ಬರುತ್ತಿದ್ದೇವೆ. ಪ್ಲಾಸ್ಟಿಕ್ ಮಾನವ ಜೀವನದಲ್ಲಿ ಪ್ರತಿನಿತ್ಯದ ಅವಶ್ಯಕತೆ ಎಂಬಂತೆ ಕಂಡುಬಂದರೂ, ಅದರಿಂದಾಗಿ ಎದುರಿಸಬೇಕಾಗಿರುವ ಸಮಸ್ಯೆ ಒಂದೆರಡಲ್ಲ. ಭೂಮಿಗೆ ಅತೀ ಹೆಚ್ಚು ಹಾನಿಯನ್ನು ಉಂಟುಮಾಡುವ ವಿಚಾರದಲ್ಲಿ ಪ್ಲಾಸ್ಟಿಕ್ ‘ಮಹಾಮಾರಿ’ ಯೇ ಹೌದು.
ಇಂತಹ ಪ್ರಕೃತಿಗೆ ಮಾರಕವಾಗಿರುವ, ಜೊತೆಗೆ ಭೂಮಿಯ ಮೇಲಿನ ಚರಾಚರ ವಸ್ತುಗಳ ಮೇಲೆ ಅಡ್ಡ ಪರಿಣಾಮ ಬೀರುವ ಪ್ಲಾಸ್ಟಿಕ್ನಿಂದ ಮುಕ್ತಿ ಹೇಗೆ. ಅದರ ಬಳಕೆಯನ್ನು ಯಾವೆಲ್ಲಾ ರೀತಿಯಲ್ಲಿ ಕಡಿಮೆ ಮಾಡಬಹುದು ಎಂಬ ಪ್ರಶ್ನೆ ಎಲ್ಲರನ್ನೂ ಕಾಡುವುದು ಸಹಜ. ಇದಕ್ಕೆ ಕೆಲವೊಂದು ಪರಿಹಾರಗಳು ಇಲ್ಲಿವೆ.
ಪ್ಲಾಸ್ಟಿಕ್ ಬ್ಯಾಗ್ಗಳನ್ನು ಬಳಕೆ ಮಾಡುವಲ್ಲಿ ಅದಕ್ಕೆ ಪರ್ಯಾಯವಾಗಿ ಬಟ್ಟೆ ಚೀಲಗಳನ್ನು ಅಥವಾ ಪೇಪರ್ ಬ್ಯಾಗ್ಗಳನ್ನು ಬಳಕೆ ಮಾಡುವ ಮೂಲಕ ನಾವು ನಮ್ಮನ್ನು ಪ್ಲಾಸ್ಟಿಕ್ ಬಳಕೆಯಿಂದ ಕೊಂಚ ಮಟ್ಟಿಗೆ ದೂರ ಮಾಡಿಕೊಳ್ಳಲು ಸಾಧ್ಯವಿದೆ. ಪ್ರಸ್ತುತ ಕಾಲಘಟ್ಟದಲ್ಲಿ ಮನುಷ್ಯ ಬೆಳಗ್ಗೆ ಎದ್ದಾಗಿನಿಂದ ಹಿಡಿದು, ರಾತ್ರಿ ಮಲಗುವಲ್ಲಿಯವರೆಗೆ ಅನೇಕ ರೂಪದಲ್ಲಿ ಪ್ಲಾಸ್ಟಿಕ್ ಬಳಕೆ ಮಾಡುತ್ತಿರುವುದು ಎಲ್ಲರಿಗೂ ತಿಳಿದ ವಿಚಾರ. ಬೆಳಗ್ಗೆ ಎದ್ದು ಹಲ್ಲುಜ್ಜಲು ಬಳಕೆ ಮಾಡುವ ಬ್ರಷ್ ನಿಂದ ಹಿಡಿದು, ಸ್ನಾನಕ್ಕೆ ಬಳಸುವ ಬ್ರಷ್, ಸಾಬೂನು ಇಡುವ ವಸ್ತು, ಹಲವರ ಮನೆಯಲ್ಲಿ ಆಹಾರ ಸೇವಿಸಲು ಬಳಕೆ ಮಾಡುವ ಪಾತ್ರೆಗಳು, ನೀರು ತುಂಬಿಡುವ ಬಾಟಲ್ಗಳು, ಚಪ್ಪಲಿಗಳು, ಬಕೆಟ್, ಮಗ್ ಹೀಗೆ ಪ್ಲಾಸ್ಟಿಕ್ ಇಲ್ಲದೇ ಇರುವ ವಿಚಾರವೇ ಇಲ್ಲವೇನೋ ಎಂಬಂತೆ ನಮ್ಮ ಜೀವನ ಕ್ರಮ ಪ್ಲಾಸ್ಟಿಕ್ ಜೊತೆಗೆ ಅವಿನಾಭಾವ ನಂಟೊಂದನ್ನು ಬೆಳೆಸಿದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಇದು ಪರಿಸರದ ಸೌಂದರ್ಯ, ಆರೋಗ್ಯದ ಜೊತೆಗೆ, ಮನುಷ್ಯನ ಆರೋಗ್ಯದ ಮೇಲೆಯೂ ಹಲವು ಸಮಸ್ಯೆಗಳು ಉದ್ಭವವಾಗುವುದಕ್ಕೆ ಕಾರಣವಾಗುತ್ತದೆ ಎಂಬುದು 100% ಸತ್ಯ.
