ಯಾವ ದೇಶವು ಯೋಧನನ್ನು ಗೌರವಯುತವಾಗಿ ನಡೆಸಿಕೊಳ್ಳುತ್ತದೆಯೋ ಆ ದೇಶವು ಖಂಡಿತವಾಗಿಯೂ ಸುರಕ್ಷಿತವಾಗಿಯೂ, ಅಭಿವೃದ್ಧಿಶೀಲವಾಗಿಯೂ ಇರುತ್ತದೆ ಎಂದು ಹಿರಿಯರು ಹೇಳಿದ್ದಾರೆ. ನಮ್ಮ ದೇಶದ ಇತಿಹಾಸದ ಪುಟಗಳನ್ನೂ ತಿರುಗಿಸಿದಾಗ ಭಾರತವು ವೀರರ ಪರಾಕ್ರಮಿಗಳ ನೆಲವೆಂದು ಖಂಡಿತವಾಗಿಯೂ ಅರಿವಾಗುತ್ತದೆ ಮತ್ತು ಭಾರತೀಯರು ವೀರ ಪರಾಕ್ರಮಿ ಯೋಧರನ್ನು ಅತ್ಯಂತ ಪೂಜನೀಯವಾಗಿಯೂ ಗೌರವಯುತವಾಗಿಯೂ ಕಾಣುತ್ತಿದ್ದರೆಂಬುದೂ ಸಿದ್ದವಾಗುತ್ತದೆ. ಮಹಾರಾಜ ಪೃಥ್ವಿರಾಜ ಚೌಹಾಣ, ಮಹಾರಾಣಾ ಪ್ರತಾಪ್, ಛತ್ರಪತಿ ಶಿವಾಜಿ ಮಹಾರಾಜರನ್ನು ನಾವು ಇಂದಿಗೂ ಪೂಜಿಸುತ್ತೇವೆ. ಯಾಕೆಂದರೆ ದೇಶ ಹಾಗೂ ದೇಶವಾಸಿಗಳ ರಕ್ಷಣೆಗಾಗಿ ತಮ್ಮೆಲ್ಲವನ್ನೂ ನೀಡುವ ಯೋಧರನ್ನು ಗೌರವಿಸುವ ಗುಣ ಭಾರತೀಯರ ರಕ್ತದಲ್ಲೇ ಇದೆ.
1947 ರಲ್ಲಿ ದೇಶಕ್ಕೆ ಸ್ವಾತಂತ್ರ ದೊರಕಿದ ಬಳಿಕ, ಭಾರತವು ಹಲವು ಪೂರ್ಣ ಪ್ರಮಾಣದ ಯುದ್ದಗಳನ್ನು ಕಂಡಿದ್ದರೆ, ಅಂದಿನಿಂದ ಇಂದಿನವರೆಗೂ ರಕ್ಷಣಾ ದೃಷ್ಟಿಯಿಂದ ಅನೇಕ ಘರ್ಷಣೆಗಳಿಗೆ ಪ್ರತಿನಿತ್ಯ ಸಾಕ್ಷಿಯಾಗುತ್ತಿದೆ. ಅನೇಕ ಬಾರಿ ದೇಶದಲ್ಲಿ ಭಯೋತ್ಪಾದಕ ದಾಳಿಗಳು ನಡೆದಿವೆ, ನಕ್ಸಲರು ದಾಳಿಗಳನ್ನು ನಡೆಸುತ್ತಾರೆ. ಆದರೂ ನಾವು ನೆಮ್ಮದಿಯಿಂದ ನಿದ್ರಿಸುತ್ತೇವೆ ಎಂದರೆ ಅದಕ್ಕೆ ಕಾರಣ ದೇಶದ ರಕ್ಷಣೆಗಾಗಿ ಹಗಲು ರಾತ್ರಿ ಎನ್ನದೆ ಸೇವೆಯಲ್ಲಿ ತೊಡಗಿರುವ ಯೋಧರು ಎಚ್ಚರವಾಗಿದ್ದಾರೆ ಎಂಬ ಭರವಸೆ. ನಮ್ಮೆಲ್ಲರಿಗೂ ತಿಳಿದಿರುವಂತೆ ಭಾರತೀಯ ಸೇನೆಯು