ಸದ್ಯ ರಾಜ್ಯದಲ್ಲಿ ಶಿರಾ ಮತ್ತು ರಾಜರಾಜೇಶ್ವರಿ ನಗರ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆ ಭಾರೀ ಸದ್ದು ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಭರ್ಜರಿ ಪ್ರಚಾರ, ಮತ ಬೇಟೆಯೂ ರಾಜಕೀಯ ಪಕ್ಷಗಳಿಂದ ಅದ್ದೂರಿಯಾಗಿ ನಡೆಯುತ್ತಿದೆ. ಒಂದರ್ಥದಲ್ಲಿ ಚುನಾವಣಾ ಕಣ ರಂಗೇರಿದೆ ಎಂದೇ ಹೇಳಬಹುದು.
ಚುನಾವಣೆ ಅಂದರೆ ಹಾಗೆಯೇ. ರಾಜಕೀಯ ಪಕ್ಷಗಳ ಪಾಲಿಗೆ ಚುನಾವಣೆ ಎಂಬುದೊಂದು ಹಬ್ಬವಿದ್ದಂತೆ. ಸೋಲು, ಗೆಲುವಿನ ಪ್ರಶ್ನೆ ಬದಿಗಿಟ್ಟು ಹೇಳುವುದಾದರೆ, ತಾವು, ತಮ್ಮ ಪಕ್ಷ ಗೆಲ್ಲುವುದಕ್ಕೆ ಬೇಕಾದ ತಂತ್ರ- ಪ್ರತಿತಂತ್ರ ರೂಪಿಸುವುದು, ಎದುರಾಳಿಯನ್ನು ಹೇಗೆ ಬಗ್ಗುಬಡಿಯುವುದು ಎಂದು ಯೋಚಿಸುವುದು ಯೋಜನೆಗಳನ್ನು ಹಾಕಿಕೊಳ್ಳುವುದು ಸರ್ವೇ ಸಾಮಾನ್ಯ. ಕೊನೆಗೆ ಯಾವುದೋ ಒಂದು ಪಕ್ಷದ ಅಭ್ಯರ್ಥಿಯೋ ಅಥವಾ ಯಾವುದೇ ಪಕ್ಷದ ಹಂಗಿರದ ಪಕ್ಷೇತರ ಅಭ್ಯರ್ಥಿಯೋ ಗೆಲುವು ಸಾಧಿಸುವುದು ಸಹ ಇದ್ದಿದ್ದೆ.
ಈ ಚುನಾವಣಾ ಹಬ್ಬದಲ್ಲಿ ಪಕ್ಷ, ಅಭ್ಯರ್ಥಿ ಯಾರೇ ಇರಲಿ. ಮುಖ್ಯ ಪಾತ್ರ ವಹಿಸುವುದು ಮಾತ್ರ ಮತದಾರರಾದ ನಾವು ನೀವು. ನಾವು ಓಟು ಹಾಕಿದ ವ್ಯಕ್ತಿ ಗೆದ್ದಿರಲಿ ಅಥವಾ ಬೇರೊಬ್ಬ ಅಭ್ಯರ್ಥಿ ಗೆದ್ದಿರಲಿ ಆ ಬಳಿಕ ಆತ ಎಲ್ಲರಿಗೂ ಸಂಬಂಧಿಸಿದವನು. ಎಲ್ಲರ ಆಶೋತ್ತರಗಳನ್ನು ಈಡೇರಿಸಬೇಕಾದ ಜವಾಬ್ದಾರಿಯುತ ಸ್ಥಾನದಲ್ಲಿ ಇರುವವನು. ಅಭಿವೃದ್ಧಿಯ ಮೂಲಮಂತ್ರದ ಜೊತೆಗೆ ಆಡಳಿತದ ಭಾಗವಾಗಿ ಕಾರ್ಯ ನಿರ್ವಹಿಸಬೇಕಾದವನು. ಅದು ಅವನ ಜವಾಬ್ದಾರಿ. ಆದರೆ ಆತನ ಆಯ್ಕೆಯ ಹಿಂದಿನ ಶಕ್ತಿಗಳು ಮಾತ್ರ ಮತದಾರರಾದ ನಾವೇ. ಆದ್ದರಿಂದ ಆಯ್ಕೆ ಪ್ರಕ್ರಿಯೆ ನಡೆಸುವ, ಮತ ನೀಡುವ ನಾವು ಯಾರು ಯೋಗ್ಯರೋ, ಅವರ ಈ ಹಿಂದಿನ ಸಾಧನೆಗಳು, ಅವರು ಜನರ ಅಭಿವೃದ್ಧಿ, ಕ್ಷೇತ್ರದ ಅಭಿವೃದ್ಧಿ ಮಾಡಲು ನಿಜಕ್ಕೂ ಸಮರ್ಥರೇ ಎಂಬುದನ್ನೆಲ್ಲಾ ಯೋಚಿಸಬೇಕಾಗುತ್ತದೆ. ಅವರು ಒಡ್ಡುವ ಆಮಿಷಗಳಿಗೆ ಬಲಿಯಾಗಿ ನಾವು ಮತ ಚಲಾಯಿಸಿದಲ್ಲಿ ಅಭಿವೃದ್ಧಿಯಾಗುವುದು ಆಯ್ಕೆಯಾದ ಅಭ್ಯರ್ಥಿಯೇ ಹೊರತು ಆಯ್ಕೆ ಮಾಡಿದ ಜನರಿಗೆ ಯಾವುದೇ ಪ್ರಯೋಜನವಾಗಲಾರದು.
ಕೆಲವೊಮ್ಮೆ ಚುನಾವಣೆಗಳ ಸಂದರ್ಭದಲ್ಲಿ ಹಣ, ಹೆಂಡ, ಸೀರೆ, ಕುಕ್ಕರ್, ಟಿವಿ ಹೀಗೆ ಯಾವ್ಯಾವುದೋ ನೀಡುವ ಮೂಲಕ ಜನರ ಮತಗಳನ್ನು ಲಪಟಾಯಿಸುವ, ಆಮಿಷಗಳು, ಪೊಳ್ಳು ಭರವಸೆಗಳನ್ನು ನೀಡುವ ಮೂಲಕ ಜನರನ್ನು ಸೆಳೆದು ಮತ ಪಡೆಯುವ ಅಭ್ಯರ್ಥಿಗಳು ಗೆದ್ದ ಬಳಿಕ ಚುನಾವಣೆಗೆ ತಾವು ಖರ್ಚು ಮಾಡಿದ ಹತ್ತರಷ್ಟು ಸಂಪಾದನೆ ಮಾಡುವತ್ತಲೇ ಚಿತ್ತ ಹರಿಸುತ್ತಾರೆ. ಅವರು ನೀಡುವ ಹಣ ಅಥವಾ ಇನ್ಯಾವುದೇ ವಸ್ತುಗಳು ನಮ್ಮನ್ನು ಜೀವನಪೂರ್ತಿ ಬದುಕಲು ಸಹಾಯ ಮಾಡುತ್ತದೆಯೇ ಎಂದು ಯೋಚಿಸಿ. ಇಲ್ಲ ಎಂಬ ಉತ್ತರ ನಮ್ಮ ಮನಸ್ಸು ನಮಗೆ ನೀಡುತ್ತದೆ. ಆದ್ದರಿಂದ ನಮ್ಮ ಮತಗಳನ್ನು ಅಭಿವೃದ್ಧಿಯ ಆಶಯದ ವ್ಯಕ್ತಿಗೆ ನೀಡುವತ್ತ ಚಿತ್ತ ಹರಿಸಬೇಕು.