ಪ್ಲಾಸ್ಟಿಕ್ನಿಂದ ಕೇವಲ ಭೂಮಿಯ ಮೇಲಿರುವ ಜೀವರಾಶಿಗಳು ಮಾತ್ರವೇ ಸಂಕಷ್ಟ ಅನುಭವಿಸುತ್ತಿಲ್ಲ. ಬದಲಾಗಿ, ನೀರಿನೊಳಗೆ ವಾಸಿಸುವ ಜಲಚರಗಳಿಗೂ ಅನೇಕ ಸಮಸ್ಯೆಗಳು ಪ್ಲಾಸ್ಟಿಕ್ ಎಂಬ ಭೂತದಿಂದಾಗಿ ಉಂಟಾಗುತ್ತಿದೆ ಎಂಬುದು ಸತ್ಯ ಮತ್ತು ಸ್ಪಷ್ಟ. ಈ ಹಿನ್ನೆಲೆಯಲ್ಲಿ ಮಾನವ, ಪ್ರಕೃತಿಯ ಸಕಲ ಜೀವರಾಶಿಗಳು ಮತ್ತು ಪ್ರಾಕೃತಿಕ ಸೌಂದರ್ಯದ ಮೇಲೆಯೂ ಋಣಾತ್ಮಕ ಪರಿಣಾಮ ಬೀರುತ್ತಿರುವ ಪ್ಲಾಸ್ಟಿಕ್ ಬಳಕೆಯಿಂದ ಹಿಂದೆ ಸರಿಯುತ್ತೇವೆ. ಅಗತ್ಯವಿರದೇ ಹೋದಲ್ಲಿ ಪ್ಲಾಸ್ಟಿಕ್ ಬಳಕೆ ಮಾಡುವುದಿಲ್ಲ. ಪ್ಲಾಸ್ಟಿಕ್ಗೆ ಪರ್ಯಾಯವಾಗಿ ಇನ್ಯಾವುದೋ ಯಾವುದೇ ಹಾನಿ ಮಾಡದಂತಹ ವಸ್ತುಗಳನ್ನು ಬಳಕೆ ಮಾಡುವತ್ತ ಚಿತ್ತ ಹರಿಸುತ್ತೇವೆ ಎಂಬ ಪ್ರತಿಜ್ಞೆಯನ್ನು ನಾವು ಕೈಗೊಂಡಲ್ಲಿ ಮತ್ತು ಆ ಪ್ರತಿಜ್ಞೆಯನ್ನು ಪಾಲನೆ ಮಾಡಿದಲ್ಲಿ ಪ್ಲಾಸ್ಟಿಕ್ ಎಂಬ ಪೆಡಂಭೂತದ ಸಮಸ್ಯೆಗೆ ಕೊಂಚ ಮಟ್ಟಿಗೆ ಪರಿಹಾರ ಕಂಡುಕೊಳ್ಳುವುದು ಸಾಧ್ಯ.
ಹಾಗಾದರೆ ಪ್ಲಾಸ್ಟಿಕ್ ಸಮಸ್ಯೆ ತಡೆಯಲು ನಾವೇನು ಮಾಡಬಹುದು?
