ಪ್ರಧಾನಿ ನರೇಂದ್ರ ಮೋದಿ ಸರ್ಕಾರ ತೆರಿಗೆ ವ್ಯವಸ್ಥೆಯಲ್ಲಿ ಪಾರದರ್ಶಕತೆಯನ್ನು ತರುವ ನಿಟ್ಟಿನಲ್ಲಿ ಅನೇಕ ಕ್ರಮಗಳನ್ನು ಕೈಗೊಂಡಿದೆ. ಇದಕ್ಕೆ ಹೊಸ ಸೇರ್ಪಡೆ ‘ಪಾರದರ್ಶಕ ತೆರಿಗೆ, ಪ್ರಾಮಾಣಿಕ ತೆರಿಗೆದಾರರಿಗೆ ಗೌರವ’ ಎಂಬ ಹೊಸ ವೇದಿಕೆಯನ್ನು ಮೋದಿಯವರು ಅನಾವರಣಗೊಳಿಸಿರುವುದು. ಇದು ಕೇವಲ ಪಾರದರ್ಶಕ ವ್ಯವಸ್ಥೆಯನ್ನು ಪರಿಚಯಿಸುವುದು ಮಾತ್ರವಲ್ಲ, ತೆರಿಗೆದಾರರಿಗೆ ಸುಧಾರಣೆಗಳನ್ನು ಅರ್ಥಮಾಡಿಕೊಳ್ಳಲು ಕೂಡ ಸಹಾಯ ಮಾಡುತ್ತದೆ. ಪ್ರಾಮಾಣಿಕ ತೆರಿಗೆದಾರರಿಗೆ ಉತ್ತೇಜನವನ್ನು ನೀಡುವುದು ಹೊಸ ವೇದಿಕೆಯ ಮುಖ್ಯ ಉದ್ದೇಶವಾಗಿದೆ.
ಮುಖರಹಿತ ಮೌಲ್ಯಮಾಪನ, ಮುಖರಹಿತ ಮೇಲ್ಮನವಿ, ತೆರಿಗೆದಾರರ ಚಾರ್ಟರ್ ಅನ್ನು ಈ ವೇದಿಕೆ ಒಳಗೊಂಡಿದೆ. ವಿಶ್ವಾಸ, ಪಾರದರ್ಶಕ ಮತ್ತು ತೆರಿಗೆಯಲ್ಲಿ ಹೊಸ ಯುಗವನ್ನು ಇದು ಆರಂಭ ಮಾಡಿದೆ ಎಂದರೆ ತಪ್ಪಾಗಲಾರದು. ತೆರಿಗೆದಾರರು ಮತ್ತು ತೆರಿಗೆ ಅಧಿಕಾರಿಗಳ ನಡುವಿನ ಭೌತಿಕ ಮುಖಾಮುಖಿಯನ್ನು ಈ ಹೊಸ ವ್ಯವಸ್ಥೆ ತಪ್ಪಿಸಿದೆ. ಮನವಿಗಳನ್ನು ನಿರ್ಣಯ ಮಾಡುವ ಅಧಿಕಾರಿಯ ಗುರುತು ಗುಪ್ತವಾಗಿರುತ್ತದೆ. ಅಧಿಕಾರಿಯನ್ನು ಅಥವಾ ಕಚೇರಿಯನ್ನು ಭೇಟಿ ಮಾಡುವ ಅಗತ್ಯ ಇರುವುದಿಲ್ಲ.