ವಿಶ್ವದ ಅತ್ಯಂತ ಬಲಿಷ್ಠ ಸೇನೆಗಳಲ್ಲಿ ಒಂದಾಗಿದೆ. ಭಾರತೀಯ ಸೇನೆಯು ಯುದ್ಧದ ಸಂದರ್ಭದಲ್ಲಿ ಮಾತ್ರವಲ್ಲದೆ ಪ್ರಕೃತಿ ವಿಕೋಪಗಳ ಸಂದರ್ಭದಲ್ಲೂ ಸಾರ್ವಜನಿಕರ ರಕ್ಷಣೆಗೆ ಧಾವಿಸಿ ಬರುತ್ತದೆ. ಭಾರತೀಯ ಯೋಧರು ಇಂತಹಾ ಪ್ರತಿಕೂಲ ಸನ್ನಿವೇಶಗಳಲ್ಲೂ ದೇಶದ ರಕ್ಷಣೆಗೆ ಸದಾ ಸಿದ್ಧರಾಗಿಯೂ ಬದ್ಧರಾಗಿಯೂ ಇರುತ್ತಾರೆ. ಅಂತಹಾ ಯೋಧರ ಕುರಿತಾಗಿ, ಅವರ ಪರಾಕ್ರಮಗಳ ಕುರಿತಾಗಿಯೂ ಸಂದೇಹಾಸ್ಪದ ಮಾತುಗಳನ್ನಾಡುವ ವ್ಯಕ್ತಿಗಳೂ ನಮ್ಮ ಮಧ್ಯದಲ್ಲಿ ಇದ್ದಾರೆಂಬುದೇ ಅತ್ಯಂತ ದುರಾದೃಷ್ಟಕರ ವಿಚಾರ.
1947 ರಿಂದ ಅನೇಕ ರಾಜಕಾರಣಿಗಳು, ನಾಯಕರು ದೇಶವನ್ನಾಳಿದ್ದಾರೆ. ಆದರೆ ಎಷ್ಟು ಜನ ರಕ್ಷಣಾ ಮಂತ್ರಿಗಳು ಯೋಧರೊಂದಿಗೆ ಸಮಯ ಕಳೆದಿದ್ದಾರೆ,ಯೋಧರ ದನಿಗೆ ಕಿವಿಯಾಗಿದ್ದಾರೆ? ಯಾವ ಪ್ರಧಾನ ಮಂತ್ರಿ ದೇಶಕಾಯುವ ಯೋಧರೊಂದಿಗೆ ಹಬ್ಬವನ್ನು ಆಚರಿಸಿದ್ದಾರೆ? ಒಮ್ಮೆ ಸೈನಿಕನಾದವನು ಕೊನೆಯವರೆಗೂ ಸೈನಿಕನೇ. ಅನೇಕ ವರ್ಷಗಳಿಂದ ಸೇವೆಯಿಂದ ನಿವೃತ್ತಿ ಪಡೆದ ಯೋಧರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಸರಕಾರದ ಬಳಿ ಬೇಡಿಕೆಯನ್ನಿರಿಸುತ್ತಿದ್ದರು. ಅದರಲ್ಲಿ ಪ್ರಮುಖವಾದ ಬೇಡಿಕೆಯೇ “ಒನ್ ರ್ಯಾಂಕ್ ಒನ್ ಪೆನ್ಶನ್” (ಏಕ ಶ್ರೇಣಿ ಏಕ ರೂಪದ ಪಿಂಚಣಿ). ನಮ್ಮ ದೇಶದಲ್ಲಿ ಪ್ರಸ್ತುತ ಸುಮಾರು 20 ಲಕ್ಷಕ್ಕೂ ಹೆಚ್ಚು ನಿವೃತ್ತ ಸೇನಾ ಸಿಬ್ಬಂದಿಗಳಿದ್ದಾರೆ. ಅವರೆಲ್ಲರ ಬಹು ವರ್ಷಗಳ ಒಕ್ಕೊರಲ ಬೇಡಿಕೆಯೇ ಏಕ ಶ್ರೇಣಿ ಏಕ ಪಿಂಚಣಿ ಯೋಜನೆ.
