ಕರ್ನಾಟಕದ ನಾಡಹಬ್ಬ ಎಂದೇ ಪ್ರಖ್ಯಾತವಾಗಿರುವ ನವರಾತ್ರಿ, ದಸರಾ ಹಬ್ಬ ದೇಶದೆಲ್ಲೆಡೆಯೂ ವಿವಿಧ ರೀತಿಯಲ್ಲಿ ಸಂಭ್ರಮ, ಸಡಗರದಿಂದ ಆಚರಿಸಲ್ಪಡುತ್ತಿದೆ. ದೇಶದೆಲ್ಲೆಡೆ ಒಂಬತ್ತು ದಿನ (ನವರಾತ್ರಿ) ತಾಯಿ ದುರ್ಗೆಯನ್ನು ಒಂಬತ್ತು ರೂಪಗಳಲ್ಲಿ ಕಲ್ಪಿಸಿ ಆಕೆಗೆ ಪೂಜೆ ಸಲ್ಲಿಸುವ ಪದ್ಧತಿ ಇದೆ.
ದುಷ್ಟ ಶಕ್ತಿಗಳನ್ನು ಮಟ್ಟ ಹಾಕುವ, ಶಿಷ್ಟ ಮಾರ್ಗದಲ್ಲಿ ನಡೆಯುವ ಜನರಿಗೆ ರಕ್ಷಣೆ ನೀಡುವ ಆಶಯದ ಜೊತೆಗೆ ನವರಾತ್ರಿ ಹಬ್ಬ ಆಚರಿಸಲ್ಪಡುತ್ತಿದೆ. ದುಷ್ಟ ಸಂಹಾರಕ್ಕೆ, ಶಿಷ್ಟರ ಪಾಲನೆಗಾಗಿ ಪುರಾಣ ಕಾಲದಲ್ಲಿ ದುರ್ಗೆ ಒಂಬತ್ತು ಅವತಾರಗಳನ್ನೆತ್ತಿದಳು ಎಂಬ ಪ್ರತೀತಿಯಿದೆ. ಈ ಕತೆಗಳನ್ನು ನಾವು ಪುರಾಣಗಳಿಂದ ತಿಳಿಯಬಹುದಾಗಿದೆ. ಕೊನೆಗೆ ದುಷ್ಟ ದಾನವ ಮಹಿಷಾಸುರನನ್ನು ವಧಿಸುವ ಮೂಲಕ ಧರ್ಮದ ವಿಜಯವನ್ನು ದೇವಿ ಸ್ಥಾಪಿಸಿದಳು. ಅಂದರೆ ಧರ್ಮ ಮತ್ತು ಅಧರ್ಮದ ನಡುವೆ ಅಧರ್ಮದ ಅಟ್ಟಹಾಸ ಹೆಚ್ಚಾದಾಗ ದೇವಿ ಧರ್ಮದ ರಕ್ಷಣೆಗಾಗಿ ಅಧರ್ಮವನ್ನು ಮಟ್ಟಹಾಕಿ ಧರ್ಮಕ್ಕೆ ವಿಜಯವನ್ನು ಒದಗಿಸುತ್ತಾಳೆ ಎಂಬುದು ಕಥಾ ಸಾರ. ಈ ಕಥೆ ಮನುಷ್ಯನ ಬದುಕಿಗೂ ಅನ್ವಯವಾಗುತ್ತದೆ. ನಮ್ಮೊಳಗಿನ ದುಷ್ಟತನ, ಸಕಲ ಅಧರ್ಮಗಳಾದ ಮನೋಕಾಮನೆಗಳೆಂಬ ರಾಕ್ಷಸನನ್ನು ನಿಗ್ರಹಿಸಿ, ಧರ್ಮ ಮಾರ್ಗದಲ್ಲಿ, ಸತ್ಯ, ನಿಷ್ಠೆ, ನ್ಯಾಯದ ಜೀವನಕ್ರಮದ ಮೂಲಕ ವಿಜಯ ಸಾಧಿಸುವುದನ್ನೂ ಈ ಹಬ್ಬ ಸೂಚಿಸುತ್ತದೆ.
