ಕೃಷಿಯಲ್ಲಿ ಹೊಸ ಹೊಸ ವಿಧಾನಗಳನ್ನು ಅಳವಡಿಸಿಕೊಂಡರೆ ಯಶಸ್ಸು ಖಂಡಿತಾ ಸಿಗುತ್ತದೆ ಎಂಬುದಕ್ಕೆ ಮಧ್ಯಪ್ರದೇಶದ ಜಬುವಾ ಜಿಲ್ಲೆಯ ರೈತರೊಬ್ಬರು ಸಾಕ್ಷಿಯಾಗಿದ್ದಾರೆ. ಹಲವು ವರ್ಷಗಳವರೆಗೆ ಅದೆಷ್ಟು ಮಳೆಗಾಲ ಉರುಳಿದರೂ ಜಬುವಾ ಜಿಲ್ಲೆಯ ರೈತರು ಮಾತ್ರ ತಲೆಗೆ ಕೈ ಹೊತ್ತುಕೊಂಡೇ ಕುಳಿತಿರಬೇಕಾಗಿತ್ತು. ಸಮರ್ಪಕವಾದ ಮಳೆ ಇಲ್ಲದೆ ನೆಲ ಒಣಗಿ ಹೋಗುತ್ತಿತ್ತು. ಕಷ್ಟಪಟ್ಟು ಬಿತ್ತಿದ ಬೀಜ ಮೊಳಕೆಯೊಡೆದು ಬೆಳೆಯುವಷ್ಟರಲ್ಲಿ ಕಮರಿ ಹೋಗುತ್ತಿತ್ತು. ಇದೇ ಕಾರಣದಿಂದ ಹಲವಾರು ಜನರು ತಮ್ಮ ಊರುಗಳನ್ನು ತೊರೆದು ದೂರದ ಊರುಗಳಿಗೆ ದಿನಗೂಲಿ ಮಾಡಲು ವಲಸೆ ಹೋಗಬೇಕಾಯಿತು.
ಮಳೆ ಆಧಾರಿತ ಕೃಷಿ, ಸವೆದ ಮಣ್ಣು, ಅನಿರೀಕ್ಷಿತ ಹವಾಮಾನ, ನೀರಿನ ಕೊರತೆ ಇಲ್ಲಿನ ಜನರನ್ನು ಮತ್ತು ಕೃಷಿಕರನ್ನು ಇನ್ನಿಲ್ಲದಂತೆ ಬಾಧಿಸುತ್ತಿತ್ತು. ಇಂತಹ ಕಠಿಣ ಸವಾಲುಗಳನ್ನು ಹಿಮ್ಮೆಟ್ಟಿಸಿ ಯಶಸ್ಸು ಕಾಣೋದು ಅಲ್ಲಿನ ರೈತರಿಗೆ ದೊಡ್ಡ ಸವಾಲೇ ಆಗಿತ್ತು.
2009ರಲ್ಲಿ ಈ ಜಿಲ್ಲೆಯಲ್ಲಿ ರಾಷ್ಟ್ರೀಯ ಕೃಷಿ ನಾವಿನ್ಯತೆ ಉಪಯೋಜನೆ ಆರಂಭಗೊಂಡಿತ್ತು. ರೈತರ ಆದಾಯವನ್ನು ವೃದ್ಧಿಸುವುದು ಯೋಜನೆಯ ಆಶಯವಾಗಿತ್ತು. ಯೋಜನೆಯು ಹಲವಾರು ರೈತರ ಜೀವನದಲ್ಲಿ ಹೊಸ ಹುರುಪನ್ನು ತುಂಬಿತು. ಕೃಷಿ ವಿಜ್ಞಾನಿಗಳು ಜನರಿಗೆ ಕೃಷಿ ಮಾಡುವ ಹೊಸ ವಿಧಾನಗಳನ್ನು ಕಳುಹಿಸಿಕೊಟ್ಟರು. ಕೃಷಿ ಕೌಶಲ್ಯಗಳನ್ನು ಕಲಿಸಿಕೊಟ್ಟರು. 2012ರಲ್ಲಿ ಇಲ್ಲಿನ ರೈತರು ಹಾಗಲಕಾಯಿ ಮತ್ತು ಹಿರೇಕಾಯಿ ಬೆಳೆಯಲು ಆರಂಭಿಸಿದರು. ಮೊದಮೊದಲು ಆದಾಯವೇನೋ ಬಂದಿತು. ಆದರೆ ನಂತರದ ವರ್ಷಗಳಲ್ಲಿ ವಿಳಂಬ ಮಳೆಯ ಕಾರಣದಿಂದಾಗಿ, ನೀರಿನ ಕೊರತೆಯ ಕಾರಣದಿಂದಾಗಿ ಈ ಬೆಳೆಗಳು ವೈಫಲ್ಯ ಕಾಣಲಾರಂಭಿಸಿದವು. ಈ ಸಂದರ್ಭದಲ್ಲಿ ಕೃಷಿ ವಿಜ್ಞಾನಿಗಳ ಸಲಹೆಯಂತೆ ಮಣ್ಣಿನ ಮಡಕೆಗಳನ್ನು ಬಳಸಿ ಹನಿ ನೀರಾವರಿ ಪದ್ಧತಿಯನ್ನು ಅನುಸರಿಸಿದರು. ಆದರೆ ಮಣ್ಣಿನ ಮಡಕೆಗಳಿಗೆ ಹಣ ವಿನಿಯೋಗಿಸುವುದು ರೈತರಿಗೆ ದೊಡ್ಡ ಸವಾಲಾಗಿತ್ತು.
