ನವರಾತ್ರಿ ಪೂಜೆಯ ಆರನೇ ದಿನ ಕಾತ್ಯಾಯನಿ ದೇವಿಗೆ ಮೀಸಲಾಗಿರುವುದು. ಶಕ್ತಿ ಸ್ವರೂಪಿಣಿಯಾದ ತಾಯಿ ಕಾತ್ಯಾಯಿನಿ ಜ್ಞಾನ ಮತ್ತು ವಿವೇಕದ ದೇವತೆ. ಕಾತ್ಯಾಯಿನಿ ದೇವಿಯ ಕರುಣೆ ಅಥವಾ ಆಶೀರ್ವಾದ ಇಲ್ಲದೆ ಜ್ಞಾನ ಸಂಪಾದನೆ ಮಾಡಲು ಸಾಧ್ಯವಿಲ್ಲ ಎಂದು ಹೇಳಲಾಗುವುದು. ದುರ್ಗಾ ದೇವಿಯ ಸ್ವರೂಪಳಾದ ಕಾತ್ಯಾಯಿನಿ ದೇವಿ ಋಷಿಯಾಗಿದ್ದ ಕಾತ್ಯಾಯನ್ ಮಗಳು. ಕಾತ್ಯಾಯಿನಿ ದೇವಿಯು ಸಿಂಹದ ಮೇಲೆ ಕುಳಿತು ಹತ್ತು ಆಯುಧಗಳನ್ನು ಹಿಡಿದು ಬರುತ್ತಾಳೆ. ಕಾತ್ಯಾಯಿನಿ ದೇವಿಯು ಮೂರು ಕಣ್ಣು ಹಾಗೂ ಹಣೆಯ ಮೇಲೆ ಅರ್ಧ ಚಂದ್ರಾರ್ಕಲೆಯ ಅಲಂಕಾರವನ್ನು ಹೊಂದಿರುತ್ತಾಳೆ. ನವರಾತ್ರಿಯ ಆರನೇ ದಿನ ದೇವಿಯ ಆರಾಧನೆ ಜೊತೆಗೆ ವಿಶೇಷ ಮಂತ್ರಗಳಿಂದ ಪೂಜೆ ಮಾಡಲಾಗುತ್ತದೆ. ಸೂಕ್ತ ರೀತಿಯಲ್ಲಿ ಶುದ್ಧ ಮನಸ್ಸಿನಿಂದ ಪೂಜೆ ಮಾಡುವುದರ ಮೂಲಕ ದೇವಿಯ ಕೃಪೆಗೆ ಒಳಗಾಗಬಹುದು ಎಂಬ ನಂಬಿಕೆ ಭಕ್ತರದ್ದು.
ಕಾತ್ಯಾಯನಿ ಮಾತೆಯ ಕಥೆ
ಒಮ್ಮೆ ಕಾತ್ಯಾಯನ್ ಎನ್ನುವ ಋಷಿ ಪಾರ್ವತಿ ದೇವಿಯಂತಹ ಮಗಳನ್ನು ಹೊಂದಬೇಕು ಎಂದು ಆಶಿಸಿದ್ದನು. ಈ ಹಿನ್ನೆಲೆಯಲ್ಲಿಯೇ ಭಕ್ತಿಯಿಂದ ತಪಸ್ಸನ್ನು ಕೈಗೊಂಡನು. ಋಷಿಯ ಭಕ್ತಿಗೆ ಮೆಚ್ಚಿದ ದುರ್ಗಾ ದೇವಿಯು ಆಶೀರ್ವಾದ ಮಾಡಿದಳು. ಅಂತೆಯೇ ಮಗಳು ಹುಟ್ಟಿದ ಮೇಲೆ ಕಾತ್ಯಾಯನಿ ಎಂದು ಹೆಸರಿಟ್ಟರು. ಅವಳು ದೊಡ್ಡವಳಾದ ನಂತರ ತನ್ನ ಹತ್ತು ಕೈಗಳಲ್ಲಿ ಶಸ್ತ್ರಾಸ್ತ್ರವನ್ನು ಹಿಡಿದು ದುಷ್ಕೃತ್ಯ ಎಸಗುವ ರಾಕ್ಷಸರ ನಾಶ ಮಾಡಲು ಜಗತ್ತನ್ನು ಸುತ್ತಲು ಪ್ರಾರಂಭಿಸಿದಳು. ದುಷ್ಟ ರಾಕ್ಷಸನ ಸಂಹಾರಕಾಗಿ ದುರ್ಗಾ ದೇವಿಯು ಅವತರಿಸಿ ಬಂದಳು ಎಂಬ ನಂಬಿಕೆಯೂ ಜನಮಾನಸದಲ್ಲಿದೆ.
