ಪಂಡಿತ ಮದನ ಮೋಹನ ಮಾಳವೀಯ ಅವರು ಭಾರತೀಯ ಸ್ವಾತಂತ್ರ್ಯ ಹೋರಾಟ ಹಾಗೂ ನಂತರದ ಭವ್ಯ ಭಾರತದ ಭವಿಷ್ಯದ ನಿರ್ಮಾಣದಲ್ಲಿ ವಹಿಸಿದ ಪಾತ್ರ ಬಹುದೊಡ್ಡದು. ಗಾಂಧೀಜಿಯವರು ರಾಷ್ಟ್ರಪಿತನಾದರೆ ಪಂಡಿತ ಮದನ ಮೋಹನ ಮಾಳವೀಯರು ‘ರಾಷ್ಟ್ರಗುರು’ ಎನ್ನಬಹುದು ಎಂಬಷ್ಟರ ಮಟ್ಟಿಗೆ ದೇಶಕ್ಕಾಗಿ ದುಡಿದವರು ಮಾಳವೀಯ ಅವರು.
ಭಾರತೀಯ ಸಂಸ್ಕೃತಿ ಪರಂಪರೆಯ ಉಳಿವಿಗಾಗಿ, ಭಾರತೀಯ ಚಿಂತನೆಯ ಶಿಕ್ಷಣದ ಪ್ರಸಾರಕ್ಕಾಗಿ ದೇಶದಾದ್ಯಂತ ಭಿಕ್ಷೆ ಎತ್ತಿ ‘ಬನಾರಸ್ ಹಿಂದೂ ವಿಶ್ವವಿದ್ಯಾಲಯ’ ವನ್ನು ಸ್ಥಾಪಿಸಿದ ಮಹನೀಯ ಮಾಳವೀಯರು. ಸ್ವಾತಂತ್ರ್ಯ ಹೋರಾಟಗಾರ, ಕವಿ-ಸಾಹಿತಿ, ಪತ್ರಿಕೆಗಳನ್ನು ಕಟ್ಟಿಬೆಳೆಸಿದ ಧೀಮಂತ, ವಿದ್ಯಾಧಾತ ಮತ್ತು ಭಾರತೀಯ ಮೌಲ್ಯಗಳ ಹಿತಚಿಂತಕರೂ ಹೌದು. ಮೌಢ್ಯ, ಜಾತೀವಾದಗಳನ್ನು ಪೋಷಿಸದ ಮನೋಭಾವನೆ ಹೊಂದಿದ್ದ ಮಾಳವೀಯರು ‘ಪಂಡಿತ’ರೆಂದೇ ಹೆಸರುವಾಸಿ.
ಈಗ ನಾಡಿನೆಲ್ಲೆಡೆ ಜನಜನಿತವಾಗಿರುವ ‘ಸತ್ಯಮೇವ ಜಯತೇ’ ಎಂಬ ಧ್ಯೇಯವಾಕ್ಯವನ್ನು ಸಾರ್ವಜನಿಕ ಬದುಕಿನಲ್ಲಿ ಬಳಕೆಗೆ ತಂದದ್ದು ಮಾಳವೀಯ ಅವರು. 1857 ರಲ್ಲಿ ಭಾರತದ ಸರ್ಕಾರ ಕೋಲ್ಕತ್ತ, ಮುಂಬಯಿ ಮತ್ತು ಮದ್ರಾಸ್ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಿತು. ಈ ವಿಶ್ವವಿದ್ಯಾಲಯಗಳು ಇಂಗ್ಲೆಂಡಿನ ವಿಶ್ವವಿದ್ಯಾಲಯಗಳನ್ನೇ ಅನುಕರಿಸಿದ್ದವು. ಭಾರತದಲ್ಲಿಯ ಬಹುಮಂದಿಗೆ ಇಂಗ್ಲಿಷರ ಭಾಷೆ, ಅವರ ನಡೆ, ಆಚಾರ, ಸಂಸ್ಕೃತಿ ಇವುಗಳಲ್ಲಿಯೇ ಹೆಮ್ಮೆ ಎಂಬಂತಹ ಪರಿಸ್ಥಿತಿ ಇತ್ತು. ದುರಂತ ಎಂಬಂತೆ ಭಾರತೀಯವಾದುದೆಲ್ಲ ಹೀನಾಯ ಎಂಬ ಭಾವನೆ ಬೆಳೆಯುತ್ತಿತ್ತು. ಉದ್ದಾಮ ವಿದ್ವಾಂಸರೂ ರಾಷ್ಟ್ರಪ್ರೇಮಿಗಳೂ ಆಗಿದ್ದ ಮಾಳವೀಯರಿಗೆ ಭಾರತೀಯ ಸಂಸ್ಕೃತಿಗೆ ತಕ್ಕ ಗೌರವ ದೊರೆಯಬೇಕು, ವಿದ್ಯಾವಂತರು ಇದನ್ನು ತಿಳಿದುಕೊಳ್ಳಬೇಕು ಎಂದು