ಕಲ್ಲಡ್ಕ : ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕ ಹಾಗೂ ಲಯನ್ಸ್ ಕ್ಲಬ್ ಮಂಗಳೂರು ಇದರ ವತಿಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ವಠಾರದಲ್ಲಿ ಲಯನ್ಸ್ ಕ್ಲಬ್ನ 100 ವರ್ಷಾಚರಣೆಯ ಸಂದರ್ಭ ನಿಮಿತ್ತ ಗಿಡನೆಡುವ ಕಾರ್ಯಕ್ರಮವು ನಡೆಯಿತು.
ಈ ಸಂದರ್ಭದಲ್ಲಿ ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕರು ಡಾ|| ಪ್ರಭಾಕರ ಭಟ್ ಇವರು ಮಾತನಾಡಿ ಪ್ರಕೃತಿಯ ಸಮತೋಲನತೆಯನ್ನು ಕಾಯ್ದುಕೊಳ್ಳುವುದರ ಬಗ್ಗೆ ಅರಿವು ಮೂಡಿಸಿದರು. ಪರಿಸರ ನಮಗೆ ಜೀವಕೊಟ್ಟರೆ ನಾವು ಅದಕ್ಕೆ ಜೀವನಾಶಕಗಳನ್ನು ನೀಡಿ ಮರಣಶಾಸನವನ್ನು ಬರೆಯುತ್ತಿದ್ದೇವೆ. ವೈಭವದ ಜೀವನಕ್ಕಾಗಿ ಪ್ರಕೃತಿಯನ್ನು ನಾಶಮಾಡುತ್ತಾ ನಮ್ಮ ಅಳಿವಿಗೆ ನಾವೇ ಕಾರಣಕರ್ತರಾಗುತ್ತಿದ್ದೇವೆ. ನಮ್ಮೊಳಗೆ ಜಾಗೃತಿಯಾಗದ ಹೊರತು ಸಮೃದ್ಧ ಪರಿಸರ ನಿರ್ಮಾಣ ಅಸಾಧ್ಯ. ಪ್ರಕೃತಿಯನ್ನು ಬೆಳೆಸುತ್ತಾ ಜೀವನವನ್ನೂ ಸಮೃದ್ಧಗೊಳಿಸೋಣ ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿ ಲಯನ್ಸ್ ಗವರ್ನರ್ ಕವಿತಾ ಎಸ್. ಶಾಸ್ತ್ರಿ ಮಾತನಾಡಿ ಪ್ರಕೃತಿಗೆ ನಮ್ಮ ಅಗತ್ಯತೆ ಇರುವುದಿಲ್ಲ. ಆದರೆ ನಮಗೆ ಪ್ರಕೃತಿಯ ಅಗತ್ಯವಿದೆ. ಇದೆಲ್ಲವೂ ನಮ್ಮ ಕೈಯಲ್ಲಿದೆ. ಯುವ ಜನತೆಯೂ ಈ ಪೃಕೃತಿಯನ್ನು ಬೆಳೆಸುವ ನಿಟ್ಟಿನಿಂದ ಆಸಕ್ತಿಯಿಂದ ಮುಂದುವರೆಯಬೇಕಾಗಿದೆ ಎಂದು ಕರೆ ನೀಡಿದರು.
ಪರಿಸರ ಸಂರಕ್ಷಣೆ ಎಂದರೆ ಭೂಮಿ ತಾಯಿಯ ರಕ್ಷಣೆ ಇಂದು ಪಾಶ್ಚಾತ್ಯರು ಕೂಡ ಪರಿಸರದ ಬಗ್ಗೆ ಕಾಳಜಿ ವಹಿಸುತ್ತಿದ್ದಾರೆ. ಆದರೆ ಎಲ್ಲಾ ಜೀವರಾಶಿಗಳನ್ನು ದೇವರೆಂದು ಪೂಜಿಸುವ ಭಾರತೀಯರೇ ಇಂದು ಪರಿಸರದ ಬಗ್ಗೆ ಕಾಳಜಿ ಇಲ್ಲದವರಾಗಿದ್ದಾರೆ. ಪಾಶ್ಚಾತ್ಯ ದೇಶಗಳಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧವಾಗಿ ಪೇಪರ್ ಬಳಕೆಯಾಗುತ್ತಿದೆ ಆದರೆ ಭಾರತದಲ್ಲಿ ಇಂದು ಪ್ಲಾಸ್ಟಿಕ್ ಬಳಕೆಯೇ ಜಾಸ್ತಿಯಾಗಿದೆ ಇದನ್ನು ಬದಲಿಸಬೇಕಾಗಿದೆ ಎಂದರು.
ಲಯನ್ಸ್ನ ಮಾಜಿ ಗವರ್ನರ್ ಲಯನ್ ಕೆ.ಸಿ.ಪ್ರಭು ಪ್ರಾಸ್ತಾವಿಕ ಮಾತುಗಳನ್ನಾಡಿ ಲಯನ್ಸ್ ಕ್ಲಬ್ನ ನಾಲ್ಕು ಧೋರಣೆಗಳಲ್ಲಿ ಪ್ರಮುಖವಾದುದು ಪರಿಸರ ಸಂರಕ್ಷಣೆ ಅದಕ್ಕಾಗಿ ಒಟ್ಟು 10 ಗಿಡಗಳನ್ನು ಶ್ರೀರಾಮ ವಿದ್ಯಾಕೇಂದ್ರದಲ್ಲಿ ನೆಡುವ ಬಗ್ಗೆ ಪ್ರಸ್ತಾಪಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ನಾರಾಯಣ ಸೋಮಯಾಜಿ ವಹಿಸಿದ್ದರು.
ವೇದಿಕೆಯಲ್ಲಿ ಪರಿಸರ ಪ್ರೇಮಿ, ಸಸ್ಯ ತಜ್ಞ ದಿನೇಶ್ ನಾಯಕ್, ಲಯನ್ ಆಶಾ ಡಿ.ಶೆಟ್ಟಿ ಮಾಡಿ ಸಂಸ್ಥೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವಸಂತ ಮಾಧವ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ನ ೨೫ ಮಂದಿ ಸದಸ್ಯರು, ಸುಮಾರು ೫೦೦ಕ್ಕಿಂತಲೂ ಮಿಕ್ಕಿ ವಿದ್ಯಾರ್ಥಿಗಳು ಉಪನ್ಯಾಸಕ ವೃಂದ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳು ಕಾಲೇಜಿನ ದೈನಂದಿನ ಪ್ರಾರ್ಥನೆ ಸರಸ್ವತಿ ವಂದನೆಯನ್ನು ಹಾಡಿದರು. ಪ್ರಾಂಶುಪಾಲ ಕೃಷ್ಣಪ್ರಸಾದ ಕಾಯರ್ಕಟ್ಟೆ ಸ್ವಾಗತಿಸಿ, ಲಯನ್ ಆಶಾ ಡಿ.ಶೆಟ್ಟಿ ವಂದಿಸಿ, ಅರ್ಥಶಾಸ್ತ್ರ ಉಪನ್ಯಾಸಕ ಮಂಜುನಾಥ ಕಾರ್ಯಕ್ರಮ ನಿರ್ವಹಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.