ಸರ್ಕಾರಿ ಶಾಲೆಗಳ ಬಗ್ಗೆ ಇತ್ತೀಚೆಗೆ ಆಸಕ್ತಿ ತೋರುವವರ ಸಂಖ್ಯೆ ಕಡಿಮೆ ಎಂದೇ ಹೇಳಬಹುದು. ಸುಣ್ಣ ಬಣ್ಣವನ್ನು ಕಾಣದ ಗೋಡೆಗಳು, ಸೋರುವ ಮಾಡು, ಮುರುಕಲು ಪೀಠೋಪಕರಣಗಳು, ಮೂಲಸೌಕರ್ಯಗಳಂತೂ ಕನಸೇನೋ ಎಂಬಂತೆ ಕೆಲವು ಸರ್ಕಾರಿ ಶಾಲೆಗಳು ಇಂದೋ, ನಾಳೆಯೋ ಮುರಿದು ಬೀಳುವ ಸ್ಥಿತಿ ತಲುಪಿರುತ್ತವೆ. ಶ್ರೀಮಂತರಿಗಾದರೆ ದೊಡ್ಡ ಮೊತ್ತವನ್ನು ನೀಡಿ ತಮ್ಮ ಮಕ್ಕಳನ್ನು ಓದಿಸಲು ಸಕಲ ಸೌಕರ್ಯಗಳನ್ನು ಹೊಂದಿದ ಖಾಸಗಿ ಶಾಲೆಗಳಿವೆ. ಆದರೆ ಹಳ್ಳಿಗಾಡಿನ ಬಡ ಮಕ್ಕಳಿಗೆ ಸರ್ಕಾರಿ ಶಾಲೆಗಳೇ ಜ್ಞಾನ ದೇಗುಲವಾಗಿರುತ್ತದೆ. ಹೀಗೆ ಬಡ ಮಕ್ಕಳ ಬದುಕು ಬೆಳಗುವುದಕ್ಕೆ ಪೂರಕವಾದ ಶಿಕ್ಷಣ ನೀಡುವ ಸರ್ಕಾರಿ ಶಾಲೆಗಳ ಗತಿ ದೇವರಿಗೇ ಪ್ರೀತಿ ಎಂಬಂತಿರುತ್ತದೆ.
ಈ ಮೇಲಿನ ಮಾತುಗಳಿಗೆ ವಿರುದ್ಧವಾಗಿ ಚಿತ್ರದುರ್ಗದ ಹಿರಿಯೂರು ತಾಲೂಕಿನ ಭೀಮನ ಬಂಡೆ ಗ್ರಾಮೀಣ ಸರ್ಕಾರಿ ಪ್ರೌಢಶಾಲೆ ಬಡ ಮಕ್ಕಳಿಗೆ ಶಿಕ್ಷಣವನ್ನು ನೀಡುತ್ತಿದೆ. ಈ ಶಾಲೆಯಲ್ಲಿ ಮಕ್ಕಳಿಗೆ ಬೇಕಾದ ಸಕಲ ಮೂಲ ಸೌಕರ್ಯಗಳ ಜೊತೆಗೆ ಕಲಿಕಾ ಸ್ನೇಹಿ ಪರಿಸರವನ್ನು ನಿರ್ಮಾಣ ಮಾಡುವ ಕೆಲಸವನ್ನು ಆರೆಸ್ಸೆಸ್ ಕಾರ್ಯಕರ್ತರು ಮತ್ತು ಸ್ಥಳೀಯರೇ ಮುಂದೆ ನಿಂತು ಮಾಡಿದ್ದಾರೆ. ಆ ಮೂಲಕ ಕಳೆದ ಹಲವು ವರ್ಷಗಳಿಂದ ಅಭಿವೃದ್ಧಿಯ ಮುಖ ಕಾಣದೆ ಕಳೆಗುಂದಿದ್ದ ಈ ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಇಲ್ಲಿನ ಜನತೆ ಪ್ರಯತ್ನ ಮಾಡಿದ್ದು, ಅದರಲ್ಲಿ ಗೆಲುವು ಸಾಧಿಸಿದ್ದಾರೆ.