ಇಂತಹ ಸಂದರ್ಭದಲ್ಲಿ ರಮೇಶ್ ಎನ್ನುವ ರೈತ ನವೀನ ಆಲೋಚನೆಯನ್ನು ಮಾಡಿದರು. ಮಣ್ಣಿನ ಮಡಕೆ ದುಬಾರಿ ಮತ್ತು ತುಂಬಾ ಸೂಕ್ಷ್ಮ ಕೂಡ ಆಗಿದೆ. ಇದರ ಬದಲು ಅವರು ಆಸ್ಪತ್ರೆಗಳಲ್ಲಿ ಬಳಸುವ ಪ್ಲಾಸ್ಟಿಕ್ ಗ್ಲೂಕೋಸ್ ಬಾಟಲ್ ಗಳನ್ನು ಬಳಸಲು ಆರಂಭಿಸಿದರು
“ಆಸ್ಪತ್ರೆಯಲ್ಲಿ ಒಂದು ಗ್ಲೂಕೋಸ್ ಬಾಟಲಿ ಒಬ್ಬ ರೋಗಿಯ ಜೀವವನ್ನುಳಿಸಬಲ್ಲದು. ಹೀಗಿರಬೇಕಾದರೆ ನನ್ನ ಸಾಯುತ್ತಿರುವ ಬೆಳೆಗಳನ್ನು ಈ ಗ್ಲೂಕೋಸ್ ಬಾಟಲಿ ಉಳಿಸಲಾರದೇ? ಎಂಬ ಆಲೋಚನೆ ನನ್ನ ಜೀವನವನ್ನೇ ಬದಲಾಯಿಸಿತು. ಸುಮಾರು 350 ಬಾಟಲಿಗೆ ಇಪ್ಪತ್ತು ರೂಪಾಯಿ ನೀಡಿ ಖರೀದಿ ಮಾಡಿದೆ” ಎನ್ನುತ್ತಾರೆ ರೈತ ರಮೇಶ್.
ರೈತ ರಮೇಶ್ ಅವರು ಮಾಡಿದ ಚಿಂತನೆ ಕಡಿಮೆ ವೆಚ್ಚದ್ದು ಮತ್ತು ಅತ್ಯಂತ ಸರಳವಾಗಿ ಇರುವಂತಹ ನೀರಾವರಿ ವ್ಯವಸ್ಥೆಯಾಗಿದೆ. ನೀರಾವರಿ ಪದ್ಧತಿಯನ್ನು ಅಳವಡಿಸಿಕೊಳ್ಳಲಾಗದಂತಹ ಬಡ ರೈತರು ಇದನ್ನು ಸುಲಭವಾಗಿ ಅಳವಡಿಸಿಕೊಳ್ಳಬಹುದಾಗಿದೆ.
ಬಾಟಲಿಯ ಕೆಳ ಬದಿಯನ್ನು ತುಸು ಕತ್ತರಿಸಬೇಕು ಮತ್ತು ಅದನ್ನು ಗಿಡದ ಬದಿಯಲ್ಲಿ ಕಂಬ ನೆಟ್ಟು ತಲೆಕೆಳಗಾಗಿ ಬಿಡಿಸಬೇಕು. ಆಸ್ಪತ್ರೆಯಲ್ಲಿ ರೋಗಿಗೆ ಗ್ಲೂಕೋಸ್ ನೀಡುವ ಮಾದರಿಯಲ್ಲಿ ಇದರ ಮೂಲಕ ಗಿಡಕ್ಕೆ ನೀರುಣಿಸಬಹುದು. ಇದರ ಪೈಪ್ ತುದಿ ಗಿಡದ ಬುಡದಲ್ಲಿ ಇರುವಂತೆ ನೋಡಿಕೊಳ್ಳಬೇಕು. ಇದರಿಂದ ಬುಡದ ಕೆಳಗಡೆ ತೇವಾಂಶ ಸದಾ ಉಳಿಯುತ್ತದೆ.
ಗಿಡಕ್ಕೆ ನೇರವಾಗಿ ನೀರು ಹಾಕುವ ಬದಲು ಈ ರೀತಿಯಲ್ಲಿ ಹನಿಹನಿಯಾಗಿ ನೀರುಣಿಸಿದರೆ ಹೆಚ್ಚು ಸಮೃದ್ಧವಾಗಿ ಬೆಳೆಯುತ್ತದೆ. ಮಣ್ಣಿನಲ್ಲಿ ತೇವಾಂಶ ಉಳಿದುಕೊಳ್ಳುತ್ತದೆ ಮತ್ತು ನೀರು ವ್ಯರ್ಥವಾಗುವುದು ತಪ್ಪುತ್ತದೆ.
