ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಯನ್ನು ವಿರೋಧಿಸಿರುವ ಕೆಲವು ‘ರೈತರು’ ಇಂದು ಭಾರತ್ ಬಂದ್ಗೆ ಕರೆ ಕೊಟ್ಟಿದ್ದಾರೆ. ಇನ್ನು ಹಲವು ರೈತರು ಕೇಂದ್ರ ಮೋದಿ ಸರ್ಕಾರದ ನೂತನ ಕೃಷಿ ಕಾಯ್ದೆಯ ಸತ್ಯ ಮತ್ತು ಸತ್ವಗಳನ್ನು ಅರಿತು ಅದನ್ನು ಬೆಂಬಲಿಸಿದ್ದಾರೆ. ಇಂತಹ ಒಂದು ರೈತ ಸ್ನೇಹಿ ಕಾಯ್ದೆಯ ಅನಿವಾರ್ಯತೆ ದೇಶಕ್ಕಿತ್ತು ಎಂಬುದನ್ನು ಅರಿತು ಬಂದ್ಗೆ ಬೆಂಬಲ ಸೂಚಿಸದೆ ಹೊಲದಲ್ಲಿ ತಮ್ಮ ಪಾಡಿಗೆ ತಾವು ದುಡಿಯುತ್ತಿದ್ದಾರೆ. ಹಾಗಾದರೆ ಈ ನೂತನ ಕೃಷಿ ನೀತಿಗೆ ವಿರೋಧವೇಕೆ ಎಂಬುದರಾಳಕ್ಕೆ ಹೋಗಿ ಯೋಚಿಸಿದರೆ, ಇಂದಿನ ಭಾರತ್ ಬಂದ್ ನ ಹಿಂದಿರುವ ಕಾಣದ ‘ಕೈ’ ಗಳು ಗೋಚರಿಸುತ್ತವೆ ಎಂಬುದು ಸತ್ಯ.
ಹಿಂದೆಲ್ಲಾ ಕಷ್ಟ ಪಟ್ಟು ಬೆಳೆ ಬೆಳೆದ ರೈತನ ಮತ್ತು ಗ್ರಾಹಕನ ನಡುವೆ ದಲ್ಲಾಳಿಗಳ ಅಬ್ಬರವೇ ಹೆಚ್ಚಾಗಿತ್ತು. ಇದರಿಂದಾಗಿ ಬೆವರು ಸುರಿಸಿ ದುಡಿದ ರೈತನಿಗೆ ಪೂರ್ಣ ಪ್ರಮಾಣದ ಲಾಭ ಪಡೆಯುವುದು ಕನಸಿನ ಮಾತಾಗಿತ್ತು. ಜೊತೆಗೆ ಕೊಳ್ಳುವ ಗ್ರಾಹಕನ ಜೇಬಿಗೂ ಮಧ್ಯವರ್ತಿಗಳ ಮಾಯಾ ಕತ್ತರಿ ಬೀಳುತ್ತಿತ್ತು ಎಂಬುದು ಎಲ್ಲರೂ ಒಪ್ಪಲೇ ಬೇಕಾದ ಸತ್ಯ. ಜೊತೆಗೆ, ದಲ್ಲಾಳಿಗಳು ಮಾತ್ರ ರೈತರಿಂದ ಅತೀ ಕಡಿಮೆಗೆ ಉತ್ಪನ್ನಗಳನ್ನು ಖರೀದಿಸಿ, ಬಳಿಕ ತಮಗೆ ಬೇಕಾದಂತೆ ಬೆಲೆ ನಿಗದಿ ಮಾಡಿ ತಮ್ಮ ಬುಡ ಗಟ್ಟಿ ಮಾಡಿಕೊಳ್ಳುತ್ತಿದ್ದರು ಎಂಬುದನ್ನು ಸಹ ನಾವಿಲ್ಲಿ ಗಮನಿಸಬೇಕು. ಜೊತೆಗೆ ಕೆಲವೊಮ್ಮೆ ದಲ್ಲಾಳಿಗಳೆಲ್ಲ ಒಗ್ಗೂಡಿ ಹೆಚ್ಚು ಬೇಡಿಕೆ ಸೃಷ್ಟಿ ಮಾಡುವ ಸಲುವಾಗಿ ಉತ್ಪನ್ನಗಳ ಅಭಾವ ಸೃಷ್ಟಿ ಮಾಡುವುದು, ಆ ಬಳಿಕ ಜನರ ಅನಿವಾರ್ಯತೆಯನ್ನೇ ಬಳಕೆ ಮಾಡಿ, ಬೆಲೆ ಏರಿಸುವುದು ಮತ್ತು ಅವರ ಜೇಬಿಗೆ ಕತ್ತರಿ ಹಾಕುವ ಕೆಲಸವನ್ನು ಬಹಳ ನಾಜೂಕಾಗಿ ಮಾಡಿಕೊಂಡು ಬಂದಿದ್ದರು ಎಂಬುದನ್ನು ಸಹ ನಾವು ಒಪ್ಪಲೇ ಬೇಕು. ಇಂತಹ ಕಹಿ ಸತ್ಯಗಳಿಗೆ ಒಂದು ಪೂರ್ಣ ವಿರಾಮ ಇರಿಸಿ, ಬೆವರು ಸುರಿಸಿದ ರೈತನಿಗೆ ಅವನು ಬೆಳೆದ ಬೆಳೆಯ ಸಂಪೂರ್ಣ ಲಾಭಾಂಶ ದೊರೆಯುವಂತಾಗಬೇಕು ಎಂಬ ಸದುದ್ದೇಶದಿಂದ ಕೇಂದ್ರದ ಮೋದಿ ಸರ್ಕಾರ ಈ ನೂತನ ಕೃಷಿ ಕಾಯ್ದೆಯನ್ನು ಜಾರಿಗೆ ತಂದಿತು.
ಈ ಕಾಯ್ದೆಯ ಮೂಲಕ ನಮೋ ಸರ್ಕಾರ ರೈತರಿಗೆ ಎಪಿಎಂಸಿ ಮಂಡಿಗಳ ಒಳಗೆ ಮತ್ತು ಹೊರಗೆ ಮುಕ್ತ ವ್ಯಾಪಾರ ನಡೆಸುವ, ಬೆಲೆ ನಿಗದಿ ಮಾಡುವ, ರಾಜ್ಯದ ಒಳಗೆ ಮತ್ತು ಹೊರ ರಾಜ್ಯಗಳಲ್ಲಿಯೂ ತಾವು ಬೆಳೆದ ಉತ್ಪನ್ನಗಳನ್ನು, ತಾವೇ ಬೆಲೆ ನಿಗದಿ ಮಾಡಿ ಮಾರಾಟ ಮಾಡುವ ಹಕ್ಕನ್ನು ನೀಡಿತು. ನಿಜವಾದ ರೈತರು ಈ ಕಾಯ್ದೆಯನ್ನು ತುಂಬು ಮನಸ್ಸಿನಿಂದ ಸ್ವಾಗತಿಸಿದರು. ಇನ್ನೂ ಕೆಲವು ರೈತರಿಗೆ ಈ ಕಾಯ್ದೆಯ ಬಗ್ಗೆ ‘ಸುಳ್ಳುಗಳನ್ನು’ ಸೃಷ್ಟಿಸಿ ಅವರ ದಾರಿ ತಪ್ಪಿಸುವ ಕೆಲಸವನ್ನು ದಲ್ಲಾಳಿಗಳು, ವಿರೋಧ ಪಕ್ಷಗಳು ಮಾಡುತ್ತಾ ಬಂದವು. ಈ ನೂತನ ಕೃಷಿ ಸ್ನೇಹಿ ಕಾಯ್ದೆಯನ್ನು ರೈತರು ಒಪ್ಪಿಕೊಂಡು ಬಿಟ್ಟರೆ ಅದರಿಂದ ದಲ್ಲಾಳಿಗಳಿಗೆ ಸಮಸ್ಯೆಯಾಗುತ್ತದೆ. ರೈತರು ಮತ್ತು ಗ್ರಾಹಕರಿಂದ ಅನ್ಯಾಯವಾಗಿ ಹಣ ಪೀಕುವುದು