ಭಾರತ ಪ್ರಜಾಪ್ರಭುತ್ವ ಮೌಲ್ಯಗಳಿಗೆ ಬದ್ಧವಾಗಿರುವ ರಾಷ್ಟ್ರ. ಎಲ್ಲಾ ಜಾತಿ, ಧರ್ಮ ಮತ್ತು ಜನಾಂಗದ ಜನರಿಗೆ ಇಲ್ಲಿ ಸಮಾನವಾಗಿ ಬದುಕುವ ಅವಕಾಶವಿದೆ. ಪ್ರತಿಯೊಬ್ಬರಿಗೂ ಧಾರ್ಮಿಕ ಹಕ್ಕನ್ನು ನೀಡಲಾಗಿದೆ. ಅದರಂತೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕೂಡ ನೀಡಲಾಗಿದೆ. ಹಾಗಂತ ಒಂದು ಧರ್ಮವನ್ನು ನಿಂದಿಸುವ, ಅದರ ಆರಾಧನಾ ಪದ್ಧತಿಯನ್ನು ಅವಹೇಳನ ಮಾಡುವ ಹಕ್ಕು ಯಾರಿಗೂ ಇಲ್ಲ. ಆದರೆ ಭಾರತದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹಿಂದೂ ಧರ್ಮವನ್ನು ಅವಹೇಳನ ಮಾಡಲು ಬಳಸಿಕೊಳ್ಳಲಾಗುತ್ತಿರುವುದು ದುರಾದೃಷ್ಟಕರ.
ಹಿಂದೂ ಧರ್ಮ ಅತ್ಯಂತ ಸಹಿಷ್ಣು ಧರ್ಮ. ಅದರ ಆಚಾರ-ವಿಚಾರಗಳು ಬಲವಂತದಿಂದ ಹೇರಲ್ಪಟ್ಟಿಲ್ಲ. ನೀನು ಹೀಗೆಯೇ ಮಾಡಬೇಕು, ಇದನ್ನೇ ಅನುಸರಿಸಬೇಕು ಎಂಬುದನ್ನು ಹಿಂದೂ ಧರ್ಮ ಹೇಳುವುದಿಲ್ಲ. ಒಳಿತು ಯಾವುದು, ಧರ್ಮ ಯಾವುದು, ಯಾವ ಮಾರ್ಗದಲ್ಲಿ ಸಾಗಿದರೆ ಒಳಿತಾಗುತ್ತದೆ ಎಂಬುದನ್ನು ಹಿಂದೂ ಧರ್ಮ ಹೇಳಿಕೊಡುತ್ತದೆಯೇ ವಿನಃ, ಹೀಗೆಯೇ ಪ್ರಾರ್ಥಿಸು, ಹೀಗೆಯೇ ಧರ್ಮವನ್ನು ಪಾಲಿಸು ಇಲ್ಲವಾದರೆ ನರಕ ಪ್ರಾಪ್ತಿಯಾಗುತ್ತದೆ ಎಂಬುದನ್ನು ಹಿಂದೂ ಧರ್ಮ ಹೇಳಿಕೊಡುವುದಿಲ್ಲ. ನಿಜವಾದ ಅರ್ಥದಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಮೈಗೂಡಿಸಿಕೊಂಡಿರುವ ಧರ್ಮವೆಂದರೆ ಅದು ಹಿಂದೂ ಧರ್ಮ ಮಾತ್ರ. ಅದಕ್ಕೆ ಅದನ್ನು ರಿಲಿಜನ್ ಎಂದು ಪರಿಗಣಿಸಲಾಗಿಲ್ಲ. ಬದಲಾಗಿ ಒಂದು ಜೀವನ ವಿಧಾನ ಎಂದು ಪರಿಗಣಿಸಲಾಗಿದೆ.
