ಕೆಲವೊಮ್ಮೆ ಸರ್ಕಾರ, ರಾಜಕೀಯ ನಾಯಕರ ಇಚ್ಛಾಶಕ್ತಿಯ ಕೊರತೆಯ ಕಾರಣಕ್ಕೆ ಜನಸಾಮಾನ್ಯರು ಸಂಕಷ್ಟ ಅನುಭವಿಸಬೇಕಾಗುತ್ತದೆ. ತಮ್ಮೂರಿಗೆ ಅತ್ಯಗತ್ಯವಾದ ಮೂಲಭೂತ ಸೌಕರ್ಯಗಳನ್ನು ಜನ ನಾಯಕರು ಒದಗಿಸಿಕೊಡುವಲ್ಲಿ ವಿಫಲರಾದಾಗ ಅದರಿಂದ ತೊಂದರೆಯಾಗುವುದು ಜನರಿಗೆ. ಇಂತಹ ಸಂದರ್ಭದಲ್ಲಿ ಕೆಲವೊಮ್ಮೆ ಯಾವುದೇ ಸಂಘಟನೆಗಳು, ಸಂಘ ಸಂಸ್ಥೆಗಳು ಊರಿನ ಸಮಸ್ಯೆಗೆ ತಾತ್ಕಾಲಿಕ ಅಥವಾ ಖಾಯಂ ಪರಿಹಾರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತವೆ. ಊರಿಗೆ ತೀರಾ ಅಗತ್ಯ ಎನಿಸಿದ ವ್ಯವಸ್ಥೆಗಳನ್ನು ತಮ್ಮ ಕೈಲಾದ ಮಟ್ಟಿಗೆ ಮಾಡಿಕೊಡುವ ಮೂಲಕ ಅಲ್ಲಿನ ಜನರಿಗೆ ಸಹಾಯ ಮಾಡುತ್ತವೆ. ಸದ್ಯ ಸೇವಾ ಭಾರತಿಯಿಂದಲೂ ಇಂತಹ ಒಂದು ಮಹತ್ಕಾರ್ಯ ನಡೆದಿದೆ.
ಸದಾ ಕಾಲ ಸಮಾಜದ ಸೇವೆಯನ್ನೇ ಕಾಯಕವಾಗಿಸಿಕೊಂಡು ಹೆಸರು ಪಡೆದಿರುವ ಸಂಸ್ಥೆ ಸೇವಾ ಭಾರತಿ, ಕೇರಳದಲ್ಲಿ ಮತ್ತೊಂದು ಸಾಧನೆಯ ಮೂಲಕ ಇದೀಗ ಮತ್ತೆ ಸುದ್ದಿಯಾಗಿದೆ. ಮಳೆಗಾಲದಲ್ಲಿ ನಗರದ ಜೊತೆಗೆ ಸಂಪರ್ಕವನ್ನೇ ಕಳೆದುಕೊಂಡು ಬದುಕುವ ಹಳ್ಳಿಗರ ಕಷ್ಟಕ್ಕೆ ಸ್ಪಂದಿಸುವ ಮೂಲಕ ಮಾದರಿಯಾಗಿದೆ. ಕೇರಳದ ಇಡುಕ್ಕಿಯ ಆರಪ್ಪುಝಲಂ ಪಂಚಾಯತ್ ವ್ಯಾಪ್ತಿಯ ಮೂಲಮಟ್ಟಂ ಎಂಬ ಹಳ್ಳಿಗೆ ಬಿದಿರಿನ ಸೇತುವೆಯನ್ನು ನಿರ್ಮಿಸಿ ಕೊಡುವ ಮೂಲಕ ಮಳೆಗಾಲದಲ್ಲಿ ಪಟ್ಟಣ ಪ್ರದೇಶದ ಜೊತೆಗೆ ಸಂಪರ್ಕವನ್ನೇ ಕಳೆದುಕೊಳ್ಳುವ ಹಳ್ಳಿಗರ ಪಾಲಿನ ಆಶಾ ಕಿರಣವಾಗಿದೆ ಸೇವಾ ಭಾರತಿ.
