ನಮ್ಮ ದೇಶ ವಿಸ್ತಾರದಲ್ಲೂ, ರಕ್ಷಣಾ ವ್ಯವಸ್ಥೆಯಲ್ಲೂ ಅತ್ಯಂತ ದೊಡ್ಡ ಮತ್ತು ಬಲಿಷ್ಠ ರಾಷ್ಟ್ರ. ದೇಶವೊಂದು ಸುವ್ಯವಸ್ಥಿತವಾಗಿ ನಡೆಯಬೇಕೆಂದರೆ ಆಡಳಿತ ಯಂತ್ರವು ಎಷ್ಟು ಅಗತ್ಯವೋ, ರಕ್ಷಣಾ ವ್ಯವಸ್ಥೆಯೂ ಕೂಡಾ ಅಷ್ಟೇ ಅತ್ಯಗತ್ಯ. ಜನಪ್ರತಿನಿಧಿಗಳು ಆಡಳಿತ ಯಂತ್ರವನ್ನು ನಿಭಾಯಿಸುವ ಜವಾಬ್ದಾರಿಯನ್ನು ಹೊತ್ತರೆ ದೇಶದ ಹಾಗೂ ದೇಶದ ನಾಗರೀಕರ ರಕ್ಷಣೆಯ ಹೊಣೆಯನ್ನು ಸಮವಸ್ತ್ರ ಧಾರಿಗಳು ಹೊರುತ್ತಾರೆ. ದೇಶವನ್ನು ಬಾಹ್ಯ ಶತ್ರುಗಳಿಂದ ಯೋಧರೂ, ಆಂತರಿಕ ಶತ್ರುಗಳಿಂದ ಹಾಗೂ ತೊಂದರೆಗಳಿಂದ ಪೋಲೀಸರೂ ನಮ್ಮನ್ನು ರಕ್ಷಿಸುತ್ತಾರೆ. ಕೊರೋನಾ ಸಂಕಷ್ಟದ ಪ್ರಾರಂಭದ ದಿನಗಳಲ್ಲಿ ನಾವೆಲ್ಲರೂ ಪ್ರಾಣ ಮತ್ತು ಆರೋಗ್ಯದ ಭಯದಿಂದ ಮನೆಯಲ್ಲೇ ಕುಳಿತಿದ್ದ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಹಾಗೂ ದೈನಂದಿನ ಜೀವನವು ವ್ಯವಸ್ಥಿತವಾಗಿ ನಡೆಯಲು ಮುಖ್ಯ ಕಾರಣ ಪೊಲೀಸರು. ಅನೇಕ ದಿನಗಳ ಕಾಲ ಹಗಲಿರುಳು ತಮ್ಮ ಕುಟುಂಬದಿಂದ ದೂರವಾಗಿದ್ದು ಸೇವೆ ಸಲ್ಲಿಸಿದವರೂ ಪೊಲೀಸರೇ ಅಲ್ಲವೇ?
