ಪುತ್ತೂರು: ದೇವಾಲಯ ಹಾಗೂ ವಿದ್ಯಾಲಯಗಳು ಸಮಾಜದ ಕಣ್ಣುಗಳಿದ್ದಂತೆ. ದೇವಾಲಯ ಜನರಲ್ಲಿ ಧಾರ್ಮಿಕ ಭಾವನೆಗಳ ಬಗ್ಗೆ ಅರಿವನ್ನು ಮೂಡಿಸಿದರೆ, ವಿದ್ಯಾಲಯಗಳು ಬದುಕಿನ ಅಂಧಕಾರವನ್ನು ಕಲೆಯುವ ವಿದ್ಯೆಯನ್ನು ನೀಡುತ್ತದೆ ಎಂದು ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷರೂ, ಒಡಿಯೂರು ಗುರುದೇವದತ್ತ ಸಂಸ್ಥಾನಮ್ನ ಸಾಧ್ವಿ ಮಾತಾನಂದಮಯಿ ತಿಳಿಸಿದರು.
ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ಬೆಳ್ಳಿ ಹಬ್ಬದ ಸವಿನೆನಪಿಗಾಗಿ ಕಟ್ಟಿರುವ ಗ್ರಂಥಾಲಯದ ಕಟ್ಟಡ ಮತ್ತು ಇ-ಗ್ರಂಥಾಲಯವನ್ನು ಎ.2ರಂದು ಉದ್ಘಾಟಿಸಿ ಅವರು ಮಾತನಾಡಿದರು. ದೇವಾಲಯ ಹಾಗೂ ವಿದ್ಯಾಲಯಗಳು ಸಮಾಜದಲ್ಲಿ ಸಹಬಾಳ್ವೆಯನ್ನು ನಿರ್ಮಿಸುವ ಶಕ್ತಿಯುಳ್ಳಂತದ್ದು. ಇದು ಎರಡನ್ನು ಸಮಾನವಾಗಿ ಹೊಂದಿಕೊಂಡು ಹೋದಾಗ ಉತ್ತಮ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದರು.
ವಿದ್ಯಾಲಯಗಳಲಿರುವ ಗ್ರಂಥಾಲಯಗಳಲ್ಲಿ ಶಿಕ್ಷಣಕ್ಕೆ ಪೂರಕವಾದ ಪುಸ್ತಕಗಳು ಮಾತ್ರವಲ್ಲ. ಅದರಲ್ಲಿ ಧಾರ್ಮಿಕ, ಆದ್ಯಾತ್ಮಿಕಗಳಿಗೆ ಸಂಬಂಧಿಸಿ ಎಲ್ಲಾ ವಿಧದ ಪುಸ್ತಕಗಳು ಲಭ್ಯವಿದೆ. ಇದರ ನಿತ್ಯ ಅಭ್ಯಾಸದಿಂದ ಪ್ರಜ್ಞಾವಂತಾಗುವುದರ ಜೊತೆಗೆ ಜ್ಞಾನದ ಜನಕರಾಗಬೇಕು ಎಂದು ಅವರು ತಿಳಿಸಿದರು. ಇ-ಗ್ರಂಥಾಲಯವನ್ನು ಉದ್ಘಾಟಿಸಿದ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯದ ಕುಲಪತಿ ಡಾ. ಟಿ.ಆರ್ ಸುಬ್ರಹ್ಮಣ್ಯ ಮಾತನಾಡಿ, ಒಳ್ಳೆಯ ಉದ್ದೇಶದಿಂದ ಕಾಲೇಜಿನಲ್ಲಿ ನಿರ್ಮಾಣವಾದ ಇ-ಗ್ರಂಥಾಲಯವು ಸಧುಪಯೋಗವಾಗಬೇಕು. ಅದು ಉದ್ಘಾಟನೆಗೊಂಡಿರುವ ಕಾರಣಕ್ಕೆ ಅದರ ಉದ್ದೇಶ ಈಡೇರುವುದಿಲ್ಲ. ಆಧುನಿಕ ತಂತ್ರ ಜ್ಞಾನಕ್ಕೆ ಸಂಬಂಧಿಸಿದಂತೆ ಪ್ರಾರಂಭಿಸಿರುವ ಗ್ರಂಥಾಲಯವನ್ನು ಸಮಪರ್ಕಕವಾಗಿ ಉಪಯೋಗಿಸಿಕೊಳ್ಳಬೇಕು ಎಂದು ತಿಳಿಸಿದರು.