* ಏಕಬಳಕೆಯ ಅಥವಾ ಒಂದು ಬಾರಿ ಬಳಕೆ ಮಾಡಿ ಎಸೆಯುವ ಪ್ಲಾಸ್ಟಿಕ್ ವಸ್ತುಗಳನ್ನು ಬಳಕೆ ಮಾಡಬಾರದು. ಪಾಲಿಥೈಲಿನ್ನ ಕ್ಯಾರಿ ಬ್ಯಾಗ್ಗಳು, ನೀರಿನ ಬಾಟಲಿಗಳು, ಸ್ಟ್ರಾ ಸೇರಿದಂತೆ ಇನ್ನಿತರ ಏಕ ಬಳಕೆಯ ಪ್ಲಾಸ್ಟಿಕ್ ಬಳಕೆಗಳನ್ನು ನಿಲ್ಲಿಸುವ ಮೂಲಕ ಕೊಂಚ ಮಟ್ಟಿಗೆ ಪ್ಲಾಸ್ಟಿಕ್ ಮುಕ್ತ ವಾತಾವರಣ ಕಲ್ಪಿಸಲು ಪ್ರಯತ್ನ ಕೈಗೊಳ್ಳಬಹುದು. ಅದರೊಂದಿಗೆ ಪಾಲಿಥೈಲಿನ್ನ ಚೀಲಗಳ ಬಳಕೆಗೂ ಬ್ರೇಕ್ ಹಾಕುವ ಮೂಲಕ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವತ್ತ ಚಿತ್ತ ಹರಿಸಬಹುದು.
* ಮರುಬಳಕೆ ಮಾಡಬಹುದಾದ ವಸ್ತುಗಳನ್ನು ಪ್ಲಾಸ್ಟಿಕ್ಗೆ ಪರ್ಯಾಯವಾಗಿ ಬಳಕೆ ಮಾಡಬಹುದು. ಮರು ಬಳಕೆ ಮಾಡಬಹುದಾದ ಕ್ಯಾರಿ ಬ್ಯಾಗ್ಗಳು, ನೀರಿನ ಬಾಟಲ್ಗಳು ಸೇರಿದಂತೆ ಇನ್ನಿತರ ವಸ್ತುಗಳನ್ನು ಬಳಕೆ ಮಾಡುವ ಮೂಲಕ ಪ್ಲಾಸ್ಟಿಕ್ನಿಂದ ಅಂತರ ಕಾಪಾಡಿಕೊಳ್ಳುವುದು ಸಾಧ್ಯ.
* ದಿನನಿತ್ಯ ಬಳಕೆ ಮಾಡುವ ಟೂತ್ಬ್ರಷ್ಗಳಿಗೆ ಬದಲಾಗಿ ಇತ್ತೀಚೆಗೆ ಹೆಚ್ಚು ಆಕರ್ಷಕವಾಗಿ ಬಳಕೆಗೆ ಬಂದಿರುವ ಓಟ್ಮೀಲ್ ನಂತಹ ಎಲ್ಫೋಲಿಯೆಂಟ್ಗಳ ಬಳಕೆಯತ್ತ ಚಿತ್ತ ಹರಿಸುವುದು ಉತ್ತಮ.
* ದಿನ ಬಳಕೆಯ ವಸ್ತುಗಳನ್ನು ಸಣ್ಣ ಪ್ರಮಾಣದಲ್ಲಿ ಖರೀದಿಸುವ ಬದಲು ದೊಡ್ಡ ಪ್ರಮಾಣದಲ್ಲಿ ಒಂದೇ ಖರೀದಿ ಮಾಡಿದರೆ ಅದನ್ನು ತೆಗೆದುಕೊಂಡು ಬರಲು ಬಳಕೆ ಮಾಡುವ ಪ್ಲಾಸ್ಟಿಕ್ ಚೀಲಗಳ ಬಳಕೆಯೂ ಕಡಿಮೆಯಾಗುತ್ತದೆ. ಅಲ್ಪಸ್ವಲ್ಪ ಪ್ರಮಾಣದಲ್ಲಿ ಖರೀದಿ ಮಾಡಿದಲ್ಲಿ ಮತ್ತೆ ಅದೇ ವಸ್ತುಗಳನ್ನು ಆಗಾಗ್ಗೆ ಖರೀದಿಸುವಾಗ ಅದನ್ನು ತೆಗೆದುಕೊಂಡು ಹೋಗಲು ನಾವು ಪ್ಲಾಸ್ಟಿಕ್ ಬಳಕೆಯನ್ನು ಅನ್ವಯಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಪ್ರತಿ ಖರೀದಿಯ ಸಂದರ್ಭದಲ್ಲಿಯೂ ದಿನಬಳಕೆಯ ವಸ್ತುಗಳನ್ನು ಹೆಚ್ಚು ಖರೀದಿಸುವುದರಿಂದ ಆಗಾಗ್ಗೆ ಖರೀದಿಸುವಾಗ ಬಳಕೆ ಮಾಡುವ ಪ್ಲಾಸ್ಟಿಕ್ ಚೀಲಗಳ ಬಳಕೆ ಕಡಿಮೆ ಮಾಡಿದಂತಾಗುತ್ತದೆ.