ಈ ವೇದಿಕೆಯು ಆನ್ಲೈನ್ ಮೌಲ್ಯಮಾಪನ, ಆನ್ಲೈನ್ ಮನವಿ ಮತ್ತು ತೆರಿಗೆದಾರನ ಚಾರ್ಟರ್ನಂತಹ ದೊಡ್ಡ ಸುಧಾರಣೆಗಳನ್ನು ಹೊಂದಿದೆ . ಮೌಲ್ಯಮಾಪನ ಮತ್ತು ತೆರಿಗೆದಾರರ ಚಾರ್ಟರ್ ಇಂದಿನಿಂದಲೇ ಜಾರಿಗೆ ಬಂದಿದೆ. ಆನ್ಲೈನ್ ಮೇಲ್ಮನವಿ ಸೇವೆ ಸೆಪ್ಟೆಂಬರ್ 25ರಿಂದ ಲಭ್ಯವಿರುತ್ತದೆ
ಮುಖರಹಿತ ಮೌಲ್ಯಮಾಪನ ಅಂದರೆ ತೆರಿಗೆದಾರರು ಮತ್ತು ತೆರಿಗೆ ಅಧಿಕಾರಿಗಳ ನಡುವಿನ ಭೌತಿಕ ಮುಖಾಮುಖಿಯನ್ನು ತಪ್ಪಿಸುವುದು. ಮಹತ್ವದ ದಕ್ಷತೆ, ಪಾರದರ್ಶಕತೆ ಮತ್ತು ಹೊಣೆಗಾರಿಕೆಯ ಅಳವಡಿಸಿಕೊಳ್ಳುವಿಕೆಯು ತೆರಿಗೆ ವ್ಯವಸ್ಥೆಯಲ್ಲಿ ಮಹತ್ವದ ಸುಧಾರಣೆಯನ್ನು ತರಬಲ್ಲದು. ಮುಖರಹಿತ ಮನವಿಯ ಸೌಲಭ್ಯವು ಸೆಪ್ಟೆಂಬರ್ 25 ರಿಂದ ಅಂದರೆ ದೀನ್ ದಯಾಳ್ ಉಪಾಧ್ಯಾಯ ಅವರ ಜನ್ಮದಿನದಿಂದ ದೇಶಾದ್ಯಂತ ನಾಗರಿಕರಿಗೆ ಲಭ್ಯವಾಗಲಿದೆ. ಇದು ತೆರಿಗೆದಾರನಿಗೆ ನ್ಯಾಯ ಮತ್ತು ನಿರ್ಭಯತೆಯ ವಿಶ್ವಾಸವನ್ನು ನೀಡುತ್ತದೆ ಎಂದು ಮೋದಿ ಹೇಳಿದ್ದಾರೆ.
ದೇಶದ ಪ್ರಾಮಾಣಿಕ ತೆರಿಗೆ ಪಾವತಿದಾರನು ರಾಷ್ಟ್ರ ನಿರ್ಮಾಣದಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತಾನೆ. ದೇಶದ ಪ್ರಾಮಾಣಿಕ ತೆರಿಗೆದಾರರ ಜೀವನವು ಸುಲಲಿತವಾದಾಗ, ಅವರೂ ಮುನ್ನಡೆಯುತ್ತಾರೆ ಮತ್ತು ದೇಶವೂ ಅಭಿವೃದ್ಧಿಗೊಳ್ಳುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಆರಂಭಿಸಿರುವ ಹೊಸ ವ್ಯವಸ್ಥೆಗಳು ನಿಜಕ್ಕೂ ಗೇಮ್ ಚೇಂಜರ್ ಆಗುವ ಸಾಧ್ಯತೆ ಇದೆ.
ಹೊಸ ವ್ಯವಸ್ಥೆಗಳು, ಹೊಸ ಸೌಲಭ್ಯಗಳು, ‘ಕನಿಷ್ಠ ಸರ್ಕಾರ- ಗರಿಷ್ಠ ಆಡಳಿತ’ಕ್ಕೆ ನಮ್ಮ ಬದ್ಧತೆಯನ್ನು ಬಲಪಡಿಸುತ್ತವೆ. ಇದು ದೇಶವಾಸಿಗಳ ಜೀವನದಲ್ಲಿ ಸರ್ಕಾರದ ಹಸ್ತಕ್ಷೇಪವನ್ನು ಕಡಿಮೆ ಮಾಡುವ ದಿಕ್ಕಿನಲ್ಲಿ ಒಂದು ದೊಡ್ಡ ಹೆಜ್ಜೆಯಾಗಿದೆ ಎನ್ನುವ ಮೋದಿಯವರ ಮಾತು ಅಕ್ಷರಶಃ ನಿಜವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಇಂದು ನಿಯಮ ಮತ್ತು ಕಾನೂನನ್ನು, ಪ್ರಕ್ರಿಯೆ ಮತ್ತು ಅಧಿಕಾರ ಕೇಂದ್ರಿತ ವಿಧಾನದಿಂದ ಹೊರತರಲಿದೆ. ಅದನ್ನು ಜನ ಕೇಂದ್ರಿತ ಮತ್ತು ಸಾರ್ವಜನಿಕ ಸ್ನೇಹಿಯನ್ನಾಗಿ ಮಾಡಲು ಒತ್ತು ನೀಡಲಾಗುತ್ತಿದೆ. ಇದು ಹೊಸ ಭಾರತದ ಹೊಸ ಆಡಳಿತ ಮಾದರಿಯ ಅನ್ವಯವಾಗಿದೆ ಮತ್ತು ಇದರಿಂದ ದೇಶವು ಸಂತೋಷದ ಫಲಿತಾಂಶಗಳನ್ನು ಪಡೆಯುತ್ತಿದೆ ಎನ್ನುವ ಮಾತು ಕೂಡ ಸತ್ಯವಾದುದ್ದೇ ಆಗಿದೆ.