ಮೂಲಮಟ್ಟಂ ಎಂಬ ಕುಗ್ರಾಮದ ಸುತ್ತಲೂ ದಟ್ಟವಾದ ಅರಣ್ಯ ಪ್ರದೇಶ, ಹರಿಯುವ ನೀರಿನ ತೊರೆಗಳು. ಇಲ್ಲಿ ಅದೆಷ್ಟೋ ಕುಟುಂಬಗಳು ಮನೆ ನಿರ್ಮಿಸಿಕೊಂಡು ವಾಸವಾಗಿದ್ದು, ಮಳೆಗಾಲ ಆರಂಭವಾದರೆ ಸಾಕು ಆರಪ್ಪುಝಲಂ ನಗರದೊಂದಿಗೆ ಸಂಪರ್ಕವನ್ನೇ ಕಳೆದುಕೊಂಡು ಬದುಕಬೇಕಾದ ಪರಿಸ್ಥಿತಿ. ಮೂಲಸೌಕರ್ಯಗಳ ಕೊರತೆ ಈ ಹಳ್ಳಿಯ ಪ್ರಮುಖ ಸಮಸ್ಯೆ. ಓಟು ಬೇಕಾದಾಗ ಬರುವ ನಾಯಕರು ಗೆದ್ದ ಬಳಿಕ ಇತ್ತ ಕಡೆ ತಲೆ ಇಟ್ಟೂ ಮಲಗುವುದಿಲ್ಲ. ಅವರು ಮತ್ತೆ ಚುನಾವಣೆ ಬಂದಾಗ ಮಾತ್ರವೇ ಈ ಪ್ರದೇಶಕ್ಕೆ ಭೇಟಿ ನೀಡುವುದು. ಮಳೆಗಾಲದಲ್ಲಿ ದೇಶದೊಳಗಿನ ಪರದೇಶ ಎಂಬಂತ ಪರಿಸ್ಥಿತಿ ಈ ಹಳ್ಳಿಗರದ್ದು.
ಇಲ್ಲಿ ನಗರ ಪ್ರದೇಶದ ಜೊತೆಗೆ ಸಂಪರ್ಕ ಸಾಧಿಸುವುದಕ್ಕೆ ಪೂರಕವಾದ ಸೇತುವೆ ವ್ಯವಸ್ಥೆ ಇಲ್ಲ. ಬೇಸಿಗೆಯಲ್ಲಿ ಸೇತುವೆ ಇಲ್ಲದಿರುವುದು ಸಮಸ್ಯೆಯಾಗಿಲ್ಲವಾದರೂ, ಮಳೆಗಾಲದಲ್ಲಿ ಇದರಿಂದಾಗಿ ತುರ್ತು ಅವಶ್ಯಕತೆಯನ್ನು ಈಡೇರಿಸಿಕೊಳ್ಳುವುದಕ್ಕೂ ಕಷ್ಟ ಪಡಬೇಕಾಗುತ್ತದೆ. ಆಹಾರ ವಸ್ತುಗಳು, ಔಷಧ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಪಡೆದುಕೊಳ್ಳಬೇಕಾದರೂ ಸಮೀಪದ ಪಟ್ಟಣವನ್ನೇ ಅವಲಂಬಿಸಿರುವ ಈ ಜನರಿಗೆ ಮಳೆಗಾಲದಲ್ಲಿ ಇಂತಹ ಅಗತ್ಯತೆಗಳನ್ನು ಪೂರೈಸಿಕೊಳ್ಳುವುದು ಸಾಧ್ಯವಾಗುತ್ತಿಲ್ಲ. ಏಕೆಂದರೆ ತುಂಬಿ ಹರಿಯುವ ನದಿಗಳಲ್ಲಿನ ನೀರಿನ ಮಟ್ಟ ಹೆಚ್ಚಾಗುವ ಕಾರಣದಿಂದ ಆ ತಟದಿಂದ ಇನ್ನೊಂದು ತಟಕ್ಕೆ ಬರುವುದು ಕನಸಿನ ಮಾತು. ಇವರ ಈ ಮೂಲಭೂತ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಯಾವೊಬ್ಬ ಜನಪ್ರತಿನಿಧಿಯಾಗಲಿ, ಸರ್ಕಾರವಾಗಲಿ ಈ ವರೆಗೆ ಪ್ರಯತ್ನ ಮಾಡಿಲ್ಲ.