ದೇಶದೆಲ್ಲೆಡೆ ಆಶ್ವಯುಜ ಮಾಸದ ಮಹಾನವಮಿಯ ಹತ್ತು ದಿನಗಳ ಕಾಲ ಆಚರಿಸಲ್ಪಡುತ್ತದೆ. ಮೊದಲ ದಿನ ಶ್ರೀ ದೇವಿಯನ್ನು ಶೈಲಪುತ್ರಿ, ಎರಡನೇ ದಿನ ಬ್ರಹ್ಮಚಾರಿಣಿ, ಮೂರನೇಯ ದಿನ ಚಂದ್ರಘಂಟಾ, ನಾಲ್ಕನೇಯ ದಿನದಂದು ಕುಶ್ಮಾಂಡಾ, ಐದನೇ ದಿನದಂದು ಸ್ಕಂದಮಾತಾ, ಆರನೇ ದಿನದಂದು ಕಾತ್ಯಾಯಿನಿ, ಏಳನೇಯ ದಿನ ಕಾಳರಾತ್ರಿ, ಎಂಟನೇ ದಿವಸದಂದು ಮಹಾಗೌರಿ ರೂಪದಲ್ಲಿ ಮತ್ತು ಒಂಬತ್ತನೇ ದಿನದಂದು ಸಿದ್ಧಿಧಾತ್ರಿಯ ಅವತಾರಗಳಲ್ಲಿ ಪೂಜಿಸಲಾಗುತ್ತದೆ.
ಉತ್ತರ ಭಾರತದಲ್ಲಿ ಮಾತೆ ದುರ್ಗಾ ದೇವಿಯ ಆರಾಧನೆಗೆ ವಿಶೇಷ ಪ್ರಾಧಾನ್ಯತೆ ನೀಡಲಾಗಿದೆ. ದಕ್ಷಿಣ ಭಾರತದಲ್ಲಿ ತಾಯಿ ಚಾಮುಂಡಿಯ ಆರಾಧನೆಗೆ ವಿಶೇಷ ಮಹತ್ವವಿದೆ. ದಸರಾ ಸಂದರ್ಭದಲ್ಲಿ ಹಿಮಾಚಲ ಪ್ರದೇಶದ ಕುಲು ಪ್ರದೇಶದಲ್ಲಿ 7 ದಿನಗಳ ರಘುನಾಥ ದೇವರ ಉತ್ಸವ ವಿಶೇಷವಾಗಿದೆ.
ಮೈಸೂರು ದಸರಾ, ಎಷ್ಟೊಂದು ಸುಂದರಾ….
ರಾಜ್ಯದಲ್ಲಿಯೂ ನಾಡಹಬ್ಬ ದಸರಾಕ್ಕೆ ಐತಿಹಾಸಿಕ ಹಿನ್ನೆಲೆ ಇದೆ. ವಿಜಯನಗರದ ಅರಸರು ಹಂಪಿಯ ಮಹಾನವಮಿ ದಿಬ್ಬದಲ್ಲಿ ಸಂಭ್ರಮ, ಸಡಗರದಿಂದ ನವರಾತ್ರಿ ಹಬ್ಬವನ್ನು ಆಚರಿಸುತ್ತಿದ್ದರು. ವಿಜಯನಗರ ಕಾಲದ ನಂತರ ಮೈಸೂರು ಒಡೆಯರ ವಂಶಸ್ಥರು ದಸರಾ ಹಬ್ಬಕ್ಕೆ ಸಾಂಸ್ಕೃತಿಕ ಸ್ವರೂಪವನ್ನು ನೀಡಿದರು. ಅಂದಿನಿಂದ ತೊಡಗಿದಂತೆ ಇಂದಿನವರೆಗೂ ಮೈಸೂರು ದಸರಾ, ಜಂಬೂಸವಾರಿ ನಡೆದುಕೊಂಡೇ ಬರುತ್ತಿದೆ. ಆ ಕಾಲದಲ್ಲಿ ಮೈಸೂರು ಒಡೆಯರ್ ವಂಶಸ್ಥರು ನಡೆಸುತ್ತಿದ್ದ ದಸರಾ, ಬಳಿಕ ಕರ್ನಾಟಕ ಸರ್ಕಾರ ಮತ್ತು ಮೈಸೂರು ಒಡೆಯರ ಸಹಯೋಗದಲ್ಲಿ ನಡೆದು ಬರುತ್ತಿದೆ.
