ಸಂಸತ್ ಭವನದ ನೂತನ ಕಟ್ಟಡ ನಿರ್ಮಾಣ ಕಾಮಗಾರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಡಿ. 10 ರಂದು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಇದರ ಕಾಮಗಾರಿ 2022 ರ ಹೊತ್ತಿಗೆ ಸಂಪೂರ್ಣವಾಗುವ ನಿರೀಕ್ಷೆ ಇದೆ ಎಂದಿದ್ದಾರೆ.
ಪಿಎಂ ನರೇಂದ್ರ ಮೋದಿ ಅವರು ಗುರುವಾರ ಅಡಿಪಾಯ ಹಾಕಲಿರುವ ಹೊಸ ಸಂಸತ್ತಿನ ಕಟ್ಟಡವು ಆತ್ಮನಿರ್ಭರ ಭಾರತದ ಧ್ಯೇಯದ ಅಭಿವ್ಯಕ್ತಿಯಾಗಲಿದೆ ಮತ್ತು ಸ್ವಾತಂತ್ರ್ಯದ ನಂತರ ಮೊದಲ ಬಾರಿಗೆ ಸಂಸತ್ತನ್ನು ನಿರ್ಮಿಸುವ, ಅದಕ್ಕೆ ಅಡಿಪಾಯ ಹಾಕುವ ಸುವರ್ಣ ಅವಕಾಶವನ್ನು ಮೋದಿ ಪಡೆದಿದ್ದಾರೆ. ನವ ಭಾರತ ಆಶಯ ಮತ್ತು ಆಕಾಂಕ್ಷೆಗಳು ಈ ಕಟ್ಟಡದಲ್ಲಿ ಹೊರಹೊಮ್ಮಲಿವೆ.
ಈ ಕಟ್ಟಡವು ಸುಮಾರು 60 ಸಾವಿರ ಚದರ ಮೀ. ವಿಸ್ತೀರ್ಣ ಹೊಂದಿದೆ. ಸ್ವಾಗತ, ತಡೆಗೋಡೆ, ಇತರ ತಾತ್ಕಾಲಿಕ ರಚನೆಗಳನ್ನು ಹೊಂದಿರುವ ಪಾರ್ಲಿಮೆಂಟ್ ಹೌಸ್ ಎಸ್ಟೇಟ್ ಪ್ಲಾಟ್ ಸಂಖ್ಯೆ 118 ರಲ್ಲಿ ನೆಲೆಗೊಳ್ಳಲಿದೆ. ಈ ಭವನದಲ್ಲಿ ಪ್ರತಿಯೊಬ್ಬ ಸದಸ್ಯರಿಗೂ ಪ್ರತ್ಯೇಕ ಕೊಠಡಿಗಳಿರಲಿವೆ. ಜೊತೆಗೆ ಕಾಗದ ರಹಿತವಾಗಿಸಲು ಇಲ್ಲಿ ಡಿಜಿಟಲ್ ತಂತ್ರಜ್ಞಾನ ಅಳವಡಿಸಲಾಗುತ್ತಿದೆ.
ಈ ಕಟ್ಟಡದಲ್ಲಿ ಸಂವಿಧಾನ ಸಭಾಂಗಣ, ಸಂಸತ್ ಸದಸ್ಯರಿಗೆ ವಿಶ್ರಾಂತಿ ಕೊಠಡಿ, ಗ್ರಂಥಾಲಯ, ಅನೇಕ ಸಮಿತಿ ಕೊಠಡಿಗಳು, ಡೈನಿಂಗ್, ಪಾರ್ಕಿಂಗ್ ವ್ಯವಸ್ಥೆ ಒಳಗೊಂಡಿದೆ. ಹೊಸ ಸಂಸತ್ ಭವನದ ಲೋಕಸಭೆಯಲ್ಲಿ 888 ಸದಸ್ಯರಿಗೆ ಆಸನ, ರಾಜ್ಯಸಭೆಯ ಮೇಲ್ಮನೆ ಸದಸ್ಯರಿಗೆ 384 ಆಸನ ಸಾಮರ್ಥ್ಯ ಹೊಂದಿದೆ.
ಸದ್ಯ ಅಸ್ತಿತ್ವದಲ್ಲಿರುವ ಸಂಸತ್ ಕಟ್ಟಡ ಬ್ರಿಟಿಷ್ ಯುಗದ ಕಟ್ಟಡವಾಗಿದೆ. ಅಲ್ಲಲ್ಲಿ ಬಿರುಕು ಬಿಟ್ಟು ಶಿಥಿಲಾವಸ್ಥೆಗೆ ಕಾಲಿಡುತ್ತಿದೆ. ಈ ಹಿನ್ನಲೆಯಲ್ಲಿ ಹೊಸ ಸಂಸತ್ ಕಟ್ಟಡ ಅವಶ್ಯಕತೆಯೂ ಎನಿಸಿದೆ.