ರಮೇಶ್ ಅವರ ಇಡೀ ಕುಟುಂಬವೇ ಈ ಕಾರ್ಯದಲ್ಲಿ ತೊಡಗಿಕೊಂಡಿದೆ. ಬೆಳಗ್ಗೆ ಮನೆಮಂದಿ ಗ್ಲೂಕೋಸ್ ಬಾಟಲಿಗಳಿಗೆ ನೀರನ್ನು ತುಂಬಿಸುತ್ತಾರೆ. ಇದಕ್ಕಾಗಿ ಹ್ಯಾಂಡ್ ಪಂಪ್ ಅಥವಾ ಬಾವಿಯ ನೀರು ಬಳಸುತ್ತಾರೆ. ದಿನಕ್ಕೆ ಎರಡು ಬಾರಿ ಬಾಟಲಿಗಳಿಗೆ ನೀರನ್ನು ತುಂಬಿಸುತ್ತಾರೆ. ಈ ವಿಧಾನದಿಂದ ಇವರ ಒಂದು ಗಿಡ ದಿನಕ್ಕೆ 2 ಲೀಟರ್ ನೀರು ಪಡೆಯುತ್ತದೆ. ಈ ವಿಧಾನವನ್ನು ಅನುಸರಿಸಲು ಅವರಿಗೆ ತಗಲುವ ವೆಚ್ಚ ಕೇವಲ 500 ರೂಪಾಯಿ ಮತ್ತು ಅವರಿಗೆ ಸಿಗುವ ಮಾಸಿಕ ಆದಾಯ 25000 ರೂಪಾಯಿ.
ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರ್ ರಿಸರ್ಚ್ ಪ್ರಕಾರ ಈ ವಿಧಾನ ರಮೇಶ್ ಅವರಂತಹ ರೈತರಿಗೆ 1 ಎಕರೆ ಪ್ರದೇಶದಲ್ಲಿ ಬೆಳೆದ ತರಕಾರಿ ಬೆಳೆಗೆ ಒಂದು ಋತುವಿಗೆ 1.5 ರಿಂದ 1.7 ಲಕ್ಷದವರೆಗೆ ಆದಾಯವನ್ನು ತಂದುಕೊಡಬಲ್ಲದು.
ಮಾತ್ರವಲ್ಲ ರಮೇಶ್ ಅವರ ಯಶಸ್ಸಿನಿಂದ ಪ್ರೇರಿತರಾಗಿರುವ ಆಫ್ರಿಕನ್ ದೇಶಗಳ ಪ್ರಸಿದ್ಧ ತಂತ್ರಜ್ಞ ಡಾ.ತೋಮರ್ ಅವರು, ರೈತರಿಗೆ ಇಂತಹ ವಿಧಾನವನ್ನು ಅನುಸರಿಸುವಂತೆ ಪ್ರೇರೇಪಿಸುತ್ತಿದ್ದಾರೆ.
ರಮೇಶ್ ಅವರ ಪ್ರಯತ್ನವನ್ನು ಜಿಲ್ಲಾ ಆಡಳಿತ ಮತ್ತು ಮಧ್ಯಪ್ರದೇಶದ ಕೃಷಿ ಸಚಿವಾಲಯ ಶ್ಲಾಘಿಸಿದ್ದು, ಹತ್ತು ಸಾವಿರ ರೂಪಾಯಿಗಳ ಬಹುಮಾನವನ್ನು ನೀಡಿ ಪ್ರೋತ್ಸಾಹಿಸಿದೆ. ಮಾತ್ರವಲ್ಲ ಅವರಿಗೆ ಸಂಪೂರ್ಣ ಪ್ರಮಾಣದ ನೀರಾವರಿ ವ್ಯವಸ್ಥೆಯನ್ನು ಕಲ್ಪಿಸಿಕೊಡುವ ಭರವಸೆಯನ್ನು ನೀಡಲಾಗಿದೆ.
ತಮ್ಮ ವಿಭಿನ್ನ ಆಲೋಚನೆಯ ಫಲವಾಗಿ ಒಂದು ಕಾಲದಲ್ಲಿ ಸಾಲ ಪೀಡಿತನಾಗಿದ್ದ ರೈತ ರಮೇಶ್ ಇಂದು ವಾರ್ಷಿಕ 2 ಲಕ್ಷಕ್ಕೂ ಅಧಿಕ ರೂಪಾಯಿಗಳನ್ನು ಗಳಿಸುತ್ತಿದ್ದಾರೆ. ಈ ಮೂಲಕ ಇತರ ರೈತರಿಗೂ ಪ್ರೇರಣೆಯಾಗಿದ್ದಾರೆ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.