ಕೊರೋನಾ ಬಳಿಕ ದೇಶದೆಲ್ಲೆಡೆ ಆತ್ಮನಿರ್ಭರ ಭಾರತ ಪರಿಕಲ್ಪನೆ ಕೇಳಿ ಬರುತ್ತಿದೆ. ಸ್ವಾವಲಂಬಿ, ಸ್ವಾಭಿಮಾನಿ ಭಾರತದ ನಿರ್ಮಾಣದ ಹಿನ್ನೆಲೆಯಲ್ಲಿ ಆತ್ಮ ನಿರ್ಭರದ ಕನಸನ್ನು ಜನರಲ್ಲಿ ಬಿತ್ತುವ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ್ದಾರೆ. ಆ ಮೂಲಕ ಭಾರತೀಯರನ್ನು, ದೇಶವನ್ನು ಆರ್ಥಿಕವಾಗಿ ಹೆಚ್ಚು ಬಲಿಷ್ಠಗೊಳಿಸುವ ಪ್ರಯತ್ನವನ್ನು ಪ್ರಧಾನಿ ಮೋದಿ ಮಾಡಿದ್ದಾರೆ ಎಂದರದು ಅತಿಶಯವಲ್ಲ.
ಕೊರೋನಾ ಸೋಂಕು ಅರಂಭವಾದ ಬಳಿಕ ಈವರೆಗೆ ಆತ್ಮನಿರ್ಭರದ ಹೆಸರಿನಲ್ಲಿ, ಸ್ವಾವಲಂಬನೆಯ ಹಾದಿಯಲ್ಲಿ ಹಲವಾರು ಜನರು ಸಾಗಿದ್ದಾರೆ. ಪರಿಸರ ಸ್ನೇಹಿ ಉತ್ಪಾದನೆ, ವಹಿವಾಟುಗಳನ್ನು ಆರಂಭಿಸುವ ಮೂಲಕ ತಮ್ಮ ಜೀವನಕ್ಕೆ ದಾರಿ ಮಾಡಿಕೊಳ್ಳುವುದರ ಜೊತೆಗೆ, ಬೇರೆಯವರಿಗೆ ಹೀಗೂ ಮಾಡಬಹುದು ಎಂಬುದನ್ನು ತೋರಿಸುವ ಮೂಲಕ ಮಾದರಿಗಳಾದವರು ಅನೇಕ ಮಂದಿ ನಮ್ಮ ನಡುವೆ ಇದ್ದಾರೆ. ಅಂತಹ ಅನೇಕ ಸಾಧಕರಲ್ಲಿ ಒಬ್ಬರು ಬೆಂಗಳೂರಿನ ಬೊಮ್ಮಸಂದ್ರದ ರೋಶನ್ ರೇ. ಅಂದ ಹಾಗೆ ಇವರ ಸಾಧನೆ ಏನು ಎಂದು ಯೋಚಿಸುತ್ತಿದ್ದೀರಾ. ಅದಕ್ಕೆ ಉತ್ತರ ಇಲ್ಲಿದೆ.