ಅಸಾಧ್ಯವಾಗುತ್ತದೆ. ಇನ್ನು ವಿಪಕ್ಷಗಳಿಗೆ ಇಡೀ ದೇಶವೇ ಮೋದಿ ಸರ್ಕಾರಕ್ಕೆ ಬಹುಪರಾಕ್ ಹೇಳುತ್ತಿದೆ. ಈ ನಡುವೆ ಭಾರತದಲ್ಲಿ ಮೋದಿ ಸರ್ಕಾರದ ವಿರೋಧಕ್ಕೆ ವಿಷಯಗಳೇ ಇಲ್ಲ ಎಂದಾದಾಗ ಹೀಗೆ ಜನರನ್ನು ದಾರಿ ತಪ್ಪಿಸಲು ಪ್ರಯತ್ನ ನಡೆಸುತ್ತವೆ. ಅದಕ್ಕೆ ಕೆಲವು ಮಂದಿ ಬಲಿಯಾಗುತ್ತಾರೆ. ಇನ್ನು ಜನರು ವಿಪಕ್ಷಗಳ ಮೋಸಕ್ಕೆ ಮಣೆ ಹಾಕುವುದಿಲ್ಲ ಎಂದಾದ ಕೂಡಲೇ ಹಣದ ಆಮಿಷ ಸೇರಿದಂತೆ ಇನ್ನಿತರ ಆಮಿಷಗಳ ಮೂಲಕ ಇಂತಹ ರಾಜಕೀಯ ಪ್ರೇರಿತ ಬಂದ್, ಪ್ರತಿಭಟನೆಗಳನ್ನು ನಡೆಸಲು ಜನರನ್ನು ಗುಡ್ಡೆ ಹಾಕುವ ಕೆಲಸಗಳು ನಡೆಯುತ್ತವೆ. ಅದಕ್ಕೆ ಇಂದಿನ ಭಾರತ್ ಬಂದ್ ಸಹ ಒಂದು ಉದಾಹರಣೆ ಅಷ್ಟೇ.
2019 ರಲ್ಲಿ ಮೋದಿ ಸರ್ಕಾರ ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಮಾಡಿತು. ಇಂದು ಜಮ್ಮು ಕಾಶ್ಮೀರ ಅಭಿವೃದ್ಧಿಯ ಹಾದಿಯಲ್ಲಿ ಹೆಜ್ಜೆ ಇಡುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಹಿಂದೆ ಜಮ್ಮು ಕಾಶ್ಮೀರದ ಯುವಕರು ಪಾಕಿಸ್ಥಾನಕ್ಕೆ ಬೆಂಬಲ ನೀಡುತ್ತಿದ್ದರು. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಆ ಚಿತ್ರಣ ಬದಲಾಗುತ್ತಿದೆ. ಅದೆಷ್ಟೋ ಮಂದಿ ಭಾರತ ನಮ್ಮದು ಎಂದು ಎದೆ ತಟ್ಟಿ ಹೆಮ್ಮೆಯಿಂದ ಹೇಳುವಂತಾಗಿದೆ. ಈ ಅಂಶವನ್ನು ಗಮನದಲ್ಲಿಟ್ಟುಕೊಂಡು, 2019 ಕ್ಕೆ ಮತ್ತೆ ಹೋಗೋಣ. ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಮಾಡಿದಾಗಲೂ ಇದೇ ದೆಹಲಿಯಲ್ಲಿ ರಾಜಕೀಯ ಪ್ರೇರಿತ ಪ್ರತಿಭಟನೆ ನಡೆಯಿತು. ಸಿಎಎ ಜಾರಿ ವಿರುದ್ಧ ತಿಂಗಳಾನುಗಟ್ಟಲೆ ಹೀಗೆಯೇ ಪ್ರತಿಭಟನೆ ನಡೆಯಿತು. ಕೇಂದ್ರ ಸರ್ಕಾರದ ಉತ್ತಮ ನಡೆಯನ್ನು ವಿರೋಧಿಸುವ ಕೆಲಸಕ್ಕೆ ವಿರೋಧ ಪಕ್ಷಗಳು, ಕೆಲವು ಸಂಘಟನೆಗಳು ತೊಡಗಿಕೊಂಡವು. ಇದಕ್ಕೆ ವಿದೇಶಿ ಫಂಡಿಂಗ್ ವ್ಯವಸ್ಥೆ ಸಹ ಇತ್ತು ಎಂಬುದು ಆ ಬಳಿಕ ಬಯಲಾಯಿತು. ಅದಿರಲಿ. ಆ ಬಳಿಕ ಕೊರೋನಾ ಬಂತು. ಈ ಸಂದರ್ಭದಲ್ಲಿ ಸಿಎಎ ಪ್ರತಿಭಟನೆ ಮಾಯವಾಯಿತು. ಕೊರೋನಾ ಸೋಂಕು ದೇಶದಲ್ಲಿ ಹೆಚ್ಚಾಗಲು ಮೋದಿ ಸರ್ಕಾರವೇ ಕಾರಣ ಎಂಬ ಹಾಸ್ಯಾಸ್ಪದ ಹೇಳಿಕೆಗಳನ್ನು ನೀಡಲಾರಂಭಿಸಿದ ವಿಪಕ್ಷಗಳು, ಕೆಲವು ಸಂಘಟನೆಗಳು ಕೊರೋನಾ ಸಂಕಷ್ಟವನ್ನು ಸಹ ತಮ್ಮ ಲಾಭಕ್ಕಾಗಿ ಬಳಕೆ ಮಾಡಲು ಪ್ರಯತ್ನ ನಡೆಸಿದವು. ಕೊರೋನಾ ಸಂದರ್ಭದಲ್ಲಿ ಸರ್ಕಾರ ವೈದ್ಯಕೀಯ ವಿಚಾರಗಳನ್ನಿಟ್ಟುಕೊಂಡು ಹಗರಣ ನಡೆಸಿವೆ ಎಂದು ‘ಹಗರಣಗಳಲ್ಲೇ ಬದುಕು ಕಂಡ ವಿಪಕ್ಷಗಳು’ ಆರೋಪ ಹೊರಿಸಿದವು. ಚೀನಾ ದಾಳಿಯ ಬಗ್ಗೆ ಚಕಾರವೆತ್ತಿ ಚೀನಾ ವಿರುದ್ಧ ದಿಟ್ಟ ಕ್ರಮ ತೆಗೆದುಕೊಂಡ ಮೋದಿ ಆಡಳಿತದ ಮೇಲೆ ಗೂಬೆ ಕೂರಿಸುವ ಪ್ರಯತ್ನ ನಡೆಸಿದರು. ಇದ್ಯಾವುದಕ್ಕೂ ಮೋದಿ ಸರ್ಕಾರ ಬಗ್ಗಲಿಲ್ಲ. ಮೋದಿ ಸರ್ಕಾರವನ್ನು ನಂಬಿದ ಜನರು ವಿರೋಧ ಪಕ್ಷಗಳ ಇಂತಹ ನಾಲಾಯಕ್ ಬುದ್ಧಿಗೆ ಸೊಪ್ಪು ಹಾಕಲಿಲ್ಲ. ಬದಲಾಗಿ ಇವರೆಲ್ಲರ ಈ ಪ್ರಯತ್ನ ಮೋದಿ ಸರ್ಕಾರದ ಅಭಿವೃದ್ಧಿಯ ಆಶಯದ ಆಡಳಿತವನ್ನು ಜನತೆಗೆ ಮತ್ತಷ್ಟು ಹತ್ತಿರವಾಗಿಸುವಲ್ಲಿ ಪೂರಕವಾಯಿತು.
