ಭಾರತ ವೀರ ಪುತ್ರರ ನಾಡು. ಇಲ್ಲಿ ಸಾಹಸಗಾಥೆಗಳಿಗೆ, ಸ್ಫೂರ್ತಿದಾಯಕ ಕಥೆಗಳಿಗೆ ಅನೇಕ ಉದಾಹರಣೆಗಳು ಸಿಗುತ್ತವೆ. ಭಾರತೀಯ ಸೈನ್ಯದ ಯೋಧರ ಕಥೆಗಳು ನಿಜಕ್ಕೂ ಮೈ ರೋಮಾಂಚನವನ್ನು ಉಂಟುಮಾಡುವಂತಹದ್ದು ಮತ್ತು ಸ್ಫೂರ್ತಿ ತುಂಬುವಂತಹದ್ದು. ಇಂತಹ ವೀರ ಪರಾಕ್ರಮಗಳಲ್ಲಿ ಒಂದು ತಮ್ಮ ತಂದೆಯ ಹಾದಿಯಲ್ಲೇ ನಡೆದು ಭಾರತೀಯ ವಾಯುಪಡೆಯಲ್ಲಿ ಸೇವೆ ಸಲ್ಲಿಸಿ ಮರಣೋತ್ತರ ಪರಮ ವೀರ ಚಕ್ರ ಪಡೆದ ಪ್ರಪ್ರಥಮ ಭಾರತೀಯ ವಾಯುಸೇನೆಯ ಸದಸ್ಯ ಎಂಬ ಇತಿಹಾಸವನ್ನು ನಿರ್ಮಿಸಿದ ಫ್ಲೈಯಿಂಗ್ ಆಫೀಸರ್ ನಿರ್ಮಲ್ ಜಿತ್ ಸಿಂಗ್ ಸೆಖಾನ್ ಅವರದ್ದು.
1943 ಜುಲೈ 17 ರಂದು ಪಂಜಾಬ್ನ ಲುಧಿಯಾನದ ಇಸೇವಾಲ್ ಗ್ರಾಮದಲ್ಲಿ ಜನಿಸಿದ ನಿರ್ಮಲ್ ಜಿತ್ ಸಿಂಗ್ ಸೆಖಾನ್ ಫ್ಲೈಟ್ ಲೆಫ್ಟಿನೆಂಟ್ ತರ್ಲೊಕ್ ಸಿಂಗ್ ಸೆಖಾನ್ ಅವರ ಪುತ್ರ. ನಿರ್ಮಲ್ ಜಿತ್ ಜೂನ್ 4, 1967 ರಂದು ಪೈಲೆಟ್ ಅಧಿಕಾರಿಯಾಗಿ ಭಾರತೀಯ ವಾಯುಸೇನೆಯಲ್ಲಿ ನಿಯೋಜಿತರಾದ ಬಳಿಕ 1971 ರ ಬಾಂಗ್ಲಾ ವಿಮೋಚನೆಯ ಭಾರತ ಪಾಕಿಸ್ಥಾನದ ಯುದ್ಧದ ಸಂದರ್ಭದಲ್ಲಿ ಅವರು ಐಏಎಫ್ ನ “ದಿ ಫ್ಲೈಯಿಂಗ್ ಬುಲೆಟ್ಸ್” ನಂ. 18 ಸ್ಕ್ವಾಡ್ರನ್ ನೊಂದಿಗೆ ಸೇವೆಯನ್ನು ಸಲ್ಲಿಸುತ್ತಿದ್ದರು. ಶ್ರೀನಗರದಲ್ಲಿ ಕರ್ತವ್ಯವನ್ನು ನಿರ್ವಹಿಸುತ್ತಿದ್ದ ನಿರ್ಮಲ್ ಜಿತ್ ಫಾಲ್ಯಾಂಡ್ Gnat ಯುದ್ಧ ವಿಮಾನವನ್ನು ಹಾರಿಸುವುದರಲ್ಲಿ ನಿಪುಣರಾಗಿದ್ದರು. 