ನಮ್ಮ ದೇಶವು 1947 ರಲ್ಲಿ ಸ್ವಾತಂತ್ರ್ಯ ಪಡೆದು ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಯಿತು. ಅನೇಕ ವೀರರ ಲೆಕ್ಕವಿಲ್ಲದಷ್ಟು ತ್ಯಾಗಗಳ ಫಲವಾಗಿ ಲಭ್ಯವಾದ ಸ್ವಾತಂತ್ರವನ್ನು ನಮ್ಮ ಪಕ್ಷ ಹಾಗೂ ಅದರ ಸದಸ್ಯರ ಹೋರಾಟದಿಂದಲೇ ಸ್ವಾತಂತ್ರ ಲಭ್ಯವಾಯಿತು ಎಂದು ಅನೇಕ ವರ್ಷಗಳಿಂದ ಹೇಳುತ್ತಲೇ ಬಂದಿರುವ ಅತ್ಯಂತ ಪುರಾತನ ಪಕ್ಷವೊಂದು ತನ್ನ ಅಸ್ತಿತ್ವ ಕಳೆದುಕೊಳ್ಳುವ ಹಂತದಲ್ಲಿದೆ. ಕಾರಣ ?? ಯಾವ ವಂಶಾಡಳಿತಕ್ಕೆ ಮಂಗಳ ಹಾಡಬೇಕೆಂದು ಪ್ರಜಾಪ್ರಭುತ್ವ ತತ್ವವನ್ನು ಸ್ವೀಕರಿಸಲಾಯಿತೋ, ಅದೇ ವಂಶಾಡಳಿತಕ್ಕೆ ಶರಣಾಗಿರುವುದೇ ಅತ್ಯಂತ ಹಳೆಯ ಮತ್ತು ದೊಡ್ಡ ಪಕ್ಷವೊಂದರ ಇಂದಿನ ದುಸ್ಥಿತಿಗೆ ಕಾರಣ ಎಂದರೆ ತಪ್ಪಾಗಲಾರದು. ಸ್ವಾತಂತ್ರ ಪಡೆದ ಬಳಿಕ ಬಹುತೇಕ ತಾನೇ ಅಧಿಕಾರದಲ್ಲಿದ್ದ ಈ ಪಕ್ಷವು ಅಧಿಕಾರದಲ್ಲಿದ್ದಾಗ ಎಷ್ಟು ಅಪಾಯಕಾರಿಯೋ ಅಧಿಕಾರ ರಹಿತವಾಗಿದ್ದಾಗ ಅದಕ್ಕೂ ಹೆಚ್ಚಿನ ಅಪಾಯಕಾರಿ. ʼತಾನು ಕಳ್ಳ, ಪರರ ನಂಬʼ ಎಂಬ ಗಾದೆ ಮಾತು ಇವರನ್ನು ಗಮನದಲ್ಲಿರಿಸಿಯೇ ಹೇಳಲಾಗಿದೆ ಎನ್ನಬಹುದು. ಈ ಪಕ್ಷವು ನೂತನ ಕೃಷಿ ಮಸೂದೆಗೆ ಯಾವ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದೆ ಎಂಬುದೇ ಇದಕ್ಕೆ ಸಾಕ್ಷಿಯಾಗಿದೆ.