ದಸರಾ ಸಂದರ್ಭದಲ್ಲಿ ಪ್ರತಿ ವರ್ಷವೂ ಅರಮನೆ, ಚಾಮುಂಡಿ ಬೆಟ್ಟದಲ್ಲಿ ಧಾರ್ಮಿಕ, ಸಾಂಸ್ಕೃತಿಕ ಸೇರಿದಂತೆ ಇನ್ನಿತರ ವಿಚಾರಗಳ ಅನಾವರಣವಾಗುತ್ತದೆ. ಇಡೀ ಮೈಸೂರು ದೀಪಾಲಂಕಾರದಿಂದ ಕಂಗೊಳಿಸುವ ಮೂಲಕ ನೋಡುಗರ ಹೃನ್ಮನ ಸೆಳೆಯುತ್ತದೆ.
ಮೈಸೂರು ದಸರಾ ದೇಶ-ವಿದೇಶದ ಜನರ ಆಕರ್ಷಣೆಯ ಕೇಂದ್ರಬಿಂದುವೇ ಸರಿ. ಮೈಸೂರು ದಸರಾದ ವಿಶೇಷ ಆಕರ್ಷಣೆ ಎಂದರೆ ಜಂಬೂ ಸವಾರಿ. ಆನೆಯ ಮೇಲೆ ಚಿನ್ನದ ಅಂಬಾರಿಯಲ್ಲಿ ಸರ್ವಾಲಂಕಾರಭೂಷಿತೆಯಾಗಿ ಕಂಗೊಳಿಸುವ ತಾಯಿ ಚಾಮುಂಡಿಯ ಮೆರವಣಿಗೆಯನ್ನು ಕಣ್ತುಂಬಿಕೊಳ್ಳಲೆಂದೇ ದೇಶ-ವಿದೇಶಗಳಿಂದ ಜನರು ಆಗಮಿಸುತ್ತಾರೆ. ದಸರಾದ ವೈವಿಧ್ಯಮಯ ಕಾರ್ಯಕ್ರಮಗಳನ್ನು ಕಂಡು ಸಂಭ್ರಮಿಸುತ್ತಾರೆ. ಈ ಸಂದರ್ಭದಲ್ಲಿಯೇ ಹಳೆಯ ಕಾಲದ ರಾಜರ ಆಡಳಿತಾವಧಿಯನ್ನು ನೆನಪಿಸುವಂತೆ ಅರಮನೆಯಲ್ಲಿ ಖಾಸಗಿ ದರ್ಬಾರ್ಗಳೂ ನಡೆಯುತ್ತವೆ. ಇಡೀ ಮೈಸೂರಿಗೆ ಮೈಸೂರೇ ದಸರಾ ಸಂಭ್ರಮದಲ್ಲಿ ಮದುವಣಗಿತ್ತಿಯಂತೆ ಅಲಂಕೃತವಾಗಿರುತ್ತದೆ. ಜಾತಿ, ಧರ್ಮಗಳನ್ನು ಮೀರಿ ಆಚರಿಸಲ್ಪಡುವ ಈ ಹಬ್ಬ ಮೈಸೂರಿನ ಪ್ರತಿ ಮನೆ ಮನದಲ್ಲಿಯೂ ಹಬ್ಬದ ವಾತಾವರಣ ಸೃಷ್ಟಿಸಿರುತ್ತದೆ.
