‘ಧರ್ಮೋ ರಕ್ಷತಿ ರಕ್ಷಿತಃ’, ಯಾರು ಧರ್ಮವನ್ನು ರಕ್ಷಣೆ ಮಾಡುತ್ತಾರೋ, ಅವರ ರಕ್ಷಣೆಯನ್ನು ಧರ್ಮ ಮಾಡುತ್ತದೆ ಎಂಬ ಉಕ್ತಿಯಂತೆ, ಹಿಂದೂ ಸಮಾಜದ, ರಾಷ್ಟ್ರದ ಸೇವೆಯ ಕಲ್ಪನೆಯನ್ನಿಟ್ಟುಕೊಂಡು ಆರಂಭವಾದ ಸಂಘಟನೆಯೇ ವಿಶ್ವ ಹಿಂದೂ ಪರಿಷತ್. 1964 ರ ಕೃಷ್ಣ ಜನ್ಮಾಷ್ಟಮಿಯಂದು ಈ ಸಂಘಟನೆಯನ್ನು ಭಾರತದಲ್ಲಿ ಆರಂಭ ಮಾಡಲಾಗಿದ್ದು, ಅಂದಿನಿಂದ ತೊಡಗಿದಂತೆ ದೇಶ ಸೇವೆಯ, ರಾಷ್ಟ್ರ ಕಟ್ಟುವ ಕೈಂಕರ್ಯದಲ್ಲಿ ವಿಎಚ್ಪಿ ತೊಡಗಿಸಿಕೊಂಡು ಬಂದಿದೆ. ಸಮಾಜ ಸೇವೆಯ ಮೂಲಕವೇ ಒಂದು ಮಾದರಿ ಸಂಘಟನೆಯಾಗಿ ವಿಎಚ್ಪಿ ಇಂದಿಗೂ ಗುರುತಿಸಿಕೊಂಡೇ ಬಂದಿದೆ.
ವಿಶ್ವ ಹಿಂದೂ ಪರಿಷತ್ನ ಗುರುತು ಬೃಹತ್ ಆಲದ ಮರ. ಅದರಂತೆ ‘ಧರ್ಮೋ ರಕ್ಷತಿ ರಕ್ಷಿತಃ’ ಎಂಬ ಧ್ಯೇಯ ವಾಕ್ಯವನ್ನಿಟ್ಟುಕೊಂಡು ವಿಎಚ್ಪಿ ಹಿಂದೂ ಧರ್ಮವನ್ನು ಒಗ್ಗೂಡಿಸುವ, ರಕ್ಷಿಸುವ ಕೆಲಸವನ್ನು ಅಂದಿನಿಂದ ಇಂದಿನವರೆಗೆ ಮಾಡಿಕೊಂಡು ಬಂದಿದೆ. ಆರೆಸ್ಸೆಸ್ ನಾಯಕ ಎಂ. ಎಸ್. ಗೋಳ್ವಾಲ್ಕರ್, ಎಸ್.ಎಸ್. ಆಪ್ಟೆ ಮತ್ತು ಸ್ವಾಮಿ ಚಿನ್ಮಯಾನಂದರು ಈ ಸಂಘಟನೆಯ ಸ್ಥಾಪಕರಾಗಿದ್ದು, ಹಿಂದೂ ಧರ್ಮದ ರಕ್ಷಣೆಯ ದೃಷ್ಟಿಯಿಂದ ಒಂದು ಸುಭದ್ರ ತಳಪಾಯವನ್ನು ಹಾಕಿಕೊಟ್ಟಿದ್ದಾರೆ ಎಂದೇ ಹೇಳಬಹುದಾಗಿದೆ. ವಿಶ್ವ ಹಿಂದೂ ಪರಿಷತ್ ಸಂಘ ಪರಿವಾರದ ಸದಸ್ಯ ಸಂಘಟನೆಯೂ ಹೌದು.