ಜಗತ್ತಿನಲ್ಲಿ ಪ್ಲಾಸ್ಟಿಕ್ ಎಂಬ ಮಹಾಮಾರಿಯ ಉಪಟಳದಿಂದಾಗುತ್ತಿರುವ ಅಪಾಯದ ಬಗ್ಗೆ ತಿಳಿಯದವರಿಲ್ಲ. ಪ್ಲಾಸ್ಟಿಕ್ ನ ಅವ್ಯಾಹತವಾದ ಬಳಕೆಯಿಂದಾಗಿ ಭೂಮಿಯ ಚರಾಚರ ವಸ್ತುಗಳು ಸಾಕಷ್ಟು ಸಂಕಷ್ಟ ಪಡುವುದನ್ನು ನಾವು ನೋಡಿದ್ದಿದೆ, ಕೇಳಿದ್ದಿದೆ. ಹಾಗೆಯೇ ಅನುಭವಿಸಿದ್ದೂ ಇರಬಹುದು. ಕೆಲವು ಸಾರಿ ನಾವೇ ಬಳಸಿ ಬಿಸಾಡುವ ಪ್ಲಾಸ್ಟಿಕ್ನಿಂದಲೂ ಅವಘಡಗಳು ಸಂಭವಿಸಿರಬಹುದು. ಏಕೆಂದರೆ ಪ್ರಸ್ತುತ ದಿನಗಳಲ್ಲಿ ಪ್ಲಾಸ್ಟಿಕ್ಗೆ ಪರಿಣಾಮಕಾರಿ ಪರ್ಯಾಯವನ್ನು ಕಂಡು ಹುಡುಕುವಲ್ಲಿ ನಾವಿನ್ನೂ ಯಶಸ್ಸುಗಳಿಸಿಲ್ಲ ಎಂಬುದನ್ನು ಗಮನಿಸಬೇಕು. ಅಂದ ಹಾಗೆ ರೋಶನ್ ರೇ ಅವರು ಬೀಜಗಳಿಂದ ಪರಿಸರ ಪೂರಕ ಪೇಪರ್ ತಯಾರಿಸುವುದು, ಅದರಿಂದ ಆಮಂತ್ರಣ, ರಕ್ಷಾ ಬಂಧನದ ರಕ್ಷೆಗಳನ್ನು ತಯಾರಿಸುವುದು, ಭಾರತದ ತ್ರಿವರ್ಣ ಧ್ವಜಗಳನ್ನು ತಯಾರಿಸುವುದು ಸೇರಿದಂತೆ ಇನ್ನಿತರ ಪರಿಸರ ಸ್ನೇಹಿ ವಸ್ತುಗಳನ್ನು ತಯಾರಿಸುವುದು, ಆಸಕ್ತರಿಗೆ ತಯಾರಿಸಿ ಕೊಡುವ ಕಾಯಕದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಜೊತೆಗೆ ಇದನ್ನೇ ತಮ್ಮ ಉದ್ಯಮವಾಗಿ 2014 ರಿಂದ ತೊಡಗಿದಂತೆ ಮುಂದುವರಿಸಿಕೊಂಡು ಬರುತ್ತಿದ್ದು, ಅದರಲ್ಲಿ ಅಭೂತಪೂರ್ವ ಯಶಸ್ಸು ಸಾಧಿಸಿದ್ದಾರೆ.
ಪ್ಲ್ಯಾಸ್ಟಿಕ್ ಅಂಶಗಳನ್ನು ಒಳಗೊಂಡ ವಸ್ತುಗಳಾದ ಬಾವುಟ, ರಕ್ಷೆಗಳು, ಕರವಸ್ತ್ರಗಳು, ವಿವಾಹ ಆಮಂತ್ರಣ ಪತ್ರಿಕೆಗಳು, ಇನ್ನಿತರ ಆಮಂತ್ರಣ ಪತ್ರಿಕೆಗಳನ್ನು ಇವರು ಪರಿಸರ ಸ್ನೇಹಿ ಸೀಡ್ ಪೇಪರ್ಗಳನ್ನು ಬಳಸಿ ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಮುದ್ರಿಸಿ ಕೊಡುವ ಕೆಲಸವನ್ನು 2014 ರಿಂದ ಈವರೆಗೂ ಮಾಡಿಕೊಂಡು ಬರುತ್ತಿದ್ದಾರೆ. ಇವರ ಈ ಸಮಾಜಮುಖಿ ಉಪಕ್ರಮಕ್ಕೆ ಯುನೈಟೆಡ್ ನೇಶನ್ಸ್ (ಯುಎನ್) ಪ್ರಶಂಸಿಸಿದೆ. ಜೊತೆಗೆ 2019 ರ ಜೂನ್ ತಿಂಗಳಲ್ಲಿ ನ್ಯೂಯಾರ್ಕ್ನ ಯುನೈಟೆಡ್ ನೇಶನ್ಸ್ ನಲ್ಲಿ ಇವರು ತಯಾರಿಸಿದ ವಸ್ತು, ಉತ್ಪನ್ನಗಳನ್ನು ಪ್ರದರ್ಶಿಸಲು ಸಹ ಅವಕಾಶ ಮಾಡಿಕೊಟ್ಟಿದೆ. ಆ ಮೂಲಕ ಇವರ ಈ ಪರಿಸರಕ್ಕೆ ಪೂರಕವಾದ ಸಾಧನೆಗೆ ವಿಶೇಷ ಮಾನ್ಯತೆ ನೀಡಿ ಗೌರವಿಸಿದೆ.