ಕೇವಲ ಮೈಸೂರಿನಲ್ಲಿ ಮಾತ್ರವಲ್ಲದೆ ರಾಜ್ಯದ ಇನ್ನಿತರ ಜಿಲ್ಲೆಗಳಲ್ಲಿಯೂ ದಸರಾ ಆಚರಣೆ ಸಂಭ್ರಮ, ಸಡಗರದಿಂದ ನಡೆಯುತ್ತದೆ. ಮಂಗಳೂರು, ಮಡಿಕೇರಿ ದಸರಾಗಳೂ ಹೆಚ್ಚು ಪ್ರಖ್ಯಾತವಾಗಿವೆ. ಮಂಗಳೂರು ದಸರಾ ಸಂದರ್ಭದಲ್ಲಿ ಹುಲಿ, ಸಿಂಹ, ಕರಡಿ, ಅನಾರ್ಕಲಿ ಸೇರಿದಂತೆ ಇನ್ನೂ ಅನೇಕ ವೇಷಗಳು ಜನರನ್ನು ಆಕರ್ಷಿಸುತ್ತದೆ.
ದಸರಾ ಹಬ್ಬವನ್ನು ಗೊಂಬೆಗಳ ಅಲಂಕಾರದ ಮೂಲಕವೂ ಆಚರಿಸುವ ಪದ್ಧತಿ ಕರ್ನಾಟಕವೂ ಸೇರಿದಂತೆ ದೇಶದ ಇನ್ನಿತರ ಭಾಗಗಳಲ್ಲಿ ಆಚರಿಸುವ ಪದ್ಧತಿ ಇದೆ. ರಂಗೋಲಿ, ಹೂವುಗಳ ಅಲಂಕಾರದ ಜೊತೆಗೆ ಮನೆಯಲ್ಲಿ ಬೊಂಬೆಗಳನ್ನು ಕೂರಿಸಿ, ಪೂಜಿಸುವ ಮೂಲಕವೂ ದಸರಾದ ಆಚರಣೆ ರೂಢಿಯಲ್ಲಿದೆ. ಈ ಸಂದರ್ಭದಲ್ಲಿ ಮನೆಗೆ ಅತಿಥಿಯರನ್ನು ಕರೆಸಿ, ವಿಶೇಷವಾಗಿ ಸುಮಂಗಲಿಯರಿಗೆ ಅರಶಿನ, ಕುಂಕುಮ ನೀಡಿ ಸತ್ಕಾರ ಮಾಡುವ ಪದ್ಧತಿಯನ್ನು ನಾವು ಕಾಣಬಹುದಾಗಿದೆ.
ನಾಡಹಬ್ಬ ದಸರಾ ಈ ಬಾರಿ ಕೊರೋನಾ ಸಂಕಷ್ಟದ ನಡುವೆಯೇ ಬಂದಿದೆ. ಈ ಸಂಕಷ್ಟದಿಂದ ಇಡೀ ಜಗತ್ತನ್ನು ಪಾರು ಮಾಡು ಎಂಬ ಪ್ರಾರ್ಥನೆಯ ಜೊತೆಗೆ ಈ ಬಾರಿಯ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸೋಣ. ಸರ್ಕಾರ ತಿಳಿಸಿರುವ ಎಲ್ಲಾ ರೀತಿಯ ಕೊರೋನಾ ನಿಯಂತ್ರಣ ಕ್ರಮಗಳನ್ನು ಅನುಸರಿಸಿ, ನಮ್ಮ ಮನೆಯಲ್ಲಿಯೇ ಈ ಸಂಭ್ರಮವನ್ನು ಸರಳ ರೀತಿಯಲ್ಲಿ ಆಚರಣೆ ಮಾಡೋಣ. ಆ ಮೂಲಕ ನಮ್ಮನ್ನು, ನಮ್ಮವರ ಜೊತೆಗೆ ಇಡೀ ಸಮಾಜವನ್ನು ಕೊರೋನಾ ಸಂಕಷ್ಟದಿಂದ ಕಾಪಾಡುವಲ್ಲಿ ಎಚ್ಚರ ವಹಿಸೋಣ. ಹಬ್ಬದ ನಡುವೆ ಕೊರೋನಾ ನಿಯಂತ್ರಣ ಕ್ರಮಗಳ ಅನುಸರಣೆ ನಮ್ಮ ಆದ್ಯತೆಯಾಗಲಿ.
✍️ಭುವನ ಬಾಬು
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.