ಬಿಜೆಪಿ ಎಂತಹವರನ್ನೂ ಆಕರ್ಷಿಸಿ ಬಿಡುತ್ತದೆ. ಕಾರಣ ಏನೆಂದರೆ ಬಿಜೆಪಿ ಸರ್ಕಾರ ಕೇಂದ್ರದ ಆಡಳಿತ ಚುಕ್ಕಾಣಿ ಹಿಡಿದ ಬಳಿಕ, ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ದೇಶದ ಎಲ್ಲಾ ವರ್ಗದ ಸಾಮಾನ್ಯ ಜನರನ್ನು ಗಮನದಲ್ಲಿಟ್ಟುಕೊಂಡು ತಂದ ಸಾಲು ಸಾಲು ಯೋಜನೆಗಳ, ಅಭಿವೃದ್ಧಿ ಪರ್ವಗಳ ಕಾರಣದಿಂದಲೇ ಬಿಜೆಪಿ ಸರ್ವಮಾನ್ಯ ಮನ್ನಣೆ ಪಡೆದಿದೆ ಎಂದು ನಿಸ್ಸಂಶಯವಾಗಿ ಹೇಳಬಹುದು. ಬಿಜೆಪಿಯ ಶಕ್ತಿಯೇ ಅಂತದ್ದು.
ಹೌದು, ಬಿಜೆಪಿಯಲ್ಲಿ ಸಾಮಾನ್ಯನೂ ನಾಯಕನಾಗುವುದು ಸಾಧ್ಯ. ಈ ಅವಕಾಶವನ್ನು ಬಿಜೆಪಿ ಹೊರತುಪಡಿಸಿದಂತೆ ಇತರ ಯಾವುದೇ ರಾಷ್ಟ್ರೀಯ ಅಥವಾ ಪ್ರಾದೇಶಿಕ ಪಕ್ಷಗಳು ನೀಡುವುದಿಲ್ಲ. ಬೇರೆ ಪಕ್ಷಗಳು ‘ನಾವು, ನಮ್ಮ ಕುಟುಂಬ, ನಮ್ಮವರು’ ಎಂದಷ್ಟೇ ಯೋಚಿಸುವ ಸಂದರ್ಭದಲ್ಲಿ ದೇಶದ ಅತಿ ದೊಡ್ಡ ಮತ್ತು ಬಲಿಷ್ಠ ಪಕ್ಷ ಬಿಜೆಪಿ ಹಳ್ಳಿ ಹಳ್ಳಿಗಳಲ್ಲಿನ ಸಾಮಾನ್ಯ ಜನರಲ್ಲಿನ ನಾಯಕತ್ವದ ಗುಣವನ್ನು ಹುಡುಕಿ ಅವರ ಮೂಲಕ ಸಾಮಾನ್ಯರಿಗೂ ಅಭಿವೃದ್ಧಿ ಯೋಜನೆಯನ್ನು ತಲುಪಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಿತ್ತು. ಆ ಮೂಲಕ ದೇಶದ ಸರ್ವತೋಮುಖ ಅಭಿವೃದ್ಧಿಯ ಆಶಯ, ದೇಶವನ್ನು ಸಬಲ, ಸುಭದ್ರವಾಗಿ ಕಟ್ಟುವ ನಿಟ್ಟಿನಲ್ಲಿ ಸಾವಿರಾರು ಯೋಜನೆಗಳನ್ನು ಸಾಲು ಸಾಲಾಗಿ ಕಾರ್ಯಗತಗೊಳಿಸುವ ಮೂಲಕ ‘ಭಾರತದ ರಾಜಕೀಯ’ ಎಂದರೆ ‘ಬಿಜೆಪಿ’ ಎಂಬಷ್ಟರ ಮಟ್ಟಿಗೆ ಜನಾನುರಾಗಿಯಾಗಿತ್ತು. ಇಂದಿಗೂ ಹಿರಿಯರು ಹಾಕಿಕೊಟ್ಟ ಜನಸೇವೆಯ ಹಾದಿಯನ್ನೇ ಜನಾರ್ಧನನ ಸೇವೆ ಎಂಬಂತೆ ದುಡಿಯುತ್ತಿದೆ.