* ಪ್ರತಿ ಸಂದರ್ಭದಲ್ಲಿ ಮಾರುಕಟ್ಟೆ ಅಥವಾ ಇನ್ಯಾವುದೇ ಪ್ರದೇಶಕ್ಕೆ ವಸ್ತುಗಳನ್ನು ಖರೀದಿ ಮಾಡಲು ತೆರಳುವ ಸಂದರ್ಭದಲ್ಲಿ ನಮ್ಮೊಂದಿಗೆ ಪ್ರಕೃತಿ ಸ್ನೇಹಿ, ಪ್ಲಾಸ್ಟಿಕ್ಗೆ ಪರ್ಯಾಯವಾದ ಚೀಲಗಳನ್ನು ಕೊಂಡೊಯ್ಯುವುದು ಹೆಚ್ಚು ಸೂಕ್ತ. ಇದರಿಂದ ಪ್ಲಾಸ್ಟಿಕ್ ಚೀಲಗಳ ಖರೀದಿ ತಪ್ಪುತ್ತದೆ. ಪ್ಲಾಸ್ಟಿಕ್ ಚೀಲಗಳನ್ನು ಪರಿಣಾಮಾತ್ಮಕವಾಗಿ ಬಳಕೆ ಮಾಡುವಲ್ಲಿಯೂ ಈ ಕ್ರಮ ಹೆಚ್ಚು ಪೂರಕ.
ಪ್ಲಾಸ್ಟಿಕ್ ಬಳಕೆಯನ್ನು ಏಕಕಾಲಕ್ಕೆ ನಿಲ್ಲಿಸುವುದು ಕಷ್ಟ. ಏಕೆಂದರೆ ಪ್ಲಾಸ್ಟಿಕ್ಗೆ ನಾವು ಅಷ್ಟರ ಮಟ್ಟಿಗೆ ಒಗ್ಗಿ ಹೋಗಿದ್ದೇವೆ. ಪ್ಲಾಸ್ಟಿಕ್ಗೆ ಸಮರ್ಥ ಪರ್ಯಾಯವೊಂದನ್ನು ಹುಡುಕುವಲ್ಲಿಯೂ ನಾವಿನ್ನೂ ಯಶಸ್ವಿಯಾಗಿಲ್ಲ. ಒಂದೇ ಬಾರಿಗೆ ಪ್ಲಾಸ್ಟಿಕ್ ಬಳಕೆ ನಿಲ್ಲಿಸುವುದು ಅಸಾಧ್ಯವಾದರೂ ಸಹ ಹಂತ ಹಂತವಾಗಿ ಅದರ ಬಳಕೆಯನ್ನು ಕಡಿಮೆ ಮಾಡುವ ಮೂಲಕ ಅದು ಇಡೀ ಪ್ರಕೃತಿಯ ಮೇಲೆ, ಚರಾಚರಗಳ ಮೇಲೆ ಬೀರುವ ದುಷ್ಪರಿಣಾಮವನ್ನು ನಾವು ಕಡಿಮೆ ಮಾಡಬಹುದಾಗಿದೆ. ಇದಕ್ಕೆ ನಾವು ಮಾಡಬೇಕಾಗಿರುವುದು ಮನಸ್ಸು ಅಷ್ಟೇ. ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿ, ಪ್ರಕೃತಿಯ ಜೊತೆಗೆ ನಮ್ಮನ್ನು ನಾವು ಉಳಿಸಿಕೊಳ್ಳುವತ್ತ ಒಂದು ಹೆಜ್ಜೆ ಮುಂದಿಡೋಣ. ಬದಲಾವಣೆಯ ಪರ್ವ ನಮ್ಮಿಂದಲೇ ಆರಂಭವಾಗಲಿ. ಪ್ಲಾಸ್ಟಿಕ್ ಮುಕ್ತ ಜಗತ್ತು ನಮ್ಮದಾಗಲಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.