ಕಾತ್ಯಾಯನಿ ದೇವಿಯ ಪ್ರಾಮುಖ್ಯತೆ
ಕಾತ್ಯಾಯನಿ ದೇವಿಯು ಗುರು ಅಥವಾ ಬೃಹಸ್ಪತಿ ಗ್ರಹವನ್ನು ಆಳುತ್ತಾಳೆ. ಜ್ಯೋತಿಷ್ಯಶಾಸ್ತ್ರದಲ್ಲಿ ಬೃಹಸ್ಪತಿ ಮುಖ್ಯ ಗ್ರಹವಾಗಿದೆ. ಗುರು ಗ್ರಹದ ದೃಷ್ಟಿ ಹಾಗೂ ಪ್ರಭಾವ ಉತ್ತಮವಾಗಿದ್ದರೆ, ವ್ಯಕ್ತಿ ಜೀವನದಲ್ಲಿ ಅಪಾರ ಪ್ರಯೋಜನ, ಸಮೃದ್ದಿ ಹಾಗೂ ಯಶಸ್ಸನ್ನು ಪಡೆದುಕೊಳ್ಳುತ್ತಾನೆ ಎಂದು ಹೇಳಲಾಗುವುದು. ಕಾತ್ಯಾಯನಿ ದೇವಿಯ ಆರಾಧನೆ ಮಾಡುವುದರಿಂದ ಭಕ್ತರು ಗುರು ಗ್ರಹದ ಅನುಗ್ರಹದಿಂದ ಪಡೆಯ ಬಹುದಾದ ಎಲ್ಲಾ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಕುಂಡಲಿಯಲ್ಲಿ ಗುರುಗ್ರಹದ ತೊಂದರೆ ಇದ್ದಲ್ಲಿ ಕಾತ್ಯಾಯನಿ ದೇವಿಯನ್ನು ಆರಾಧಿಸುವ ಮೂಲಕ ಪರಿಹಾರ ಕಂಡುಕೊಳ್ಳಬಹುದು.
ಕಾತ್ಯಾಯನಿ ದೇವಿಗೆ ಕೆಂಪು ಗುಲಾಬಿಯು ಹೆಚ್ಚು ಪ್ರಿಯ. ಆಕೆಯ ಪೂಜೆಯಲ್ಲಿ ಕೆಂಪು ಗುಲಾಬಿಗೆ ಶ್ರೇಷ್ಠವಾದ ಸ್ಥಾನವಿದೆ. ದೇವಿಯ ಪೂಜೆ ಕೈಗೊಳ್ಳುವ ಮೊದಲು ಗಣೇಶನ ಪ್ರಾರ್ಥನೆಯನ್ನು ಮಾಡಬೇಕು. ದೇವಿಗೆ ಶೋಡೋಷೋಪಚಾರ ಅರ್ಪಿಸಿದ ನಂತರ ಮಂಗಳಾರತಿಯ ಮೂಲಕ ಪೂಜೆಯನ್ನು ಸಮಾಪ್ತಿಗೊಳಿಸಿದಲ್ಲಿ ದೇವಿ ಪ್ರಸನ್ನಳಾಗುತ್ತಾಳೆ ಎಂಬ ನಂಬಿಕೆ ಎಲ್ಲರದ್ದು.
ಕಾತ್ಯಾಯನಿ ದೇವಿಯ ಮಂತ್ರ
ಓಂ ದೇವಿ ಕಾತ್ಯಾಯಿನಿ ನಮಃ
ಓಂ ದೇವಿ ಕಾತ್ಯಾಯಿನಿ ನಮಃ
ಚಂದ್ರಹಾಸೋಜ್ವಲ ಕಾರಾ ಶಾರದುಲ್ವರ್ವವಾಹನ
ಕಾತ್ಯಾಯಿನಿ ಶುಭಂ ದದ್ಯಾದ ದೇವಿ
ದಾನವಘಾತಿನಿ ||
ಕಾತ್ಯಾಯನಿ ದೇವಿಯ ಸ್ತುತಿ
ಯಾ ದೇವಿ ಸರ್ವಭೂತೇಷು ಮಾ ಕಾತ್ಯಾಯನಿ ರೂಪೇನ ಸಂಸ್ಥಿತಾ |
ನಮಸ್ತಸ್ತೈ ನಮಸ್ತಸ್ತೈ ನಮಸ್ತಸ್ತೈ ನಮೋ ನಮಃ ||
✍️ ಶ್ರೀಮತಿ ಸರಸ್ವತಿ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.