ಸ್ಥಾಪನೆಯಾದ ಆ ದಿನದಿಂದ ಇಂದಿನವರೆಗೂ ರಾಷ್ಟ್ರಕ್ಕೆ, ಹಿಂದೂ ಧರ್ಮಕ್ಕೆ ಸಂಬಂಧಪಟ್ಟಂತೆ ಯಾವುದೇ ರೀತಿಯ ಸಮಸ್ಯೆ ಎದುರಾದರೂ, ಹಿಂದೆ ಮುಂದೆ ನೋಡದೆ ಆ ಸಮಸ್ಯೆ ಎದುರಿಸಲು, ಬಗೆಹರಿಸಲು ಮುಂದುವರೆಯುವ ದೇಶಪ್ರೇಮಿ ಸಂಘಟನೆಯಾಗಿಯೂ ವಿಎಚ್ಪಿ ಗುರುತಿಸಿಕೊಂಡಿದೆ. ದೇವಾಲಯಗಳ ನಿರ್ಮಾಣ, ಗೋ ಹತ್ಯೆ, ಕಳ್ಳಸಾಗಣೆಗಳ ವಿರುದ್ಧ ಸಿಡಿದೇಳುವುದು, ಹಿಂದೂ ಸಮುದಾಯಗಳಿಗೆ ಬಂದೊದಗುವ ಆಪತ್ತಿನ ವಿರುದ್ಧ ಹೋರಾಟ, ದೇಶ ಸೇವೆ ಮೊದಲಾದ ಎಲ್ಲಾ ವಿಚಾರಗಳಲ್ಲಿನ ಹೋರಾಟದಲ್ಲಿಯೂ ವಿಎಚ್ಪಿ ಒಂದು ಹೆಜ್ಜೆ ಮುಂದಿರುತ್ತದೆ. ಪ್ರಾಕೃತಿಕ ಅಥವಾ ಮಾನವನಿಂದಾದ ಯಾವುದೇ ವಿಪತ್ತಿನ ಸಂದರ್ಭದಲ್ಲಿಯೂ ತಮ್ಮ ಪ್ರಾಣವನ್ನೂ ಲೆಕ್ಕಿಸದೆ ಕಾರ್ಯಗತರಾಗುವ ಧೈರ್ಯಶಾಲಿಗಳು ಈ ಹಿಂದೂ ಸಂಘಟನೆಯ ಸ್ವಯಂಸೇವಕರು ಎಂಬುದನ್ನು ಅಲ್ಲಗಳೆಯುವಂತಿಲ್ಲ.
ರಾಮ ಮಂದಿರ ನಿರ್ಮಾಣದ ಹೋರಾಟದ ಹಾದಿಯನ್ನು ಗಮನಿಸಿದಾಗಲೂ ವಿಎಚ್ಪಿ ಕೊಡುಗೆಯನ್ನು ನಾವು ಗಮನಿಸಬಹುದು. ವಿಎಚ್ಪಿಯ ನಾಯಕರಾಗಿದ್ದ ದಿವಂಗತ ಅಶೋಕ್ ಸಿಂಘಾಲ್ ಅವರು ಸಂಘಟನೆಯ ಅನೇಕ ಯುವ ಮನಸ್ಸುಗಳಿಗೆ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಇಂದಿಗೂ ಸ್ಪೂರ್ತಿ ಹಾಗೂ ಆದರ್ಶಪ್ರಾಯರು ಎನ್ನಬಹುದು. ಸಂಘಟನೆ ಸ್ಥಾಪನೆಯಾದ ದಿನದಿಂದಲೂ ‘ನನಗಾಗಿ ಅಲ್ಲ, ನನ್ನ ಧರ್ಮಕ್ಕಾಗಿ, ನನ್ನ ದೇಶಕ್ಕಾಗಿ ಮುಡಿಪು ಈ ನನ್ನ ಬದುಕು’ ಎಂಬಂತೆ ಬದುಕುವ ಸ್ವಯಂಸೇವಕರ ಉತ್ತಮ ಮಾದರಿ ಕೆಲಸಗಳ ಬಗ್ಗೆ ಬರೆದಷ್ಟೂ ಮುಗಿಯದು. ಹೇಳಿದಷ್ಟು ತೀರದ ಕಥೆಗಳಿವೆ. ಹಿರಿಯರು ಹಾಕಿಕೊಟ್ಟ ನಡೆಯಲ್ಲಿ ಸೇವಾ ಮನೋಭಾವದಿಂದ ಮುಂದುವರಿಯುತ್ತಿರುವ ಹೂ ಮನದ ಯುವಕರಿಗೆ ಬೆಳಕು ತೋರುತ್ತಿದೆ ವಿಎಚ್ಪಿ ಎಂದರೂ ಅತಿಶಯವಾಗಲಾರದು.
ಇತ್ತೀಚಿನ ಕೊರೋನಾ ಸಂದರ್ಭದಲ್ಲಿ ಇಡೀ ದೇಶವೇ ಲಾಕ್ಡೌನ್ ಆಗಿದ್ದ ಸಂದರ್ಭದಲ್ಲಿ ಅದೆಷ್ಟೋ ಬಡವರ ಹಸಿವಿಂಗಿಸುವ, ರೋಗಿಗಳಿಗೆ ಔಷಧ ತಲುಪಿಸುವ, ವಲಸಿಗರಿಗೆ, ನಿರಾಶ್ರಿತರಿಗೆ ಆಶ್ರಯ ಒದಗಿಸುವ ಕೆಲಸವನ್ನು ವಿಎಚ್ಪಿ ದೇಶದಾದ್ಯಂತ ಮಾಡಿದೆ. ತಮ್ಮ ಜೀವ ಪಣಕ್ಕಿಟ್ಟು ಯಾವುದೇ ಸ್ವಾರ್ಥವಿಲ್ಲದೆ ದುಡಿದ ಈ ಯುವ ಮನಗಳನ್ನು ನಾವು ಶ್ಲಾಘಿಸಲೇ ಬೇಕು.