ಬೆಳ್ಳಿ ಹಬ್ಬದ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದ ಕರ್ನಾಟಕ ಲೋಕಾಯುಕ್ತ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾದೀಶ ಟಿ. ಗೋಪಾಲಕೃಷ್ಣ ರೈ ಮಾತನಾಡಿ, ಶಿಕ್ಷಣ ಸಂಸ್ಥೆಗಳು ಪದವೀಧರರನ್ನು ಉತ್ಪಾಧಿಸುವ ಕೇಂದ್ರಗಳಾಗಬಾರದು. ಅವರನ್ನು ಉತ್ತಮ ಜ್ಞಾನಗಳನ್ನು ತುಂಬಿ ಉತ್ತಮ ನಾಗರಿಕರನ್ನಾಗಿ ತಯಾರಿಸುವ ಕೇಂದ್ರಗಳಾಗಿ ಬೆಳೆಯಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಬೆಳ್ಳಿ ಹಬ್ಬ ಸಮಿತಿಯ ಗೌರವಾಧ್ಯಕ್ಷ ಕೆ. ರಾಮ ಭಟ್ ಉರಿಮಜಲು ಮಾತನಾಡಿ, ಸಂಸ್ಕಾರ, ರಾಷ್ಟ್ರ ಪ್ರೇಮವಿಲ್ಲದ ಶಿಕ್ಷಣ ನಿರರ್ಥಕ. ಜೀವನ್ಮುಖಿ ರಾಷ್ಟ್ರಪ್ರೇಮ ಉದ್ದೀಪಿಸುವ ಶಿಕ್ಷಣದಿಂದ ಮಾತ್ರ ಸತ್ ನಾಗರಿಕ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದರು.ಪುತ್ತೂರು ಶ್ಯಾಮ ಜ್ಯುವೆಲ್ಸ್ನ ಆಡಳಿತ ನಿರ್ದೇಶಕ ಕೇಶವ ಪ್ರಸಾದ್ ಮುಳಿಯ, ವಕೀಲರು ಮತ್ತು ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ನಿರ್ದೇಶಕಿ ಮನೋರಮ ಭಟ್, ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಇ. ಶಿವಪ್ರಸಾದ್, ಕಾಲೇಜಿನ ಪ್ರಾಂಶುಪಾಲ ಕೆ.ಜಿ ಕೃಷ್ಣ ಮೂರ್ತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸ್ಮರಣ ಸಂಚಿಕೆ ಬಿಡುಗಡೆ
ಕಾಲೇಜಿನ ಬೆಳ್ಳಿ ಹಬ್ಬದ ಸವಿನೆನಪಿಗಾಗಿ ರಚಿಸಲಾದ ಸ್ಮರಣ ಸಂಚಿಕೆ ’ಹೆಜ್ಜೆ ಗುರುತು’ನ್ನು ಈ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು. ಸಂಚಿಕೆ ಸಂಪಾಧಕ ಮುರಳಿಕೃಷ್ಣ ಚಳ್ಳಂಗಾರು ಸಂಚಿಕೆಯ ಪರಿಚಯ ಮಾಡಿದರು.
ಆಡಳಿತ ಮಂಡಳಿ ಅಧ್ಯಕ್ಷ ಕೆ.ಆರ್ ಆಚಾರ್ಯ ಸ್ವಾಗತಿಸಿದರು. ಬೆಳ್ಳಿ ಹಬ್ಬ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಪ್ರಾಸ್ತಾವಿಕವಾಗಿ ಮಾತನಾಡಿದರು. ಗುಣಪಾಲ ಜೈನ್, ಕಾಲೇಜಿನ ಸಂಚಾಲಕ ಸಂತೋಷ್ ಬಿ, ಉಪನ್ಯಾಸಕರಾದ ಉದಯಕೃಷ್ಣ, ಸುಧೀರ್ ಕುಮಾರ್ ತೋಳ್ಪಾಡಿ ಅತಿಥಿಗಳನ್ನು ವೀಲ್ಯ ನೀಡಿ ಸ್ವಾಗತಿಸಿದರು. ಹಿರಿಯ ವಿದ್ಯಾರ್ಥಿ ಸುಬ್ರಹ್ಮಣ್ಯ ಕುಮಾರ್ ಅಗರ್ತ ಕಾರ್ಯಕ್ರಮ ನಿರೂಪಿಸಿ, ಬೆಳ್ಳಿ ಹಬ್ಬ ಸಮಿತಿ ಕಾರ್ಯದಶಿ ರವಿಚಂದ್ರ ಪಿ.ಎಂ ವಂದಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.