1971 ರ ಡಿಸೆಂಬರ್ 14 ರಂದು 6 ಪೇಶಾವರ ವಾಯುನೆಲೆಯ ಪಾಕಿಸ್ಥಾನೀ ವಾಯುಪಡೆಯ 6 ಫೈಟರ್ ಜೆಟ್ಗಳು ಶ್ರೀನಗರದ ಮೇಲೆ ದಾಳಿಯನ್ನು ಪ್ರಾರಂಭಿಸಿದವು. ಆ ಸಮಯದಲ್ಲಿ ಕರ್ತವ್ಯದಲ್ಲಿದ್ದ ಫ್ಲೈಯಿಂಗ್ ಆಫೀಸರ್ ಸೆಖಾನ್ ತಕ್ಷಣವೇ ಕಾರ್ಯೋನ್ಮುಖರಾದರು. ಮೊದಲನೇ ದಾಳಿಯು ಸಂಭವಿಸಿದ ತಕ್ಷಣ ಅವರು ವಿಮಾನವನ್ನು ಹಾರಿಸಲು ಸನ್ನದ್ಧರಾದರು, ವಿಮಾನವನ್ನು ಹಾರಿಸುತ್ತಿದ್ದ ಫ್ಲೈಟ್ ಲೆಫ್ಟಿನೆಂಟ್ ಗುಮ್ನಾಮ್ ಅವರು ಯಶಸ್ವಿಯಾಗಿ ವಿಮಾನವನ್ನು ಹಾರಿಸುತ್ತಿದ್ದಂತೆಯೇ ರನ್ವೇಯ ಮೇಲೆ ಶತ್ರುಗಳು ಬಾಂಬಗಳನ್ನೆಸದರು. ಮೊದಲ ಬಾರಿ ಬಾಂಬ್ಗಳ ಸುರಿಮಳೆಗೈದ ಬಳಿಕ ಪುನರ್ ರಚನೆಯಲ್ಲಿ ತೊಡಗಿದ್ದ ಶತ್ರುಗಳನ್ನು ಹಿಂಬಾಲಿಸಲು, ಬಾಂಬ್ ದಾಳಿಯಿಂದೆದ್ದ ಧೂಳು ನಿರ್ಮಲ್ ಜಿತ್ರಿಗೆ ಸಣ್ಣ ಅಡ್ಡಿಯನ್ನುಂಟು ಮಾಡಿತು. ಆದರೆ ದಾಳಿಯ ಪರಿಣಾಮವಾಗಿ ಕಣ್ಣಿನ ದೃಷ್ಟಿಯನ್ನು ಕಳೆದುಕೊಂಡ ಗುಮ್ನಾಮ್ ಅವರು ಹೋರಾಟದಿಂದ ಹೊರಗುಳಿದರು. ನಂತರ ನಡೆದ ಯುದ್ಧದಲ್ಲಿ ಸೆಖಾನ್ ಅವರೇ ಯುದ್ಧದ ಕಾರ್ಯತಂತ್ರಗಳನ್ನು ರಚಿಸಿ ಯುದ್ಧವನ್ನು ಮುನ್ನಡೆಸಿದರು. ಈ ಸಂದರ್ಭದಲ್ಲಿ ನೇರಾನೇರ ಯುದ್ಧವನ್ನು ನಡೆಸಿದ ಅವರು ಶತ್ರುಸೇನೆಯ ಒಂದು ಯುದ್ಧವಿಮಾನವನ್ನು ಹೊಡೆದುರುಳಿಸಿ ಇನ್ನೊಂದು ವಿಮಾನದತ್ತ ದಾಳಿಯನ್ನು ನಡೆಸಿದರು.