ಕಳೆದ ಬಾರಿ ಲೋಕಸಭಾ ಚುನಾವಣಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಪ್ರಣಾಳಿಕೆಯಲ್ಲಿ ಏಕ ಶ್ರೇಣಿ ಏಕ ಪಿಂಚಣಿ ಯೋಜನೆಯು ಪ್ರಮುಖ ಸ್ಥಾನವನ್ನು ಪಡೆದಿತ್ತು. ಚುನಾವಣೆಯಲ್ಲಿ ಗೆಲುವನ್ನು ಕಂಡು ಅಧಿಕಾರ ವಹಿಸಿಕೊಂಡ ಒಂದೂವರೆ ವರ್ಷದ ಒಳಗಾಗಿ ನಿವೃತ್ತ ಯೋಧರಿಗೆ ನೀಡಿದ ಭರವಸಯನ್ನು ನೆರವೇರಿಸುವ ಮೊದಲನೇ ಹೆಜ್ಜೆಯಾಗಿ ನವೆಂಬರ್ 7, 2015ರಂದು ಪ್ರಧಾನಿ ನರೇಂದ್ರ ಮೋದಿಜಿ ನೇತೃತ್ವದ ಬಿಜೆಪಿ ಸರಕಾರವು ಓ ಆರ್ ಓ ಪಿ ಯೋಜನೆಯನ್ನು ಜಾರಿಗೆ ತರುವ ಘೋಷಣೆಯನ್ನು ಮಾಡಿತ್ತು ಮತ್ತು ಜುಲೈ 1,2014ರಿಂದ ಅನ್ವಯವಾಗುವಂತೆ ಈ ಯೋಜನೆಯನ್ನು ಜಾರಿಗೆ ತರುವುದಾಗಿ ತಿಳಿಸಲಾಗಿತ್ತು. ಇದೀಗ ಈ ಯೋಜನೆಗೆ 5 ವರ್ಷಗಳು ತುಂಬಿದ್ದು ಕಳೆದ 5 ವರ್ಷಗಳಲ್ಲಿ ಸರಕಾರವು 42,740 ಕೋಟಿ ರೂಪಾಯಿಗಳನ್ನು 20.6 ಲಕ್ಷ ನಿವೃತ್ತ ರಕ್ಷಣಾ ಸಿಬ್ಬಂದಿಗಳಿಗೆ ವಿತರಿಸಿದೆ.
ದೇಶಕ್ಕಾಗಿ ತಮ್ಮೆಲ್ಲವನ್ನೂ ನೀಡುವ ಯೋಧರ ಅನೇಕ ವರ್ಷಗಳ ಬೇಡಿಕೆಗೆ ಸ್ಪಂದಿಸಿದ ಸರಕಾರಕ್ಕೆ ನಾವೆಲ್ಲರೂ ಖಂಡಿತವಾಗಿಯೂ ಧನ್ಯವಾದಗಳನ್ನು ಅರ್ಪಿಸಬೇಕು, ಮಾತ್ರವಲ್ಲದೆ ಇಂದು ನಾವು ದೇಶ ಕಂಡ ಸರಳ ಮತ್ತು ದಿಟ್ಟ ರಕ್ಷಣಾ ಮಂತ್ರಿಗಳಾದ ದಿವಂಗತ ಶ್ರೀ ಮನೋಹರ ಪರಿಕ್ಕರ್ ಅವರನ್ನು ಖಂಡಿತವಾಗಿಯೂ ಸ್ಮರಿಸಬೇಕು. ಏಕೆಂದರೆ ಈ ಯೋಜನೆಯನ್ನು ಅನುಷ್ಠಾನಕ್ಕೆ ತರುವಲ್ಲಿ ಅವರ ಅಪಾರ ಶ್ರಮವಿದೆ. ಭಾರತವು ದಶಕಗಳ ಕಾಲದಿಂದ ಕಾಯುತ್ತಿದ್ದ ಐತಿಹಾಸಿಕ ಯೋಜನೆಗೆ 5 ವರ್ಷಗಳು ತುಂಬಿದ ಸಂದರ್ಭದಲ್ಲಿ ಪ್ರಧಾನಿ ಮೋದಿಜಿ ದೇಶಕ್ಕಾಗಿ ಅಮೋಘ ಸೇವೆಯನ್ನು ಸಲ್ಲಿಸಿರುವ ನಿವೃತ್ತ ಯೋಧರಿಗೆ ಗೌರವವನ್ನು ಅರ್ಪಿಸಿದ್ದಾರೆ.