ನಮಗಾಗಿ ಇಷ್ಟೆಲ್ಲಾ ಮಾಡುವ ಪೋಲೀಸರಿಗಾಗಿ ನಾವೇನು ಮಾಡುತ್ತಿದ್ದೇವೆ? ಮನೋರಂಜನೆಯ ಹೆಸರಿನಲ್ಲಿ ಅಪಹಾಸ್ಯ? ಹೌದು ಸಿನೆಮಾ ಒಂದು ಮನೋರಂಜನಾ ಮಾಧ್ಯಮ. ಅಲ್ಲಿ ಕ್ರಿಯಾಶೀಲತೆಗೆ ಬಹಳಷ್ಟು ಬೆಲೆಯಿದೆ. ನಮ್ಮ ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವೂ ಇದೆ. ಆದರೆ ಅದನ್ನು ಎಲ್ಲಿ ಹೇಗೆ ಉಪಯೋಗಿಸಬೇಕೆಂಬ ಅರಿವು ಕಡಿಮೆಯಾಗುತ್ತಿದೆ ಅಲ್ಲವೇ? ಎಸ್ ಪಿ ಸಾಂಗ್ಲಿಯಾನ ಎಂಬ ಸಿನೆಮಾ ನೋಡಿದ ನೆನಪು ನಮ್ಮಲ್ಲಿ ಬಹುತೇಕರಿಗೆ ಇರಬಹುದು. ಡಾ .ರಾಜ್ ಕುಮಾರ್ ಅವರ ಬಂಗಾರದ ಮನುಷ್ಯ ಸಿನೆಮಾ ನೋಡಿ ಅನೇಕರು ಮರಳಿ ಮಣ್ಣಿಗೆ ತೆರಳಿದ ಅನೇಕ ಉದಾಹರಣೆಗಳೂ ಸಿಗಬಹುದು. ನಾನು ಇದನ್ನೆಲ್ಲಾ ಯಾಕೆ ಉಲ್ಲೇಖಸುತ್ತಿದ್ದೇನೆ ಎಂಬ ಸಂದೇಹ ಬರುವುದು ಸಹಜ. ಸಿನೆಮಾ ಮತ್ತು ಅದರ ನಾಯಕ ನಮ್ಮ ಜೀವನದಲ್ಲಿ ಅನೇಕ ಬಾರಿ ಬಹಳಷ್ಟು ಪ್ರಭವಾವನ್ನು ನಮಗರಿವಿಲ್ಲದೆಯೇ ಬೀರುತ್ತವೆ. ಇದು ಸಹಜ ಕೂಡಾ. ಇದರ ಅರಿವಿದ್ದೋ ಇಲ್ಲದೆಯೋ ನಾವು ಮನೋರಂಜನೆಯ ಹೆಸರಿನಲ್ಲಿ ಸಮಾಜದ ಗೌರವಾನ್ವಿತ ಹುದ್ದೆಗಳಿಗೆ ಅಗೌರವ ತೋರುತ್ತಿದ್ದೇವೆ.
ಇಂದಿನ ಬಹುತೇಕ ಸಿನೆಮಾಗಳನ್ನು ಗಮನಿಸಿ ಪೊಲೀಸ್ ಅಧಿಕಾರಿಯೊಬ್ಬರು ಸಮವಸ್ತ್ರ ಧರಿಸಿ ಹಾಡು ಹೇಳುತ್ತಾ ರಸ್ತೆ ಮಧ್ಯದಲ್ಲಿ ನೃತ್ಯ ಮಾಡುವುದು ಅಥವಾ ಕುಡಿದು ತೂರಾಡುವುದು, ಪಾರ್ಟಿ ಮಾಡುವುದು ಇತ್ಯಾದಿಗಳನ್ನು ಯಾತೇಚ್ಚವಾಗಿ ತೋರಿಸಲಾಗುತ್ತದೆ. ಇಲ್ಲದಿದ್ದರೆ ಹಾಸ್ಯ ಪಾತ್ರಗಳಲ್ಲಿ ಪೊಲೀಸರನ್ನು ತೋರಿಸಲಾಗುತ್ತದೆ, ಒಂದೋ ಅತ್ಯಂತ ಕೃಷ ಕಾಯ, ಕಳ್ಳನನ್ನು ಒಂದು ಕ್ಷಣವೂ ಹಿಡಿದಿರಿಸಲು ಅಶಕ್ತ ಎಂಬಂತೆ ಅಥವಾ ದೊಡ್ಡ ಹೊಟ್ಟೆಯ ದಪ್ಪ ಶರೀರದ ಪೋಲೀಸ್ ಪೇದೆಯೊಬ್ಬ ಕಳ್ಳರ ಹಿಂದೆ ಎದುಸಿರು ಬಿಡುತ್ತಾ ಓಡುವ ದೃಶ್ಯ. ಇವೆರಡೂ ಇಲ್ಲದಿದ್ದಲ್ಲಿ ಪೊಲೀಸ್ ಥಾಣೆಯಲ್ಲಿ ಮೊದ್ದು ಪೊಲೀಸ್ ಪೇದೆ ಇರುವ ದೃಶ್ಯವಿಲ್ಲದ ಸಿನೆಮಾಗಳೇ ವಿರಳವಾಗುತ್ತಿದೆ. ಅನೇಕ ತಿಂಗಳುಗಳ ಕಾಲ ದೇಹದಂಡಿಸಿ, ಸಂಬಂಧಪಟ್ಟ ಪರೀಕ್ಷೆಗಳನ್ನೆಲ್ಲ ಪಾಸುಮಾಡಿ ನೌಕರಿ ಪಡೆದು ಹಬ್ಬದ ಸಂದರ್ಭದಲ್ಲಿ ಕೂಡ ಸೇವೆ ಸಲ್ಲಿಸುವ ಪೊಲೀಸರ ಮನಸ್ಸಿಗೆ ಮತ್ತು ಅವರ ಕುಟುಂಬ ವರ್ಗಕ್ಕೆ ಇದರಿಂದ ಬೇಸರವಾಗದೇ? ಸಿನೆಮಾದಲ್ಲಿ ಪೊಲೀಸ್ ಪಾತ್ರ ನಿರ್ವಹಿಸಲು ಕಟ್ಟುಮಸ್ತಾದ ನಟ ದೊರಕಲಾರನೇ? ಸಮಾಜದ ದುಷ್ಟ ಶಕ್ತಿಗಳ ವಿರುದ್ದ ಹೋರಾಟ ನಡೆಸುವ ಪೊಲೀಸ್ ಪಾತ್ರವನ್ನು ತೋರಲು ಸಾಧ್ಯವಿಲ್ಲವೇ? ಹಾಸ್ಯ ಪಾತ್ರವನ್ನಾಗಿ ಬೇರೆ ಯಾರನ್ನೂ ಚಿತ್ರೀಸಬಹುದಲ್ಲ, ಸಮವಸ್ತ್ರ ಧರಿಸಿದ ಪೊಲೀಸರೇ ಯಾಕೆ ಬೇಕು?