ಇತ್ತ ದಾಳಿಗೊಳಗಾಗಿದ್ದ ನಿರ್ಮಲ್ ಜಿತ್ರ ಯುದ್ಧ ವಿಮಾನವೂ ಕೂಡ ವಿಮಾನದ ರೆಕ್ಕೆಗಳೂ ಹೊಗೆಯುಗುಳತೊಡಗಿತ್ತು. ಹಿಂತಿರುಗಿ ಸೇನಾ ನೆಲೆಗೆ ಬರುವಂತೆ ಆದೇಶ ದೊರಕಿತು ಆದೇಶ ದೊರಕಿದರೂ ವಿಮಾನದಲ್ಲಿ ಕಾಣಿಸಿಕೊಂಡ ತಾಂತ್ರಿಕ ವೈಫಲ್ಯದ ಕಾರಣದಿಂದ ಕೆಲ ಹೊತ್ತು ನೇರವಾಗಿ ಹಾರಾಡುತ್ತಿದ್ದ ವಿಮಾನವು, ನಿಧಾನವಾಗಿ ತಲೆಕೆಳಗಾಗಿ ಕೆಳಗೆ ಉರುಳತೊಡಗಿತು. ಕೊನೆಯ ಕೆಲವು ನಿಮಿಷಗಳಲ್ಲಿ ನಿರ್ಮಲ್ ಜಿತ್, ವಿಮಾನವನ್ನು ತೊರೆದು ಹೊರಬರಲು ಪ್ರಯತ್ನಿಸಿದರೂ ವಿಮಾನದ ಮೇಲ್ಚಾವಣಿಯು ಹಾರಿಹೋಗಿ ಇವರ ಪ್ರಯತ್ನವು ಫಲಪ್ರದವಾಗಲಿಲ್ಲ. ಶ್ರೀನಗರದಿಂದ ವಾಯುಸೇನಾನೆಲೆಗೆ ಸಾಗುವ ರಸ್ತೆಯ ಬಳಿಯಲ್ಲಿ ಅವರ ಯುದ್ಧವಿಮಾನದ ಭಗ್ನಾವಶೇಷಗಳನ್ನು ಪತ್ತೆ ಹಚ್ಚಲಾಯಿತು. ದಾಳಿಯಲ್ಲಿ ವಿಮಾನವು ಹಾನಿಗೀಡಾದ ಸ್ಥಳವು ಪರ್ವತ ಪ್ರದೇಶವಾದ್ದರಿಂದ, ಸೇನೆ ಮತ್ತು ವಾಯುಸೇನೆಗಳೆರಡೂ ಸೇರಿ ಪ್ರಯತ್ನಿಸಿದರೂ ನಿರ್ಮಲ್ ಜಿತ್ರ ದೇಹವಾಗಲೀ ಅಥವಾ ಅವಶೇಷಗಳಾಗಲೀ ಲಭ್ಯವಾಗಲಿಲ್ಲ.
ಶತ್ರು ರಾಷ್ಟ್ರ ಪಾಕಿಸ್ಥಾನದ ಯುದ್ಧ ವಿಮಾನ ಚಾಲಕರಾದ ಪೈಲಟ್ ಸಲೀಂ ಬೇಗ್ ಮಿರ್ಜಾ ಅವರು ತಮ್ಮ ಹಲವಾರು ಲೇಖನಗಳಲ್ಲಿ ನಿರ್ಮಲ್ ಜಿತ್ರ ಸಾಹಸ ಮತ್ತು ಶೌರ್ಯಗಳನ್ನು ಕೊಂಡಾಡಿದ್ದಾರೆ. ದೇಶದೆಡೆಗಿನ ಅವರ ಅಪ್ರತಿಮ ಸಾಹಸ, ಶೌರ್ಯ ಮತ್ತು ಬಲಿದಾನಗಳನ್ನು ಗುರುತಿಸಿ ಅವರಿಗೆ ಮರಣೋತ್ತರ “ಪರಮ ವೀರ ಚಕ್ರ” ಪ್ರಶಸ್ತಿ ನೀಡಿ ಗೌರವಿಸಲಾಯಿತು.