ಈ ಪುರಾತನ ಪಕ್ಷದ ಉತ್ತರಾಧಿಕಾರಿ, ಯುವರಾಜ ರಾಹುಲ್ ಗಾಂಧಿ ಮೊದಲಿನಿಂದಲೂ ತಮ್ಮ ಅಪ್ರಬುದ್ಧ, ಅಸಂಬದ್ಧ ಹೇಳಿಕೆ ಮತ್ತು ನಡವಳಿಕೆಗಳಿಗಾಗಿ ಖ್ಯಾತಿಯನ್ನು ಹೊಂದಿದ್ದಾರೆ. ದೇಶದ ವಿಚಾರದಲ್ಲಿ, ದೇಶದ ಪ್ರಜೆಗಳ ವಿಚಾರದಲ್ಲಿ ಇವರಿಗಿರುವ ಕಾಳಜಿ ಎಂಥದ್ದೆಂಬುದು ಬಹುತೇಕ ಎಲ್ಲರೂ ಅರಿತಿರುವ ವಿಚಾರವೇ ಆಗಿದೆ. ಭಯೋತ್ಪಾದಕ ದಾಳಿ ನಡೆದ ಬಳಿಕ, ಚುನಾವಣೆಯಲ್ಲಿ ತನ್ನ ಪಕ್ಷವೇ ಹೀನಾಯವಾಗಿ ಸೋಲನ್ನು ಅನುಭವಿಸಿದ ಬಳಿಕ ಬೇಜಾವ್ದಾರಿಯುತ ವ್ಯಕ್ತಿಯಂತೆ ಪ್ರವಾಸಕ್ಕೆ ತೆರಳುವ ವ್ಯಕ್ತಿಯಿಂದ ಪ್ರಬುದ್ಧತೆಯನ್ನು ಅಪೇಕ್ಷಿಸಲು ಹೇಗೆ ಸಾಧ್ಯ? ಈ ವಿಚಾರಗಳನ್ನೆಲ್ಲಾ ಪಕ್ಕಕ್ಕಿರಿಸಿ ಕೇವಲ ಹೊಸ ಕೃಷಿ ಮಸೂದೆಯ ವಿಚಾರವನ್ನೇ ಗಮನಿಸೋಣ. ಇದೀಗ ಉಗ್ರವಾಗಿ ನೂತನ ಕೃಷಿ ಮಸೂದೆಯನ್ನು ವಿರೋಧಿಸುತ್ತಿರುವ ಇದೇ ಕಾಂಗ್ರೆಸ್ ಪಕ್ಷದ ಯುವರಾಜ ಹಿಂದೆ “ತರಕಾರಿ ಮತ್ತು ಹಣ್ಣು ಹಂಪಲುಗಳ ಮಾರಾಟವನ್ನು ಮಂಡಿ ವ್ಯವಸ್ಥೆಯಿಂದ ಹೊರತೆಗೆಯಬೇಕು, ಇದರಿಂದ ಕೃಷಿಕರಿಗೆ ಅನುಕೂಲತೆ ಉಂಟಾಗುತ್ತದೆ” ಎಂದು ಕಾಂಗ್ರೆಸ್ ಆಡಳಿತವಿದ್ದ ರಾಜ್ಯಗಳಿಗೆ ಪತ್ರವನ್ನು ಬರೆದಿದ್ದರು. ತಮ್ಮ ಮುಳುಗುತ್ತಿರುವ ರಾಜಕೀಯ ಭವಿಷ್ಯವನ್ನು ಉಳಿಸಿಕೊಳ್ಳುವ ಉದ್ದೇಶದಿಂದ ಇಷ್ಟು ಬೇಗ ಯು ಟರ್ನ್ ಹೊಡೆಯಲು ಇಂತಹಾ ಅವಕಾಶವಾದೀ ರಾಜಕಾರಣಿಗಲ್ಲದೆ ಮತ್ಯಾರಿಗೆ ಸಾಧ್ಯ?
2019 ಏಪ್ರಿಲ್ 2 ರಂದು ಕಾಂಗ್ರೆಸ್ ಪಕ್ಷ ಪ್ರಕಟಿಸಿದ ಚುನಾವಣಾ ಪ್ರಣಾಳಿಕೆಯಲ್ಲಿ “ಕಾಂಗ್ರೆಸ್, ಕೃಷಿ ಉತ್ಪಾದನಾ ಮಾರುಕಟ್ಟೆ ಸಮಿತಿ ಕಾಯಿದೆಯನ್ನು ರದ್ದುಪಡಿಸುತ್ತದೆ. ರಫ್ತು ಮತ್ತು ಅಂತರ ರಾಜ್ಯ ವ್ಯಾಪಾರ ಸೇರಿದಂತೆ ಕೃಷಿ ಉತ್ಪನ್ನಗಳ ಮಾರಾಟವನ್ನು ಎಲ್ಲಾ ನಿರ್ಬಂಧಗಳಿಂದ ಮುಕ್ತಗೊಳಿಸುತ್ತದೆ” ಎಂದು ಭರವಸೆ ನೀಡಿತ್ತು. ಕಾಂಗ್ರೆಸ್ ಪಕ್ಷದ ಸಂಪೂರ್ಣ ಅಧಿಕಾರವಿರುವುದು ರಾಹುಲ್ ಗಾಂಧಿ ಮತ್ತವರ ಕುಟುಂಬದ ಕೈಯ್ಯಲ್ಲೇ ಅಲ್ಲವೇ? ಹೀಗಿರುವಾಗ ಈ ಭರವಸೆಯನ್ನು ಅವರ ಅರಿವಿಗೆ ಬರದಂತೆ ಬೇರೆ ನಾಯಕರು ನೀಡಿರಲು ಸಾಧ್ಯವಿಲ್ಲವಷ್ಟೆ. ರೈತರ ಒಳಿತಿಗಾಗಿ ಹಾಗೂ ರೈತರ ಆದಾಯವನ್ನು ಹೆಚ್ಚಿಸುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಕೇಂದ್ರ ಸರಕಾರ ತಂದಿರುವ ನೂತನ ಕೃಷಿ ಕಾಯಿದೆಯ ಉದ್ದೇಶವೂ ಇದೇ ಅಲ್ಲವೇ? ಕೃಷಿ ಉತ್ಪನ್ನಗಳ ಮೇಲಿನ ನಿರ್ಬಂಧವನ್ನು ತೆಗೆದು ಹಾಕಿ ಕೃಷಿಕರಿಗೆ ತಮ್ಮ ಉತ್ಪನ್ನವನ್ನು ಮಾರಾಟ ಮಾಡಲು ಹೆಚ್ಚಿನ ಸ್ವಾತಂತ್ರ್ಯವನ್ನು ನೀಡುವುದೇ ಅಲ್ಲವೇ ಸರಕಾರ ತಂದಿರುವ ನೂತನ ಮಸೂದೆಯ ಉದ್ದೇಶ? ಹೀಗಿದ್ದೂ ತಮ್ಮದೇ ಪಕ್ಷದ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಯ ಕುರಿತಾಗಿ ಯು ಟರ್ನ್ ಹೊಡೆದು ಮಸೂದೆಯನ್ನು ಅತ್ಯುಗ್ರವಾಗಿ ವಿರೋಧಿಸುತ್ತಿರುವುದಾದರೂ ಏತಕ್ಕೆ?
“ಕೃಷಿ ಭೂಮಿಯನ್ನು ರಕ್ಷಿಸಿ” ಎನ್ನುವ ಹೆಸರಿನಲ್ಲಿ ಟ್ರ್ಯಾಕ್ಟರ್ ಏರಿ ಹೊರಟ ರಾಹುಲ್ ಗಾಂಧಿ ತಾನು ಸರಳ ನಾಯಕ ಎಂದು ಬಿಂಬಿಸಲು ಹೊರಟರು. ಆದರೆ ಸಾಮಾಜಿಕ ಜಾಲತಾಣಗಳ ಈ ಯುಗದಲ್ಲಿ ರಾಹುಲ್ ಗಾಂಧಿಗಾಗಿ ಟ್ರ್ಯಾಕ್ಟರ್ನಲ್ಲಿ ಮಾಡಲಾದ ಬದಲಾವಣೆಗಳು ಜನರ ಕಣ್ಣಿಗೆ ಸ್ಪಷ್ಟವಾಗಿ ಗೋಚರಿಸಿದವು. ಈ ಕಾಯಿದೆಯ ಬಲದಿಂದ ಖಾಸಗಿ ಸಂಸ್ಥೆಗಳು ರೈತರ ಭೂಮಿಯನ್ನು ವಶಪಡಿಸಿಕೊಳ್ಳುತ್ತವೆ ಎಂದು ವ್ಯವಸ್ಥಿತವಾಗಿ ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ಸುಳ್ಳನ್ನು ಹರಡುತ್ತಿದ್ದಾರೆ. ಆದರೆ ಹೊಸ ಕಾಯಿದೆಯ ಅವಧಿಯಲ್ಲಿ ಯಾವುದೇ ಕೃಷಿ ಭೂಮಿಯನ್ನು ವಶಪಡಿಸಿಕೊಳ್ಳಲು ಸಾಧ್ಯವಿಲ್ಲ ಎಂಬ ಸತ್ಯವನ್ನು ಜನರ ಕಣ್ಣಿಂದ ಮರೆಮಾಚುತ್ತಿದ್ದಾರೆ. 