ದೇಶದ ಸುರಕ್ಷತೆಗೆ ಸಂಬಂಧಿಸಿದಂತೆ, ಸಾರ್ವಜನಿಕರ ಸುಭದ್ರತೆಯ ವಿಚಾರಕ್ಕೆ ಬಂದಾಗ ನಮಗೆ ನೆನಪಾಗುವವರು ಪೊಲೀಸರು. ಸಮಾಜದಲ್ಲಿ ಯಾವುದೇ ರೀತಿಯ ಅನ್ಯಾಯ, ಅನಾಚಾರಗಳು ನಡೆಯಲಿ ಅಂತಹ ಸಂದರ್ಭದಲ್ಲಿ ನಮ್ಮ ನೆರವಿಗೆ ಬರುವವರು ಪೊಲೀಸರು. ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿಯೂ ಪೊಲೀಸರು ವಹಿಸುವ ಪಾತ್ರ ಬಹಳ ದೊಡ್ಡದು. ಪೊಲೀಸರು ಪ್ರಜಾಪ್ರಭುತ್ವ ಭಾರತದ ಕಣ್ಣುಗಳಿದ್ದಂತೆ ಎಂದರೂ ತಪ್ಪಾಗಲಾರದು.
ಅಕ್ಟೋಬರ್ 21, ಇಂದು ಪೊಲೀಸ್ ಸಂಸ್ಮರಣಾ ದಿನ. 1959ರ ಅ. 21 ರಂದು ಚೀನಾ-ಭಾರತ ಗಡಿ ಭಾಗದ ಹಾಟ್ ಸ್ಟ್ರೀಗ್ ಪೋಸ್ಟ್ ಹತ್ತಿರ ಸಿಆರ್ಪಿಎಫ್ ಡಿಎಸ್ಪಿ ಕರಣಸಿಂಗ್ ನೇತೃತ್ವದಲ್ಲಿ ಪೊಲೀಸ್ ದಳವು ಪಹರೆ ಕರ್ತವ್ಯ ನಿರ್ವಹಿಸುತ್ತಿದ್ದಾಗ ಆಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿರುವ ಚೀನಾ ಏಕಾಏಕಿ ದಾಳಿ ನಡೆಸುತ್ತದೆ. ಆ ಸಂದರ್ಭದಲ್ಲಿ ವೈರಿಗಳ ದಾಳಿಗೆ ವಿಚಲಿತರಾಗದೆ ಪ್ರಾಣದ ಹಂಗು ತೊರೆದು ಕೊನೆಯುಸಿರಿನವರೆಗೂ ಕೆಚ್ಚೆದೆಯಿಂದ ಹೋರಾಡಿ ಪ್ರಾಣ ತೆತ್ತ ಭಾರತೀಯ ಪೊಲೀಸ್ ಯೋಧರ ಬಲಿದಾನದ ಪ್ರತೀಕವಾಗಿ ಪ್ರತಿ ವರ್ಷ ಅ.21ರಂದು ದೇಶಾದ್ಯಂತ ಎಲ್ಲ ಪೊಲೀಸ್ ಕೇಂದ್ರ ಸ್ಥಾನಗಳಲ್ಲಿ ಪೊಲೀಸ್ ಸಂಸ್ಮರಣಾ ದಿನ ಆಚರಿಸಲಾಗುತ್ತದೆ. ದೇಶದೊಳಗೆ ಇದ್ದುಕೊಂಡು ದೇಶದ ವಿರುದ್ಧ ಮಸಲತ್ತು ಮಾಡುವ, ದೇಶದ ಹೊರಗಿನ ಶತ್ರುಗಳನ್ನು, ದೇಶದ್ರೋಹಿಗಳನ್ನು ಮಟ್ಟಹಾಕಲು ದಿಟ್ಟತನದಿಂದ ಹೋರಾಡಿ ಜೀವ ತೆತ್ತ ಪೊಲೀಸರ ಕಾರ್ಯಕ್ಕೆ ಗೌರವ ಸಲ್ಲಿಸುವ ಸಲುವಾಗಿ ಪೊಲೀಸ್ ಸಂಸ್ಮರಣಾ ದಿನವನ್ನು ದೇಶದಲ್ಲಿ ಆಚರಣೆ ಮಾಡಲಾಗುತ್ತಿದೆ.