ಅಂದ ಹಾಗೆ ಈ ಶಾಲೆ ಕರ್ನಾಟಕ ಮತ್ತು ಆಂಧ್ರಪ್ರದೇಶದ ಗಡಿಯಲ್ಲಿದೆ. ಈ ಶಾಲೆಯ ಬಣ್ಣ ಮಾಸಿದ್ದ ಗೋಡೆಗಳಿಗೆ ಬಣ್ಣ ತುಂಬಿ, ಶಾಲೆಯ ಪರಿಸರದಲ್ಲಿ ಗಿಡ ಮರಗಳನ್ನು ಬೆಳೆಸಿ ಹಸಿರು ಸ್ನೇಹಿ ವಾತಾವರಣದಲ್ಲಿ ಮಕ್ಕಳಿಗೆ ಜ್ಞಾನಾರ್ಜನೆಗೆ ಅವಕಾಶವನ್ನು ಮಾಡಿಕೊಟ್ಟಿದ್ದಾರೆ. ಜೊತೆಗೆ ಶಾಲೆಗೆ ಬೇಕಾದ ಕ್ರೀಡಾಂಗಣ, ಮಕ್ಕಳ ದೈಹಿಕ ಸಾಮರ್ಥ್ಯ ಹೆಚ್ಚಿಸಲು ಬೇಕಾದ ವ್ಯವಸ್ಥೆಗಳು, ಸುಸಜ್ಜಿತ ಶೌಚಾಲಯಗಳು ಸೇರಿದಂತೆ ಎಲ್ಲಾ ವ್ಯವಸ್ಥೆಗಳನ್ನೂ ಈ ಶಾಲೆಯಲ್ಲಿ ಮಾಡಿಕೊಡಲಾಗಿದೆ. ಆ ಮೂಲಕ ಲಕ್ಷ ಲಕ್ಷ ಡೊನೇಷನ್ ತೆತ್ತು ಮಕ್ಕಳನ್ನು ಕಳಿಸುವ ಖಾಸಗಿ ಶಾಲೆಗೆ ಸರಿಸಮನಾಗಿ ಈ ಸರ್ಕಾರಿ ಶಾಲೆಯನ್ನು ಸಿದ್ಧಗೊಳಿಸಲಾಗಿದೆ. ಇಲ್ಲಿ ಮಕ್ಕಳಿಗೆ ಓದಿಗೆ ಪೂರಕವಾದ ವಾತಾವರಣ, ಸುಸಜ್ಜಿತ ಲೈಬ್ರರಿಯನ್ನೂ ಆರೆಸ್ಸೆಸ್ ಕಾರ್ಯಕರ್ತರು ಮತ್ತು ಸ್ಥಳೀಯರ ಸಹಕಾರದಲ್ಲಿ ಮಾಡಲಾಗಿದೆ.
ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆದು ಈ ಸರ್ಕಾರಿ ಕನ್ನಡ ಶಾಲೆಯನ್ನು ಬದಲಾಯಿಸಲಾಗಿದೆ. ಗುಣಮಟ್ಟದ ಶಿಕ್ಷಣವೂ ಈ ಶಾಲೆಯಲ್ಲಿ ದೊರೆಯುವುದಕ್ಕೆ ಬೇಕಾದ ಪೂರಕ ವ್ಯವಸ್ಥೆಗಳು ಈ ಶಾಲೆಯಲ್ಲಿದ್ದು, ಹೆತ್ತವರು ನಿಸ್ಸಂಶಯವಾಗಿ ತಮ್ಮ ಮಕ್ಕಳನ್ನು ಹಿಂದೆ ಮುಂದೆ ಯೋಚಿಸದೆ ಈ ಶಾಲೆಗೆ ಸೇರಿಸುವಂತಾಗಿದೆ. ಇದರ ಪರಿಣಾಮವಾಗಿ ವರ್ಷದಿಂದ ವರ್ಷಕ್ಕೆ ಈ ಶಾಲೆಗೆ ದಾಖಲಾಗುವ ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚುತ್ತಲೇ ಇದೆ. ನನ್ನ ಗ್ರಾಮ ಪವಿತ್ರವಾದದ್ದು ಎಂಬ ಜನರ ಮನೋಭಾವದಿಂದಲೇ ಈ ಶಾಲೆಗೆ ಹೊಸ ರೂಪ ಬಂದಿದೆ ಎಂದರೂ ತಪ್ಪಾಗಲಾರದೇನೋ. ನೋಡುಗರಿಗೆ ಒಂದು ಮಟ್ಟಿಗೆ ಇದು ಸರ್ಕಾರಿ ಶಾಲೆಯೋ ಅಥವಾ ಖಾಸಗಿ ಶಾಲೆಯೋ ಎಂಬ ಸಂದೇಹ ಮೂಡುವಷ್ಟರ ಮಟ್ಟಿಗೆ ಈ ಶಾಲೆ ಅಭಿವೃದ್ಧಿ ಪಥದತ್ತ ಸಾಗಿದ್ದು, ಆ ಮೂಲಕ ಇತರ ಸರ್ಕಾರಿ ಶಾಲೆಗಳು ಮತ್ತು ಊರಿಗೂ ಮಾದರಿಯಾಗಿದೆ ಎನ್ನಬಹುದಾಗಿದೆ.