ನೆಟ್ಫ್ಲಿಕ್ಸ್ ನಿನ್ನೆ ಬಿಡುಗಡೆಗೊಳಿಸಿದ ವಿಡಿಯೋ ಒಂದರಲ್ಲಿ ಅನಿಲ್ ಕಪೂರ್ ಭಾರತೀಯ ವಾಯುಸೇನೆಯ ಸಮವಸ್ತ್ರ ಧರಿಸಿ ಕೆಟ್ಟದಾಗಿ ನಡೆದುಕೊಳ್ಳುವ ಮತ್ತು ಅನುಚಿತವಾಗಿ ಮಾತನಾಡುವ ದೃಶ್ಯಗಳಿತ್ತು. ನಮಗೆ ಬಾರ್ಡರ್, ಉರಿ ಸಿನೆಮಾಗಳ ಒಂದೊಂದು ಹಾಡುಗಳು ಇಂದಿಗೂ ಕಣ್ಣಲ್ಲಿ ನೀರು ತರುತ್ತವೆ. ಒಂದೊಂದು ಮಾತುಗಳೂ ಕೇಳಿದ ತಕ್ಷಣ ಮೈಯ್ಯಲ್ಲಿ ರೋಮಾಂಚನ ತರುತ್ತವೆ. ಯಾಕೆಂದರೆ ಅದರಲ್ಲಿ ನಮ್ಮ ಯೋಧರ ಸಾಹಸವನ್ನು ಚಿತ್ರೀಸಲಾಗಿದೆ. ಆದರೆ ನಿನ್ನೆ ಹೊರಬಂದ ವಿಡಿಯೋ, ಒಂದು ದೇಶದ ಜವಾಬ್ದಾರಿಯುತ ಪ್ರಜೆಗಳಾಗಿ ನಾವೆಲ್ಲರೂ ನಾಚಿಗೆಯಿಂದ ತಲೆ ತಗ್ಗಿಸಬೇಕಾದ ವಿಚಾರ. ನಮ್ಮ ಮನೆಯಿಂದಲೂ ದೇಶ ರಕ್ಷಿಸುವ ಯೋಧನೊಬ್ಬ ಜನಿಸಲಿ ಎಂದು ನಾವೆಲ್ಲಾ ಹಾರೈಸುವಾಗ ಇಂತಹ ಅವಮಾನ ಸಹಿಸಲು ಸಾಧ್ಯವೇ? ವಾಯುಸೇನೆ, ಭೂ ಸೇನೆ, ನೌಕದಳ ಯಾವುದೇ ಸಮವಸ್ತ್ರವನ್ನು ಧರಿಸಬೇಕಾದರೂ ಅದಕ್ಕೇ ಅನೇಕ ವರುಷಗಳ ಪರಿಶ್ರಮ ಬೇಕು. ಇಂದಿನ ದಿನಗಳಲ್ಲಿ ಲಾಬಿ ನಡೆಸಿ ಹಣವನ್ನು ಚೆಲ್ಲಿ ಪ್ರಶಸ್ತಿ ಪಡೆಯಬಹುದು ಆದರೆ ಸೇನೆಯ ಸಮವಸ್ತ್ರವನ್ನಲ್ಲ. ಅದು ಸತತ ಪರಿಶ್ರಮ, ತ್ಯಾಗ ಮತ್ತು ಅಪರಿಮಿತ ದೇಶಭಕ್ತಿ ಇದ್ದಾಗ ಮಾತ್ರ ಲಭಿಸುವ ಉಡುಗೊರೆ. ಅದಕ್ಕೇ ಅದರದ್ದೇ ಆದ ಗೌರವ ಮತ್ತು ಪೂಜ್ಯ ಸ್ಥಾನವಿದೆ. ನಿಮಗೆ ಅದರ ಹಿಂದಿನ ಪರಿಶ್ರಮದ ಅರಿವಿಲ್ಲದಿದ್ದಲ್ಲಿ ಒಮ್ಮೆ ಯೋಧನೊಬ್ಬನ ಬಳಿ ದಯವಿಟ್ಟು ವಿಚಾರಿಸಿ. ಮನೋರಂಜನೆಗಾಗಿ ಬೇರೆ ಸಾಕಷ್ಟು ವಿಚಾರಗಳಿವೆ ಅದಕ್ಕಾಗಿ ಸಮವಸ್ತ್ರದ ಬಳಕೆ ಸರ್ವಥಾ ಸಲ್ಲ.