ಸಮಾಜದಲ್ಲಿ ದುಷ್ಟತನ ಹೆಚ್ಚಾದಾಗ, ಕಾನೂನಿಗೆ ಸಂಬಂಧಿಸಿದಂತೆ ಸಮಸ್ಯೆಗಳು ಉದ್ಭವಿಸಿದಾಗ ನೆನಪಿಗೆ ಬರುವವರು ಪೊಲೀಸರು. ಯಾವುದೇ ಋತುಮಾನವಿರಲಿ, ಹಬ್ಬ ಹರಿದಿನಗಳಿರಲಿ ತಾವು ಮಾತ್ರ ಕರ್ತವ್ಯ ನಿರತರಾಗಿದ್ದುಕೊಂಡು ಸಾರ್ವಜನಿಕ ವಲಯದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡುವಲ್ಲಿ ಹಗಲಿರುಳು ದುಡಿಯುವವರು ಪೊಲೀಸರು. ಅಲ್ಲದೆ ವೈಯಕ್ತಿಕ, ಸಾಮಾಜಿಕ, ಕೌಟುಂಬಿಕವಾಗಿ ಕಾನೂನಾತ್ಮಕ ವಿಚಾರಗಳಲ್ಲಿ ಲೋಪದೋಷಗಳಾದಾಗಲೂ ಮೊದಲು ಜನರು ಸಂಪರ್ಕಿಸುವುದು ಪೊಲೀಸರನ್ನೇ. ಸಮಾಜದ ಕಾನೂನು ಹಿತ ಕಾಯುವ ರಕ್ಷಕರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಈ ದಿನವನ್ನು ದೇಶದಲ್ಲಿ ಆಚರಣೆ ಮಾಡಲಾಗುತ್ತಿದೆ. ಆ ಮೂಲಕ ಪೊಲೀಸರ ನಿಸ್ವಾರ್ಥ ಸೇವೆಗೆ ಗೌರವ ಸಲ್ಲಿಕೆ ಮಾಡಲಾಗುತ್ತಿದೆ.
ನಮ್ಮ ಸುತ್ತಮುತ್ತಲಿನ ಸಮಾಜವನ್ನೇ ಗಮನಿಸಿದಾಗ ಒಂದು ವೇಳೆ ಪೊಲೀಸರು ಇಲ್ಲದೇ ಹೋದಲ್ಲಿ ಏನಾಗುತ್ತಿತ್ತು? ಎಂಬುದಕ್ಕೆ ನಮಗೆ ಉತ್ತರ ದೊರೆಯುತ್ತದೆ. ಕಳ್ಳತನ, ದರೋಡೆ, ಮಹಿಳಾ ದೌರ್ಜನ್ಯ, ಅನ್ಯಾಯ, ಮಾದಕ ವ್ಯಸನ, ಅಕ್ರಮ, ಅಶಾಂತಿ ಸೇರಿದಂತೆ ಇನ್ನಿತರ ದುಷ್ಟತನಗಳು ಹೆಚ್ಚುತ್ತಿದ್ದವು. ಸಾಮಾನ್ಯ ಮನುಷ್ಯರು ಪ್ರತಿ ನಿತ್ಯ ಭಯದಲ್ಲಿಯೇ ಬದುಕಬೇಕಾದ ಸ್ಥಿತಿ ನಿರ್ಮಾಣವಾಗುತ್ತಿತ್ತು. ಈ ಎಲ್ಲಾ ಭಯವನ್ನು ಹೋಗಲಾಡಿಸಿ ನಿರಾತಂಕವಾಗಿ ಜನರು ಜೀವಿಸುತ್ತಿದ್ದಾರೆ ಎಂದಾದಲ್ಲಿ ಅದರ ಹಿಂದೆ ಪೊಲೀಸ್ ಇಲಾಖೆಯ ಶ್ರಮವನ್ನು ನಾವು ಅಲ್ಲಗಳೆಯುವಂತಿಲ್ಲ. ಮರೆಯುವಂತೆಯೂ ಇಲ್ಲ.
ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ಉಳಿದ ಎಲ್ಲಾ ಜನರೂ ಮನೆಯಲ್ಲಿ ಕುಳಿತು ಸೋಂಕು ಹರಡುವುದನ್ನು ತಪ್ಪಿಸಿಕೊಳ್ಳಲು ಪ್ರಯತ್ನ ನಡೆಸುತ್ತಿದ್ದರೆ, ಪೊಲೀಸರು ಮಾತ್ರ ತಮ್ಮ ಕುಟುಂಬವನ್ನು ಬಿಟ್ಟು, ರಸ್ತೆ ರಸ್ತೆಯಲ್ಲಿ ನಿಂತು ಜನರ ರಕ್ಷಣೆಯಲ್ಲಿ ತೊಡಗಿದ್ದರು. ಜನರು ರಸ್ತೆಗಿಳಿದು ಸೋಂಕು ಹರಡಿಸಿಕೊಳ್ಳದಂತೆ ಎಚ್ಚರ ವಹಿಸುತ್ತಿದ್ದರು. ಹಾಗೆಯೇ ಕೊರೋನಾ ಜಾಗೃತಿ ಮೂಡಿಸುವಲ್ಲಿ ಕೆಲಸ ಮಾಡುತ್ತಿದ್ದರು. ಹಾಗಿದ್ದರೂ ಸಹ ಕೆಲವೊಮ್ಮೆ ಅವರ ಸೇವೆ ಪರಿಗಣಿತವಾಗದೆ ಅವರನ್ನು, ಅವರ ಸೇವೆಯನ್ನು ಗಣನೆಗೆ ತೆಗೆದುಕೊಳ್ಳದೆ ಅವರನ್ನು ದೂಷಿಸುವಲ್ಲಿಯೂ ಕೆಲವು ಮಂದಿ ಮುಂಚೂಣಿಯಲ್ಲಿರುವುದು ಖೇದಕರ ವಿಚಾರ.
ಪೊಲೀಸರು ನಮ್ಮಂತೆಯೇ ಮನುಷ್ಯರು. ಆದರೆ ಉಳಿದೆಲ್ಲ ಕ್ಷೇತ್ರಗಳಿಗಿಂತ ಹೆಚ್ಚು ಕ್ಲಿಷ್ಟವಾದ ಸೇವೆಯನ್ನು ನೀಡುವ ಮೂಲಕ ಸಮಾಜಕ್ಕೆ, ಸಾರ್ವಜನಿಕರಿಗೆ ಭದ್ರತೆ ನೀಡುವ, ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ, ಕಾನೂನು ಪರಿಪಾಲನೆ ಮಾಡುವ ಕೆಲಸವನ್ನು ಪೊಲೀಸರು ಮಾಡುತ್ತಿದ್ದಾರೆ. ಅಂತಹ ಯೋಧರಿಗೆ ಗೌರವ ಸಲ್ಲಿಸುವ, ಅವರ ಕೆಲಸಗಳಿಗೆ ನಾವು ನೆರವಾಗುವ, ಅವರ ಕಾರ್ಯವನ್ನು ಸುಲಭಗೊಳಿಸುವ ನಿಟ್ಟಿನಲ್ಲಿ ಕೈ ಜೋಡಿಸಬೇಕಾದ ಕರ್ತವ್ಯ ಎಲ್ಲರದ್ದು.
✍️ ಭುವನ ಬಾಬು
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.