ರಾಜಕೀಯ ಭಿನ್ನಾಭಿಪ್ರಾಯ, ವ್ಯಕ್ತಿಗತ ಭಿನ್ನಾಭಿಪ್ರಾಯ ಏನೇ ಇರಬಹುದು. ಆದರೆ ನಮಗೆ ಇಷ್ಟವಿಲ್ಲದ ವ್ಯಕ್ತಿಯೇ ಅಭಿವೃದ್ಧಿಯ ಆಶಯದ ಜೊತೆಗೆ, ಸಾಮಾಜಿಕ ಕಾರ್ಯಗಳ ಜೊತೆಗೆ ಸುದ್ದಿಯಾಗಿದ್ದಾನೆಂದರೆ ನಮ್ಮ ಆಯ್ಕೆ ಅವನಾಗಿರಬೇಕು. ಏಕೆಂದರೆ ನಮ್ಮ ವೈಯಕ್ತಿಕ ದ್ವೇಷಕ್ಕೆ ಸಮಾಜದ ಅಭಿವೃದ್ಧಿ, ಮೂಲ ಸೌಕರ್ಯಗಳ ಅಭಿವೃದ್ಧಿ ಕನಸಾಗಿ ಉಳಿಯಬಾರದು. ಈ ಹಿನ್ನೆಲೆಯಲ್ಲಿ ಯಾರು ಉತ್ತಮರು? ಎಂಬುದನ್ನು ಯೋಚಿಸಿ ಮತ ನೀಡುವತ್ತ ಮತದಾರರು ಚಿತ್ತ ಹರಿಸುವುದು ಉತ್ತಮ. ಅವರು ಕೊಟ್ಟ ಹಣ ಇಂದೋ ನಾಳೆಯೋ ಮುಗಿಯಬಹುದು. ಆದರೆ ಅದರಿಂದ ಒಬ್ಬ ಅಭಿವೃದ್ಧಿಯ ಕನಸು ಹೊತ್ತ ವ್ಯಕ್ತಿ ಸೋಲುವಂತಾಗಬಾರದು. ಆತ ಸೋತರೆ ನಮ್ಮ ಸಮಾಜದ ಅಭಿವೃದ್ಧಿ ಕನಸಾಗುತ್ತದೆ. ಯಾವುದೋ ಮೂಲಗಳಿಂದ ನಮ್ಮ ಬದುಕು ಸುಗಮವಾಗಿ ಸಾಗಲು ಪೂರಕವಾದಂತಹ ಯೋಜನೆಗಳು ಸಹ ಆಮಿಷದ ಕೂಪದ ಎದುರು ಸೋಲನುಭವಿಸಬೇಕಾಗುತ್ತದೆ. ಹಾಗಾದಲ್ಲಿ ಆ ಅಭಿವೃದ್ಧಿಗೆ ಹಿನ್ನಡೆಯಾಗುವಲ್ಲಿ ನಾವೂ ಕಾರಣರಾಗಿದ್ದೇವೆ ಎಂದೇ ಅರ್ಥ.
ಮತದಾರರು ನಾವು. ಅಂದ ಮೇಲೆ ಅಭ್ಯರ್ಥಿಯ ಆಯ್ಕೆ ಮಾಡಬೇಕಾದವರು ನಾವು. ಬದಲಾಗಿ ಅಭ್ಯರ್ಥಿಯೇ ನಮ್ಮನ್ನು ಕೊಂಡುಕೊಳ್ಳುವುದು, ಆತನಿಗೆ ಮತ ನೀಡುವಂತೆ ನಮ್ಮ ಜೇಬಿಗೆ ಹಣ, ಹೆಂಡ, ಸೀರೆ ನೀಡುವುದು ಮಾಡಿದಲ್ಲಿ ಮತ್ತು ಈ ಎಲ್ಲಾ ಭ್ರಷ್ಟಾಚಾರಕ್ಕೆ ನಾವು ಬಲಿಯಾಗಿ ಆತನಿಗೆ ಮತ ನೀಡಿದಲ್ಲಿ ನಮ್ಮನ್ನು ನಾವು ಮಾರಿಕೊಂಡಂತೆಯೇ ಸರಿ. ಅದರ ಬದಲಾಗಿ ಮತ ಯಾಚನೆಗೆ ಅಭ್ಯರ್ಥಿ ನಮ್ಮ ಮನೆ ಬಾಗಿಲಿಗೆ ಬಂದಾಗ ನಮ್ಮೂರು, ನಮ್ಮ ಕ್ಷೇತ್ರದಲ್ಲಿ ಯಾವ ಅಭಿವೃದ್ಧಿ ಆಗಬೇಕೋ ಅದನ್ನು ಮಾಡುವಂತೆ ತಿಳಿಸುವುದು, ನಮ್ಮ ಸಮಸ್ಯೆಗಳನ್ನು ಅವನ ಗಮನಕ್ಕೆ ತಂದು ಅದನ್ನು ಸರಿಪಡಿಸಿಕೊಳ್ಳುವತ್ತ ಚಿತ್ತ ನೆಟ್ಟಲ್ಲಿ ಮತದಾನಕ್ಕೂ ಒಂದು ಅರ್ಥ ಬರುತ್ತದೆ. ಅವರು ಗೆದ್ದ ಬಳಿಕ ಎಲ್ಲರೂ ಸೇರಿ ಮತ್ತೆ ಮತ್ತೆ ಆತನಿಗೆ ಈ ವಿಚಾರ ನೆನಪಿಸಿ, ಅಭಿವೃದ್ಧಿ ಮಾಡಿಸಿಕೊಳ್ಳುವತ್ತ ದೃಷ್ಟಿ ಹರಿಸಿದರೆ ಮತ್ತಷ್ಟು ಉತ್ತಮ. ಆಗ ಆತನಿಗೂ ನಾನು ಹೀಗೇ ಕುಳಿತರೆ ಮುಂದಿನ ಚುನಾವಣೆಯಲ್ಲಿ ಇದೇ ಜನರು ನನಗೆ ಬುದ್ಧಿ ಕಲಿಸುತ್ತಾರೆ ಎಂಬ ಸಾಮಾನ್ಯ ಜ್ಞಾನ ಅರಿವಾಗಿ, ಕೆಲಸ ಮಾಡಲು ಆರಂಭಿಸುವ ಸಾಧ್ಯತೆಗಳೂ ಇರುತ್ತವೆ.
ಮತದಾನ ಆಮಿಷವಾಗದಿರಲಿ. ಅಭ್ಯರ್ಥಿ ಹಣಕ್ಕೆ ತನ್ನನ್ನು ಮಾರಿಕೊಂಡವನಾಗದಿರಲಿ. ಕೊನೆಗೆ ಮತದಾರ ಆತನ ಆಮಿಷ, ಬಿಡಿಗಾಸು, ಪುಡಿಗಾಸಿಗೆ ಕೈಚಾಚಿ ತಮ್ಮನ್ನು ತಾವೇ ಅಭ್ಯರ್ಥಿಗೆ ಮಾರಿಕೊಳ್ಳದಿರಲಿ. ಮತದಾನದ ಉದ್ದೇಶ ಅಭಿವೃದ್ಧಿಯಾಗಿರಲಿ. ಅದು ಸ್ವ ಅಭಿವೃದ್ಧಿಯಲ್ಲ, ಬದಲಾಗಿ ಸಮಾಜದ ಅಭಿವೃದ್ಧಿಯಾಗಿರಲಿ. ಚುನಾವಣೆ ಯಾವುದೇ ಇರಲಿ. ನಮ್ಮ ಮತ ಮಾರಾಟವಾಗದಿರಲಿ ಎಂಬುದಷ್ಟೇ ಆಶಯ. ಇದೇ ಅಭಿವೃದ್ಧಿಯ ಮಂತ್ರ. ಮತದಾರನಲ್ಲಿ ಪ್ರಶ್ನಿಸುವ ಧೈರ್ಯ ಬಂದರಷ್ಟೇ, ಮತದಾನಕ್ಕೂ ಅರ್ಥ. ಮಾರಿಕೊಂಡ ಮತ ವ್ಯರ್ಥ.
✍️ ಭುವನ ಬಾಬು
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.