ಆದರೂ ಕೆಲವರು ಹಿಂದೂಧರ್ಮದ ಮೇಲೆ ವಿನಾ ಕಾರಣ ಪ್ರಹಾರ ಮಾಡುತ್ತಿದ್ದಾರೆ. ಕೆಲವು ಸ್ವಯಂಘೋಷಿತ ಬುದ್ಧಿಜೀವಿಗಳು ಹಿಂದೂ ಧರ್ಮವನ್ನು ಅವಹೇಳನ ಮಾಡುವುದನ್ನು ನಿತ್ಯ ಕಾಯಕವನ್ನಾಗಿ ಮಾಡಿಕೊಂಡಿದ್ದಾರೆ. ಬೇರೆ ಯಾವುದೇ ಧರ್ಮದಲ್ಲೂ ಕಾಣದ ನ್ಯೂನ್ಯತೆಗಳು ಅವರಿಗೆ ಹಿಂದೂ ಧರ್ಮದಲ್ಲಿ ಮಾತ್ರ ಕಾಣುತ್ತಿದೆ.
ಮೊನ್ನೆಯಷ್ಟೇ ದೆಹಲಿ ಮೂಲದ ಪತ್ರಕರ್ತೆ ಸುಶ್ಮಿತಾ ಸಿನ್ಹಾ ಎನ್ನುವವಳು ಹಿಂದೂ ದೇವರ ಚಿತ್ರಗಳನ್ನು ಹಿಡಿದು ಅವಹೇಳನ ಮಾಡಿ ವಿಡಿಯೋ ಪ್ರಸಾರ ಮಾಡಿದ್ದಾಳೆ. ಹಿಂದೂ ಹಬ್ಬ ತೀಜ್ ಬಗ್ಗೆ ಈಕೆ ಕೆಟ್ಟದಾಗಿ ಮಾತನಾಡಿದ್ದಾಳೆ. ‘ಹರ್ತಾಲಿಕ ತೀಜ್ ಕಥಾ’ ಎಂಬ ಪುಸ್ತಕವನ್ನು ಈಕೆ ರದ್ದಿ ಎಂದು ಕರೆದಿದ್ದಾಳೆ, ಮಾತ್ರವಲ್ಲ ಇದನ್ನು ಟಾಯ್ಲೆಟ್ ಪೇಪರ್ ಆಗಿ ಬಳಸಬೇಕು ಎಂದು ಅಸಭ್ಯವಾಗಿ ಮಾತನಾಡಿದ್ದಾಳೆ. ಈ ಪುಸ್ತಕ ಶಿವ ಮತ್ತು ಪಾರ್ವತಿಯ ಮುಖಪುಟವನ್ನು ಹೊಂದಿತ್ತು. ಈಕೆ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡಮಟ್ಟದಲ್ಲಿ ಆಕ್ರೋಶವೂ ವ್ಯಕ್ತವಾಗಿದೆ.
ಈಕೆಗೆ ಈ ರೀತಿಯ ವಿಡಿಯೋ ಹಂಚಿಕೊಳ್ಳಲು ಪ್ರೋತ್ಸಾಹಿಸಿದವರು ಯಾರು ಅಥವಾ ಈ ರೀತಿ ಮಾಡುವುದರಿಂದ ಆಕೆಗೆ ಆಗುವ ಲಾಭವಾದರೂ ಏನು?. ಬಹುಶಃ ಬುದ್ಧಿಜೀವಿ ಎಂಬ ಪಟ್ಟ ಪಡೆಯಲು, ಎಡಪಂಥೀಯರ ನಾಯಕಿಯಾಗಲು ಏಕೆ ಈ ರೀತಿ ಮಾಡಿರಬಹುದು. ಒಂದು ವೇಳೆ ಈಕೆಗೆ ತೀಜ್ ಹಬ್ಬದ ಬಗ್ಗೆ ಅಸಹನೀಯತೆ ಇದ್ದರೆ ಅದನ್ನು ಆಚರಿಸದೆ ಬಿಡಬಹುದಿತ್ತು. ಆದರೆ ಇತರರ ಭಾವನೆಗಳನ್ನು ಕೆರಳಿಸುವ ಅಥವಾ ನೋಯಿಸುವ ಅಧಿಕಾರವನ್ನು ಇವಳಿಗೆ ಕೊಟ್ಟವರು ಯಾರು?