ಆದರೆ ಇಲ್ಲಿನ ಜನರಿಗೆ ಈ ಮಳೆಗಾಲದಲ್ಲಿ ತುರ್ತು ಅಗತ್ಯತೆಗಳನ್ನು ಪೂರೈಸಿಕೊಳ್ಳುವ ನಿಟ್ಟಿನಲ್ಲಿ ಸೇವಾ ಭಾರತಿಯ ಸ್ವಯಂಸೇವಕರ ತಂಡ ಕೆಲಸ ಮಾಡಿದೆ. ಇಲ್ಲಿನ ಜಲಾಶಯಕ್ಕೆ ಬಿದಿರಿನ ತಾತ್ಕಾಲಿಕ ಸೇತುವೆ ನಿರ್ಮಾಣ ಮಾಡಿಕೊಡುವ ಮೂಲಕ ಹಳ್ಳಿ ಮತ್ತು ಪಟ್ಟಣ ಪ್ರದೇಶದ ನಡುವಿನ ಕೊಂಡಿಯಾಗಿ ಸೇವಾ ಭಾರತಿ ಕೆಲಸ ಮಾಡಿದೆ. ಈ ಸೇತುವೆಯನ್ನು ಬಳಸಿಕೊಂಡಂತೆ ಇಲ್ಲಿನ ಜನರು ತಮ್ಮ ದಿನನಿತ್ಯದ ಅವಶ್ಯಕತೆಗಳನ್ನು ಪೂರೈಸಿಕೊಳ್ಳುತ್ತಿದ್ದಾರೆ. ಜೊತೆಗೆ ಪ್ರತಿ ನಿತ್ಯ ಕೆಲಸಕ್ಕೆ ಹೋಗುವವರಿಗೂ ಈ ಸೇತುವೆ ಸಂಪರ್ಕ ಸಾಧನವಾಗಿ ಬಳಕೆಯಾಗುತ್ತಿದೆ.
ಇಲ್ಲಿ ವಾಸಿಸುವ ಅದೆಷ್ಟೋ ಕುಟುಂಬಗಳು ಮಳೆಗಾಲದಲ್ಲಿ ಪಡುತ್ತಿದ್ದ ಬವಣೆಯನ್ನು ಮನವರಿಕೆ ಮಾಡಿಕೊಂಡ ಸೇವಾ ಭಾರತಿ, ಇಲ್ಲಿನ ಜನರ ಸೇತುವೆಯ ಬೇಡಿಕೆಗೆ ತಾತ್ಕಾಲಿಕ ಜೀವ ನೀಡಿದೆ. ಆ ಮೂಲಕ ಮಳೆಗಾಲ ಆರಂಭವಾದಾಗಿನಿಂದ, ಮುಗಿಯುವವರೆಗೆ ಹೊರ ಜಗತ್ತಿನ ಜೊತೆಗೆ ಸಂಪರ್ಕವನ್ನೇ ಸಂಪೂರ್ಣ ಕಳೆದುಕೊಂಡು ಬದುಕುವ ಜನರಿಗೆ ಹೊಸ ಅವಕಾಶವನ್ನು ಸೃಷ್ಟಿಸಿಕೊಟ್ಟಿದೆ.
ಯಾವ ಸರ್ಕಾರ, ಯಾವುದೇ ಜನ ಪ್ರತಿನಿಧಿಗಳು ಮಾಡಲಾಗದ ಅಥವಾ ಮಾಡುವಲ್ಲಿ ಉತ್ಸಾಹ ತೋರದ ಸೇತುವೆಯನ್ನು ಸೇವಾ ಭಾರತಿ ನಿರ್ಮಿಸಿ ಕೊಡುವ ಮೂಲಕ ಸಾಧನೆಯನ್ನೇ ಮಾಡಿದೆ. ಸಮಾಜ ಸೇವೆ ಮಾಡಲು ಬೇಕಾಗಿರುವುದು ಅಧಿಕಾರವಲ್ಲ. ಬದಲಾಗಿ ಏನನ್ನಾದರೂ ಸಮಾಜಕ್ಕಾಗಿ ನೀಡುವಂತಾಗಬೇಕು ಎನ್ನುವ ಇಚ್ಛಾಶಕ್ತಿ. ಅದೊಂದಿದ್ದರೆ ಯಾವುದೂ ಅಸಾಧ್ಯವಲ್ಲ ಎಂಬುದಕ್ಕೆ ಸಾಕ್ಷಿ ಸೇವಾ ಭಾರತಿಯ ಈ ಕಾಯಕ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.