ಇವರ ಈ ಸೀಡ್ ಪೇಪರ್ ಉದ್ಯಮ ಇದೀಗ ದೇಶದ ಅತಿ ದೊಡ್ಡ ಮಟ್ಟದ ಪರಿಸರ ಸ್ನೇಹಿ ಉತ್ಪನ್ನಗಳನ್ನು ತಯಾರಿಸುವ ಸಂಸ್ಥೆ ಎಂಬ ಖ್ಯಾತಿಗೆ ಪಾತ್ರವಾಗಿದೆ. ಇವರಲ್ಲಿ ರಿ-ಪ್ಲ್ಯಾಂಟೇಬಲ್ ಸೀಡ್ ಪೇಪರ್, ಲೇಖನ ಸಾಮಗ್ರಿಗಳು ಸೇರಿದಂತೆ ಇನ್ನೂ ಹಲವಾರು ಪರಿಸರಕ್ಕೆ ಯಾವುದೇ ರೀತಿಯಲ್ಲಿಯೂ ಮಾರಕವಲ್ಲದ ವಸ್ತುಗಳನ್ನು ನಾವು ಕಾಣಬಹುದಾಗಿದೆ. ರಾಷ್ಟ್ರೀಯ ಹಬ್ಬಗಳ ಸಂದರ್ಭದಲ್ಲಿಯೂ ಪರಿಸರ ಸ್ನೇಹಿ ಬಣ್ಣಗಳನ್ನು, ಕಾಗದಗಳನ್ನು ಬಳಸಿ ಬಾವುಟಗಳನ್ನು ತಯಾರಿಸುವ ಮೂಲಕ ಪ್ಲ್ಯಾಸ್ಟಿಕ್ಗೆ ಪರ್ಯಾಯವೊಂದನ್ನು ತೋರಿಸಿಕೊಟ್ಟಿದ್ದಾರೆ. ಆ ಮೂಲಕ ಹೀಗೂ ಸಾಧ್ಯವಿದೆ ಎಂದು ಯುವ ಜನರಿಗೆ ಹೊಳಹು ನೀಡಿದವರ ಸಾಲಿನಲ್ಲಿ ರೋಶನ್ ನಿಂತಿದ್ದಾರೆ ಎಂದರೆ ಅತಿಶಯವಲ್ಲ.
ಸ್ವಾವಲಂಬನೆಯ ಬದುಕಿನಷ್ಟು ನೆಮ್ಮದಿ ನೀಡುವ ವಿಚಾರ ಇನ್ನೊಂದಿರಲಾರದು. ಹಾಗೆಯೇ ನಾವು ಸ್ವಾವಲಂಬಿಗಳಾಗಲು ವಿಶೇಷವಾದ ಯಾವುದನ್ನೋ ಕಂಡು ಹುಡುಕುವುದು, ಅಳವಡಿಸಿಕೊಳ್ಳುವುದು ಜೊತೆಗೆ ಇನ್ನೊಂದಷ್ಟು ಜನರಿಗೆ ಪ್ರೇರಣೆ ನೀಡುವುದೇ ಆತ್ಮನಿರ್ಭರ ಎಂಬ ಪರಿಕಲ್ಪನೆಯ ನೈಜಾರ್ಥ. ಇದನ್ನು ಸಾಧಿಸಿದವರ ಸಾಲಿಗೆ ರೋಶನ್ ರೇ ಸೇರುತ್ತಾರೆ. ಜೊತೆಗೆ ಒಂದಷ್ಟು ಜನರಿಗೆ ಪರ್ಯಾಯಗಳನ್ನು ಹುಡುಕುವ ಬಗೆ ಹೇಗೆ, ಜೀವನವನ್ನು ಕಟ್ಟಿಕೊಳ್ಳುವುದು ಹೇಗೆ ಎಂಬುದಕ್ಕೆಯೂ ರೋಶನ್ ಅವರ ಜೀವನ ಪಾಠವಿದ್ದಂತೆ ಎಂದು ದೃಢವಾಗಿ, ಎದೆ ತಟ್ಟಿ ಹೇಳಬಹುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.