ಹೊಸ ಕಟ್ಟಡದ ಒಳಾಂಗಣವು ನಮ್ಮ ಪ್ರಾದೇಶಿಕ ಕಲೆಗಳು, ಕರಕುಶಲ ವಸ್ತುಗಳು, ಜವಳಿ ಮತ್ತು ವಾಸ್ತುಶಿಲ್ಪದ ಭಾರತೀಯ ಸಂಸ್ಕೃತಿ ಮತ್ತು ವೈವಿಧ್ಯತೆಯ ಸಮೃದ್ಧ ಮಿಶ್ರಣವನ್ನು ಪ್ರದರ್ಶಿಸಲಿದೆ. ವಿನ್ಯಾಸ ಯೋಜನೆಯು ಭವ್ಯವಾದ ಕೇಂದ್ರ ಸಾಂವಿಧಾನಿಕ ಗ್ಯಾಲರಿ ಸ್ಥಳವನ್ನು ಒಳಗೊಂಡಿದೆ, ಇಲ್ಲಿಗೆ ಸಾರ್ವಜನಿಕರಿಗೆ ಪ್ರವೇಶಿಸಲು ಅವಕಾಶವಿದೆ.
ಕಟ್ಟಡದ ನಿರ್ಮಾಣವು ಸಂಪನ್ಮೂಲ-ಸಮರ್ಥ ಹಸಿರು ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತದೆ, ಪರಿಸರ ಸ್ನೇಹಿ ಅಭ್ಯಾಸಗಳನ್ನು ಉತ್ತೇಜಿಸುತ್ತದೆ, ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ ಮತ್ತು ಆರ್ಥಿಕ ಪುನರುಜ್ಜೀವನಕ್ಕೆ ಸಹಕರಿಸುತ್ತದೆ. ಇದು ಉತ್ತಮ-ಗುಣಮಟ್ಟದ ಅಕೌಸ್ಟಿಕ್ಸ್ ಮತ್ತು ಆಡಿಯೊ-ದೃಶ್ಯ ಸೌಲಭ್ಯಗಳು, ಸುಧಾರಿತ ಮತ್ತು ಆರಾಮದಾಯಕ ಆಸನ ವ್ಯವಸ್ಥೆ, ಪರಿಣಾಮಕಾರಿ ಮತ್ತು ಅಂತರ್ಗತ ತುರ್ತು ಸ್ಥಳಾಂತರಿಸುವ ನಿಬಂಧನೆಗಳನ್ನು ಹೊಂದಿರುತ್ತದೆ.
ಸೀಸ್ಮಿಕ್ ವಲಯ 5 ಅವಶ್ಯಕತೆಗಳನ್ನು ಅನುಸರಿಸುವುದು ಸೇರಿದಂತೆ ಕಟ್ಟಡವು ಅತ್ಯುನ್ನತ ರಚನಾತ್ಮಕ ಸುರಕ್ಷತಾ ಮಾನದಂಡಗಳನ್ನು ಅನುಸರಿಸುತ್ತದೆ ಮತ್ತು ನಿರ್ವಹಣೆ ಮತ್ತು ಕಾರ್ಯಾಚರಣೆಗಳನ್ನು ಕಟ್ಟಡದ ವಿನ್ಯಾಸ ಸುಲಲಿತಗೊಳಿಸಲಿದೆ.
ಶಿಲಾನ್ಯಾಸ ಸಮಾರಂಭದಲ್ಲಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ವೆಂಕಟೇಶ್ ಜೋಶಿ, ರಾಜ್ಯ ಸಚಿವ (ಸ್ವತಂತ್ರ ಉಸ್ತುವಾರಿ) ಹರ್ದೀಪ್ ಎಸ್ ಪುರಿ, ರಾಜ್ಯಸಭಾ ಉಪಾಧ್ಯಕ್ಷ ಹರಿವಂಶ್ ನಾರಾಯಣ್ ಸಿಂಗ್ ಭಾಗವಹಿಸಲಿದ್ದಾರೆ. ಮಾತ್ರವಲ್ಲದೇ, ಕೇಂದ್ರ ಕ್ಯಾಬಿನೆಟ್ ಮಂತ್ರಿಗಳು, ರಾಜ್ಯ ಸಚಿವರು, ಸಂಸತ್ ಸದಸ್ಯರು, ಕಾರ್ಯದರ್ಶಿಗಳು ರಾಯಭಾರಿಗಳು / ಹೈಕಮಿಷನರ್ಗಳು ಸೇರಿದಂತೆ ಸುಮಾರು 200 ಗಣ್ಯರು ಈ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದು, ವೆಬ್ಕಾಸ್ಟ್ ನೇರ ಪ್ರಸಾರವಾಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.