ಅಧಿಕಾರದ ಸ್ಥಾನದಲ್ಲಿ ಇದ್ದವರು ಮನಸ್ಸು ಮಾಡಿದರೆ ಸಮಾಜದಲ್ಲಿ ದೊಡ್ಡ ಮಟ್ಟದ ಪರಿವರ್ತನೆಯನ್ನು ತರಲು ಸಾಧ್ಯವಿದೆ ಎಂಬುದಕ್ಕೆ ಜಾರ್ಖಂಡ್ನ ಐಎಎಸ್ ಅಧಿಕಾರಿಯೊಬ್ಬರು ಸಾಕ್ಷಿಯಾಗಿದ್ದಾರೆ. ಅವರು ಎರಡು ಗ್ರಾಮಗಳನ್ನು ಸ್ವಾವಲಂಬಿಯನ್ನಾಗಿ ಮಾಡಿದ್ದಾರೆ, ಮಾತ್ರವಲ್ಲ ಅಲ್ಲಿನ ಜನರನ್ನು ಹಿಂದಿಗಿಂತ ಐದು ಪಟ್ಟು ಹೆಚ್ಚು ಆದಾಯ ಗಳಿಸುವಂತೆ ಮಾಡಿದ್ದಾರೆ.
ಜಾರ್ಖಂಡ್ನ ರಾಂಚಿ ಜಿಲ್ಲೆಯ ಆರಾ ಮತ್ತು ಕೇರಂ ಗ್ರಾಮಗಳ ಸುಮಾರು 600 ಮಂದಿ ನಿವಾಸಿಗಳು ಪ್ರತಿನಿತ್ಯ ಬೆಳ್ಳಂಬೆಳಗ್ಗೆ 4.30ಕ್ಕೆ ಏಳುತ್ತಾರೆ. ಎದ್ದು ಕೈಯಲ್ಲಿ ಪೊರಕೆ ಹಿಡಿದು ತಮ್ಮ ಸುತ್ತ-ಮುತ್ತದ ಪರಿಸರವನ್ನು ಸ್ವಚ್ಛಗೊಳಿಸುತ್ತಾರೆ. ಇಲ್ಲಿನ ಸುತ್ತಮುತ್ತ ಕಣ್ಣು ಹಾಯಿಸಿದರೆ ಒಂದು ಕಸವೂ ಕಾಣಿಸುವುದಿಲ್ಲ, ಯಾಕೆಂದರೆ ಇಲ್ಲಿನ ಮಹಿಳೆಯರು ಬಿದಿರಿನಿಂದ 60 ಕಸದ ಬುಟ್ಟಿಗಳನ್ನು ತಯಾರಿಸಿ ಅಲ್ಲಲ್ಲಿ ಇಟ್ಟಿದ್ದಾರೆ. ಸ್ವಚ್ಛತೆಯ ಕಾರ್ಯ ಮುಗಿದ ಬಳಿಕ, ಕೆಲವು ಶಿಕ್ಷಕರು ಎರಡು ಹಳ್ಳಿಗಳ ಮಕ್ಕಳಿಗೆ ಟ್ಯೂಷನ್ಗಳನ್ನು ನಡೆಸುತ್ತಾರೆ. ಶಾಲೆಗೆ ಹೊರಡುವ ಸಮಯದವರೆಗೂ ಇವರ ಟ್ಯೂಷನ್ ಮುಂದುವರೆಯುತ್ತದೆ.
ಒಂದು ಕಾಲದಲ್ಲಿ, ಆರ್ಥಿಕ ಬಡತನ, ಮಧ್ಯಪಾನದ ದುಶ್ಚಟಗಳಿಂದ ಬಳಲುತ್ತಿದ್ದ ಈ ಗ್ರಾಮದ ಜನರು ಇಂದು ಸ್ವಾವಲಂಬನೆಯ ಬದುಕನ್ನು ನಡೆಸಿ ಎಲ್ಲರಿಗೂ ಮಾದರಿಯಾಗಿದ್ದಾರೆ. 2017ರಿಂದ ಎರಡು ಗ್ರಾಮದ ಜನರು ಹಣವನ್ನು ಸಂಗ್ರಹಿಸಿ ಪದವಿ ಪಡೆದ ಇಬ್ಬರನ್ನು ತಮ್ಮ ಗ್ರಾಮದ ವಿದ್ಯಾರ್ಥಿಗಳಿಗೆ ಪಾಠ ಹೇಳಲು ನಿಯೋಜನೆ ಮಾಡಿದ್ದಾರೆ. ಅವರಿಗೆ ಮಾಸಿಕ ರೂ.4000 ವೇತನ ನೀಡುತ್ತಾರೆ.
ಒಂದು ವರ್ಷದ ಹಿಂದೆ ಗ್ರಾಮದ ಮಹಿಳೆಯರೆಲ್ಲರೂ ಸೇರಿ ಗ್ರಾಮದಲ್ಲಿ ಮಧ್ಯಪಾನಕ್ಕೆ ನಿಷೇಧವನ್ನು ಹೇರುವಂತೆ ಮಾಡಿದ್ದಾರೆ.
ಮಾತ್ರವಲ್ಲ, ಈ ಗ್ರಾಮದ ನಿವಾಸಿಗಳು ರೂ.175 ಕೋಟಿ ಮೌಲ್ಯದ 700 ಸ್ಥಳೀಯವಾಗಿ ವಿನ್ಯಾಸಗೊಳಿಸಿದ ಲೂಸ್ ಬೌಲ್ಡರ್ ರಚನೆಯ ಚೆಕ್ ಡ್ಯಾಮ್ಗಳನ್ನು ನಿರ್ಮಾಣ ಮಾಡಿದ್ದಾರೆ. ಇದಕ್ಕಾಗಿ ಎಪ್ಪತ್ತೈದು ದಿನಗಳವರೆಗೆ 180 ಗ್ರಾಮದ ಕಾರ್ಮಿಕರು ನಿರಂತರವಾಗಿ ಶ್ರಮಿಸಿದ್ದಾರೆ. ಈ ಡ್ಯಾಮ್ ನಿರ್ಮಾಣ ಮಾಡುವ ಮೂಲಕ ಮಣ್ಣಿನ ಸವೆತ ತಡೆಗಟ್ಟಿದ್ದಾರೆ, ನೀರಿನ ಸಂರಕ್ಷಣೆ ಮಾಡಿದ್ದಾರೆ. ಮನ್ರೇಗಾ ಅಡಿಯಲ್ಲಿ ಈ ಯೋಜನೆಗೆ ಹಣವನ್ನು ಒದಗಿಸಲಾಗಿದೆ.
ಕೆಲವೇ ವರ್ಷಗಳಲ್ಲಿ ಈ ಗ್ರಾಮದ ಜನರ ಆದಾಯ ಐದು ಪಟ್ಟು ಹೆಚ್ಚಾಗಿದೆ. ಕೃಷಿಯ ಜೊತೆಗೆ ಇಲ್ಲಿನ ಡೈರಿ, ಕೋಳಿ ಸಾಕಾಣಿಕೆ, ಮೇಕೆ ಸಾಕಾಣಿಕೆ ಸೇರಿದಂತೆ ಹಲವಾರು ಉದ್ದಿಮೆಗಳನ್ನು ನಡೆಸುತ್ತಿದ್ದಾರೆ. ಅನೇಕ ಮಂದಿ ತಮ್ಮದೇ ಆದ ಚಿಲ್ಲರೆ ಅಂಗಡಿಗಳನ್ನು ನಡೆಸುತ್ತಿದ್ದಾರೆ.
ನಾಲ್ಕು ವರ್ಷಗಳಿಗಿಂತ ಕಡಿಮೆ ಅವಧಿಯಲ್ಲಿ ಈ ಗ್ರಾಮಗಳಲ್ಲಿ ಕ್ರಾಂತಿಯುಂಟು ಮಾಡಿದ ಈ ಪ್ರಯತ್ನಗಳಿಗೆ ಆಧಾರವಾಗಿರುವುದು ಗ್ರಾಮ ಸಭೆಗಳ ಪುನರುಜ್ಜೀವನ. ಈ ಸಭೆಗಳಲ್ಲಿ ನಿವಾಸಿಗಳು ನಿಯಮಿತವಾಗಿ ಚರ್ಚಿಸುತ್ತಾರೆ ಮತ್ತು ಅವರಿಗೆ ಸಂಬಂಧಿಸಿದ ವಿವಿಧ ವಿಷಯಗಳ ಬಗ್ಗೆ ಸಮಾಲೋಚಿಸುತ್ತಾರೆ. ಮಹಿಳೆಯರ ಭಾಗವಹಿಸುವಿಕೆ ಮತ್ತು ಶ್ರಮದಾನಗಳಿಗೆ ಹೆಚ್ಚಿನ ಉತ್ಸಾಹವನ್ನು ತೋರಿಸುತ್ತಾರೆ.
ಇತ್ತೀಚಿನ ಮನ್ ಕಿ ಬಾತ್ ಸಂಚಿಕೆಯಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಅರಾ ಮತ್ತು ಕೇರಂನಲ್ಲಿ ಆಗುತ್ತಿರುವ ಪರಿವರ್ತನೆಯ ಬಗ್ಗೆ ಮಾತನಾಡಿದ್ದರು.