ತವಕ. ಇದಕ್ಕಾಗಿ ವಾರಣಾಸಿ (ಕಾಶಿ)ಯಲ್ಲಿ ವಿಶ್ವವಿದ್ಯಾಲಯವನ್ನು ಸ್ಥಾಪಿಸಬೇಕೆಂದು ಅವರ ಹಂಬಲ. ಆದರೆ ವಿಶ್ವವಿದ್ಯಾಲಯ ಸ್ಥಾಪನೆಗೆ ಹಣವೆಲ್ಲಿಂದ ತರುವುದು?. ಆಗ ಮಾಳವೀಯರು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಅಖಂಡವಾಗಿ ಸಂಚರಿಸಿದರು. ಹೋದ ಹೋದಲ್ಲೆಲ್ಲ ಮಹಾಕಾರ್ಯಕ್ಕಾಗಿ ಭಿಕ್ಷೆ ಬೇಡಿ, ದೇಣಿಗೆ ಸಂಗ್ರಹಿಸಿದರು. ದೇಶಾದ್ಯಂತ ಸಂಚರಿಸಿ ಒಟ್ಟು ಒಂದು ಕೋಟಿ ಮೂವತ್ತನಾಲ್ಕು ಲಕ್ಷ ರೂಗಳನ್ನು ಸಂಗ್ರಹಿಸಿ ‘ಭಿಕ್ಷುಕ ಸಮ್ರಾಟ್’ ಎಂಬ ಹೆಸರನ್ನು ಸಂಪಾದಿಸಿದರು.
ಅವರ ಕನಸಿನ ಕೂಸಾದ ಬನಾರಸ್ ಹಿಂದೂ ವಿಶ್ವವಿದ್ಯಾಲಯ 1916 ರಲ್ಲಿ ಸ್ಥಾಪನೆಯಾಗಿ ಶತಮಾನವನ್ನು ಕಂಡಿದೆ. ಇಂದಿಗೂ ಭಾರತೀಯ ಸಂಸ್ಕೃತಿ ಪರಂಪರೆಗಳ ಉಳಿವಿನಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ಶಿಕ್ಷಣ ಕ್ಷೇತ್ರವೇ ಅಲ್ಲದೆ ದೇಶದ ಸ್ವಾತಂತ್ರ ಚಳುವಳಿ, ಜಾತಿಪದ್ಧತಿ ನಿರ್ಮೂಲನೆ, ಸಾರ್ವಜನಿಕ ಸೇವೆ, ಹಿಂದೂಸ್ಥಾನ್ ಟೈಮ್ಸ್ ಅಂತಹ ಪತ್ರಿಕೆಗಳ ಮುಂದಾಳತ್ವ ಮುಂತಾದ ಹಲವು ಕ್ಷೇತ್ರಗಳಲ್ಲಿ ಮಾಳವೀಯರು ಅನನ್ಯ ಸೇವೆ ಸಲ್ಲಿಸಿದವರು.
ಮದನ್ ಮೋಹನ್ ಮಾಳವೀಯರು 1946 ರಲ್ಲಿ ಈ ಲೋಕವನ್ನಗಲಿದರು. ಧೀಮಂತ ರಾಷ್ಟ್ರಭಕ್ತ ಪಂಡಿತ್ ಮದನ ಮೋಹನ ಮಾಳವೀಯರಿಗೆ 2014 ರಲ್ಲಿ ಮರಣೋತ್ತರವಾಗಿ ‘ಭಾರತರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇಂದು ಮಾಳವೀಯರ ಸ್ಮೃತಿ ದಿವಸ. ಈ ದಿನದಂದು ಭಾರತೀಯ ಶೈಕ್ಷಣಿಕ ಕ್ಷೇತ್ರದ ಧೀಮಂತ ಸಂತ ಮಾಳವೀಯ ಅವರನ್ನು ಸ್ಮರಿಸೋಣ. ಅವರು ಹಾಕಿಕೊಟ್ಟ ಮೌಲ್ಯಯುತ ಹಾದಿಯಲ್ಲಿ ನಮ್ಮ ಹೆಜ್ಜೆಗಳನ್ನು ನೆಡುವ ಪ್ರತಿಜ್ಞೆ ಮಾಡೋಣ. ಇದೇ ನಾವವರಿಗೆ ನೀಡುವ ನೈಜ ಗೌರವ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.