ಈಗಾಗಲೇ ಮೋದಿ ಸರ್ಕಾರ ತೆರಿಗೆ ವಂಚನೆಯನ್ನು ಕಡಿತ ಮಾಡಲು ಮತ್ತು ತೆರಿಗೆ ವ್ಯಾಪ್ತಿಯನ್ನು ಹೆಚ್ಚಿಸಲು ಹಲವಾರು ಕ್ರಮಗಳನ್ನು ಕೈಗೊಂಡಿದೆ. ಮಾರ್ಚ್ 17, 2020 ರಂದು ವಿವಾದ್ ಸೆ ವಿಶ್ವಾಸ್ ಕಾಯ್ದೆ 2020 ಜಾರಿಗೆ ತರಲಾಯಿತು, ಇದು ರೆಸಲ್ಯೂಶನ್ ಪ್ರಕ್ರಿಯೆಯನ್ನು ಸ್ಥಾಪಿಸಿದ್ದು, ಇದರ ಮೂಲಕ ತೆರಿಗೆ ವಿವಾದಗಳನ್ನು ತ್ವರಿತವಾಗಿ ವಿಲೇವಾರಿ ಮಾಡಬಹುದು. ತೆರಿಗೆದಾರನನ್ನು ವಿವಾದದಿಂದ ಮುಕ್ತಗೊಳಿಸುವುದು ಇದರ ಗುರಿ. ಹೆಚ್ಚಿನ ಪ್ರಕರಣಗಳನ್ನು ಕೋರ್ಟ್ ಹೊರಗೆ ಇತ್ಯರ್ಥಪಡಿಸಲು ಇದು ಸಹಕಾರಿಯಾಗಿದೆ.
ವಿದೇಶದಲ್ಲಿನ ಕಪ್ಪುಹಣವನ್ನು ನಿರ್ಮೂಲನೆಗೊಳಿಸಲು ಕಪ್ಪು ಹಣ ಕಾಯ್ದೆ (2015) ಅನ್ನು ಮೋದಿ ಸರ್ಕಾರ ಜಾರಿಗೊಳಿಸಿದೆ. ಬೆನಾಮಿ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಮತ್ತು ಬೆನಾಮಿದಾರರ ವಿರುದ್ಧ ಕಾನೂನು ಕ್ರಮ ಜರುಗಿಸಲು ಬೆನಾಮಿ ಕಾನೂನು (2016) ತಂದಿದೆ. ಟಿಡಿಎಸ್/ಟಿಸಿಎಸ್ ವ್ಯಾಪ್ತಿಯ ವಿಸ್ತರಣೆ ಮಾಡಿದೆ. ಡಿಜಿಟಲ್ ವಹಿವಾಟಿಗೆ ಉತ್ತೇಜನ ಮಾಡಿದೆ. ಹಣಕಾಸು ಕಾಯ್ದೆ 2020 ರ ಅಡಿಯಲ್ಲಿ 2% ತೆರಿಗೆ ಸಮೀಕರಣ ವಿಸ್ತರಿಸಲಾಗಿದೆ. ತೆರಿಗೆದಾರರಿಗೆ ವಿದ್ಯುನ್ಮಾನವಾಗಿ ಮಾಹಿತಿಯನ್ನು ಒದಗಿಸಲು ಫಾರ್ಮ್ 26 ಎಎಸ್ ಅನ್ನು ತಿದ್ದುಪಡಿ ಮಾಡಲಾಗಿದೆ. ದೇಶಿಯ ಉತ್ಪಾದನೆಯನ್ನು ಉತ್ತೇಜಿಸಲು ದೇಶಿಯ ಕಂಪನಿಗಳಿಗೆ ಹಣಕಾಸು ವರ್ಷ 2019-20ರಲ್ಲಿ ಕಡಿಮೆ ಕಾರ್ಪೊರೇಟ್ ಟ್ಯಾಕ್ಸ್ ದರವನ್ನು ಪರಿಚಯಿಸಲಾಗಿದೆ.
ತೆರಿಗೆ ಕಟ್ಟಲು ಸಮರ್ಥ ಆಗಿರುವವರು, ಆದರೆ ತೆರಿಗೆ ವ್ಯಾಪ್ತಿಯಲ್ಲಿ ಇಲ್ಲದವರು ಮುಂದೆ ಬಂದು ತೆರಿಗೆ ಕಟ್ಟಿ ಎಂದು ಮೋದಿಯವರು ಮನವಿಯನ್ನು ಮಾಡಿಕೊಂಡಿದ್ದಾರೆ. ತನ್ನ ಮನವಿಯನ್ನು ಅರ್ಹರು ಕೇಳಿಸಿಕೊಳ್ಳುತ್ತಾರೆ ಎಂಬ ಭರವಸೆಯೂ ಪ್ರಧಾನಿಗೆ ಇದೆ. ಇದರಿಂದ ದೇಶ ಇನ್ನಷ್ಟು ಪ್ರಗತಿ ಪಥದತ್ತ ಮುನ್ನಡೆಯಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.