ಮನೋರಂಜನೆಗಾಗಿ ನಾವು ನೋಡುವ ಸಿನೆಮಾಗಳು ನಮ್ಮ ಮನಸ್ಸಿನ ಮೇಲೆಯೇ ಪ್ರಭಾವ ಬೀರಬಹುದಾದರೆ ನಮ್ಮೊಂದಿಗೆ ಕುಳಿತು ಸಿನೆಮಾ ನೋಡುವ ಮಕ್ಕಳ ಮೇಲೆ ಅದೆಷ್ಟು ಪ್ರಭಾವ ಬೀರಬಹುದು ಎಂದು ಒಂದು ಬಾರಿ ಆಲೋಚಿಸಿ. ಮುಂದೆ ಬೆಳೆದು ನಾನು ಪೊಲೀಸ್ ಆಗುತ್ತೇನೆ, ನಾನು ಯುದ್ಧ ವಿಮಾನ ಚಾಲಕನಗುತ್ತೇನೆ, ನಾನು ಸೇನಾಧಿಕಾರಿಯಾಗುತ್ತೇನೆ ಎನ್ನುವ ಮಗುವೊಂದು ಇಂತಹಾ ದೃಶ್ಯಗಳನ್ನು ನೋಡಿದಾಗ ತಾನು ಆಯ್ದುಕೊಳ್ಳಲು ಬಯಸಿದ ವೃತ್ತಿಯ ಬಗ್ಗೆ ಆ ಮಗು ಎಷ್ಟು ಗೌರವವನ್ನು ಹೊಂದಲು ಸಾಧ್ಯ? ಯೋಧನನ್ನು ನೋಡಿದ ತಕ್ಷಣ ಗೌರವದಿಂದ ಸೆಲ್ಯೂಟ್ ಹೊಡೆಯಲು ಹಣೆಯ ಮೇಲೇರಬೇಕಾದ ಮಗುವಿನ ಕೈ, ಸಿನೆಮಾ ದೃಶ್ಯವನ್ನು ನೆನೆದು ನಗುವನ್ನು ಅಡಗಿಸಲು ಬಾಯಿಯ ಮೇಲೆ ಬರಬಾರದು ಅಲ್ಲವೇ? ಕಟ್ಟು ಮಸ್ತದ ಗೌರವಾನ್ವಿತ ಪೊಲೀಸ್ ಅಧಿಕಾರಿಯನ್ನು ನೋಡುವಾಗ ಮಗುವಿಗೆ ದಪ್ಪ ಹೊಟ್ಟೆಯ ಪೊಲೀಸ್ ನೆನಪಿಗೆ ಬಂದರೆ ಅದಕ್ಕೇ ಕಾರಣ ಯಾರಾಗುತ್ತಾರೆ?
ಸಮವಸ್ತ್ರ ಧರಿಸುವ ವ್ಯಕ್ತಿಗೂ ವೈಯಕ್ತಿಕ ಜೀವನವಿದೆ ಎಂಬುದು ನಮಗೂ ಅರಿವಿದೆ. ಆದರೆ ಅವರೆಲ್ಲರೂ ತಾವು ಕಷ್ಟ ಪಟ್ಟು ಸಂಪಾದಿಸಿ ಇಷ್ಟಪಟ್ಟು ಧರಿಸುವ ಸಮವಸ್ತ್ರವನ್ನು ಬಹುವಾಗಿ ಗೌರವಿಸುತ್ತಾರೆ ಮತ್ತು ಪ್ರೀತಿಸುತ್ತಾರೆ. ಸಮವಸ್ತ್ರದ ಬಗ್ಗೆ ಸಿನೆಮಾ ಮಾಡುವುದರ ಬಗ್ಗೆ ಆಕ್ಷೇಪಣೆಯಲ್ಲ ಆದರೆ ಅಗೌರವ ತೋರಬಾರದು ಅಷ್ಟೇ. ಭವಿಷ್ಯವನ್ನು ನಿರ್ಮಿಸುವ ಮಗುವಿಗೆ ಸಮವಸ್ತ್ರದ ಮೇಲೆ ಇನ್ನೂ ಹೆಚ್ಚು ಗೌರವ ಹುಟ್ಟುವಂತೆ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ. ಪೊಲೀಸರ ಮೇಲೆ ಇನ್ನಷ್ಟು ಎಸ್ ಪಿ ಸಾಂಗ್ಲಿಯಾನಗಳಂತಹಾ ಸಿನೆಮಾಗಳು ಬರಲಿ. ಬಾರ್ಡರ್ ಮತ್ತು ಉರಿಯಂತಹಾ ಮತ್ತಷ್ಟು ಪ್ರೇರಣಾದಾಯಕ, ದೇಶಭಕ್ತಿಯನ್ನು ಮೇಲೇತ್ತುವ ಸಿನೆಮಾ ನಿರ್ಮಾಣವಾಗಲಿ ಎಂಬ ಆಶಯ ಮತ್ತು ಭರವಸೆ ನಮ್ಮೆಲ್ಲರಲ್ಲೂ ಇರಲಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.