ಅಂದ ಹಾಗೆ ಈ ಕಥೆ ಕಮ್ಯುನಿಸ್ಟರ ಮಾರುಕಟ್ಟೆಯಂತಿರುವ ಕೇರಳದ ಕಥೆ. ಕೇರಳದ ಸೊಸೆಯಾದ ಛತ್ತಿಸ್ಗಡದ ಮಹಿಳೆ ಜ್ಯೋತಿ ಎಂಬುವರ ಕಥೆ. ಇವರು ಮೂಲತಃ ಛತ್ತಿಸ್ಗಡದ ದಂತೇವಾಡ ಜಿಲ್ಲೆಯ ಬಾಚೆಲಿ ಎಂಬಲ್ಲಿಯವರು. ಕೇರಳ ಮೂಲದ ಯೋಧ ಸಿಐಎಸ್ಎಫ್ನ ಪಿ. ವಿ. ವಿಕಾಸ್ ಎಂಬುವರ ಪತ್ನಿ. ಈ ಬಾರಿಯ ಪಾಲಕ್ಕಾಡ್ ಜಿಲ್ಲೆಯ ಕೊಲ್ಲಂಗೋಡು ಬ್ಲಾಕ್ ಪಂಚಾಯತ್ನ ಪಲತುಳ್ಳಿ ವಿಭಾಗದ ಬಿಜೆಪಿ ಅಭ್ಯರ್ಥಿ. ಅಂದ ಹಾಗೆ ಇವರು ಮೂಲತಃ ಕೇರಳದವರಲ್ಲದೇ ಹೋದರೂ, ಕೇರಳದಲ್ಲೇ ಹುಟ್ಟಿ ಬೆಳೆದ ಸಾಮಾನ್ಯ ಹುಡುಗಿಯಂತೆ, ನಿರರ್ಗಳವಾಗಿ ಮಲಯಾಳಂನಲ್ಲಿ ಮಾತನಾಡಬಲ್ಲರು. ಕೇರಳದ ಸೊಸೆಯಾಗುವ ಕನಸನ್ನು ಸಹ ಕಾಣದ ಜ್ಯೋತಿ, ಅನಿರೀಕ್ಷಿತ ಎಂಬಂತೆ ಕೇರಳದ ಸೊಸೆಯಾಗಿ, ಸದ್ಯ ಮಾರ್ಕಿಸ್ಟ್ ಮಾರುಕಟ್ಟೆಯಂತಿರುವ ಕೇರಳದ ಬ್ಲಾಕ್ ಪಂಚಾಯತ್ನಲ್ಲಿ ಬಿಜೆಪಿ ಬಾವುಟ ಹಿಡಿದು ನಿಂತವರು.
ಇವರು ಹೇಗೆ ಕೇರಳಕ್ಕೆ ಬಂದರು ಎಂಬುದರ ಹಿಂದೆಯೂ ಒಂದು ರೋಚಕ ಕಥೆ ಇದೆ. ಮೊದಲೇ ಹೇಳಿದಂತೆ ಇವರ ಮದುವೆಯ ಹಿಂದೆ ಒಂದು ಘಟನೆ ಇದೆ. ಅದನ್ನಿಲ್ಲಿ ಹೇಳಲೇ ಬೇಕು. 2010 ರ ಜನವರಿ ಸಂದರ್ಭದಲ್ಲಿ ನಡೆದ ಘಟನೆ ಇದು. ಕೇರಳ ಮೂಲದ ಯೋಧ ವಿಕಾಸ್ ಅವರು ಛತ್ತಿಸ್ಗಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದವರು. ಅವರು ಕೇರಳದಿಂದ ಬಸ್ ಮೂಲಕ ಛತ್ತಿಸ್ಗಢದ ದಂತೇವಾಡದ ಬೈಲಾಡಿಲಾದಲ್ಲಿರುವ ತಮ್ಮ ಕ್ಯಾಂಪ್ಗೆ ತೆರಳುತ್ತಿದ್ದರು. ವಿಕಾಸ್ ಅವರು ಬಸ್ಸಿನ ಕಿಟಕಿಗಳಿಗೆ ತಲೆ ಇಟ್ಟು ನಿದ್ರಿಸಿ ವಿಶ್ರಾಂತಿ ಪಡೆಯುತ್ತಿದ್ದರು. ಇದೇ ಸಂದರ್ಭದಲ್ಲಿ ಎದುರಿನಿಂದ ನಿಯಂತ್ರಣ ಕಳೆದುಕೊಂಡ ಟ್ರಕ್ ಒಂದು ವೇಗವಾಗಿ ವಿಕಾಸ್ ಅವರಿದ್ದ ಬದಿಯಲ್ಲೇ ಬರುತ್ತದೆ. ಈ ಸಂದರ್ಭದಲ್ಲಿ ಅದೇ ಬಸ್ಸಿನಲ್ಲಿ ವಿಕಾಸ್ ಅವರ ಹಿಂದಿನ ಸೀಟಿನಲ್ಲಿ ಕುಳಿತಿದ್ದ ಜ್ಯೋತಿ ತಮ್ಮ ಕೈಯನ್ನು ಹೊರ ಹಾಕಿ ಹೊರ ಚಾಚಿದ್ದ ವಿಕಾಸ್ ಅವರ ತಲೆಯನ್ನು ಬಸ್ಸಿನೊಳಗೆ ದೂಡುತ್ತಾರೆ. ಆದರೆ ದುರಾದೃಷ್ಟ ಎಂಬಂತೆ ಈ ಸಂದರ್ಭದಲ್ಲಿ ಟ್ರಕ್ ಜ್ಯೋತಿ ಅವರ ಕೈಗೆ ಬಡಿದು, ಅವರು ಕೈ ಕಳೆದುಕೊಳ್ಳುವಂತಾಗುತ್ತದೆ. ಆ ಬಳಿಕ ಕೇರಳದ ಯೋಧ ವಿಕಾಸ್ ತನ್ನನ್ನು ರಕ್ಷಿಸಿ, ಕೈ ಕಳೆದುಕೊಳ್ಳುವಂತಾದ ಜ್ಯೋತಿ ಅವರನ್ನೇ ವಿವಾಹವಾಗಿ ಕೇರಳದ ಸೊಸೆಯನ್ನಾಗಿ ಮಾಡುತ್ತಾರೆ. ಅಂದ ಹಾಗೆ ಈ ಕಥೆಯನ್ನು ಹೇಳಿದವರು ಸ್ವತಃ ಜ್ಯೋತಿ ಅವರೇ. ಹಾಗೆಯೇ ಕೇರಳದಲ್ಲಿ ಹುಟ್ಟಿ ಬೆಳಯದಿದ್ದರೂ ಕೇರಳ ಸೇರಿದ ಮೇಲೆ ಕಲಿತ ಮಲೆಯಾಳಂ ಭಾಷೆಯಲ್ಲಿಯೇ ಸ್ಪಷ್ಟವಾಗಿ ಈ ಕಥೆಯನ್ನು ತಿಳಿಸಿದ್ದಾರೆ. ಅಂದ ಹಾಗೆ 2011 ರಲ್ಲಿ ಕೇರಳದ ಪಾಲಕ್ಕಾಡ್ಗೆ ಕಾಲಿಟ್ಟ ಜ್ಯೋತಿ ಇಂದು ಅಲ್ಲಿನ ಬ್ಲಾಕ್ ಪಂಚಾಯತ್ ಒಂದರ ಬಿಜೆಪಿ ಅಭ್ಯರ್ಥಿ.
ಇವರನ್ನು ಗುರುತಿಸಿರುವ ಪಕ್ಷ ಅವರಿಗೆ ಈ ಬಾರಿ ಅಭ್ಯರ್ಥಿ ಸ್ಥಾನ ನೀಡಿದೆ. ಹಾಗೆಯೇ ಜ್ಯೋತಿ ಅವರೂ ಅಭಿವೃದ್ಧಿ ಮತ್ತು ರಾಷ್ಟ್ರೀಯತೆಯ ವಿಚಾರಗಳ ಮೂಲಕವೇ ಜನರ ಬಳಿ ಮತ ಕೇಳುತ್ತಿದ್ದಾರೆ. ತಮ್ಮ ಅಭ್ಯರ್ಥಿ ಸ್ಥಾನದ ಬಗ್ಗೆಯೂ ಜ್ಯೋತಿ ಅವರು ಮಾತನಾಡಿದ್ದು, ಬಿಜೆಪಿ ಸ್ಥಳೀಯ ಸಮಿತಿಯು ನನ್ನನ್ನು ಗುರುತಿಸಿ ಈ ಅವಕಾಶ ಕಲ್ಪಿಸಿದೆ. ಇದಕ್ಕೆ ನನ್ನ ಪತಿ ವಿಕಾಸ್ ಅವರೂ ಸಂಪೂರ್ಣ ಸಮ್ಮತಿ ಹಾಗೂ ಬೆಂಬಲ ನೀಡಿದ್ದಾರೆ. ಅದರಂತೆ ಛತ್ತಿಸ್ಗಡದಲ್ಲಿರುವಾಗಲೇ ಬಿಜೆಪಿ ಪಕ್ಷದ ಬಗ್ಗೆ ವಿಶೇಷ ಒಲವು ಅಭಿಮಾನ ಹೊಂದಿದ್ದವಳು ನಾನು. ಬಿಜೆಪಿ ಮೇಲಿನ ಒಲವು ಈಗಲೂ ನನ್ನಲ್ಲಿದೆ. ಪ್ರಸ್ತುತ ದಿನಗಳಲ್ಲಿ ಕೇರಳದಲ್ಲಿಯೂ ಜನರು ಬಿಜೆಪಿಯ ಕಡೆಗೆ, ಬಿಜೆಪಿಯ ಅಭಿವೃದ್ಧಿ ಆಶಯಗಳ ಜೊತೆಗೆ ಕೈಜೋಡಿಸಲು ಮನಸ್ಸು ಮಾಡುತ್ತಿದ್ದಾರೆ. ಕೇರಳದಲ್ಲಿಯೂ ಪಕ್ಷ ಬಲಿಷ್ಠವಾಗುತ್ತಿದೆ ಎಂದು ತಿಳಿಸಿದ್ದಾರೆ.
