ಮನುಷ್ಯ ಜೀವನದ ಹುಟ್ಟಿನಿಂದ ಸಾವಿನ ವರೆಗೆ ಬಿದಿರು ಒಂದಿಲ್ಲೊಂದು ರೀತಿಯಲ್ಲಿ ಉಪಯೋಗಕ್ಕೆ ಬರುತ್ತದೆ. ಹುಟ್ಟಿದ ಮಗುವಿಗೆ ತೊಟ್ಟಿಲಾಗಿ, ಮನೆಯ ಮೇಲಿನ ಸೂರಿಗೆ, ಅಜ್ಜನಿಗೆ ಊರುಗೋಲಾಗಿ ಕೊನೆಗೆ ಸಾವಿನ ನಂತರದ ಚಟ್ಟ ಇವೆಲ್ಲಕ್ಕೂ ಬಿದಿರು ಬೇಕೇ ಬೇಕು. ನಾವೆಲ್ಲರೂ ಪರಮಾತ್ಮ ಎಂದು ನಂಬಿರುವ ಭಗವಾನ್ ಶ್ರೀ ಕೃಷ್ಣನ ಉಸಿರಿಗೆ ದನಿಯಾಗಿರುವ ಬಿದಿರಿನ ಒಂದಷ್ಟು ಉಪಯೋಗಗಳ ಬಗ್ಗೆ ತಿಳಿದುಕೊಳ್ಳೋಣ.
ಬ್ಯಾಂಬೂ ಡ್ರಿಪ್ ಇರಿಗೇಷನ್
ನೀರು ಹಾಯಿಸಲು ಬಿದಿರನ್ನು ಬಳಸುತ್ತಾರೆ ಎಂದರೆ ನೀವು ನಂಬಲೇ ಬೇಕು. ಎಲ್ಲಿ ಎಂದಿರಾ, ಮೇಘಾಲಯದಲ್ಲಿ.
ಮೇಘಾಲಯದ ಬೆಟ್ಟ ಗುಡ್ಡಗಳ ತುಂಬೆಲ್ಲಾ ನಿಧಾನವಾಗಿ ಹರಿಯುವ ಝರಿ ತೊರೆಗಳು ನೋಡುಗರನ್ನು ಆಕರ್ಷಿಸುತ್ತವೆ. ಈ ನೀರು ಶುಭ್ರವಾಗಿದ್ದು, ಕಲ್ಮಶ ರಹಿತವಾಗಿ ಹರಿಯುತ್ತವೆ. ಅಲ್ಲಿನ ಜನರು ಬಿದಿರಿನ ತುಂಡುಗಳನ್ನು ಬಳಕೆ ಮಾಡಿಕೊಂಡು ಈ ಶುಭ್ರ ನೀರನ್ನು ತಾವು ಬೆಳೆಯುವ ಬೆಳೆಗಳಿಗೆ ಉಣಿಸುತ್ತಾರೆ.
ಬಿದಿರುಗಳನ್ನು ಬಳಕೆ ಮಾಡಿ ತಮ್ಮ ಜಮೀನಿನ ಬೆಳೆಗಳಿಗೆ ಡ್ರಿಪ್ ಇರಿಗೇಷನ್ (ಹನಿ ನೀರಾವರಿ) ಪದ್ಧತಿಯನ್ನು 200 ವರ್ಷಗಳ ಹಿಂದೆಯೇ ಮೇಘಾಲಯದ ಬುಡಕಟ್ಟು ಜನಾಂಗದವರು ಅಳವಡಿಸಿಕೊಂಡು ಬಂದಿದ್ದು, ಇಂದಿಗೂ ಈ ಪದ್ಧತಿ ಜಾರಿಯಲ್ಲಿರುವುದು ಕಂಡು ಬರುತ್ತದೆ. ಪ್ಲಾಸ್ಟಿಕ್ ಸೇರಿದಂತೆ ಯಾವುದೇ ಹಾನಿಕಾರಕ ವಸ್ತುಗಳನ್ನು ಬಳಕೆ ಮಾಡದೆ ನೈಸರ್ಗಿಕವಾಗಿ ದೊರೆಯುವ ಬಿದಿರಿನ ತುಂಡುಗಳಿಂದಲೇ ನೀರಾವರಿ ವ್ಯವಸ್ಥೆ ಮಾಡಿಕೊಳ್ಳುವ ಮೂಲಕ ತಮ್ಮ ನೀರಿನ ಬವಣೆಗೂ ಪರ್ಯಾಯ ವ್ಯವಸ್ಥೆ ಮಾಡಿಕೊಂಡಿರುವುದು ಕಂಡು ಬರುತ್ತದೆ.