ಈಕೆ ಮಾತ್ರವಲ್ಲ, ಸುನೇತ್ರಾ ಚೌಧರಿ ಎಂಬ ಪತ್ರಕರ್ತೆಯೊಬ್ಬಳು ದೆಹಲಿ ವಿಮಾನನಿಲ್ದಾಣದಲ್ಲಿ ಸ್ಥಾಪಿಸಲಾದ ಮನಮೋಹಕ ಶಂಖದ ರಚನೆಯನ್ನು ಕಾರ್ಪೆಟ್ಗಿಂತಲೂ ಕೆಟ್ಟದಾಗಿದೆ ಎಂದು ಈ ಹಿಂದೆ ಟ್ವಿಟರ್ನಲ್ಲಿ ಹೇಳಿಕೊಂಡಿದ್ದಳು. ಅಂದರೆ ಇವರಿಗೆ ಹಿಂದೂ ಧರ್ಮಕ್ಕೆ ಸಂಬಂಧಿಸಿದ ಎಲ್ಲವೂ ಕೆಟ್ಟದಾಗಿಯೇ ಕಾಣುತ್ತದೆ.
ಹಿಂದೂ ದೇವರನ್ನು ಅವಮಾನಿಸಿದರೆ ಮಾತ್ರ ಎಡಪಂಥೀಯರ ನಾಯಕರಾಗಲು ಸಾಧ್ಯ ಎನ್ನುವ ಮನಸ್ಥಿತಿ ಇವರಲ್ಲಿದೆ. ಅದಕ್ಕಾಗಿಯೇ ಹಿಂದೂಗಳನ್ನು ಮತ್ತು ಹಿಂದೂ ದೇವರನ್ನು ಅವಮಾನಿಸುವುದನ್ನು ಇವರುಗಳು ನಿತ್ಯ ಕಾಯಕವನ್ನಾಗಿ ಮಾಡಿಕೊಂಡಿದ್ದಾರೆ.
ಇಸ್ಲಾಂ ಧರ್ಮದ ಪ್ರವಾದಿಯ ಬಗ್ಗೆ ಅವಹೇಳನ ಮಾಡಿ ಫೇಸ್ಬುಕ್ ಪೋಸ್ಟ್ ಹಾಕಲಾಗಿದೆ ಎಂಬ ಒಂದು ನೆಪವನ್ನು ಮುಂದಿಟ್ಟುಕೊಂಡು ಬೆಂಗಳೂರಿನಲ್ಲಿ ಬೆಂಕಿ ಹಚ್ಚಲಾಯಿತು. ಆದರೆ ಹಿಂದೂಗಳು ಇಂತಹ ಎಷ್ಟೋ ಅವಮಾನಗಳನ್ನು ಸಹಿಸಿಕೊಂಡಿದ್ದಾರೆ. ಕೇವಲ ಕಾನೂನಿನ ಮೂಲಕವೇ ಹಲವಾರು ಪ್ರಕರಣಗಳ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಇದು ಹಿಂದೂ ಧರ್ಮದ ಸಹನಶೀಲತೆಗೆ ಇರುವ ಸಾಕ್ಷಿ. ಆದರೆ ಇದನ್ನು ಅರಿಯದ ಪೂರ್ವಾಗ್ರಹ ಪೀಡಿತರು ಹಿಂದೂ ಧರ್ಮದ ಬಗ್ಗೆ ಅಪಪ್ರಚಾರ ನಡೆಸುವ, ಅದರ ಅಂತಃಶಕ್ತಿಯನ್ನು ಕುಗ್ಗಿಸುವ ಪ್ರಯತ್ನಗಳನ್ನು ನಡೆಸುತ್ತಲೇ ಇದ್ದಾರೆ.
✍️ಶರಣ್ಯ ಶೆಟ್ಟಿ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.