ಅಂದ ಹಾಗೆ ಸದ್ಯ ಜ್ಯೋತಿ ಅವರು ತಮ್ಮ ಬೆಂಬಲಿಗರ ಜೊತೆಗೆ ಮನೆ ಮನೆಗಳಿಗೆ ತೆರಳಿ ಮತ ಕೇಳುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ. ಅಭಿವೃದ್ಧಿಯ ಆಶಯಗಳ ಜೊತೆಗೆ ಸಾಗುತ್ತಿರುವ ಜ್ಯೋತಿ ಅವರಂತಹ ಇನ್ನಷ್ಟು ಜನರು ಕಮ್ಯುನಿಸ್ಟ್ರ ಕೆಂಪು ಕೋಟೆಯನ್ನು ಬೇಧಿಸಿ ‘ಭಾರತೀಯ ಜನತಾ ಪಕ್ಷದ’ ಪತಾಕೆ ಹಾರಿಸುವಂತಾಗಲಿ. ಕೇರಳದಲ್ಲಿಯೂ ಬಿಜೆಪಿ ಹೆಚ್ಚು ಸ್ಥಾನ ಪಡೆದು ಈವರೆಗೆ ಕಾಣದಿದ್ದ ಅಭಿವೃದ್ಧಿಯನ್ನು ಸ್ಥಾಪಿಸುವಂತಾಗಲಿ ಎಂಬ ಆಶಯ ಎಲ್ಲರದ್ದೂ.
ಅಂದ ಹಾಗೆ, ಸೋಲು ಗೆಲುವು ಇದ್ದಿದ್ದೇ. ಗೆಲುವೇ ಬೇಕು ಎಂದುಕೊಂಡು ಕೆಲಸ ಮಾಡುವುದು ನಮ್ಮ ಕಾರ್ಯವಾಗಬೇಕು. ಸೋಲಿನ ಭಯ ಹೊತ್ತು ಬಂದ ಅವಕಾಶವನ್ನು ಬಿಟ್ಟರೆ ಒಂದೊಮ್ಮೆ ಸಿಗಬೇಕಾದ ಜಯವೂ ನಮ್ಮದಾಗದು. ಗೆಲುವು ಗುರಿಯನ್ನು ತಲುಪಲು ಹೆಜ್ಜೆ ಗಟ್ಟಿಗೊಳಿಸಿದೆ, ಸೋಲು ಅನುಭವಗಳ ಪಾಠ ಕಲಿಸುತ್ತದೆ. ನಮ್ಮ ಅರ್ಧ ಗೆಲುವು ಇರುವುದೇ ನಾವು ಮಾಡುವ ಆರಂಭದ ಆಯ್ಕೆಯಲ್ಲಿ. ಅದು ಸ್ಪಷ್ಟ. ಫಲಿತಾಂಶದ ಚಿಂತೆ ಬಿಟ್ಟು ಸಿಕ್ಕ ಅವಕಾಶ ಬಳಸಿಕೊಳ್ಳುವತ್ತ ನಮ್ಮ ಚಿಂತನೆಗಳು ಸಾಗಬೇಕು. ಸದ್ಯ ಜ್ಯೋತಿ ಅವರು ಬಿಜೆಪಿ ಅಭ್ಯರ್ಥಿಯಾಗಿ ನಿಲ್ಲುವ ಮೂಲಕವೇ ತಮ್ಮ ಅರ್ಧ ಗೆಲುವನ್ನು ಸಾಧಿಸಿದ್ದಾರೆ. ಅವರಿಗೆ ಚುನಾವಣೆಯಲ್ಲಿಯೂ ಜಯ ದೊರೆಯುವಂತಾಗಲಿ ಎಂಬುದಷ್ಟೇ ನಮ್ಮೆಲ್ಲರ ಹಾರೈಕೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.