ಬಿದಿರಿನ ಟೋಪಿಗಳು
ಅಸ್ಸಾಂ ರಾಜ್ಯದ ಯಾವುದಾದರೂ ಮನೆಗಳಿಗೆ ಒಮ್ಮೆ ಭೇಟಿ ನೀಡಿ. ಬಿದಿರಿನ ಟೋಪಿಗಳು ನಮ್ಮ ಕಣ್ಣಿಗೆ ಬಿದ್ದೇ ಬೀಳುತ್ತವೆ. ಈ ಟೋಪಿಗಳನ್ನು ಇತ್ತೀಚಿನ ದಿನಗಳಲ್ಲಿ ಕಲಾಕಾರ ತನ್ನ ಕೈಚಳಕದಲ್ಲಿ ಬಹಳ ಸುಂದರವಾಗಿ ತಯಾರಿಸುತ್ತಿದ್ದು, ಒಂದು ಕ್ಷಣ ಎಲ್ಲರ ಗಮನವನ್ನು ತನ್ನತ್ತ ಸೆಳೆದು ಬಿಡುತ್ತದೆ.
ಅಲ್ಲಿನ ಚಹಾ ಎಸ್ಟೇಟ್ಗಳಲ್ಲಿ ಚಹಾ ಎಲೆಗಳನ್ನು ಸಂಗ್ರಹಿಸುವವರಿಂದ ಹಿಡಿದು ಪ್ರವಾಸಿಗರ ವರೆಗೂ ಈ ಟೋಪಿಗಳು ಎಲ್ಲರಿಗೂ ಆಪ್ತ. ಹಾಗೆಯೇ ಆಕರ್ಷಣೆಯ ಕೇಂದ್ರ ಬಿಂದುವೂ ಹೌದು. ಅಲ್ಲಿನ ಜನರು ಮಳೆ ಮತ್ತು ಗಾಢ ಬಿಸಿಲಿನಿಂದ ರಕ್ಷಿಸಿಕೊಳ್ಳಲು ಜಾಪಿ ಅಥವಾ ಈ ಬಿದಿರಿನ ಟೋಪಿಗಳನ್ನು ಬಳಸಿದರೆ, ಪ್ರವಾಸಿಗರು ಆಕರ್ಷಣೆಗಾಗಿ ಇದನ್ನು ಧರಿಸುವುದನ್ನು ನಾವು ಗಮನಿಸಬಹುದಾಗಿದೆ. ಬಿದರನ್ನು ಹೆಣೆದು ತಯಾರಿಸಿರುವ ಈ ಟೋಪಿಗಳು ಎಲ್ಲರಿಗೂ ಆಪ್ತ ಎಂದೇ ಹೇಳಬಹುದು.
ಆಹಾರವಾಗಿ ಬಿದಿರು
ಬಿದಿರು ಆಕರ್ಷಣೆಯ ಮಾಧ್ಯಮವಷ್ಟೇ ಅಲ್ಲ. ಆಹಾರವೂ ಹೌದು. ಎಳೆಯ ಚಿಗುರು ಬಿದಿರುಗಳನ್ನು ಬಳಸಿಕೊಂಡು ಜನರು ಉಪ್ಪಿನ ಕಾಯಿ, ಪಲ್ಯ, ಇನ್ನಿತರ ಮೇಲೋಗರಗಳನ್ನೂ ತಯಾರಿಸುತ್ತಾರೆ. ದೇಶದ ಹಲವು ರಾಜ್ಯಗಳಲ್ಲಿ ಬಿದಿರನ್ನು ಬಳಸಿ ಆಹಾರ ವಸ್ತುಗಳನ್ನು ತಯಾರಿಸುವುದನ್ನು ನಾವು ಗಮನಿಸಬಹುದು. ಕರ್ನಾಟಕದಲ್ಲಿಯೂ ಎಳೆಯ ಬಿದಿರನ್ನು ಸಂಗ್ರಹಿಸಿ ಆಹಾ ಖಾದ್ಯಗಳನ್ನು ತಯಾರಿಸುವುದನ್ನು ನಾವು ಗಮನಿಸಿರಬಹುದು.