ಯೋಧರ ಬೇಡಿಕೆಗಳು ಅನೇಕ ದಶಕ ಹಳೆಯದಾಗಿದ್ದರೂ, ತಾನು ಅನೇಕ ವರ್ಷ ಗದ್ದುಗೆಲ್ಲಿದ್ದಾಗಲೂ ಏಕ ಶ್ರೇಣಿ ಏಕ ಪಿಂಚಣಿ ಯೋಜನೆಯನ್ನು ಜಾರಿಗೆ ತರದೇ, ಯೋಧರ ಬೇಡಿಕೆಗಳ ಬಗ್ಗೆ ನಿರ್ಲಕ್ಷ್ಯತೆಯನ್ನು ತೋರಿದ್ದ ವಂಶಾಡಳಿತದ, ಕುಟುಂಬವೊಂದಕ್ಕೆ ಸೇರಿದ ಪಕ್ಷವೊಂದು ಇಂದು ಈ ಯೋಜನೆಯ ಕುರಿತಾಗಿ ವ್ಯಂಗವಾಡುವುದು, ಸಂಪೂರ್ಣ ಬೇಡಿಕೆಗಳನ್ನು ಈಡೇರಿಸಲಿಲ್ಲವೆಂದು ಸರಕಾರದ ಮೇಲೆ ಗೂಬೆ ಕೂರಿಸುವುದು ಇತ್ಯಾದಿಗಳನ್ನು ಮಾಡುತ್ತಿರುವುದು ಹಾಸ್ಯಾಸ್ಪದ. ಯೋಧರ ಪರಾಕ್ರಮಗಳಿಗೆ ಸಾಕ್ಷ್ಯವನ್ನು ಕೇಳಿದ ಪಕ್ಷವು ಯೋಧರ ಕುರಿತಾಗಿ ಕೃತಕ ಕಾಳಜಿಯನ್ನು ವ್ಯಕ್ತಪಡಿಸುವಾಗ ಭೂತದ ಬಾಯಲ್ಲಿ ಭಗವದ್ಗೀತೆ ಎಂಬ ಸಾಲುಗಳು ನೆನಪಾಗುತ್ತದೆಯಷ್ಟೆ. ಇವರ ಕಪಟ ಕಾಳಜಿ ಯೋಧರಿಗೂ ಅರ್ಥವಾಗುತ್ತಿದೆ. ಆದರೂ ಯಾರೂ ಆ ಪಕ್ಷವನ್ನು ಪ್ರಶ್ನಿಸುತ್ತಿಲ್ಲವೇಕೆ ಎಂಬುದು ಯಕ್ಷಪ್ರಶ್ನೆ.
ದೇಶ ರಕ್ಷಣೆಗಾಗಿ ತನ್ನ ಜೀವವನ್ನೂ ಪಣಕ್ಕಿಟ್ಟು ಹೋರಾಡಿ ನಿವೃತ್ತರಾದ ಯೋಧರ ಮತ್ತವರ ಕುಟುಂಬದ ಕಲ್ಯಾಣಕ್ಕಾಗಿ ಅತ್ಯಂತ ಉತ್ತಮ ಹಾಗೂ ಐತಿಹಾಸಿಕ ನಿರ್ಧಾರವನ್ನು ತೆಗೆದುಕೊಂಡ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರಕ್ಕೆ ಮತ್ತೊಮ್ಮೆ ಧನ್ಯವಾದಗಳು. ಮೋದಿಜಿಗೆ ಮತ ನೀಡಿದವರೆಲ್ಲರೂ ಯೋಧರೆಡೆಗೆ ತಮ್ಮ ಕೃತಜ್ಞತೆಯ ಸಣ್ಣ ಭಾಗವು ಸಮರ್ಪಿತವಾದ ಆನಂದವನ್ನು ಅನುಭವಿಸಬಹುದಾದ ಸಂತೋಷ ಹಾಗೂ ಹೆಮ್ಮೆಯ ವಿಚಾರವಿದು. ಯೋಧರ ಬೆನ್ನಿಗೆ ನಿಂತು, ಅವರ ಧ್ವನಿಗೆ ದನಿಯಾಗುವ, ಅವರ ಪರಾಕ್ರಮಗಳಲ್ಲಿ ನಂಬಿಕೆಯಿರಿಸುವ ನಾಯಕ ದೇಶದ ಚುಕ್ಕಾಣಿ ಹಿಡಿಯಲು ಅನೇಕ ವರ್ಷಗಳು ಕಾಯಬೇಕಾಯಿತು. ಆದರೆ ಇದೀಗ ದೇಶವು ಖಂಡಿತಾ ಉನ್ನತಿಯನ್ನು ಕಾಣುತ್ತಿದೆ, ಏಕೆಂದರೆ ಯೋಧರನ್ನು ಗೌರವಿಸುವ ವ್ಯಕ್ತಿಯೊಬ್ಬರು ದೇಶವನ್ನಾಳುತ್ತಿದ್ದಾರೆ.
✍️ ದೀಪಶ್ರೀ ಭಟ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.