ಸದ್ಯ ಕೃಷಿ ಕಾಯ್ದೆಯನ್ನಿಟ್ಟುಕೊಂಡು ನವದೆಹಲಿಯಲ್ಲಿ ಪ್ರತಿಭಟನೆ, ದೇಶ ಬಂದ್ ನಡೆಸುತ್ತಿವೆ. ಭ್ರಷ್ಟಾಚಾರ, ಕುಟುಂಬ ರಾಜಕಾರಣದಲ್ಲೇ ಹೆಸರು ಮಾಡಿರುವ ಕಾಂಗ್ರೆಸ್ ಸೇರಿದಂತೆ ಇನ್ನಿತರ ಮೋದಿ ವಿರೋಧಿ, ಬಿಜೆಪಿ ವಿರೋಧಿಗಳು ಇಂತಹ ವಿಚಾರಗಳಿಗೆ ಕುಮ್ಮಕ್ಕು, ಸಹಕಾರ ನೀಡುತ್ತಿದ್ದಾರೆ ಎಂಬುದಕ್ಕೆ ಅವರು ನೀಡುವ ಬಹಿರಂಗ ಬೆಂಬಲಗಳೇ ಸಾಕ್ಷಿ. ಇಂತಹ ವಿಪಕ್ಷಗಳಿಂದ ದೇಶದ ಅಭಿವೃದ್ಧಿ ಹೇಗೆ ಸಾಧ್ಯ. ಹೇಳಿ. ಇದು ಮೋದಿ ಸರ್ಕಾರ ದೇಶದ ಜನರಿಗೆ ಪೂರಕ ಅಗತ್ಯಗಳನ್ನು ನಿರ್ವಹಿಸುವಲ್ಲಿ ಯಶಸ್ವಿಯಾಗಿದ್ದಾರೆ, ಅವರನ್ನು ಜನರ ಮನಸ್ಸಿನಿಂದ ದೂರ ಮಾಡುವುದು, ಅವರನ್ನು ಜನತೆ ವಿರೋಧಿಸುವಂತೆ ಮಾಡುವುದು ಅಸಾಧ್ಯ ಎಂಬುದನ್ನರಿತ ವಿಪಕ್ಷಗಳ ಮತ್ತು ಕೆಲವು ಮೋದಿ ವಿರೋಧಿ, ದೇಶ ವಿರೋಧಿ ಸಂಘಟನೆಗಳ ಕುತಂತ್ರವಲ್ಲದೆ ಮತ್ತೇನು?
ದೇಶದ ನಿಜವಾದ ರೈತರಿಗೆ ಮೋದಿ ಅವರ ನೂತನ ಕೃಷಿ ಕಾಯ್ದೆಯ ಆಳ, ಅಗಲದ ಅರಿವು ಆಗಿದೆ. ಅವರು ಇಂದಿನ ಭಾರತ್ ಬಂದ್ನ ಸಂದರ್ಭದಲ್ಲಿಯೂ ತಮ್ಮ ಹೊಲ, ಗದ್ದೆ ತೋಟಗಳಲ್ಲಿ ಬೆವರು ಸುರಿಸಿ ದುಡಿಯುತ್ತಿದ್ದಾರೆ. ರೈತರ ಸೋಗಿನಲ್ಲಿ ವಿಪಕ್ಷಗಳ ಹಿಂಬಾಲಕರು ಮತ್ತು ದಲ್ಲಾಳಿಗಳು ರೈತರ ಸೋಗಿನಲ್ಲಿ ರಸ್ತೆಗಿಳಿದಿದ್ದಾರೆ. ಭಾರತ ಬಂದ್ ಮಾಡುವ ಮೂಲಕ ದೇಶದ ಆರ್ಥಿಕತೆಗೆ ಹೊಡೆತ ನೀಡಲು ಪ್ರಯತ್ನ ನಡೆಸುತ್ತಿದ್ದಾರೆ. ನೀವೇ ಯೋಚಿಸಿ, ದೇಶದ ಸರ್ವತೋಮುಖ ಅಭಿವೃದ್ಧಿಯಲ್ಲಿ ಆರ್ಥಿಕತೆ ಬಹಳ ಮುಖ್ಯ. ದೇಶದ ಹಿತ ಬಯಸುವವರು ಪ್ರತಿಭಟನೆ, ಬಂದ್ ಮೂಲಕ ಆರ್ಥಿಕತೆಗೆ ಹೊಡೆತ ನೀಡುವುದನ್ನು ಯೋಚಿಸುವನೇ ಎಂದು. ಆದ್ದರಿಂದ ಈ ಪ್ರತಿಭಟನೆಗಳು, ಇಂದಿನ ಬಂದ್ ಎಲ್ಲವೂ ರಾಜಕೀಯ ಪ್ರೇರಿತ, ದಲ್ಲಾಳಿಗಳ ಷಡ್ಯಂತ್ರ, ಅಭಿವೃದ್ಧಿಗೆ ಮಾರಕ ವಿಚಾರಧಾರೆಗಳುಳ್ಳ ಬುದ್ಧಿಜೀವಿಗಳ ಸಣ್ಣತನ. ಅಷ್ಟೇ.
✍️ಭುವನ ಬಾಬು
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.