ಬಿದಿರಿನಿಂದ ತಯಾರಿಸಿದ ಆಹಾರಗಳು ಕೇವಲ ಬಾಯಿಗೆ ಮಾತ್ರ ರುಚಿಯಲ್ಲ. ಬದಲಾಗಿ ಇದರಲ್ಲಿ ದೇಹಾರೋಗ್ಯವನ್ನು ವೃದ್ಧಿಸುವ ಕೆಲವು ವಿಟಾಮಿನ್ ಅಂಶಗಳನ್ನೂ ತನ್ನೊಳಗೆ ಅಡಕವಾಗಿಸಿದೆ. ಈ ಬಿದಿರಿನ ಎಳೆಯ ಮೆಳೆಗಳನ್ನು ಕತ್ತರಿಸಿ ಮೆಣಸು ಸೇರಿಸಿ ಉಪ್ಪಿನಲ್ಲಿ ಹಾಕಿಟ್ಟು ಕೆಲ ಕಾಲ ಉಳಿಸಿಕೊಂಡು ಬಳಸುವ ಪದ್ಧತಿಯೂ ನಮ್ಮಲ್ಲಿದೆ. ಅಥವಾ ಒಣಗಿಸಿಟ್ಟು ಬಳಿಕ ಆಹಾರ ತಯಾರಿಸುವ ಕ್ರಮವನ್ನೂ ಜನರು ಹೊಂದಿದ್ದಾರೆ. ಇದು ನಾಲಿಗೆಗೆ ರುಚಿ ನೀಡಿದರೆ, ಆರೋಗ್ಯಕ್ಕೆ ಹಿತ.
ಬಿದಿರಿನ ಲೋಟಗಳು
ಅರುಣಾಚಲ ಪ್ರದೇಶ ಚಾರಣಿಗರಿಗೆ ಹೇಳಿ ಮಾಡಿಸಿದ ಜಾಗ. ಇಲ್ಲಿನ ಕಾಡು ಮೇಡುಗಳಲ್ಲಿ ಸುತ್ತುವ ಆನಂದವೇ ಬೇರೆ. ಭೂಮಿಯ ಚಾರಣಿಗರ ಸ್ವರ್ಗವಾಗಿರುವ ಬಸರ್ ಎಂಬ ಪ್ರದೇಶದ ಜನರು ಅಕ್ಕಿಯ ಬಿಯರ್, ಪೋಕಾಗಳನ್ನು ತಯಾರಿಸಿ ಅದನ್ನು ಬಿದಿರಿನ ಮೆಳೆಗಳ ಟೊಳ್ಳು ಭಾಗದಲ್ಲಿ ತುಂಬಿ ಪ್ರವಾಸಿಗರಿಗೆ ನೀಡುತ್ತಾರೆ. ಎರಡು ಬಿದಿರಿನ ತುಂಡುಗಳನ್ನು ಅತ್ತಿತ್ತ ಸಿಕ್ಕಿಸಿಕೊಂಡು ಜೋಲಿಯಂತೆ ಕತ್ತಿಗೇರಿಸಿಕೊಂಡು ಹೋಗುವವರನ್ನೂ ನಾವಿಲ್ಲಿ ಕಾಣಬಹುದಾಗಿದೆ.
ಕೇವಲ ಪ್ರವಾಸಿಗರಷ್ಟೇ ಅಲ್ಲದೆ ಈ ಹಳ್ಳಿಯ ಜನರೂ ಸಹ ಬಿದಿರಿನ ತುಂಡುಗಳನ್ನು ಬಳಸಿಕೊಂಡೇ ದ್ರವ ಪಾನೀಯಗಳನ್ನು ಸೇವಿಸುತ್ತಾರೆ. ಅಲ್ಲಿನ ಉತ್ಸವಗಳಲ್ಲಿಯೂ ಇಂತಹ ಬಿದಿರಿನ ಲೋಟಗಳು ಜಗತ್ಪ್ರಸಿದ್ಧ ,ಆಕರ್ಷಣೆಯ ಕೇಂದ್ರ ಬಿಂದು.
ಆಹಾರ ಬೇಯಿಸಲು ಬಿದಿರಿನ ಬಳಕೆ
ಬಿದಿರಿನ ಒಣಗಿದ ಕಟ್ಟಿಗೆಗಳನ್ನು ಬಳಸಿ ಬೆಂಕಿ ತಯಾರಿಸಿ ಅಡುಗೆ ಮಾಡುವುದು ಕೇಳಿದ್ದೇವೆ. ಇದರಲ್ಲೇನು ವಿಶೇಷ ಎಂದಿರಾ. ವಿಷಯ ಅದಲ್ಲ. ಬೇರೇನೋ ಇದೆ. ತಿಳಿಯುವ ಕುತೂಹಲವೇ.. ಹಾಗಿದ್ದರೆ ಮುಂದೆ ಓದಿ.