ಎಲ್ಲಾ ವ್ಯವಸ್ಥೆಗಳನ್ನೂ ಸರ್ಕಾರವೇ ಮಾಡಿಕೊಡಬೇಕು. ಸರ್ಕಾರ ನೀಡಿದರಷ್ಟೇ ಅಭಿವೃದ್ಧಿ ಸಾಧ್ಯ ಎಂಬ ಮನೋಭಾವ ಹೆಚ್ಚಿನ ಜನರದ್ದು. ಸರ್ಕಾರಕ್ಕೆ ಸೇರಿದ ಯಾವುದೇ ಆಗಲಿ ಅದು ಅಭಿವೃದ್ಧಿ ಹೊಂದದಿದ್ದರೆ ಸರ್ಕಾರ ಸರಿ ಇಲ್ಲ, ಸರ್ಕಾರ ಕಣ್ಮುಚ್ಚಿ ಕುಳಿತಿದೆ ಎಂದು ಗೂಬೆ ಕೂರಿಸುವವರ ಸಂಖ್ಯೆ ಸಮಾಜದಲ್ಲಿ ಹೆಚ್ಚು. ಸರ್ಕಾರ ನಮ್ಮ ಊರಿಗೆ ಏನನ್ನೋ ನೀಡಿದೆ. ಅದನ್ನು ಅಭಿವೃದ್ಧಿ ಪಡಿಸುವುದು ಹೇಗೆ? ಎಂಬ ನಿಟ್ಟಿನಲ್ಲಿ ಯೋಚಿಸಿ, ಅಂತಹ ಯೋಚನೆಗಳನ್ನು ಕಾರ್ಯರೂಪಕ್ಕೆ ತರುವವರ ಸಂಖ್ಯೆ ನಮ್ಮಲ್ಲಿ ತೀರಾ ಕಡಿಮೆ ಎನ್ನಬಹುದು. ಹೀಗಿರುವಾಗ ಹಿರಿಯೂರಿನ ಈ ಸರ್ಕಾರಿ ಪ್ರೌಢಶಾಲೆಯ ಅಭಿವೃದ್ಧಿಯ ಮೂಲಕ ಆರೆಸ್ಸೆಸ್ ಕಾರ್ಯಕರ್ತರು ಮತ್ತು ಇತರರು ಹೀಗೂ ಸಾಧ್ಯ ಎಂಬುದನ್ನು ಸಾಧಿಸಿ ತೋರಿಸಿದ್ದಾರೆ.
ಸರ್ಕಾರ ಕೊಟ್ಟ ಅವಕಾಶವನ್ನು, ಸೌಲಭ್ಯಗಳನ್ನು ದೂರುವುದರಲ್ಲೇ ಕಾಲ ಕಳೆಯುವ ಬದಲು, ಅದನ್ನು ಹೇಗೆ ಪರಿಪೂರ್ಣವಾಗಿ ಮತ್ತು ಅರ್ಥಪೂರ್ಣವಾಗಿ ಬಳಕೆ ಮಾಡುವುದು ಎಂಬುದನ್ನು ಅರಿತುಕೊಂಡಾಗ ಅಭಿವೃದ್ಧಿ ಸಾಧ್ಯ. ಇದಕ್ಕೆ ಸಾಕ್ಷಿ ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ಸರ್ಕಾರಿ ಪ್ರೌಢಶಾಲೆ ಮತ್ತು ಅಜೀರ್ಣಾವಸ್ಥೆಯಲ್ಲಿದ್ದ ಶಾಲೆಗೆ ಹೊಸ ರೂಪ ನೀಡಿ, ಸರ್ಕಾರವನ್ನು ಕಾಯದೆ ಸಕಲ ಸೌಲಭ್ಯಗಳನ್ನು ಒದಗಿಸಿಕೊಟ್ಟ ಆರೆಸ್ಸೆಸ್ ಕಾರ್ಯಕರ್ತರು ಮತ್ತು ಈ ಗ್ರಾಮದ ಜನರು ಎಂದರೆ ಅದು ಅತಿಶಯವಾಗಲಾರದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.