ತರುಣ ಶಕ್ತಿಯನ್ನು ದೇಶಭಕ್ತಿಯ ಪ್ರತೀಕಗಳನ್ನಾಗಿ, ರಾಷ್ಟ್ರದ ಶಕ್ತಿಯನ್ನಾಗಿ ಬೆಳೆಸುವಲ್ಲಿ, ಎಲ್ಲರಲ್ಲಿಯೂ ಸಮಾನತೆಯ ಭಾವವನ್ನು ಬಿತ್ತುವಲ್ಲಿ, ಸಹೋದರತೆಯ ಬಾಂಧವ್ಯ ಬೆಸೆಯುವಲ್ಲಿಯೂ ವಿಎಚ್ಪಿಯ ಹಿರಿಯರು ಹಾಕಿಕೊಟ್ಟ ಅಡಿಪಾಯ ಅದರ ಚಿಹ್ನೆ ಆಲದ ಮರದಂತೆಯೇ ಇಂದು ಬೃಹದಾಕಾರದಲ್ಲಿ ಬೆಳೆದಿದೆ ಎಂದರೆ ತಪ್ಪಾಗದು. ಧರ್ಮ ರಕ್ಷಣೆಯ ಹಿನ್ನೆಲೆಯಲ್ಲಿ ಹೇಳುವುದಾದರೆ ಭಾರತದ ಒಗ್ಗಟ್ಟಿನ ಹಿಂದೆ, ಧಾರ್ಮಿಕ ಶ್ರದ್ಧೆಯ ಹಿಂದೆ, ಎಲ್ಲರೊಳಗೊಂದಾಗಿ, ಎಲ್ಲರನ್ನೂ ಒಳಗೊಳ್ಳುವಂತೆ ಮಾಡುವ ನಿಟ್ಟಿನಲ್ಲಿಯೂ ವಿಎಚ್ಪಿ ಮಾಡುತ್ತಿರುವ ಕೆಲಸಗಳನ್ನು ಮಾದರಿ ಎನ್ನಬಹುದು.
ವಿಎಚ್ಪಿಯ ರಾಷ್ಟ್ರೀಯತೆಯ, ಧರ್ಮ ರಕ್ಷಣೆಯ ಆಶಯಗಳನ್ನು ಒಳಗೊಂಡ ಪ್ರತಿಯೊಬ್ಬನಲ್ಲಿಯೂ ರಾಷ್ಟ್ರೀಯತೆ ಉದಯಿಸುವುದು ಸಾಧ್ಯ. ಹಿಂದೆ ಮಹಾಭಾರತ ಯುದ್ಧದಲ್ಲಿ ಕೃಷ್ಣ ಅರ್ಜುನನಿಗೆ ಬೋಧಿಸಿದ ಗೀತೆಯ ಸಾರದಂತೆ, ‘ಎಲ್ಲಿ ಅಧರ್ಮ ಬೆಳೆಯಲಾರಂಭಿಸುವುದೋ, ಆ ಸಂದರ್ಭದಲ್ಲಿ ಧರ್ಮದ ಸ್ಥಾಪನೆಗೆ ನಾನು ಮತ್ತೆ ಜನ್ಮ ತಾಳುತ್ತೇನೆ ಎಂಬುದಕ್ಕೆ ಪೂರಕವಾಗಿ ಹೇಳುವುದಾದರೆ, ಮತಾಂಧ ಶಕ್ತಿಗಳು, ದೇಶದ್ರೋಹಿಗಳ ಕುಬುದ್ಧಿಗೆ ಎದೆ ಕೊಟ್ಟು ಹೋರಾಡಿ ‘ಹಿಂದೂಸ್ಥಾನ’ದಲ್ಲಿ ಉರಿಯುವ ಧರ್ಮದ ಜ್ಯೋತಿ ಆರದಂತೆ ಕಾಪಾಡುವ ಕೆಲಸವನ್ನು ವಿಎಚ್ಪಿ ಸೇರಿದಂತೆ ದೇಶದ ಇನ್ನಿತರ ದೇಶಭಕ್ತರ ಸಂಘಟನೆಗಳು ಮಾಡುತ್ತಿದೆ ಎಂದರೆ ಸುಳ್ಳಾಗಲಾರದು.
ವಿಎಚ್ಪಿಯ ಸೇವಾ ಮನೋಭಾವನೆ, ರಾಷ್ಟ್ರೀಯತೆಯ ಕಲ್ಪನೆಗಳೇ ಇಂದಿನ ಯುವ ಮನಗಳು ಸಂಘಟನೆಯತ್ತ ಆಕರ್ಷಿತರಾಗಲು, ದೇಶ ಸೇವೆ, ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಪೂರಕವಾಗಿ ಕೆಲಸ ಮಾಡುತ್ತಿವೆ ಎನ್ನುವುದರಲ್ಲಿಯೂ ಯಾವುದೇ ಸಂದೇಹವಿಲ್ಲ. ಅಂತಹ ಸೇವಾ ಮನೋಭಾವದೊಂದಿಗೆ ರಾಷ್ಟ್ರ, ಧರ್ಮ ರಕ್ಷಣೆಯ ಕೈಂಕರ್ಯಕ್ಕೆ ಇಂದಿಗೂ ಬದ್ಧವಾಗಿದೆ ವಿಎಚ್ಪಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.