ಬಿದಿರನ್ನು ಕಡಿದು ಅದರ ಟೊಳ್ಳು ಭಾಗಗಳನ್ನು ಬಳಸಿ ಅದಕ್ಕೆ ಹಿಟ್ಟು ತುಂಬಿ, ಅಕ್ಕಿ ತುಂಬಿ, ಮಾಂಸ ತುಂಬಿ ಅದಕ್ಕೆ ಬಾಳೆಲೆ ಮುಚ್ಚಿ ಬಳಿಕ ಅದನ್ನು ಬೆಂಕಿಯಲ್ಲಿ ಬೇಯಿಸಿ ಬಳಿಕ ತಿನ್ನುವಾಗ ಸಿಗುವ ರುಚಿ ಹೇಳಲಸದಳ. ಒಮ್ಮೆ ಹೀಗೆ ತಯಾರಿಸಿದ ಖಾದ್ಯಗಳ ರುಚಿ ಬಾಯಿಗೆ ಹತ್ತಿದರೆ ಅದು ಮತ್ತೆ ಮತ್ತೆ ಬಾಯಲ್ಲಿ ನೀರೂರಿಸಿ ಬಿಡುತ್ತದೆ. ಆಹಾರ ಬೇಯಿಸುವ ಸಂದರ್ಭದಲ್ಲಿ ಬಾಳೆ ಎಲೆ ಮತ್ತು ಬಿದಿರಿನ ರುಚಿಗಳೂ ಅದಕ್ಕೆ ಸೇರಿಕೊಂಡು ಮತ್ತೊಂದು ಭಿನ್ನ ರುಚಿಯನ್ನು ಸೇವಿಸುವವನಿಗೆ ನೀಡುತ್ತದೆ. ಈ ರುಚಿಯಾದ ತಯಾರಾದ ಆಹಾರವನ್ನು ಮೆಚ್ಚದವರೇ ಇಲ್ಲ.
ಪ್ರವಾಸಿ ತಾಣಗಳಲ್ಲಿ ಹೊಟೇಲ್ ಇರಿಸಿ ಜನರಿಗೆ ವಿಭಿನ್ನವಾಗಿ ಏನನ್ನಾದರೂ ನೀಡಬೇಕಲ್ಲ ಎಂಬವರಿಗೂ ಬಿದಿರಿನಿಂದ ಆಹಾರ ತಯಾರಿಸಿ ಕೊಡುವ ಕಲೆ ತಿಳಿದರೆ ಗಲ್ಲಾ ಪೆಟ್ಟಿಗೆ ತುಂಬುವುದರಲ್ಲಂತೂ ಯಾವುದೇ ಸಂದೇಹವಿಲ್ಲ.
ಬಿದಿರಮ್ಮ ತಾಯೆ ಕೇಳೆ…. ನೀನಾರಿಗಲ್ಲದವಳೇ…. ಎಂಬ ಹಾಡು ನೆನಪಾದಾಗೆಲ್ಲಾ ,ಹೌದಲ್ಲಾ ಬಿದಿರನ್ನು ಎಷ್ಟೆಲ್ಲಾ ವಿಧಗಳಲ್ಲಿ ಬಳಕೆ ಮಾಡಬಹುದು ಎಂಬ ವಿಚಾರ ಅರಿವಾಗುತ್ತದೆ. ಜೊತೆಗೆ ಬಿದಿರನ್ನು ಇಷ್ಟೆಲ್ಲಾ ವಿಷಯಗಳಿಗೂ ಬಳಕೆ ಮಾಡಬಹುದೇ? ಎಂಬೊಂದು ಸಣ್ಣ ಅಚ್ಚರಿಯೂ ನಮಗೆ ಹುಟ್ಟುತ್ತದೆ. ಬಿದಿರು ಕೃಷ್ಣನಿಗೆ ಕೊಳಲಾಗಿ ಹಿತ ನೀಡಿದರೆ ಮಾನವರಿಗೆ ಬದುಕಿನ ಆರಂಭದಿಂದ ಅಂತ್ಯದವರೆಗೂ ಒಂದಿಲ್ಲೊಂದು ರೀತಿಯಲ್ಲಿ ಉಪಯೋಗಕ್ಕೆ ಬರುತ್ತದೆ ಎಂದರದು ಅತಿಶಯವಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.