ಕಳೆದ ನಾಲ್ಕೂವರೆ ವರ್ಷಗಳಿಂದ ಜಾರ್ಖಂಡ್ನ ಮನ್ರೇಗಾ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿರುವ 1999 ಬ್ಯಾಚ್ನ ಭಾರತೀಯ ಅರಣ್ಯ ಸೇವಾ ಅಧಿಕಾರಿ ಸಿದ್ಧಾರ್ಥ್ ತ್ರಿಪಾಠಿ ಅವರ ಹಸ್ತಕ್ಷೇಪವಿಲ್ಲದೆ ಇದು ಯಾವುದೂ ಸಾಧ್ಯವಾಗುತ್ತಿರಲಿಲ್ಲ. ಐಐಟಿ ರೂರ್ಕಿಯಿಂದ ಸಿವಿಲ್ ಎಂಜಿನಿಯರಿಂಗ್ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಸಿದ್ಧಾರ್ಥ್ ಜಾರ್ಖಂಡ್ನಲ್ಲಿ ತಮ್ಮ ಅಧಿಕಾರಾವಧಿಯನ್ನು ಪ್ರಾರಂಭಿಸಿದರು.
ಆದರೆ ಅವರು ಇಲ್ಲಿಗೆ ಬಂದಾಗ ಈ ಗ್ರಾಮಗಳಲ್ಲಿ ಯಾವುದೇ ಮೂಲ ಸೌಕರ್ಯ ಇರಲಿಲ್ಲ. ಜನರು ನೀರಿಗಾಗಿ ಪರದಾಡುವ ಸ್ಥಿತಿ ಇತ್ತು. ಆರೋಗ್ಯ ಸೌಲಭ್ಯ ಇರಲಿಲ್ಲ, ಶಿಕ್ಷಣದ ವ್ಯವಸ್ಥೆ ಇರಲಿಲ್ಲ. ಇಂತಹ ಬಡತನದ ಸ್ಥಿತಿಯನ್ನು ನೋಡುವುದೇ ಹೃದಯಕ್ಕೆ ದೊಡ್ಡ ನೋವು ಉಂಟು ಮಾಡುತ್ತಿತ್ತು ಎಂದು ಸಿದ್ಧಾರ್ಥ್ ಹೇಳುತ್ತಾರೆ.
ಆದರೆ ಅವರು ನಡೆಸಿದ ಹಲವಾರು ಪ್ರಯೋಗಗಳು ಈ ಜಿಲ್ಲೆಯ ಹಳ್ಳಿಗಳಲ್ಲಿ ಮಹತ್ವದ ಪರಿವರ್ತನೆಯನ್ನು ತಂದುಕೊಟ್ಟವು. ಅವರು ನಿಜವಾದ ಆರ್ಥಿಕ ಅಭಿವೃದ್ಧಿಯನ್ನು ಖಾತ್ರಿಪಡಿಸುವ ಕೆಲಸ ಮಾಡಿದರು. ಮನ್ರೇಗಾ ಅಡಿಯಲ್ಲಿ ಹಲವು ಯೋಜನೆಗಳನ್ನು ಗ್ರಾಮಸ್ಥರಿಗೆ ನೀಡಿದರು. ಇಲ್ಲಿನ ಜನರು ಆರ್ಥಿಕವಾಗಿ ಪ್ರಬಲರಾಗುವಂತೆ ಮಾಡಿದರು. ಸ್ವ ಉದ್ಯೋಗದ ಬಗ್ಗೆ ಅವರಿಗೆ ಹೆಚ್ಚು ಹೆಚ್ಚು ತಿಳಿಸಿಕೊಟ್ಟರು. ರಸ್ತೆಗಳ ನಿರ್ಮಾಣದಲ್ಲಿ ಗ್ರಾಮಸ್ಥರನ್ನು ಒಳಪಡಿಸಿದರು. ಜನರು ಮಧ್ಯಪಾನದ ದುಶ್ಚಟದಿಂದ ದೂರವಾಗುವಂತೆ ಮಾಡಿದರು. ಮಹಿಳೆಯರನ್ನು ಸಬಲೀಕರಣದತ್ತ ತಂದರು. ಶಿಕ್ಷಣ ವ್ಯವಸ್ಥೆಯನ್ನು ಮತ್ತು ಆರೋಗ್ಯ ವ್ಯವಸ್ಥೆಯನ್ನು ಇಲ್ಲಿಗೆ ಕಲ್ಪಿಸಿಕೊಟ್ಟರು. ಕಳ್ಳಬಟ್ಟಿ ತಯಾರಿಕೆಗೆ ಇಲ್ಲಿ ಕಡಿವಾಣ ಹಾಕಿದರು. ಈ ಮೂಲಕ ಗ್ರಾಮಗಳನ್ನು ಸ್ವಾವಲಂಬಿ ಮಾಡಿದರು ಮತ್ತು ಗ್ರಾಮಸ್ಥರ ಆದಾಯವನ್ನು ಹೆಚ್ಚಿಸಿದರು.
ಅಧಿಕಾರಿಯೊಬ್ಬ ಮನಸ್ಸು ಮಾಡಿದರೆ ಮಹತ್ವದ ಬದಲಾವಣೆಗಳನ್ನು ತರಲು ಸಾಧ್ಯ ಎಂಬುದಕ್ಕೆ ತಮ್ಮ ಕಾರ್ಯದ ಮೂಲಕ ಸಿದ್ಧಾರ್ಥ್ ಮಾದರಿಯಾಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.