2012 ರಲ್ಲಿ ಮೊದಲ ಬಾರಿಗೆ ತೊಂಬತ್ತೆರಡು ಸಾವಿರ ಕೋಟಿ ಬೆಳೆಯ ಕೃಷಿ ಉತ್ಪನ್ನಗಳು ಸಂಗ್ರಹಣೆಯ ಸ್ಥಳದ ಅಭಾವದಿಂದ ಬಳಕೆಯಾಗದೆ ವ್ಯರ್ಥವಾಗುತ್ತದೆ ಎಂಬುದು ಬೆಳಕಿಗೆ ಬಂತು, ತಂದನಂತರ ಚಿಲ್ಲರೆ ಮತ್ತು ಸಗಟು ಮಾರಾಟ ವ್ಯಾಪಾರೀ ಸಂಸ್ಥೆಗಳು ಕೂಡಾ ತಮ್ಮ ಎರಡನೇ ಹಂತದ ದಾಸ್ತಾನು ಸ್ಥಳಗಳ ಮೇಲೆ ಗಮನ ಹರಿಸಿ, ರೈತರಿಂದ ಮತ್ತು ಎಫ್ಸಿಐ ನಿಂದ ನೇರವಾಗಿ ಖರೀದಿ ನಡೆಸಿ ದಾಸ್ತಾನು ಮಾಡುವ ಪ್ರಕ್ರಿಯೆಯನ್ನು ಆರಂಭಿಸಿತ್ತು. ಇತಿಹಾಸದ ಬಗ್ಗೆ ರಾಹುಲ್ ಗಾಂಧಿಯ ಜ್ಞಾನ ಮತ್ತು ಅವರ ನೆನಪಿನ ಶಕ್ತಿಯ ಕುರಿತು ಎಲ್ಲರಿಗೂ ತಿಳಿದಿದೆಯಾದರೂ ಈ ರೀತಿಯಲ್ಲಿ ಒಂದೇ ಬಾರಿ ಯು ಟರ್ನ್ ತೆಗೆದುಕೊಂಡು ಸುಳ್ಳನ್ನು ಹರಡುವ ಮುನ್ನ ಒಂದು ಬಾರಿ ಹಿಂದೆ ತಿರುಗಿ 2012 ರಲ್ಲಿ ಯಾವ ಪಕ್ಷ ಆಡಳಿತದಲ್ಲಿತ್ತು ಎಂದು ನೋಡುವುದು ಉತ್ತಮ.
ನೀವು ಮೋದಿಜಿಯನ್ನು ವಿರೋಧಿಸುವ ಭರದಲ್ಲಿ ಕೃಷಿಕರ ಹಿತವನ್ನೂ ವಿರೋಧಿಸುತ್ತಿರುವುದು ಹಾಸ್ಯಾಸ್ಪದ ಮಾತ್ರವಲ್ಲ ಇದು ನಿಮ್ಮ ಪಾತಾಳಕ್ಕಿಳಿದಿರುವ ನೈತಿಕ ಅಧಃಪತನಕ್ಕೆ ಸಾಕ್ಷಿಯಾಗಿದೆ. “ಈ ನೂತನ ಕೃಷಿ ಮಸೂದೆಯ ಶ್ರೇಯಸ್ಸನ್ನು ಸಂಪೂರ್ಣವಾಗಿ ತೆಗೆದುಕೊಳ್ಳಿ, ಆದರೆ ಸುಳ್ಳು ಹರಡಿ ರೈತರ ಹಾದಿ ತಪ್ಪಿಸಬೇಡಿ” ಎಂದು ಪ್ರಧಾನಿಯವರು ಮನವಿ ಮಾಡಿದ ಬಳಿಕವೂ ನೀವು ಇದೇ ತೆರನಾಗಿ ವರ್ತಿಸುತ್ತಿದ್ದೀರಿ ಎಂದರೆ ನಿಮ್ಮ ನೈತಿಕತೆಯನ್ನು ಏನೆನ್ನೋಣ. ರಾಜಕೀಯವಾಗಿ ವಿರೋಧ ವ್ಯಕ್ತಪಡಿಸುವುದನ್ನು ಒಪ್ಪೋಣ. ಆದರೆ ವಿರೋಧಿಸಬೇಕು ಎನ್ನುವ ಒಂದೇ ಕಾರಣಕ್ಕಾಗಿ ಅರಾಜಕತೆಯನ್ನು ಸೃಷ್ಟಿಸುವುದು, ಸುಳ್ಳನ್ನು ಹರಡುವುದು ಮತ್ತು ತಮ್ಮದೇ ಮಾತಿನಿಂದ ಯು ಟರ್ನ್ ಹೊಡೆಯುವುದನ್ನು ಮಾಡುವ ಮುಖಾಂತರ ನೀವು ದೇಶದ ಜನರ ಕಣ್ಣಲ್ಲಿ ಇನ್ನಷ್ಟು ಕುಸಿಯುವುದು ಖಚಿತ. ನಿಮ್ಮ ಅಪ್ರಬುದ್ಧ ನಡವಳಿಕೆಯನ್ನೆಲ್ಲಾ ಕ್ಷಮಿಸಬಹುದು, ಮರೆತೂ ಬಿಡಬಹುದು ಆದರೆ ಕ್ಷಣಕ್ಕೊಮ್ಮೆ ಬಣ್ಣ ಬದಲಾಯಿಸುವ ನಿಮ್ಮನ್ನು ನಂಬಲು ಸಾಧ್ಯವೇ???
✍️ ದೀಪಾ ಜಿ. ಭಟ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.