ನಿರ್ಮಲ್ ಜಿತ್ರ ಅಪ್ರತಿಮ ಶೌರ್ಯ ಮತ್ತು ಸಾಹಸವನ್ನು ಗುರುತಿಸಿ ಗೌರವಿಸಲು ಪಂಜಾಬ್ನ ಅನೇಕ ನಗರಗಳಲ್ಲಿ ಅವರ ಪ್ರತಿಮೆಗಳನ್ನು ನಿರ್ಮಿಸಲಾಗಿದೆ.
1985 ರಲ್ಲಿ ನಿರ್ಮಿಸಲಾದ ಸಾಗರ ಟ್ಯಾಂಕರ್ಗೆ ‘ಫ್ಲೈಯಿಂಗ್ ಆಫೀಸರ್ ನಿರ್ಮಲ್ ಜಿತ್ ಸಿಂಗ್ ಸೆಖಾನ್’ ಎಂದು ಹೆಸರಿಸಲಾಯಿತು. ಮಾತ್ರವಲ್ಲದೆ ನಿರ್ಮಲ್ ಜಿತ್ರ ಪ್ರತಿಮೆ ಹಾಗು ಅವರು ಚಲಾಯಿಸುತ್ತಿದ್ದ ಯುದ್ಧ ವಿಮಾನದ ಅವಶೇಷಗಳನ್ನು ಪಾಲಂನ ಭಾರತೀಯ ವಾಯುಪಡೆಯ ವಸ್ತು ಸಂಗ್ರಹಾಲಯದಲ್ಲಿ ಇರಿಸಲಾಗಿದೆ. ದೇಶದ ಸಾರ್ವಭೌಮತೆಯ ರಕ್ಷಣೆಗಾಗಿ ತಮ್ಮ ಅತ್ಯುನ್ನತ ಬಲಿದಾನವನ್ನು ನೀಡಿ ಹುತಾತ್ಮರಾದ ನಿರ್ಮಲ್ ಜಿತ್ ಸಿಂಗ್ ಸೆಖಾನ್ ಅವರನ್ನು ಅವರ ಪುಣ್ಯತಿಥಿಯಂದು ನೆನೆಯೋಣ. ಮಾತ್ರವಲ್ಲದೆ ಅವರ ಶೌರ್ಯ ಸಾಹಸದ ಆದರ್ಶದ ಮಾರ್ಗದಲ್ಲಿ ಸಾಗೋಣ.
ದೇಶದ ಅತಿ ದೊಡ್ಡ ಪುರಸ್ಕಾರ ಪರಮ ವೀರ ಚಕ್ರ ಪುರಸ್ಕಾರಕ್ಕೆ ಭಾಜನರಾದ ಏಕೈಕ ವಾಯುಸೇನಾ ಸಿಬ್ಬಂದಿ ನಿರ್ಮಲ್ ಜಿತ್ ಸಿಂಗ್ ಸೆಖಾನ್ ಅವರು 1971 ರ ಭಾರತ-ಪಾಕಿಸ್ಥಾನ ಯುದ್ಧದಲ್ಲಿ ಪಾಕ್ ತಂತ್ರಗಳಿಗೆ ದಿಟ್ಟವಾಗಿ ಉತ್ತರ ನೀಡಿ ಪಾಕಿಸ್ಥಾನಕ್ಕೆ ಸಿಂಹಸ್ವಪ್ನವಾಗಿದ್ದರು. ಅಪ್ರತಿಮ ಶೌರ್ಯ ಮತ್ತು ಸಾಹಸವನ್ನು ಮೆರೆದ ಫ್ಲೈಯಿಂಗ್ ಆಫೀಸರ್ ನಿರ್ಮಲ್ ಜಿತ್ ಸಿಂಗ್ ಸೆಖಾನ್ ಅವರ ಪುಣ್ಯತಿಥಿಯಂದು ಅವರನ್ನು ನೆನೆಯೋಣ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.